ಶಿವಮೊಗ್ಗ ಜಿಲ್ಲೆಗೆ ಒಲಿದ ಅದೃಷ್ಟ: ಮಂತ್ರಿಯಾದ ಸೊರಬ ಶಾಸಕ ಮಧು ಬಂಗಾರಪ್ಪ…
ಶಿವಮೊಗ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಸೊರಬ ಕ್ಷೇತ್ರದ ಶಾಸಕ ಮಧು ಬಂಗಾರಪ ಅವರು ಸ್ಥಾನ ಪಡೆದಿದ್ದಾರೆ. ಇಂದು ರಾಜಭವನದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಮಾಜಿ ಸಿಎಂ ಎಸ್. ಬಂಗಾರಪ್ಪ ಅವರ ಪುತ್ರರಾದ ಮಧು ಬಂಗಾರಪ್ಪ ಕಾಂಗ್ರೆಸ್ ಪಾಳಯದಲ್ಲಿ ಉತ್ತಮ ವರ್ಚಸ್ಸು ಹೊಂದಿದ್ದಾರೆ. ೧೯೬೬ ಸೆ.೪ರಂದು ಸೊರಬ ತಾಲೂಕಿನ ಕುಬಟೂರು ಎಂಬಲ್ಲಿ ಜನಿಸಿದ ಮಧು ಬಂಗಾರಪ್ಪ ಪದವೀಧರರು. ತಂದೆ ಎಸ್. ಬಂಗಾರಪ್ಪ, ತಾಯಿ ಶಕುಂತಲಾ ಬಂಗಾರಪ್ಪ. ವ್ಯಾಪಾರೋದ್ಯಮಿಯಾದ ಇವರು ರಾಜಕೀಯಕ್ಕೆ ಬರುವ ಮೊದಲು ಸಿನಿಮಾ ಆಡಿಯೋ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.
೨೦೧೩ರಲ್ಲಿ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಮಧು, ಸೊರಬ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಪ್ರಥಮ ಬಾರಿಗೆ ಚುನಾವಣೆಯಲ್ಲಿ ಗೆಲುವು ಸಾಧಿಸಿ ದರು. ಸೊರಬ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿರುವ ಮಧು ಬಂಗಾರಪ್ಪ ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ೪೪,೨೬೨ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಹಾಗೂ ಅವರ ಸಹೋದರ ಕುಮಾರ್ ಬಂಗಾರಪ್ಪ ಅವರನ್ನು ಸೋಲಿಸಿದರು.
ಮಧು ಬಂಗಾರಪ್ಪ ಕರ್ನಾಟಕ ಕಾಂಗ್ರೆಸ್‌ನ ಹಿಂದುಳಿದ ವರ್ಗಗಳ ವಿಭಾಗದ (ಒಬಿಸಿ) ಕಾರ್ಯಾಧ್ಯಕ್ಷರು. ಕನ್ನಡ ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಸಹೋದರ ಆಗಿದ್ದಾರೆ. ರಾಜಕೀಯ ಹೊರತುಪಡಿಸಿ ಕಲ್ಲರಳಿ ಹೂವಾಗಿ ಕನ್ನಡ ಚಿತ್ರ ನಿರ್ಮಾಣಕ್ಕಾಗಿ ರಾಷ್ಟ್ರಪತಿಗಳಿಂದ ಪದಕ ಪಡೆದಿದ್ದಾರೆ. ಚಲನಚಿತ್ರ ನಟರಾಗಿ, ನಿರ್ಮಾಪಕ ರಾಗಿ, ವಿತರಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
ರಾಜಕೀಯ ಜೀವನ: ೨೦೧೩ರ ಚುನಾವಣೆಯಲ್ಲಿ ೫೮,೫೪೧ ಮತಗಳನ್ನು ಪಡೆದು ೩೭,೩೧೬ ಮತ ಪಡೆದ ಕೆಜೆಪಿ ಪಕ್ಷದ ಹೆಚ್. ಹಾಲಪ್ಪರನ್ನು ಸೋಲಿಸಿ ಮೊದಲ ಬಾರಿಗೆ ಶಾಸಕರಾದರು. ಈ ಚುನಾವಣೆಯಲ್ಲಿ ಮಧು ಬಂಗಾರಪ್ಪಗೆ ಕಾಂಗ್ರೆಸ್‌ನಿಂದ ಸಹೋದರ ಕುಮಾರ್ ಬಂಗಾರಪ್ಪ ಎದುರಾಳಿ ಯಾಗಿದ್ದರು. ೩೩,೧೭೬ ಮತಗಳನ್ನು ಪಡೆದು ಕುಮಾರ್ ಬಂಗಾರಪ್ಪ ಸೋಲು ಕಂಡರು. ೨೦೧೮ರ ಚುನಾವಣೆಯಲ್ಲಿ ಸೊರಬದ ರಾಜಕೀಯ ಚಿತ್ರಣ ಬದಲಾಯಿತು. ಕುಮಾರ್ ಬಂಗಾರಪ್ಪ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ೭೨,೦೯೧ ಮತಗಳನ್ನು ಪಡೆದು ಜಯ ಗಳಿಸಿದರು. ಮಧು ಬಂಗಾರಪ್ಪ ಜೆಡಿಎಸ್‌ನಿಂದ ಕಣಕ್ಕಿಳಿದು ೫೮,೮೦೫ ಮತಗಳನ್ನು ಪಡೆದು ಸೋಲೊಪ್ಪಿಕೊಂಡರು.
೨೦೧೩, ೨೦೧೪ರಲ್ಲಿ ಮಧು ಬಂಗಾರಪ್ಪ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತರಕಾಗಿಯೂ ಕಾರ್ಯ ನಿರ್ವಹಣೆ ಮಾಡಿದ್ದಾರೆ. ೨೦೧೮ರ ಚುನಾವಣೆಯಲ್ಲಿ ಸೋತ ಬಳಿಕವೂ ಅವರನ್ನು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷರಾಗಿ ಪಕ್ಷ ನೇಮಕ ಮಾಡಿತ್ತು. ೨೦೧೯ರ ಲೋಕಸಭೆ ಚುನಾವಣೆಯಲ್ಲಿ ಮಧು ಬಂಗಾರಪ್ಪ ಶಿವಮೊಗ್ಗ ಕ್ಷೇತ್ರದಿಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಯಾಗಿ ಕಣಕ್ಕಿಳಿದಿದ್ದರು. ೫,೦೬,೫೧೨ ಮತಗಳನ್ನು ಪಡೆದು ಬಿಜೆಪಿಯ ಬಿ. ವೈ. ರಾಘವೇಂದ್ರ ಎದುರು ಸೋಲುಕಂಡರು.
೨೦೨೩ರ ವಿಧಾಸಭಾ ಚುನಾವಣೆ ಯಲ್ಲಿ ೯೮,೯೧೨ ಮತಗಳನ್ನು ಪಡೆಯುವ ಮೂಲಕ ಸೊರಬದಲ್ಲಿ ಭರ್ಜರಿ ಗೆಲುವು ಸಾಧಿಸಿದರು. ೪೪,೨೬೨ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಹಾಗೂ ಅವರ ಸಹೋದರ ಕುಮಾರ್ ಬಂಗಾರಪ್ಪ ಅವರನ್ನು ಸೋಲಿಸಿದರು. ೨೦೨೩ರ ವಿಧಾನಸಭಾ ಚುನಾವಣೆಗೆ ಮಧು ಬಂಗಾರಪ್ಪ ಪರ ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಇಬ್ಬರೂ ಸೊರಬದಲ್ಲಿ ಪ್ರಚಾರ ನಡೆಸಿದ್ದರು.