ನಮಗೆ ಟಿಕೆಟ್ ನೀಡದೇ ಮೋದ ಮಾಡಿದ್ದಾರೆ: ಈಶ್ವರಪ್ಪ

1

ಶಿವಮೊಗ್ಗ: ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪಕ್ಷ ಬಿಟ್ಟು ಹೋಗಿದ್ದ ಜಗದೀಶ್ ಶೆಟ್ಟರ್ ಅನ್ನು ಮತ್ತೆ ಪಕ್ಷಕ್ಕೆ ಕರೆದುಕೊಂಡು ಬಂದು ಬೆಳಗಾವಿಯಲ್ಲಿ ಟಿಕೆಟ್ ಕೊಟ್ಟಿದ್ದೀರಿ. ಆದರೆ ನಾನು, ನನ್ನ ಮಗ ಏನು ತಪ್ಪು ಮಾಡಿದ್ದೆವು ಎಂದು ಯಡಿಯೂರಪ್ಪ ಅವರನ್ನು ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದರು.


ಶುಭಮಂಗಳ ಕಲ್ಯಾಣ ಮಂದಿರದಲ್ಲಿ ಮಂಗಳವಾರ ಸಂಜೆ ರಾಷ್ಟ್ರ ಭಕ್ತರ ಬಳಗ ವತಿಯಿಂದ ಏರ್ಪಡಿಸಿದ್ದ ಶಿವಮೊಗ್ಗ ನಗರ ಭೂತ್ ಮಟ್ಟದ ಮಹಿಳಾ ಕಾರ್ಯಕರ್ತೆಯರ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ದುಡ್ಡಿನ ಮುಂದೆ ನೀವು ಹೇಗೆ ಗೆಲ್ಲುತ್ತೀರಿ ಎಂದು ಜನ ಪ್ರಶ್ನೆ ಮಾಡುತ್ತಿzರೆ. ಕಳೆದ ಚುನಾವಣೆಯಲ್ಲಿ ಶಿಕಾರಿಪುರ ದಲ್ಲಿ ಕೋಟಿಗಟ್ಟಲೆ ಹಣ ಹಾಕಿದರು. ಆದರೆ, ಜನ ತೀರ್ಮಾನ ಮಾಡಿ ೬೦ ಸಾವಿರ ಲೀಡ್‌ನಲ್ಲಿದ್ದವರನ್ನು ೧೦ಸಾವಿರ ಲೀಡ್‌ಗೆ ತಂದರು. ಈ ಬಾರಿ ಧರ್ಮ ಗೆಲ್ಲುತ್ತೋ, ಹಣ ಗೆಲ್ಲುತ್ತೋ ನೋಡೋಣ ಎಂದು ಸವಾಲ್ ಹಾಕಿದರು.
ಬೆಳಗ್ಗೆ ಅಮಿತ್ ಶಾ ಫೋನ್ ಮಾಡಿ ನೀವು ಚುನಾವಣೆಗೆ ನಿಲ್ಲಬೇಡಿ ಎಂದರು. ನಾನು ಯಾಕೆ ನಿಲ್ಲಬಾರದು ಎಂದು ಕೇಳಿದೆ. ಈ ಹಿಂದೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನಿಲ್ಲಿಸಲು ಹೇಳಿದರು ನಿಲ್ಲಿಸಿದೆ. ನನ್ನ ಮೇಲೆ ಕೇಸು ಬಿತ್ತು. ದೇವರ ಆಶೀರ್ವಾದದಿಂದ ನಾನು ತಪ್ಪು ಮಾಡಿಲ್ಲ ಎಂದು ತೀರ್ಪು ಬಂತು. ನಂತರ ನನಗೆ ಪುನಃ ಮಂತ್ರಿ ಮಾಡುವುದಾಗಿ ಯಡಿಯೂರಪ್ಪ, ಬೊಮ್ಮಾಯಿ ಹೇಳಿದ್ದರು. ಆದರೆ, ಮಂತ್ರಿಸ್ಥಾನ ಕೊಡಲಿಲ್ಲ. ಅಲ್ಲಿಯೂ ಸಹ ಮೋಸ ಆಯ್ತು. ವಿಧಾನಸಭೆ ಚುನಾವಣೆ ವೇಳೆ ಚುನಾವಣೆಗೆ ನಿಲ್ಲಬೇಡಿ ಎಂದು ಆದೇಶ ಮಾಡಿದರು. ಆಗಲೂ ನಾನು ತಕ್ಷಣ ಪತ್ರ ಬರೆದು ಚುನಾವಣೆಯಿಂದ ಹಿಂದೆ ಸರಿದೆ. ಈಗಲೂ ನಮಗೆ ಟಿಕೆಟ್ ನೀಡದೆ ಮೋಸ ಮಾಡಿದರು ಎಂದು ತಿಳಿಸಿದರು.
ರಾಜ್ಯದಲ್ಲಿ ಅನಂತ್ ಕುಮಾರ್, ಯಡಿಯೂರಪ್ಪ, ಈಶ್ವರಪ್ಪ ನೋಡಿದ್ರೆ ತ್ರಿಮೂರ್ತಿ, ಸೆಟ್ ದೋಸೆ ಎನ್ನುತ್ತಿದ್ದರು. ಆಗೆಲ್ಲ ರಾಜ್ಯದಲ್ಲಿ ಪ್ರವಾಸ ಮಾಡಿ ೧೦೬ ಸ್ಥಾನ ತಂದೆವು. ಆದರೆ, ಈಗ ಯಡಿಯೂರಪ್ಪ ಕೈಗೆ ಪಕ್ಷ ಸಿಕ್ಕಿ ೬೦ ಸೀಟಿಗೆ ಬಂದಿದ್ದೇವೆ. ಹಿಂದೂ ಮುಖಂಡರಾದ ಪ್ರತಾಪ್ ಸಿಂಹ ಸಿ.ಟಿ ರವಿ, ಸದಾನಂದ ಗೌಡ ಬಸವನಗೌಡ ಪಾಟೀಲ್ ಯತ್ನಾಳ್ ರನ್ನು ಮೂಲೆ ಗುಂಪು ಮಾಡಲಾ ಗಿದೆ. ಪಕ್ಷ ಹಾಗೂ ಹಿಂದುತ್ವದ ರಕ್ಷಣೆಗಾಗಿ ನಾನು ಚುನಾವಣೆಗೆ ನಿಂತಿದ್ದೇನೆ. ಗೆದ್ದೇ ಗೆಲ್ಲುವ ವಿಶ್ವಾಸ ಇದೆ ಎಂದು ಹೇಳಿದರು.
ಸಭೆಯಲ್ಲಿ ಸೇರಿರುವ ಮಹಿಳೆಯರನ್ನು ನೋಡಿದರೆ ಓಂ ಶಕ್ತಿ ಹಾಗೂ ತಾಯಿ ಮಾರಿಕಾಂಬ ನೋಡಿದಷ್ಟೆ ಸಂತೋಷ ಆಗುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ನಿಮ್ಮ ಆಶೀರ್ವಾದದಿಂದ ನಾನು ಲೋಕಸಭಾ ಸದಸ್ಯ ಆಗೇ ಆಗುತ್ತೇನೆ. ನನಗೆ ಬಹಳ ದಿನಗಳಿಂದ ಒಂದು ಆಸೆ ಇದೆ. ನಿಮನ್ನು ಕಾಶಿಗೆ ಕರ್ಕೊಂಡು ಹೋಗುತ್ತೇನೆ ಎಂದು ಹೇಳಿz. ನಿಮ್ಮನ್ನೆ ಕಾಶಿ ಜೊತೆಗೆ ಅಯೋಧ್ಯೆಗೂ ಕರೆದುಕೊಂಡು ಹೋಗುತ್ತೇನೆ ಎಂದು ಭರವಸೆ ನೀಡಿದರು.
ಏ.೧೨ರಂದು ನಾಮ ಪತ್ರ ಸಲ್ಲಿಸುತ್ತೇನೆ. ಅಂದು ನೀವು ಅಪಾರ ಸಂಖ್ಯೆಯಲ್ಲಿ ಸೇರಬೇಕು. ನಿಮ್ಮನ್ನು ನೋಡಿ ಓಂ ಶಕ್ತಿ, ಮಾರಿಕಾಂಬ ಮೆರವಣಿಗೆ ಬಂದಿದೆ ಅನಿಸಬೇಕು. ನೀವು ನನ್ನ ಪರವಾಗಿ ಜನರ ಬಳಿ ಮತ ಕೇಳುವಾಗ ನಿಮ್ಮ ಕಣ್ಣ ಮುಂದೆ ಮೋದಿ, ಓಂ ಶಕ್ತಿ, ಮಾರಿಕಾಂಬ ಬರಬೇಕು ಎಂದು ತಿಳಿಸಿದರು.
ಈಶ್ವರಪ್ಪ ಪುತ್ರ ಕೆ.ಈ. ಕಾಂತೇಶ್ ಮಾತನಾಡಿ, ಕೋಟೆ ಶ್ರೀ ಮಾರಿಕಾಂಬ ಜತ್ರೆ ದಿನ ರಾತ್ರಿ ಸಂಸದ ಬಿ.ವೈ.ರಾಘವೇಂದ್ರ ನನಗೆ ಕಾಲ್ ಮಾಡಿ ಹಾವೇರಿಯಿಂದ ದೇವರಾಣೆ ನಿನಗೆ ಟಿಕೆಟ್ ಸಿಕ್ಕೆ ಸಿಗುತ್ತದೆ ಎಂದಿದ್ದರು. ಕೊನೆಗೆ ನೋಡಿದರೆ ಬಸವರಾಜ್ ಬೊಮ್ಮಾಯಿಗೆ ಟಿಕೆಟ್ ಕೊಡಿಸಿದರು. ದೇವರ ಮೇಲೆ ಆಣೆ ಮಾಡಿ ಸುಳ್ಳು ಹೇಳಿದ ರಾಘವೇಂದ್ರರಿಗೆ ದೇವರೆ ನೋಡಿ ಕೊಳ್ಳಲಿ ಎಂದು ಕಿಡಿಕಾರಿದರು.
ನಮ್ಮ ಕುಟುಂಬದ ಮೇಲೆ ಯಾಕೆ ಈ ರೀತಿ ಮಾಡುತ್ತಿzರೆ ಎಂದು ಗೊತ್ತಾಗುತ್ತಿಲ್ಲ. ನನ್ನ ತಂದೆಯವರು ಶಿವಮೊಗ್ಗದ ಸಂಸದರಾಗಲಿ ಎಂದು ಭಗವಂತ ನನಗೆ ಟಿಕೆಟ್ ತಪ್ಪಿಸಿzನೆ. ಯಡಿಯೂರಪ್ಪ ಅವರ ಇಬ್ಬರು ಮಕ್ಕಳಲ್ಲಿ ಒಬ್ಬರು ಸಂಸದರು ಹಾಗೂ ಒಬ್ಬರು ಶಾಸಕ, ಬಿಜೆಪಿ ರಾಜಧ್ಯಕ್ಷರೂ ಆಗಿzರೆ. ಇರಲಿ ಪರವಾಗಿಲ್ಲ. ಆದರೆ, ನಾನು ಮಾಡಿರುವ ತಪ್ಪೇನು ಎಂದು ಪ್ರಶ್ನಿಸಿದರು.
ಪ್ರತಿ ವರ್ಷ ಮಹಿಳೆಯರು ಓಂ ಶಕ್ತಿ ಪ್ರವಾಸ ಮಾಡುತ್ತಾರೆ. ಈ ಬಾರಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಹಾಗೂ ನಮ್ಮ ತಂದೆಯವರು ಚುನಾವಣೆಯಲ್ಲಿ ಗೆಲ್ಲಲಿ ಎಂದು ಓಂ ಶಕ್ತಿ ಬಳಿ ಕೇಳಿಕೊಳ್ಳೋಣ. ಏ.೧೨ರಂದು ತಂದೆಯವರು ನಾಮಪತ್ರ ಸಲ್ಲಿಸುತ್ತಾರೆ. ಅಂದು ನೀವೆಲ್ಲ ಬಂದು ನಮ್ಮನ್ನು ಆಶೀರ್ವಾದ ಮಾಡಬೇಕು. ನಾಮಪತ್ರ ದಿನ ನಿಮ್ಮ ಉಪಸ್ಥಿತಿ ನೋಡಿ ಎಸುರಾಳಿಗಳ ಎದೆ ನಡುಗಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಲತಾ ಗಣೇಶ್, ಕೇಬಲ್ ಬಾಬು, ಮೇಯರ್ ಶಂಕರ್ ಗನ್ನಿ, ಲಕ್ಷ್ಮಿ ಶಂಕರ ನಾಯ್ಕ್ ,ಇ.ವಿಶ್ವಾಸ್, ಆರತಿ ಅ.ಮ ಪ್ರಕಾಶ್, ಅನಿತಾ ಮಂಜುನಾಥ್, ಉಮಾ ಮೂರ್ತಿ, ಎಂ.ಭೂಪಾಲ್, ಗಿರಿಜ ಪಾಟೀಲ್ ಇನ್ನಿತರರಿದ್ದರು.