ಸಾಲದ ಸುಳಿಗೆ ಸಿಕ್ಕ ರಾಜ್ಯ ಸರ್ಕಾರ: ರಾಜೀವ್
ಶಿವಮೊಗ್ಗ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ಸರ್ಕಾರ ಆರ್ಥಿಕವಾಗಿ ಸಂಪೂರ್ಣ ದಿವಾಳಿ ಯಾಗಿದೆ ಹಾಗೂ ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸುತ್ತಿದೆ ಎಂದು ಮಾಜಿ ಶಾಸಕ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಕುಡಚಿ ಸುದ್ದಿಗೋಷ್ಟಿಯಲ್ಲಿ ಟೀಕಿಸಿದರು.\
ಹಲವು ಬಾರಿ ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಅವರು ವ್ಯಕ್ತಿಯ ಶಿಸ್ತು ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿದರಲ್ಲದೇ, ಈ ಬಾರಿಯ ಸರ್ಕಾರದ ಮೊದಲ ಬಜೆಟ್ ನಲ್ಲಿ ೧೩,೫೦೦ ಕೋಟಿ ಸಾಲವನ್ನು ತೋರಿಸಿದ್ದಾರೆ. ಎರಡನೇ ಬಜೆಟ್ನಲ್ಲಿ ೨೫,೦೦೦ ಕೋಟಿ ಸಾಲವನ್ನು ತೋರಿಸಿ ದ್ದಾರೆ. ಮೂರನೇ ಬಾರಿಯೂ ಕೂಡ ಈ ಸಾಲದ ಮಿತಿ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದ ಅವರು, ಇಡೀ ರಾಜ್ಯ ಸರ್ಕಾರ ಸಾಲದ ಸುಳಿಯಲ್ಲಿ ಸಿಲುಕಿದೆ ಎಂದು ದೂರಿದರು.
ಶಕ್ತಿ ಯೋಜನೆ ಅಡಿಯಲ್ಲಿ ರಾಜ್ಯದ ಮಹಿಳೆಯರಿಗೆ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಉಚಿತ ಪ್ರಯಾಣವನ್ನು ಕಲ್ಪಿಸಿಕೊಟ್ಟಿರುವ ಸಿದ್ದರಾಮಯ್ಯನ ಕ್ರಮ ಸ್ವಾಗತ. ಆದರೆ ಕೆಎಸ್ಆರ್ಟಿಸಿ ನಿಗಮಗಳಿಗೆ ೫೨೦ ಕೋಟಿ ಬಾಕಿ ಹಣ ಕೊಡಬೇಕಾಗಿದೆ ಎಂದ ಅವರು ರಾಜ್ಯದಲ್ಲಿ ಸಂಚರಿಸುತ್ತಿರುವ ಶೇ. ೮೦ರಷ್ಟು ಬಸ್ಗಳು ೧೫ ಲಕ್ಷ ಕಿಲೋಮೀಟರ್ ಜಸ್ತಿ ಕ್ರಮಿಸಿದೆ. ಈ ಎಲ್ಲಾ ಬಸ್ಗಳು ದುರಸ್ತಿ ಹಂತದಲ್ಲಿವೆ ಎಂದು ಹೇಳಿದರು.
ಕೆಐಎಡಿಬಿ ನಿವೇಶನ ಪಡೆದಿರುವ ಸಚಿವ ಪ್ರಿಯಾಂಕ್ ಖರ್ಗೆ, ಎಂ.ಬಿ ಪಾಟೀಲ್ ತಾವು ವಿವರ ಸಲ್ಲಿಸುವ ಸಂದರ್ಭದಲ್ಲಿ ನಾಲ್ಕು ಕೋಟಿ ಸಾಲವನ್ನು ತೋರಿಸಿದ್ದಾರೆ ಅದೇ ವ್ಯಕ್ತಿಗೆ ಕೆಐಎಡಿಬಿ ನಿವೇಶನವನ್ನು ಮಂಜೂರು ಮಾಡಿದ್ದಾರೆ. ಆರೋಗ್ಯ ಇಲಾಖೆ ಯಲ್ಲಿ ಕೂಡ ವ್ಯಾಪಕ ಭ್ರಷ್ಟಾಚಾರ ವ್ಯಾಪಿಸಿದೆ. ಕಾರ್ಮಿಕ ಇಲಾಖೆಯಲ್ಲಿ ಸಂತೋಷ್ ಲಾಡ್ ಅವರು ತಪಾಸಣೆ ಮಾಡದೆ ಕಾರ್ಮಿಕರ ಕಲ್ಯಾಣ ನಿಧಿಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ರಾಜಧ್ಯಕ್ಷ ಬಿ ವೈ ವಿಜಯೇಂದ್ರ ಯಶಸ್ವಿ ರಾಜಧ್ಯಕ್ಷರಾಗಿದ್ದಾರೆ. ಸದನದ ಒಳಗೆ ಹಾಗೂ ಹೊರಗೆ ರಾಜ್ಯ ಸರ್ಕಾರದ ಕಿವಿ ಹಿಂಡುವ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸಿದ್ದಾರೆ. ಪ್ರಭಾವಿ ರಾಜಕಾರಣಿ ಯಾಗಿ ಹೊರಹೊಮ್ಮಿರುವ ವಿಜಯೇಂದ್ರ ಪಕ್ಷ ಕೈಗೊಂಡಿರುವ ಸದಸ್ಯತ್ವ ಅಭಿಯಾನವನ್ನು ಸ್ವತಃ ಖುದ್ದಾಗಿ ಪರಿಶೀಲಿಸುತ್ತಿರುವುದು ಅವರ ಕಾರ್ಯವೈಖರಿಗೆ ಒಂದು ನಿದರ್ಶನವಾಗಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿಡಿ ಮೇಘರಾಜ್, ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ, ಮಾಜಿ ಶಾಸಕ ಎಸ್ ರುದ್ರೇಗೌಡ, ಪ್ರಮುಖರಾದ ಎಸ್. ದತ್ತಾತ್ರಿ, ಜನೇಶ್ವರ್ ಕೆ ಜಿ ಕುಮಾರಸ್ವಾಮಿ ಉಪಸ್ಥಿತರಿದ್ದರು.