ಮಕ್ಕಳಲ್ಲಿ ದೇಶ ಪ್ರೇಮ ಬೆಳೆಸುವಲ್ಲಿ ಸ್ಕೌಟ್ಸ್ ಗೈಡ್ಸ್ ಸಹಕಾರಿ: ಪಿಜಿಆರ್ ಸಿಂಧ್ಯಾ
ಶಿವಮೊಗ್ಗ: ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ಮಕ್ಕಳಲ್ಲಿ ದೇಶಪ್ರೇಮ ಬೆಳೆಸುವ ಜತೆಯಲ್ಲಿ ಸೇವಾ ಮನೋಭಾವ ಗುಣಗಳನ್ನು ಕಲಿಸುತ್ತದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ಹೇಳಿದರು.
ಕುವೆಂಪು ರಂಗಮಂದಿರದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮಲ್ನಾಡ್ ಓಪನ್ ಗ್ರೂಪ್ ವತಿಯಂದ ಆಯೋಜಿಸಿದ್ದ ಗೀತ ಭಾರತಿ ದೇಶಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗೀತ ಭಾರತಿ ದೇಶ ಪ್ರೇಮ ಕುರಿತ ಕಾರ್ಯಕ್ರಮ ಆಗಿದ್ದು, ವಿದ್ಯಾರ್ಥಿಗಳಿಗೆ ಬಾಲ್ಯದಲ್ಲಿಯೇ ರಾಷ್ಟ್ರೀಯ ವೈವಿಧ್ಯತೆ ಕುರಿತು ಜಾಗೃತಿ ಮೂಡಿಸುವ ದೃಷ್ಠಿಯಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ. ಆತ್ಮವಿಶ್ವಾಸ ಹೆಚ್ಚಿಸುವ ಜತೆಯಲ್ಲಿ ಸಂಸ್ಕಾರ ಹಾಗೂ ಜೀವನ ಮೌಲ್ಯ ಗಳನ್ನು ಕಲಿಸುತ್ತದೆ ಎಂದರು.
ಪ್ರಾಥಮಿಕ ಶಿಕ್ಷಣ ಹಂತ ದಿಂದಲೇ ವಿದ್ಯಾರ್ಥಿಗಳು ಸ್ಕೌಟ್ಸ್ ಮತ್ತು ಗೈಡ್ಸ್ನಲ್ಲಿ ತೊಡಗಿಸಿ ಕೊಳ್ಳುವಂತೆ ಪೋಷಕರು ಹಾಗೂ ಶಿಕ್ಷಕರು ಮಾರ್ಗದರ್ಶನ ನೀಡಬೇಕು. ಇದರಿಂದ ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ವೇದಿಕೆಗಳಲ್ಲಿ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ದೊರೆಯುತ್ತದೆ ಎಂದು ಹೇಳಿದರು.
ಭಾರತೀಯ ಸೇನೆಯ ನಿವೃತ್ತ ಕರ್ನಲ್ ಗೋಪಾಲ್ ಟಿ.ಕೌಶಿಕ್ ಅವರು ಮಾತನಾಡಿ, ದೇಶ ಅತ್ಯಂತ ಬಲಿಷ್ಠ ಆಗಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಶಕ್ತಿಶಾಲಿ ರಾಷ್ಟ್ರವಾಗಿ ರೂಪುಗೊಂಡಿದೆ. ದೇಶ ಸೇವೆಯಲ್ಲಿ ಸಿಗುವ ತೃಪ್ತಿ ಬೇರೆ ಯಾವುದರಲ್ಲಿ ಸಿಗುವುದಿಲ್ಲ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ ಮಾತನಾಡಿ, ಗೀತಭಾರತಿ ಮಕ್ಕಳಲ್ಲಿ ರಾಷ್ಟ್ರೀಯ ಮನೋಭಾವದ ಜತೆಯಲ್ಲಿ ದೇಶಕ್ಕಾಗಿ ಸೇವೆ ಮಾಡುವ ಸಂಕಲ್ಪ ಬೆಳೆಸುತ್ತದೆ. ಮಲ್ನಾಡ್ ಓಪನ್ ಗ್ರೂಪ್ ಪ್ರತಿ ವರ್ಷ ಇಂತಹ ಕಾರ್ಯಕ್ರಮ ಆಯೋಜಿಸುತ್ತಿರು ವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಯೋಧ ಗೋಪಾಲ್ ಟಿ.ಕೌಶಿಕ್ ಅವರನ್ನು ಮಲ್ನಾಡ್ ಓಪನ್ ಗ್ರೂಪ್ ವತಿಯಿಂದ ಆತ್ಮಿಯವಾಗಿ ಸನ್ಮಾನಿಸಲಾಯಿತು. ೧೨ಕ್ಕೂ ಅಧಿಕ ಶಾಲೆಯ ನೂರಾರು ವಿದ್ಯಾರ್ಥಿ ಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿ ಸಂಸ್ಥೆ ಮುಖ್ಯ ಆಯುಕ್ತ ಎಚ್.ಡಿ.ರಮೇಶ್ ಶಾಸ್ತ್ರಿ, ಮಲ್ನಾಡ್ ಓಪನ್ ಗ್ರೂಪ್ ಪೋಷಕ ಎಚ್.ಪರಮೇಶ್ವರ್, ಸಂಸ್ಥಾಪಕ ಸದಸ್ಯ ಸಾಯಿ ಕುಮಾರ್.ಟಿ.ಎನ್., ನಾಯಕ ರಾಜೇಶ್ ವಿ.ಅವಲಕ್ಕಿ, ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯ್ ಕುಮಾರ್ ಮತ್ತಿತರರಿದ್ದರು.