ಕಾಡುಪ್ರಾಣಿಗಳಿಗೆ ಕುಡಿಯಲು ನೀರಿನ ಬರವಿದೆ…
ಪ್ರಕೃತಿ ಮುನಿಸಿನಿಂದಾಗಿ ಕಾಡಿನಲ್ಲಿರಬೇಕಾದ ಪ್ರಾಣಿಗಳು ವರ್ಷದಿಂದ ವರ್ಷಕ್ಕೆ ನಾಡಿಗೆ ಬರುವ ಘಟನೆಗಳು ಹೆಚ್ಚಾಗುತ್ತಿವೆ. ಅದರಲ್ಲೂ, ಚಿರತೆ, ಉರಗ ಸಂತತಿ ಊರುಗಳಲ್ಲಿ ತೋಟಗಳಲ್ಲಿ ಕಾಣಿಸಿಕೊಂಡು ಅಚ್ಚರಿ-ಆತಂಕವನ್ನು ಮೂಡಿಸುತ್ತಿವೆ.
ಕುಡಿಯುವ ನೀರಿನ ಸಮಸ್ಯೆ ಕೇವಲ ಜನಸಾಮಾನ್ಯರಿಗಷ್ಟೇ ಅಲ್ಲ ಕಾಡುಪ್ರಾಣಿಗಳಿಗೂ ಅದೇ ಸ್ಥಿತಿ ಬಾಧಿಸತೊಡಗಿದೆ. ಬಹುತೇಕ ನದಿ, ಹಳ್ಳ, ಕೊಳ್ಳ , ಕೆರೆ , ಕಟ್ಟೆಗಳು ಬತ್ತಿದ ಕಾರಣ ಕಾಡು ಪ್ರಾಣಿಗಳು ಹನಿ ನೀರಿಗಾಗಿ ಮೈಲುಗಟ್ಟಲೆ ಹೋಗುವ ಪರಿಸ್ಥಿತಿ ಬಂದಿದೆ.
ಕಾಡುಪ್ರಾಣಿಗಳಲ್ಲಿ ಅಪರೂಪದ ಜೀವಸಂಕುಲಗಳು ಇವೆ. ಇನ್ನೆಲ್ಲೂ ಕಾಣಸಿಗದ ಜೀವವೈವಿಧ್ಯಗಳಿವೆ. ವಿಶಾಲವಾದ ಕಾಡಿನಲ್ಲಿ ಅಲ್ಲಲ್ಲಿ ನೀರಿನ ಆಶ್ರಯ ಇರುವುದರಿಂದ ಪ್ರಾಣಿಗಳು ಬಾಯಾರಿಕೆ ನೀಗಿಸಿಕೊಳ್ಳಲು ಸಮಸ್ಯೆ ಇದುವರೆಗೆ ಇರಲಿಲ್ಲ. ಆದರೆ ಈಗೀಗ ಕಾಡ್ಗಿಚ್ಚು ಹಾಗೂ ಅರಣ್ಯ ಕಳ್ಳತನದಿಂದ ಕಾಡಿನ ಮರಗಳ ಸಂಖ್ಯೆಯೂ ಅತ್ಯಂತ ಕಡಿಮೆ ಮಟ್ಟದಲ್ಲಿ ಕ್ಷೀಣಿ ಮಳೆ ಕಡಿಮೆಯಾಗಿದೆ. ಊರಿನಲ್ಲಿ ಜನಸಾಮಾನ್ಯರಿಗೆ ಕುಡಿಯುವ ನೀರಿನ ಸಂಕಷ್ಟ ಉಂಟಾದಂತೆ , ಕಾಡಿನಲ್ಲಿನ ಪ್ರಾಣಿಗಳು ಜೀವಜಲಕ್ಕಾಗಿ ಪರದಾಡುತ್ತವೆ.
ಸಾಮಾನ್ಯವಾಗಿ ಕಾಡು ಪ್ರಾಣಿಗಳಿಗೆ ಕಾಡಿನಲ್ಲಿ ನೀರಿನ ಕೊರತೆಯಾಗಿ ನೀರಿನ ಒರತೆ ಬತ್ತಿಹೋದಾಗ ಸಾಮಾನ್ಯವಾಗಿ ನೀರಿರುವ ಪ್ರದೇಶಕ್ಕೆ ಪ್ರಾಣಿಗಳು ವಲಸೆ ಹೋಗುವುದು ಸಹಜ. ವನ್ಯಜೀವಿಗಳು ಕೆಲವು ಕೂಗುತ್ತಾ ಇನ್ನು ಕೆಲವು ಸದ್ದಿಲ್ಲದೆ ನೀರರಸುತ್ತಾ ಕಾಡಂಚಿನ ಭಾಗದಲ್ಲಿ ಇರುವಂತ ಊರುಗಳಲ್ಲಿ ತಿರುಗಾಡುವ ದೃಶ್ಯ ಸಹಜವಾಗಿ ಕಾಣಿಸುತ್ತದೆ.
ಕಾಡಿನ ತಪ್ಪಲಿನ ನಿವಾಸಿಗಳಿಗೆ ಇದರಿಂದಾಗಿ ಆತಂಕವಾಗುವುದು ಸಹಜ. ಸಮೃದ್ಧವಾದ ನೀರು ಕಾಡಿನ ಪ್ರಾಣಿಗಳಿಗೆ ಆಶ್ರಯವಾಗಿರುತ್ತದೆ. ಕಾಡಿನಲ್ಲಿ ನೀರಿನ ಸಮಸ್ಯೆ ಇರುವುದು ಗಮನಿಸಿ ಕೆರೆ, ಕಟ್ಟೆ ದುರಸ್ತಿಯತ್ತ ಅರಣ್ಯ ಇಲಾಖೆ ಗಮನಹರಿಸಿ ಕಾಡು ಪ್ರಾಣಿಗಳ ಸಮಸ್ಯೆಗೆ ಕಡಿವಾಣ ಹಾಕಬೇಕು. ಕೆಲವೆಡೆ ನೀರಿಗಾಗಿ ಪ್ರಾಣಿಗಳು ಕಾಡುಬಿಟ್ಟು ಊರಿಗೂ ಬರುತ್ತಿವೆ. ಕೆಲ ಪ್ರದೇಶದಲ್ಲಿ ನೀರರಸಿ ಬಂದ ಚಿರತೆ , ಕರಡಿ ಯಾವುದೇ ಪ್ರಾಣಿಗಳು ಇರಬಹುದು ಅವುಗಳ ಬಗ್ಗೆ ಜನಸಾಮಾನ್ಯರಿಗೆ ಯಾವುದೇ ಸಹಾನುಭೂತಿ ಇರುವುದಿಲ್ಲ. ಎಲ್ಲರಿಗೂ ಜೀವ ಭಯವಿರುತ್ತದೆ. ಕಾಡು ಪ್ರಾಣಿಗಳು ನೀರಿಗಾಗಿಯೇ ಅಲೆಯುತ್ತಿರಬಹುದು. ನೀರು ಹುಡುಕಿ ಬಂದ ಪ್ರಾಣಿಗಳು ಅನಂತರ ರೈತರ ಜೀವಕ್ಕೂ ಹಾನಿ ಮಾಡಬಹುದು. ಪ್ರಾಣಿಗಳಿಂದ ರೈತರಿಗೆ ಇತ್ತ ಜೀವ ಹಾನಿ ಅತ್ತ ನೀರಿಲ್ಲದೇ ರೈತರ ಪರದಾಟ ಯಾವ ಹೊತ್ತಿಗೆ ರೈತರು ತೋಟಗಳಿಗೆ ಹೋಗುತ್ತಾರೆ ಗೊತ್ತಿರುವುದಿಲ್ಲ. ಯಾವಾಗಲೂ ಗುಂಪಾಗಿ ಒಂದೇ ಸಮಯಕ್ಕೆ ತೋಟಗಳಿಗೆ ಹೋಗಲು ಸಾಧ್ಯವಿಲ್ಲ. ಇದರಿಂದಾಗಿ ಕಾಡು ಪ್ರಾಣಿಗಳ ನಾಶ ಎಂಬ ಸ್ಥಿತಿಯೂ ಪ್ರಕೃತಿಯ ಮಡಿಲಲ್ಲಿ ನಡೆಯಲು ಬಹುದು. ಅರಣ್ಯ ಇಲಾಖೆ ಕಾಡು ಪ್ರಾಣಿಗಳಿಗೆ ನೀರು ಒದಗಿಸುವುದರಿಂದ ಅವು ಕಾಡಿನೊಳಗೆ ಬದುಕಲು ಸಹಾಯ ಆಗುತ್ತದೆ ಹಾಗೂ ಅವುಗಳು ಮಾನವ ವಸತಿಗಳಿಗೆ , ಮಾನವ ಜೀವಗಳಿಗೆ ಹಾಗೂ ಬೆಳೆ ಹಾನಿಯಾಗದಂತೆಯೂ ತಡೆಯಬಹುದು.
ಕಾಡಿನಲ್ಲಿನ ನೀರಿನ ಬಿಕ್ಕಟ್ಟನ್ನು ಗಂಭೀರವಾಗಿ ಪರಿಗಣಿಸಿ ಅರಣ್ಯ ಇಲಾಖೆ ಎ ಪ್ರಾಣಿಗಳ ದಾಹ ನೀಗಿಸಲು ಕ್ರಮ ಕೈಗೊಳ್ಳಲೇ ಬೇಕು. ಇದರಿಂದಾಗಿ ಸಂಕಷ್ಟದಲ್ಲಿ ಇರುವಂತ ರೈತರು ಹಾಗೂ ಕಾಡು ಪ್ರಾಣಿಗಳಿಗೂ ನೆಮ್ಮದಿ ಸಿಗುತ್ತದೆ.
ಕೆ.ಜಿ.ಸರೋಜಾ ನಾಗರಾಜ್, ಪಾಂಡೋಮಟ್ಟಿ.