ಹಿರಿಯ ವಿದ್ಯಾರ್ಥಿಗಳೇ ವಿದ್ಯಾಸಂಸ್ಥೆಯ ರಾಯಭಾರಿಗಳು..

ಶಿವಮೊಗ್ಗ: ಹಿರಿಯ ವಿದ್ಯಾರ್ಥಿಗಳೇ ವಿದ್ಯಾಸಂಸ್ಥೆಯ ನಿಜವಾದ ರಾಯಭಾರಿಗಳು ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್. ನಾರಾಯಣ ರಾವ್ ಅಭಿಪ್ರಾಯಪಟ್ಟರು.
ನಗರದ ರಾಷ್ಟ್ರೀಯ ಔಷಧ ಮಹಾವಿದ್ಯಾಲಯದಲ್ಲಿ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬದುಕನ್ನ ರೂಪಿಸಿಕೊಳ್ಳುವಲ್ಲಿ ವಿದ್ಯಾಸಂಸ್ಥೆಗಳ ಪಾತ್ರ ಪ್ರಮುಖ ವಾಗಿದೆ. ಯಾವುದೇ ವಿದ್ಯಾ ಸಂಸ್ಥೆ ಗಟ್ಟಿಗೊಳ್ಳಲು ಕಾಲೇಜಿನ ಬೋಧನಾ ಕ್ರಮದ ಜೊತೆಗೆ ಹಿರಿಯ ವಿದ್ಯಾರ್ಥಿಗಳ ಭಾಗವ ಹಿಸುವಿಕೆಯು ಅಷ್ಟೇ ಮುಖ್ಯ. ಇದರಿಂದ ಸ್ನೇಹ ಸಂಬಂಧಗಳು ಗಟ್ಟಿಗೊಳ್ಳಲಿದೆ. ಕಾಲೇಜಿನ ಅವಿನಾಭಾವ ಸಂದರ್ಭ ನೆನೆದಾಗ ನಮಗೆ ರೋಮಾಂಚನವಾಗುತ್ತದೆ. ಇನ್ನಷ್ಟು ರೋಮಾಂಚಿತವೆಂದರೆ ನಮ್ಮ ಬಾಲ್ಯದ ದಿನ. ಅಂತಹ ವಿಶೇಷ ಸಂದರ್ಭ ನೆನೆದು ಹಿರಿಯ ವಿದ್ಯಾರ್ಥಿಗಳು ಹೇಳುವ ಒಳ್ಳೆಯ ಮಾತುಗಳೇ ಸಂಸ್ಥೆಯ ಉನ್ನತಿಗೆ ನಿಜವಾದ ಪೂರಕ ಶಕ್ತಿ ಎಂದು ಹೇಳಿದರು.
ಕಲಿಯಲು ಅನೇಕ ವಿಚಾರ ಗಳಿವೆ, ಅಂತಹ ಹೊಸತನವನ್ನು ಕಲಿಯುವ ಸೌಜನ್ಯತೆ ನಮ್ಮದಾಗ ಬೇಕಿದೆ. ಇಲ್ಲವಾದಲ್ಲಿ ಅಹಂಕಾರ ನಮ್ಮ ಹೆಗಲ ಮೇಲೇರಿ ಕುಳಿತು ಬಿಡುತ್ತದೆ. ಸ್ನೇಹವೆಂಬುದು ಅಮೂಲ್ಯ ಆಯ್ಕೆಯಾಗಿದ್ದು ಸಣ್ಣವರೊಂದಿಗೆ ಸ್ನೇಹ ಮಾಡಲು ಹಿಂಜರಿಯದಿರಿ ಅದರೇ ಸಣ್ಣತನ ಇರುವವರಲ್ಲಿ ಎಂದಿಗೂ ಸ್ನೇಹ ಮಾಡಿಕೊಳ್ಳಬೇಡಿ ಎಂದರು.
ಎನ್‌ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಹಿರಿಯ ವಿದ್ಯಾರ್ಥಿ ಗಳ ಸಂಘದ ವಿಶೇಷವೆಂದರೆ ಅಲ್ಲಿ ವಯಸ್ಸಿನ ಅಂತರವಿರುವುದಿಲ್ಲ, ಸ್ನೇಹ ಸಂಬಂಧಗಳಿಗೆ ಹೆಚ್ಚಿನ ಆದ್ಯತೆಯಿರುತ್ತದೆ. ಹಿರಿಯ ವಿದ್ಯಾರ್ಥಿಗಳಿಗೆ ನಾಲ್ಕು ಗೊಡೆಯ ನಡುವಿನ ಅನುಭವವಿರುತ್ತದೆ, ಜೊತೆಯಲ್ಲಿ ಹೊರಜಗತ್ತಿನ ಅನುಭವವಿರುತ್ತದೆ. ಇಂತಹ ಅನುಭವಗಳಿಂದ ನಾವು ಓದಿದ ವಿದ್ಯಾಸಂಸ್ಥೆಗಳಲ್ಲಿ ಏನೆ ಮಾರ್ಪಾಟುಗಳನ್ನು ಮಾಡ ಬಹುದು ಎಂದು ಆಲೋಚಿಸು ವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ನಾರಾಯಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾದ ಕುವೆಂಪು ವಿಶ್ವವಿದ್ಯಾಲಯದ ಶೈಕ್ಷಣಿಕ ಮಂಡಳಿಯ ಸದಸ್ಯರಾದ ಎಸ್.ಚಂದ್ರಶೇಖರ, ಬೆಂಗಳೂರಿನ ಈಸ್ಟ್ ಪಾಯಿಂಟ್ ಕಾಲೇಜ್ ಆಫ್ ಫಾರ್ಮಸಿ ನಿರ್ದೇಶಕರಾದ ಡಾ.ಜಗದೀಶ ಸಿಂಗ್, ಹಿರಿಯ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ಎಸ್.ಎಂ.ಪ್ರಸನ್ನ ಮತ್ತಿತರರು ಉಪಸ್ಥಿತರಿದ್ದರು.