ಗಗನಕ್ಕೇರಿದ ಅಗತ್ಯವಸ್ತುಗಳ ಬೆಲೆ; ಪಾತಾಳಕ್ಕೆ ಬೀಳುತ್ತಿರುವ ಬಡ-ಮಧ್ಯಮ ವರ್ಗದ ಬದುಕು…

ಶಿವಮೊಗ್ಗ: ದಿನದಿಂದ ದಿನಕ್ಕೆ ತರಕಾರಿ, ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಬಡ ಮತ್ತು ಮಧ್ಯಮ ವರ್ಗದವರು ಬದುಕುವುದೇ ಕಷ್ಟವಾಗಿದೆ.
ಅದರಲ್ಲೂ ತರಕಾರಿ ಬೆಲೆ ಗಗನಕ್ಕೆ ಏರಿದೆ. ಕಳೆದೆರಡು ದಿನಗಳ ಹಿಂದೆ ಟೊಮೋಟೊ ೪೦ರೂ. ಕೆಜಿಗೆ ಸಿಗುತ್ತಿತ್ತು. ಅದಕ್ಕೂ ವಾರದ ಹಿಂದ ೨೦ರೂಗಳಿಗೆ ಸಿಗುತ್ತಿತ್ತು. ಆದರೆ ಈಗ ಅದು ೮೦ರೂ. ತಲುಪಿದೆ. ಮಾರುಕಟ್ಟೆ ಯಲ್ಲಿ ಟೊಮೋಟೋ ಹೆಚ್ಚಾಗಿ ಬಾರದ ಕಾರಣ ಬೆಲೆ ಹೆಚ್ಚಾಗಿದೆ. ಅದರಲ್ಲೂ ಪತ್ರಿಕೆಗಳಲ್ಲಿ ಸುದ್ದಿ ಮಾಧ್ಯಮಗಳಲ್ಲಿ ಟೊಮೋಟೊ ಬೆಲೆ ಬೆಂಗಳೂರಿನಲ್ಲಿ ೧೦೦ರೂ. ದಾಟಿದೆ ಎಂದು ವರದಿಗಳು ಬರು ತ್ತಿದ್ದಂತೆಯೇ ಶಿವಮೊಗ್ಗ ತರಕಾರಿ ಮಾರುಕಟ್ಟೆಯಲ್ಲಿ ಕೂಡ ಇಂದು ಕೆಜಿಗೆ ೮೦ರೂ. ತಲುಪಿದೆ. ನಿನ್ನೆ ೪೦ರೂಗೆ ಸಿಗುತ್ತಿದ್ದ ಟೊಮೋಟೊ ಇದ್ದಕ್ಕಿದ್ದಂತೆ ದುಪ್ಪಟ್ಟು ಹೆಚ್ಚಾಗಿದೆ.
ಟೊಮೋಟೋ ಬೆಲೆ ಹೆಚ್ಚಾದ ಬೆನ್ನಲ್ಲಿಯೇ ಉಳಿದ ತರಕರಿಗಳಾದ ಬೀನ್ಸ್, ಕ್ಯಾರೆಟ್, ಬದನೆ, ಮೂಲಂಗಿ, ಹೂಕೋಸು. ಆಲೂಗಡ್ಡೆ, ಬಟಾಣಿ ಸೇರಿದಂತೆ ತರಕಾರಿ ಬೆಲೆ ಒಂದೂವರೆ ಪಟ್ಟು ಹೆಚ್ಚಾಗಿದೆ. ಜೊತೆಗೆ ಸೊಪ್ಪಿನ ಬೆಲೆಯೂ ಸಹ ಗಗನಕ್ಕೇರಿದೆ. ನಿನ್ನೆ ೧೦ರೂ.ಗೆ ೨ ಕಟ್ಟು ಸಿಗುತ್ತಿದ್ದ ಕೊತ್ತಂಬರಿ ಇಂದು ಒಂದು ಕಟ್ಟಿಗೆ ಇಳಿದಿದೆ. ಸಬ್ಬಸಿಗೆ, ಎಳೆಹರಿವೆ, ದಂಟಿನ ಸೊಪ್ಪುಗಳಲ್ಲಿ ಕೂಡ ಬೆಲೆ ಏರಿದೆ. ಅದರಲ್ಲೂ ಮೆಂತೆ ಸೊಪ್ಪು ೧ಕಟ್ಟಿಗೆ ೧೦ರೂ.ಆಗಿದೆ.
ಇದರ ಜೊತೆಗೆ ಹಣ್ಣಿನ ಬೆಲೆಗಳು ಕೂಡ ಏರಿಕೆಯಾಗಿವೆ ಸೇಬು ಕೆಜಿಗೆ ೨೦೦ರೂ. ದಾಟಿದೆ. ದಾಳಿಂಬೆ ೩೦೦ ದಾಟಿದೆ. ಕಿತ್ತಲೆ ಮೋಸಂಬಿಗಳೆಲ್ಲ ೨೦೦ರ ಆಸು ಪಾಸಿನಲ್ಲಿವೆ. ಒಂದು ವಾರದ ಹಿಂದೆ ಮಾವಿನಹಣ್ಣಿನ ಸಾಮಾನ್ಯ ದರ ಕೆಜಿಗೆ ೬೦ರೂ.ನಂತೆ ಸಿಗು ತ್ತಿತ್ತು, ಈಗ ೧೦೦ರ ಅಂಚಿನಲ್ಲಿದೆ. ಹಾಗೆಯೇ ಹಲಸು, ಪಪ್ಪಾಯ ಮುಂತಾ ದ ಹಣ್ಣುಗಳ ಬೆಲೆಯೂ ಕೂಡ ಏರಿಕೆಯಾಗಿದೆ.
ಇನ್ನು ದಿನಬಳಕೆಯ ವಸ್ತು ಗಳಾದ ಅಕ್ಕಿ, ಬೇಳೆಕಾಳು, ಎಣ್ಣೆಯ ಬೆಲೆಯೂ ಕೂಡ ಏರಿಕೆಯಾಗಿದೆ. ೧೨೦ರೂ.ಗೆ ಸಿಗುತ್ತಿದ್ದ ತೊಗರೀ ಬೇಳೆ ೧೬೦ಕ್ಕೆ ಏರಿದೆ. ಉದ್ದಿನಬೇಳೆ ೧೩೦ಕ್ಕೆ ಸಿಗುತ್ತಿದ್ದು ಈಗ ೧೬೦ರ ಅಂಚಿನಲ್ಲಿದೆ. ೧೨೦ರೂ.ಗೆ ಸಿಗುತ್ತಿದ್ದ ೧ಲೀ.ಎಣ್ಣೆ ಈಗ ೧೫೦ಕ್ಕೆ ಮುಟ್ಟಿದೆ. ಅಕ್ಕಿಯ ಬೆಲೆಯಲ್ಲಿ ಕೂಡ ಏರಿಕೆಯಾಗಿದೆ. ಉಳಿದಂತೆ ಸಕ್ಕರೆ, ಬೆಲ್ಲ, ವಿವಿಧ ರೀತಿಯ ಹಿಟ್ಟುಗಳು, ಗೋಧಿ, ರಾಗಿ, ವಿಶೇಷವಾಗಿ ಮೆಣಸಿನಕಾಯಿಯ ಬೆಲೆ ಏರಿಕೆ ಕಂಡಿದೆ. ೧ ಕೆಜಿ ಮೆಣಸಿನಕಾಯಿ ೨೦೦ರಿಂದ ೨೫೦ರ ಒಳಗಿತ್ತು. ಈಗ ೬೦೦ರೂ. ವರೆಗೆ ಏರಿಕೆ ಕಂಡಿದೆ. ಹಾಗೆಯೇ ಸಾಂಬಾರು ಪದಾರ್ಥಗಳಾದ ಜೀರಿಗೆ ಕೆಜಿಗೆ ೩೫೦ರಿಂದ ೬೦೦ ರೂಗೆ ಏರಿಕೆ ಕಂಡಿದೆ. ಮೆಣಸಿನ ಪುಡಿ ಕೆಜಿಗೆ ೧೮೬ರಿಂದ ೪೦೦ಕ್ಕೂ ಅಧಿಕ, ಕಾಳುಮೆಣಸಿನ ಪುಡಿ ೩೮೦ ರಿಂದ ೫೨೦ರೂಗೆ ಏರಿಕೆಯಾಗಿದೆ.
ಒಂದು ವಾರದ ಹಿಂದೆಯೇ ಆರಂಭವಾದ ಜಿಟಿಜಿಟಿ ಮಳೆ ಜೋರಾಗಿ ಸುರಿಯುತ್ತಿಲ್ಲ. ಕೆಲವು ಕಡೆ ಬಂದರೆ ಕೆಲವು ಕಡೆ ಮಳೆಯೇ ಇಲ್ಲ. ಬಿತ್ತನೆ ಕೆಲಸ ಹಿಂದೆ ಬಿದ್ದಿದೆ. ಕೆಲವು ಕಡೆ ಬಿತ್ತಿದ್ದರೂ ಕೂಡ ಬೆಳೆ ಹುಟ್ಟಿಲ್ಲ. ಕೆರೆಕಟ್ಟೆಗಳೆಲ್ಲ ಇನ್ನೂ ಖಾಲಿಯಾಗಿಯೇ ಇವೆ ನದಿಗಳು ಕೂಡ ಬತ್ತಿವೆ. ಅಣೆಕಟ್ಟೆಗಳು ಬರಿದಾಗಿವೆ. ಶರಾವತಿಯಲ್ಲಿ ಇನ್ನು ಕೆಲವೇ ದಿನಗಳಿಗೆ ಮಾತ್ರ ವಿದ್ಯುತ್ ಉತ್ಪಾದನೆಗೆ ಅವಕಾಶವಿದೆ. ತುಂಗಾ ಮತ್ತು ಭದ್ರಾ ನದಿಗಳಲ್ಲಿ ಕೂಡ ನೀರು ಕಡಿಮೆಯಾಗಿದೆ. ಇನ್ನೇನು ಮಳೆ ಬಂತು ಎನ್ನುತ್ತಿ ದ್ದಂತೆಯೇ ಕರೆಕಟ್ಟೆ, ಅಣೆಕಟ್ಟು ಗಳು ತುಂಬುವಂತಹ ಜೋರಾದ ಮಳೆ ಇನ್ನೂ ಬಂದಿಲ್ಲ. ಜೂನ್ ತಿಂಗಳ ಆರಂಭದ ಬರಬೇಕಿದ್ದ ಮಳೆ ಇನ್ನೂ ಬಂದಿಲ್ಲ . ಈ ಎ ಕಾರಣಗಳಿಂದ ತರಕಾರಿ ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆಯೂ ಕೂಡ ಏರಿಕೆಯಾಗಿದೆ.