ಜನಸಂಖ್ಯಾ ಸ್ಪೋಟ ಕುರಿತು ವಿದ್ಯಾರ್ಥಿಗಳು ಸಂಪನ್ಮೂಲ ವ್ಯಕ್ತಿಗಳಾಗಿ ಜಾಗೃತಿ ಮೂಡಿಸಬೇಕಿದೆ..

ಹೊನ್ನಾಳಿ: ತಿಳುವಳಿಕೆಯ ಕೊರತೆ, ಮೌಢ್ಯತೆ, ಅನಕ್ಷರತೆ ಬಡತನ ಕಾರಣಗಳಿಂದ ದೇಶದ ಜನಸಂಖ್ಯೆ ಚೀನಾ ದೇಶವನ್ನೂ ಮೀರಿಸಿದ್ದು ಇದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಜಿ ಕುಟುಂಬ ಕಲ್ಯಾಣಾಧಿಕಾರಿ ರೇಣುಕಾರಾಧ್ಯ ಕಳವಳ ವ್ಯಕ್ತಪಡಿಸಿದರು.
ಅವರು ಪಟ್ಟಣದ ಚನ್ನಪ್ಪಸ್ವಾಮಿ ವಿದ್ಯಾಪೀಠದ ಅಡಿಯಲ್ಲಿ ನಡೆಯುತ್ತಿರುವ ಎಸ್.ಜೆ.ವಿ.ಪಿ. ಬಿಇಡಿ ಕಾಲೇಜ್ ಮತ್ತು ಜಿಡಳಿತ, ಜಿ ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಆಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜನಸಂಖ್ಯಾ ನಿಯಂತ್ರಣಕ್ಕೆ ಇರುವ ಮಾರ್ಗೋಪಾಯಗಳನ್ನು ಅಂಜಿಕೆ-ಅಳುಕಿಲ್ಲದಂತೆ ಅಳವಡಿಸಿ ಕೊಳ್ಳಬೇಕೆಂದು ಕಿವಿ ಮಾತು ಹೇಳಿದ ಅವರು, ಬಿಇಡಿ ಪ್ರಶಿಕ್ಷಾರ್ಥಿಗಳು, ಆಶಾ ಕಾರ್ಯಕರ್ತೆಯರು ಜನಜಗೃತಿ ಮೂಡಿಸಿ ಜನಸಂಖ್ಯಾ ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡ ಬೇಕೆಂದು ಸಲಹೆ ನೀಡಿದರು.
ತಹಶೀಲ್ದಾರ್ ತಿರುಪತಿ ಪಾಟೀಲ್ ಅವರು ಮಾತನಾಡಿ, ನಮ್ಮ ಸಮಾಜದ ಮನಸ್ಥಿತಿ ಬದಲಾದಾಗ ಮಾತ್ರವೇ ಜನಸಂಖ್ಯೆ ನಿಯಂತ್ರಣಕ್ಕೆ ತರಲು ಸಾಧ್ಯ ಎಂದರಲ್ಲದೇ, ಮದುವೆಯಾದ ವರ್ಷದೊಳಗೇ ನವ ದಂಪತಿಗಳಿಗೆ ಮಕ್ಕಳಾಗದಿದ್ದರೇ ಗಂಡು ಅಥವಾ ಹೆಣ್ಣಿಗೋ ಆರೋಗ್ಯದಲ್ಲಿ ಸಮಸ್ಯೆ ಯಿರಬಹುದೆಂದು ನಮ್ಮ ಸಮಾಜ ಕುಹಕವಾಡುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
ಉತ್ತರ ಕರ್ನಾಟಕದಲ್ಲಿ ಮೂಢನಂಬಿಕೆಗಳಿಂದ ಇಂದಿಗೂ ಬಾಲ್ಯ ವಿವಾಹಗಳು ಜೀವಂತ ವಿರುವುದು ನಮ್ಮ ಅeನದ ಪರಮಾವಧಿ ಎಂದು ಸಮಾಜ ದಲ್ಲಿನ ವ್ಯವಸ್ಥೆ ಬಗ್ಗೆ ಕಿಡಿ ಕಾರಿದರು.
ನಮ್ಮ ದೇಶದ ಜನಸಂಖ್ಯೆ ಯಿಂದ ದೇಶದ ಅಭಿವೃದ್ಧಿ ಕುಂಠಿತವಾಗುತ್ತಿದ್ದು ಹೆಚ್ಚುತ್ತಿರುವ ಜನಸಂಖ್ಯೆಯು ವರವಾಗದೇ ಶಾಪವಾಗಿ ಪರಿಣಮಿಸಿದೆ ಎಂದು ವಿವರಿಸಿದರು.
ತಾಲ್ಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ಕೆಂಚಪ್ಪ ಆರ್. ಬಂತಿ ಮಾತನಾಡಿ ಹೊನ್ನಾಳಿ-ನ್ಯಾಮತಿ ಅವಳಿ ತಾಲ್ಲೂಕುಗಳಲ್ಲಿ ಫೋಕ್ಸೋ ಕೇಸ್ ಪ್ರಕರಣಗಳು ಹೆಚ್ಚಾಗುತ್ತಿದ್ದು ಪೋಷಕರು ಅದರಲ್ಲೂ ವಿಶೇಷ ವಾಗಿ ತಾಯಂದಿರು ಹೆಣ್ಣು ಮಕ್ಕಳ ಬಗ್ಗೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಎಷ್ಟೋ ಪ್ರಕರಣಗಳು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ವೆಸಗಿ ಗರ್ಭಿಣಿಯಾದ ನಂತರ ಬೆಳಕಿಗೆ ಬಂದು ಅವರ ಶೈಕ್ಷಣಿಕ ಮತ್ತು ಸಾಮಾಜಿಕ ಜೀವನ ದುರಂತ ಅಧ್ಯಾಯ ಕಾಣುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಪುರಸಭಾ ಮುಖ್ಯಾಧಿಕಾರಿ ಎಚ್. ನಿರಂಜನಿ ಮಾತನಾಡಿ ದೇಶದಲ್ಲಿ ಹೀಗೇ ಜನಸಂಖ್ಯೆ ಮುಂದುವರೆದರೆ ತುಂಡು ಭೂಮಿಗೂ ಹೊಡೆದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರಾಂಶುಪಾಲೆ ಡಾ.ಮಮತಾ ಎಂ.ಆಚಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ೧೯೫೨ರಿಂದಲೂ ನಿರಂತರವಾಗಿ ಜನಸಂಖ್ಯಾ ದಿನಾಚರಣೆ ಆಚರಿಸುತ್ತಾ ಜನಜಗೃತಿ ಮೂಡಿಸುತ್ತಾ ಬಂದಿದ್ದರೂ ಜನಸಂಖ್ಯಾ ಸ್ಪೋಟ ಹೆಚ್ಚಳವಾಗುತ್ತಿರುವುದು ದೇಶದ ದೌರ್ಭಾಗ್ಯ ಎಂದರು.
ಜನಸಂಖ್ಯಾ ನಿಯಂತ್ರಣದಲ್ಲಿ ವಿದ್ಯಾರ್ಥಿಗಳ ಪಾತ್ರ ಬಹಳ ಮುಖ್ಯ. ಹೆಂಡತಿಯಾಗಿ- ತಾಯಿಯಾಗಿ -ಅತ್ತೆಯಾಗಿ ವಿವಿಧ ಪಾತ್ರಗಳನ್ನು ನಿರ್ವಹಿಸುತ್ತಾ ಜನಸಂಖ್ಯಾ ನಿಯಂತ್ರಣವನ್ನು ತರಲು ಮುನ್ನುಡಿ ಬರೆಯುವಂತಾ ಗಲೀ ಎಂದು ಹಾರೈಸಿದರು.
ಉಪನ್ಯಾಸಕ ಎಸ್.ಎನ್. ಪ್ರಸನ್ನ ಕುಮಾರ್ ಉಪನ್ಯಾಸ ನೀಡಿ ಜನಸಂಖ್ಯೆಯನ್ನು ಹೆಚ್ಚಳ ಮಾಡುವುದೇ ಭಾರತೀಯರ ಸಾಧನೆಯಾಗಿದೆ ಎಂದು ವ್ಯಂಗ್ಯವಾಡಿದರು. ದೇಶದಲ್ಲಿ ಜನಸಂಖ್ಯೆ ಹೆಚ್ಚುತ್ತಿದೆಯೇ ವಿನಃ ಅದಕ್ಕೆ ಪರ್ಯಾಯವಾಗಿ ಸಂಪನ್ಮೂಲಗಳು ಹೆಚ್ಚುತ್ತಿಲ್ಲ. ಈ ವಿಷಯವನ್ನು ಎಲ್ಲರೂ ಗಂಭೀರ ವಾಗಿ ಪರಿಗಣಿಸಬೇಕು ಎಂದು ವಿದ್ಯಾರ್ಥಿಗಳಿಗೆ ಮನಮುಟ್ಟು ವಂತೆ ವಿವರಿಸಿದರು.
ಜನಸಂಖ್ಯಾ ನಿಯಂತ್ರಣಕ್ಕೆ ಕಟ್ಟು-ನಿಟ್ಟಿನ ಕಾನೂನು ಕ್ರಮ ಗಳನ್ನು ಜರಿಗೆ ತಂದರೆ ಮಾತ್ರವೇ ಜನಸಂಖ್ಯಾ ಸ್ಫೋಟವನ್ನು ನಿಯಂತ್ರಣಕ್ಕೆ ತರಲು ಸಾದ್ಯವೆಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಜಿ ಆರೋಗ್ಯ ಶಿಕ್ಷಣಾಧಿಕಾರಿ ಡಾ.ಸುರೇಶ್ ಬಾರ್ಕಿ, ಮೇಲ್ವಿಚಾರಾಣಾಧಿಕಾರಿ ಎಂ.ವಿ. ಹೊರಕೇರಿ, ತಾಲ್ಲೂಕು ಹಿರಿಯ ಆರೋಗ್ಯ ಶಿಕ್ಷಣಾಧಿಕಾರಿ ಶಿವಪದ್ಮ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಎಚ್.ಗೀತಾ, ನಿಂಗಪ್ಪ, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.