ಬೇಸಿಗೆ ಶಿಬಿರಗಳು ಮಕ್ಕಳ ಮುಂದಿನ ಭವಿಷ್ಯ ರೂಪಿಸುವ ಭರವಸೆಯ ವೇದಿಕೆ: ರೆ|ಫಾ| ಆಲ್ಮೇಡ

ಶಿಕಾರಿಪುರ: ಬೇಸಿಗೆ ಶಿಬಿರಗಳು ಮಕ್ಕಳಿಗೆ ಮುಂದಿನ ಜೀವನಕ್ಕಾಗಿ ಉತ್ತಮ ಭವಿಷ್ಯ ರೂಪಿಸುವ ಭರವಸೆಯ ವೇದಿಕೆ ಯಾಗಿದ್ದು, ಶಿಬಿರದಲ್ಲಿ ಕಲೆ, ನಾಟಕ, ಸಂಸ್ಕೃತಿ ಸಹಿತ ಎಲ್ಲ ರೀತಿಯ ವಿಶಿಷ್ಟ ಅನುಭವ ದೊರೆಯಲಿದೆ. ಶಿಬಿರಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಸ್ಥಳೀಯ ಪುಷ್ಪಾ ವಿದ್ಯಾಸಂಸ್ಥೆಯ ಮುಖ್ಯಸ್ಥ ರಾದ ರೆ| ಫಾ| ಸಂತೋಷ್ ಆಲ್ಮೇಡ ಅವರು ತಿಳಿಸಿದರು.
ಪಟ್ಟಣದ ಗುಡಿ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕೇಂದ್ರದ ವತಿಯಿಂದ ಆಯೋಜಿಸಿದ್ದ ಚಿಣ್ಣ ಬಣ್ಣ ಮಕ್ಕಳ ಬೇಸಿಗೆ ರಂಗ ಶಿಬಿರ ಹಾಗೂ ಗುಡಿ ಸಂತೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಗುರು ಇಲ್ಲದೇ ಗುರಿ ಸಾಧಿಸಲು ಸಾಧ್ಯವಿಲ್ಲ ಎಂಬ ರೀತಿ ಗುರುಗಳು ಹೇಳಿಕೊಟ್ಟಂತೆ ವಿದ್ಯಾರ್ಥಿಗಳು ಕಲಿಯುತ್ತಾರೆ. ಅದೇರೀತಿ ಯಾವುದೇ ಶಿಬಿರಗಳಲ್ಲಿ ಆಯೋಜಕರು ತರಬೇತಿ ನೀಡಿದಂತೆ ಮಕ್ಕಳು ಅದನ್ನೇ ಕಲಿಯುತ್ತಾರೆ ಎಂದರು.
ಎಲ್ಲ ಶಿಬಿರಗಳಲ್ಲಿ ಕಲಿಕೆಗೆ ಪೂರಕವಾದ ವಾತಾವರಣ ಇರಬೇಕು. ಆಗ ಮಾತ್ರ ಶಿಬಿರಕ್ಕೆ ಸಾರ್ಥಕತೆ ಮತ್ತು ಕಲಿಕೆಗೆ ಸ್ಪೂರ್ತಿ ದೊರಕುವುದು. ಅಂತಹ ವಾತಾವರಣ ಇಲ್ಲಿದೆ. ಉತ್ತಮ ಪರಿಸರ, ಅಭಿನಯಕ್ಕೆ ಸುಸಜ್ಜಿತ ವೇದಿಕೆ, ತಿಳಿಯಾದ ವಾತಾವರಣ. ನಾಟಕ, ಯಕ್ಷಗಾನ ರಂಗ ಗೀತೆಗಳನ್ನು ಹಾಗೂ ಕಲಾತ್ಮಕ ಚಟುವಟಿಕೆ ಕಲಿಸಲು ಉತ್ತಮ ಗುರುಗಳು ಹೀಗೆ ಎ ರೀತಿಯ ಸೌಲಭ್ಯವು ಇಲ್ಲಿ ದೊರೆಯಲಿದೆ. ಆದ್ದರಿಂದ ಹೆಚ್ಚು ಹೆಚ್ಚು ಮಕ್ಕಳು ಆಸಕ್ತಿ ವಹಿಸಿ ಇದರ ಸದುಪಯೋಗ ಪಡೆದು ಸಾಂಸ್ಕೃತಿಕ ಕೇಂದ್ರದ ಮೆರಗು ಹೆಚ್ಚಿಸುವಂತೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗುಡಿ ಸಾಂಸ್ಕೃತಿಕ ಕೇಂದ್ರದ ಸಂಸ್ಥಾಪಕ, ರಂಗಾಯಣದ ಮಾಜಿ ನಿರ್ದೇಶಕ ಇಕ್ಬಾಲ್ ಅಹಮದ್ ಅವರು ಮಾತನಾಡಿ, ಪಟ್ಟಣದಲ್ಲಿ ೨೦೦೮ ರಿಂದ ಆಯೋಜಿಸಲಾಗುತ್ತಿರುವ ಬೇಸಿಗೆ ರಂಗ ಶಿಬಿರ ಇತರೆ ಬೇಸಿಗೆ ಶಿಬಿರಕ್ಕಿಂತ ಭಿನ್ನವಾಗಿದ್ದು ರಂಗಭೂಮಿಯ ಎಲ್ಲ ಮಜಲನ್ನು ಶಿಬಿರಾರ್ಥಿಗಳಿಗೆ ಪರಿಚಯಿಸಲಾ ಗುತ್ತದೆ ಎಂದು ತಿಳಿಸಿದರು.
ಕೊರೋನ ಮಹಾಮಾರಿ ಹಿನ್ನೆಲೆಯಲ್ಲಿ ಕಳೆದೆರಡು ವರ್ಷ ದಿಂದ ಕುಂಠಿತವಾಗಿದ್ದ ಚಟುವಟಿಕೆಗೆ ಇದೀಗ ವೇಗ ನೀಡಲಾಗಿದೆ. ಬೇಸಿಗೆ ಶಿಬಿರದ ಹೆಸರಿನಲ್ಲಿ ವಿವಿಧೆಡೆ ಶಿಬಿರಗಳು ನಡೆಯುತ್ತಿದ್ದು, ಈ ಬಾರಿಯ ಶಿಬಿರದಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ತಾಲೂಕು ಜಾನಪದ ಪರಿಷತ್ ಅದ್ಯಕ್ಷ ಪಾಪಯ್ಯ, ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಕೆ.ಎಸ್ ಹುಚ್ರಾಯಪ್ಪ, ಸೊರಬ ತಾಲೂಕು ಕಸಾಪ ಮಾಜಿ ಅಧ್ಯಕ್ಷ ಹಾಲೇಶ್ ನವುಲೆ, ಗುಡಿ ಸಾಂಸ್ಕೃತಿಕ ವೇದಿಕೆ ಸಂಚಾಲಕ ನಾಗರಾಜ, ಅನ್ವರ್ ಸಾಬ್, ಸುರೇಶ್ ಸಹಿತ ಶಿಬಿರಾರ್ಥಿಗಳು, ಪೋಷಕರು ಹಾಜರಿದ್ದರು.