ಕಳೆದ ೧೦ ವರ್ಷದಲ್ಲಿ ೩ಪಟ್ಟು ವ್ಯವಹಾರ ವೃದ್ಧಿಸಿಕೊಂಡ ಶಿವ ಬ್ಯಾಂಕ್…

ಶಿಕಾರಿಪುರ: ಪಟ್ಟಣದಲ್ಲಿ ಪ್ರತಿಷ್ಠಿತ ಸಹಕಾರಿ ಬ್ಯಾಂಕ್ ಎಂಬ ಹಿರಿಮೆಯನ್ನು ಹೊಂದಿರುವ ಶಿವ ಸಹಕಾರಿ ಬ್ಯಾಂಕ್ ಕಳೆದ ೧೦ ವರ್ಷ ಗಳಲ್ಲಿ ೩ ಪಟ್ಟು ಮೀರಿ ತನ್ನ ವ್ಯವಹಾರವನ್ನು ವೃದ್ದಿಸಿಕೊಳ್ಳುವ ಮೂಲಕ ಗ್ರಾಹಕರ ವಿಶ್ವಾಸ ನಂಬಿಕೆಗೆ ಚ್ಯುತಿ ಬಾರದಂತೆ ಜನಸಾಮಾನ್ಯರಿಗೆ ಆರ್ಥಿಕ ಶಕ್ತಿಯನ್ನು ಕಲ್ಪಿಸಿಕೊಡುತ್ತಿದೆ ಎಂದು ಬ್ಯಾಂಕ್ ಅಧ್ಯಕ್ಷ ಎನ್.ಜಿ ಈಶ್ವರಪ್ಪ ಗೌಡ ಹೆಮ್ಮೆ ವ್ಯಕ್ತಪಡಿಸಿದರು.
ಪಟ್ಟಣದ ರಥಬೀದಿಯಲ್ಲಿನ ಶ್ರೀ ತರಳಬಾಳು ಜಗದ್ಗುರು ಸಮುದಾಯ ಭವನದಲ್ಲಿ ನಡೆದ ಬ್ಯಾಂಕಿನ ೨೭ನೇ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬ್ಯಾಂಕ್ ಸತತ ೩ ದಶಕದಿಂದ ಪಟ್ಟಣದಲ್ಲಿ ಕಾರ್ಯನಿರ್ವಹಿಸಿ ಜನಸಾಮಾನ್ಯರಿಗೆ ಆರ್ಥಿಕ ಭದ್ರತೆ ಕಲ್ಪಿಸಿಕೊಟ್ಟಿದ್ದು,ಸಿರಿಗೆರೆ ತರಳಬಾಳು ಜಗದ್ಗುರುಗಳ ಅನುಗ್ರಹ ಮತ್ತು ಆಶಿರ್ವಾದ ಬ್ಯಾಂಕ್‌ಗೆ ದೊಡ್ಡ ಪ್ರೇರಕ ಶಕ್ತಿಯಾಗಿದೆ ಎಂದು ಶ್ರೀಗಳನ್ನು ಸ್ಮರಿಸಿದರು.
ಕಳೆದ ೧೦ ವರ್ಷಗಳಲ್ಲಿ ಬ್ಯಾಂಕಿನ ಒಟ್ಟು ವ್ಯವಹಾರವು ೩ ಪಟ್ಟು ಮೀರಿ ವೃದ್ದಿಸಿಕೊಂಡಿದ್ದು, ಕಳೆದ ಮಾರ್ಚ್ ಅಂತ್ಯಕ್ಕೆ ದುಡಿಯುವ ಬಂಡವಾಳವು ರೂ.೪೧.೫೬ ಕೋಟಿಯಾಗಿದೆ. ಪ್ರಸಕ್ತ ಸಾಲಿನಲ್ಲಿ ರೂ.೧೮.೫೦ ಲಕ್ಷ ಆದಾಯ ತೆರಿಗೆಗಾಗಿ ಅನುವು ಕಾಯ್ದಿರಿಸಿದ್ದು. ಭಾರತೀಯ ರಿಸರ್ವ್ ಬ್ಯಾಂಕಿನ ನಿಯಮದಂತೆ ರೂ.೧೨.೫೦ ಲಕ್ಷ ಎನ್.ಪಿ.ಎ ಬಾಬ್ತಿಗೆ ಮೀಸಲು ಕಾಯ್ದಿರಿಸಿದ ನಂತರ ರೂ.೫೦.೫೭ ಲಕ್ಷ ನಿವ್ವಳ ಲಾಭ ಗಳಿಸಿ ಇದುವರೆಗಿನ ದಾಖಲೆಯಾಗಿದೆ ಎಂದು ಹೆಮ್ಮೆ ವ್ಯಕತಿಪಡಿಸಿದ ಅವರು, ಮಾರ್ಚ್ ಅಂತ್ಯಕ್ಕೆ ರೂ. ೩೬.೨೧ ಕೋಟಿ ಠೇವಣಿ ಸಂಗ್ರಹಿಸಿ ರೂ.೨೬.೨೧ ಕೋಟಿ ಸಾಲ ಮುಂಗಡ ನೀಡಲಾಗಿದ್ದು ಒಟ್ಟು ವ್ಯವಹಾರ ರೂ.೬೮.೪೨ ಕೋಟಿಗೆ ಏರಿಕೆಯಾಗಿದೆ. ವರದಿ ಸಾಲಿನಲ್ಲಿ ರೂ.೨೫೯.೨೦ ಕೋಟಿ ಗಳಿಗೂ ಆಽಕ ಹಣದ ವಹಿವಾಟು ನಡೆಸಲಾಗಿದೆ ಎಂದು ತಿಳಿಸಿದರು.
ಮಾಜಿ ಶಾಸಕ ಹಾಗೂ ತಾಲೂಕು ಸಾಧು ವೀರಶೈವ ಸಮಾಜದ ಮುಖಂಡ ಶಾಂತವೀರಪ್ಪ ಗೌಡ, ನಾಗರಾಜ ಗೌಡ, ಶಿವಾನಂದಯ್ಯ ಸ್ವಾಮಿ ಶಿರಾಳಕೊಪ್ಪ ಎಸ್ ನಾಗರಾಜ್ ಮತ್ತಿತರರು ಶಿರಾಳಕೊಪ್ಪದಲ್ಲಿ ಬ್ಯಾಂಕ್‌ನ ಶಾಖೆ ಯನ್ನು ತುರ್ತಾಗಿ ಆರಂಭಿಸುವಂತೆ ಒತ್ತಾಯಿಸಿದರು.
ಉಪಾಧ್ಯಕ್ಷ ಬಿ. ಪರಮೇಶ್ವರಪ್ಪ ಮಳೂರು, ಕೆ.ಗಂಗಾಧರಪ್ಪ ಈಸೂರು,ಕೆ.ಜಿ. ಚಂದ್ರಕುಮಾರ, ನಾಗರಾಜ್, ಕೆ.ಎಂ.ಪ್ರಕಾಶ್ ಮಹಾಸಭೆಯ ವಿವಿಧ ಕಾರ್ಯ ಸೂಚಿಗಳನ್ನು ಮಹಾ ಸಭೆಯಲ್ಲಿ ಮಂಡಿಸಿ ಸರ್ವ ಸದಸ್ಯರ ಅನುಮೋದನೆ ಪಡೆದರು, ಬ್ಯಾಂಕಿನ ನಿರ್ದೇಶಕ ವಿ.ಎಸ್ ಕುರ್ತಕೋಟಿ, ಜಿ.ಪರಮೇಶ್ವರಪ್ಪ ಸಿಬ್ಬಂದಿ ವೀರೇಶ್, ಪ್ರವೀಣ, ಆಭಿಲಾಷ, ಸಚಿನ್, ಸುರೇಶ್, ಶರತ್, ಬ್ಯಾಂಕಿನ ವ್ಯವಸ್ಥಾಪಕ ಕೆ.ಆರ್.ಬಸವರಾಜಪ್ಪ, ಅಕೌಂಟೆಂಟ್ ಅರವಿಂದ ಕುಮಾರ್, ಪಿಗ್ಮಿ ಸಂಗ್ರಹಕಾರ ಶಂಭುಗೌಡ,ಸಂತೋಷಕುಮಾರ್ ಮತ್ತಿತರರು ಹಾಜರಿದ್ದರು. ಸುಮ, ಭಾಗ್ಯ ಪ್ರಾರ್ಥಿಸಿ, ಮಹದೇವಪ್ಪ ನಿರೂಪಿಸಿ, ಸತೀಶ್ ವಂದಿಸಿದರು.