ಗಾಯಕಿ ಕಸ್ತೂರಿ ಶಂಕರ್‌ಗೆ ಸಂತ ಶಿಶುನಾಳ ಶರೀಫ ಪ್ರಶಸ್ತಿ…

KASTURI-SHANKER

ನಾಡಿನ ಪ್ರಖ್ಯಾತ ಹಿನ್ನೆಲೆ ಗಾಯಕಿ ಕಸ್ತೂರಿ ಶಂಕರ್‌ರವರಿಗೆ ಕರ್ನಾಟಕ ರಾಜ್ಯ ಸರ್ಕಾರ ೨೦೨೨-೨೩ನೇ ಸಾಲಿನ ಸಂತ ಶಿಶುನಾಳ ಶರೀಫ್ ಪ್ರಶಸ್ತಿ ನೀಡಿ ಗೌರವಿಸಿದೆ.
ಕಸ್ತೂರಿ ಶಂಕರ್ ಹಿನ್ನೆಲೆ :
೧೯೫೦ ರ ನವೆಂಬರ್ ೧ರಂದು ಜೆ.ಸಿ. ಶಂಕರಪ್ಪ – ಗಿರಿಜ ದಂಪತಿಗಳ ಪುತ್ರಿಯಾದ ಕಸ್ತೂರಿ ಶಂಕರ್, ತಮ್ಮ ೧೨ನೇ ವಯಸ್ಸಿಗೆ ನಾದಲೋಕ ಪ್ರವೇಶ ಮಾಡಿದರು. ಮೈಸೂರು ಅನಂತಸ್ವಾಮಿ ರಾಗ ಸಂಯೋಜನೆಯ ದ.ರಾ. ಬೇಂದ್ರೆಯವರ ನಾನು ಬಡವಿ, ಆತ ಬಡವ, ಒಲವೇ ನಮ್ಮ ಬದುಕು ಜನಪ್ರಿಯತೆ ತಂದು ಕೊಟ್ಟ ಗೀತೆ. ಡಾ. ಜಿ.ಎಸ್. ಶಿವರುದ್ರಪ್ಪನವರ ಎ ದೂರದಿ ಜಿನುಗುವ ಮಳೆ ಬನ್ನಿ ಬನ್ನಿ ಬಿರುಮಳೆಯಾಗಿ ಗೀತೆಗೆ ಸುಂದರ ಧ್ವನಿಯಾಗಿದ್ದು ಇತಿಹಾಸ.
ತಮ್ಮ ನಾಲ್ಕನೇ ವಯಸ್ಸಿನಲ್ಲಿಯೇ ಆಲಿಸಿದ ಗೀತೆಗಳನ್ನು ಮನನ ಮಾಡಿಕೊಂಡು ನೆನಪಿನಂಗಳದಲ್ಲಿ ತುಂಬಿ, ಕೂಡಲೇ ಸಾದರ ಪಡಿಸುತ್ತಿದ್ದ ಅನನ್ಯ ಪ್ರತಿಭೆ, ನಾಡು ಕಂಡ ಅತ್ಯಂತ ಹೆಮ್ಮೆಯ ಗಾಯಕಿ, ಸುಮಧುರ ಕಂಠಸಿರಿಯ ಗಾನ ಶಾರದೆ ಶ್ರೀಮತಿ ಕಸ್ತೂರಿ ಶಂಕರ್.
ಕನ್ನಡಕ್ಕೂ, ಕಸ್ತೂರಿಯವರಿಗೂ ಅವಿನಾಭಾವ ಸಂಬಂಧ. ಭಕ್ತಿ ಸಂಗೀತ, ವಚನ ಸಂಗೀತ, ಸುಗಮ ಸಂಗೀತ ಹಾಗೂ ಚಲನಚಿತ್ರ ಗೀತೆಗಳಿಗೂ ತೀರದ ನಂಟು. ಸಂಗೀತ ಪ್ರಿಯರಿಗೆ ಕಸ್ತೂರಿ ಶಂಕರ್ ಅಚ್ಚುಮೆಚ್ಚಿನ ಕಂಠ ಸಿರಿಯ ಮಾಧುರಿ. ಆಟ-ಪಾಠಗಳಿಗಿಂತ ಹೆಚ್ಚಾಗಿ ಹಾಡುವುದರ ಅತೀ ಆಸಕ್ತಿ ಹೊಂದಿದ ಕಸ್ತೂರಿ ಶಂಕರ್, ೭ನೇ ವಯಸ್ಸಿನಲ್ಲಿಯೇ ಸುಗಮ ಸಂಗೀತ ಕ್ಷೇತ್ರದ ಭೀಷ್ಮ ಎಂದೆನಿಸಿದ ಪಿ. ಕಾಳಿಂಗರಾಯರ ಗೀತೆಗಳಿಂದ ಪ್ರಭಾವಿತರಾಗಿ ೧೯೬೨ ರಿಂದಲೇ ಅನೇಕ ವೇದಿಕೆಗಳಲ್ಲಿ ಹಾಡಲು ಮೈಕ್ ಮುಂದೆ ನಿಂತರು.
ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಹಾಡುವಾಗ ಅನೇಕರ ಮನೆಸೂರೆಗೊಂಡ ಕಸ್ತೂರಿ ಶಂಕರ್, ಹೆಚ್.ಆರ್. ಲೀಲಾವತಿಯವರ ಉಡುಗಣವೇಷ್ಠಿತ ಗೀತೆಯನ್ನು ಮೆಚ್ಚಿಕೊಂಡು ತಾವೂ ಕೂಡ ಹಾಡಲು ಪ್ರಾರಂಭಿಸಿದರು. ವಿ.ಎ. ಸುಬ್ಬರಾವ್ ಮತ್ತು ಡಿ.ಬಿ. ಹರೀಂದ್ರ ಅವರಲ್ಲಿ ಶಾಸ್ತ್ರೀಯ ಸಂಗೀತ ಶಿಕ್ಷಣ ಪಡೆದ ಕಸ್ತೂರಿ ಶಂಕರ್, ಸುಪ್ರಸಿದ್ಧ ಹಾರ್‍ಮೋನಿಯಮ್ ವಾದಕರಾದ ಅರುಣಾಚಲಪ್ಪರವರ ಚತುರ್ಥ ಪುತ್ರ, ಭಾರತದ ನ್ಯೂ ಅರುಣಾ ಮ್ಯೂಸಿಕಲ್ಸ್ ಸಂಗೀತ ಮಳಿಗೆಯ ಮಾಲೀಕರಾದ ಎ. ಶಂಕರ್‌ರ ಕೈ ಹಿಡಿದು, ಅವರ ಉತ್ತೇಜನದಿಂದ ಗಾಯನವನ್ನು ಮುಂದುವರೆಸಿದರು.
೧೯೭೩ರಲ್ಲಿ ಕನ್ನಡ ಚಿತ್ರರಂಗದ ಭೀಷ್ಮರೆನಿಸಿದ ಕಣಗಾಲ್ ಪ್ರಭಾಕರ ಶಾಸ್ತ್ರಿಗಳು, ಕಸ್ತೂರಿ ಶಂಕರ್‌ರವರ ಕಂಠಸಿರಿಯನ್ನು ಮೆಚ್ಚಿ, ತಮ್ಮ ನಿರ್ದೇಶನದ ಬೆಟ್ಟದ ಗೌರಿ ಚಿತ್ರದಲ್ಲಿ ಆರ್. ಪರಮೇಶ್ವರ್‌ರ ಸಂಗೀತ ನಿರ್ದೇಶನದ ಗೀತೆಗಳನ್ನು ಹಾಡಿಸುವುದರ ಮೂಲಕ ಚಿತ್ರರಂಗ ಪ್ರವೇಶಿಸಲು ಕಾರಣರಾದರು. ನಂತರ ಪುಟ್ಟಣ್ಣ ಕಣಗಾಲ್, ಕೆ.ಎಸ್.ಎಲ್. ಸ್ವಾಮಿ, ಬಿ.ಎನ್ ರಂಗ, ಇವರುಗಳ ನಿರ್ದೇಶನದಲ್ಲಿ, ಸಂಗೀತ ನಿರ್ದೇಶಕರಾದ ವಿಜಯಭಾಸ್ಕರ್, ಟಿ.ಜಿ. ಲಿಂಗಪ್ಪ, ರಾಜನ್ ನಾಗೇಂದ್ರ, ಎಂ.ರಂಗರಾವ್, ಗುಣಸಿಂಗ್, ಜಿ.ಕೆ. ವೆಂಕಟೇಶ್, ಬಿ.ವಿ. ಶ್ರೀನಿವಾಸ್ ಹೀಗೆ ಇನ್ನೂ ಅನೇಕರೊಂದಿಗೆ ಕೆಲಸ ಮಾಡಿ ಶ್ರೇಷ್ಠ ಹಿನ್ನೆಲೆ ಗಾಯಕಿ ಎಂಬ ಪ್ರಶಸ್ತಿಯನ್ನೂ ಪಡೆದರು.
ಕನ್ನಡ ಮಾತ್ರವಲ್ಲದೇ, ಮಲೆಯಾಳಂ, ತುಳು ಚಿತ್ರಗಳು ಸೇರಿದಂತೆ ಸುಮಾರು ೬೦ ಚಿತ್ರಗಳಿಗೆ ಕಂಠದಾನ ಮಾಡಿರುವ ಕಲಾವಿದೆ ಶ್ರೀಮತಿ ಕಸ್ತೂರಿ ಶಂಕರ್, ಭಾಗ್ಯಜ್ಯೋತಿ ಚಿತ್ರದ ಗುಡಿ ಸೇರದ ಮುಡಿಯೇರದ ಕಡೆಗಾಣಿಸೋ ಹೂವಲ್ಲ ಗೀತೆಯ ಅತ್ಯಂತ ಜನಪ್ರಿಯತೆಯಿಂದಾಗಿ ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಕೆ.ಜೆ. ಜೇಸುದಾಸ್, ಟಿ.ಎನ್. ಸುಂದರಾಜನ್, ಎಸ್. ಪಿ. ಬಾಲಸುಬ್ರಮಣ್ಯಂ ಮತ್ತು ವಾಣಿ ಜಯರಾಮ್‌ರವರೊಂದಿಗೆ ಸಹ ಗಾಯಕಿಯಾಗಿ ಕರ್ತವ್ಯ ನಿರ್ವಹಿಸಿದ ಕೀರ್ತಿ ಕಸ್ತೂರಿ ಶಂಕರ್ ರವರದ್ದು.
ಇನ್ನು ಸುಗಮ ಸಂಗೀತ ಕ್ಷೇತ್ರದಲ್ಲಿಯೂ ತಮ್ಮದೇ ಆದ ಛಾಪನ್ನು ಮೂಡಿಸಿರುವ ಕಸ್ತೂರಿ ಶಂಕರ್, ನಾಡಿನ ಸುಪ್ರಸಿದ್ಧ ಕವಿಗಳಾದ ಕುವೆಂಪು, ದ.ರಾ. ಬೇಂದ್ರೆ, ಜಿ.ಎಸ್. ಶಿವರುದ್ರಪ್ಪ, ಚೆನ್ನವೀರ ಕಣವಿ, ಡಿ.ವಿ.ಜಿ, ನಿಸಾರ್ ಅಹಮದ್, ಹೆಚ್.ಎಸ್. ವೆಂಕಟೇಶ್ ಮೂರ್ತಿ, ಎನ್.ಎಸ್.ಲಕ್ಷ್ಮೀ ನಾರಾಯಣ ಭಟ್, ದೊಡ್ಡ ರಂಗೇಗೌಡ, ಎಂ.ಎನ್. ವ್ಯಾಸರಾವ್ ರವರುಗಳ ಗೀತೆಗಳಿಗೆ ಪದ್ಮಚರಣ್, ಮೈಸೂರು ಅನಂತ ಸ್ವಾಮಿ, ಸಿ.ಅಶ್ವಥ್, ಬಿ.ವಿ. ಶ್ರೀನಿವಾಸ್, ಪಿ.ಎಸ್. ವಸಂತ್, ಜಿ.ವಿ. ಅತ್ರಿ ಇವರುಗಳ ಸಂಗೀತ ನಿರ್ದೇಶನದಲ್ಲಿ ಅನೇಕ ಧ್ವನಿ ಸುರುಳಿಗಳಿಗೆ ದನಿಯಾಗಿzರೆ.
ಸಾವಿರಾರು ಭಕ್ತಿಗೀತೆಗಳನ್ನು ಕನ್ನಡ ಮಾತೃಭಾಷೆಯಲ್ಲಲ್ಲದೇ ಸಂಸ್ಕೃತ, ಹಿಂದಿ, ತುಳು, ತೆಲುಗು, ತಮಿಳು, ಕೊಂಕಣಿ ಭಾಷೆಗಳಲ್ಲಿ ಹಾಡಿರುವ ಸಾಧನೆ ಇವರದ್ದು. ಅನೇಕ ಭಾವ ಗೀತೆಗಳಿಗೆ, ಶರಣರ ವಚನಗಳಿಗೆ ಸ್ವರ ಸಂಯೋಜನೆ ಮಾಡಿ, ಹಾಡಿ, ಧ್ವನಿ ಸುರುಳಿಗಳನ್ನು ಹೊರ ತಂದಿzರೆ. ಆಕಾಶವಾಣಿ ಹಾಗೂ ಚಂದನ ವಾಹಿನಿಯ ಎ ಟಾಪ್ ಗ್ರೇಡ್ ಕಲಾವಿದೆಯಾದ ಕಸ್ತೂರಿ ಶಂಕರ್, ದೆಹಲಿಯ ಕಾನ್ಸಿಟ್ಯೂಷನ್ ಈ ಕ್ಲಾಸ್ ಯ ನಲ್ಲಿ ಪ್ರಧಾನಿ ವಾಜಪೇಯಿ, ಎಲ್.ಕೆ. ಅಡ್ವಾಣಿಯವರ ಸಮ್ಮುಖದಲ್ಲಿ, ಮೀರಾ, ತುಳಸಿ, ಕಬೀರದಾಸ್‌ರ ಭಜನೆಗಳು, ಕನ್ನಡ ಭಕ್ತಿಗೀತೆಗಳನ್ನು ಹಾಡಿದ ಕೀರ್ತಿ ಕಸ್ತೂರಿಯವರಿಗೆ ಸಲ್ಲುತ್ತದೆ.
ಕರ್ನಾಟಕ, ಮುಂಬೈ, ದೆಹಲಿ, ಕೇರಳ, ಚೆನ್ನೈ, ಆಂಧ್ರಪ್ರದೇಶ ಸೇರಿದಂತೆ ಸಾಗರದಾಚೆಯ ಅಮೇರಿಕಾ, ಆಸ್ಟ್ರೇಲಿಯಾ ದೇಶಗಳಲ್ಲಿ ಸುಗಮ ಸಂಗೀತ, ವಚನ ಸಂಗೀತ ಹಾಗೂ ಚಲನಚಿತ್ರ ಸಂಗೀತದ ಸಾವಿರಾರು ಕಾರ್ಯಕ್ರಮಗಳನ್ನು ನೀಡಿ ಅನೇಕರಿಂದ ಕಸ್ತೂರಿ ಶಂಕರ್ ಪ್ರಶಂಸೆ ಪಡೆದಿzರೆ.
ಪ್ರಶಸ್ತಿಗಳು : ಕಸ್ತೂರಿ ಶಂಕರ್ ರವರಿಗೆ ಶ್ರೇಷ್ಠ ಹಿನ್ನೆಲೆ ಗಾಯಕಿ ಪ್ರಶಸ್ತಿ, ವಚನ ಸಾಹಿತ್ಯಶ್ರೀ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ಕರ್ನಾಟಕ ಕಲಾಶ್ರೀ ಪ್ರಶಸ್ತಿ, ಕದಳಿ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಡಾ. ರಾಜ್ ಕುಮಾರ್ ಪ್ರಶಸ್ತಿ, ರಾಜ್ಯ ವಿವೇಕ ಸಂಗೀತ ಪ್ರಶಸ್ತಿ, ಸಮಾಜ ಸೇವಾ ಪ್ರಶಸ್ತಿ, ಲಾವಣ್ಯ ಪ್ರಶಸ್ತಿ, ಶ್ರೀ ಎಡೆಯೂರು ಸಿದ್ಧಲಿಂಗೇಶ್ವರ ಪ್ರಶಸ್ತಿ, ಸುವರ್ಣ ಶ್ರೀ ಪ್ರಶಸ್ತಿ, ರಮಣ ಶ್ರೀ ಪ್ರಶಸ್ತಿ ಹಾಗೂ ಶ್ರೀ ಬಾಲಗಂಗಾಧರ ಸ್ಮಾಮೀಜಿ ಸ್ಮರಣ ಪ್ರಶಸ್ತಿಗಳು ಸಂದಿವೆ.
ಅಲ್ಲದೇ ಅನೇಕ ಸಂಘ ಸಂಸ್ಥೆಗಳ ಪುರಸ್ಕಾರವನ್ನು ಸ್ವೀಕರಿಸಿರುವ ಕಸ್ತೂರಿ ಶಂಕರ್, ನಾದಮಯ ಕಸ್ತೂರಿ, ಗಾನಕಲಾ ಕೌಸ್ತುಭ, ಗಾನ ಶಾರದೆ, ಕನ್ನಡದ ಕೋಗಿಲೆ ಎಂಬ ಬಿರುದುಗಳಿಗೂ ಭಾಜನರಾಗಿzರೆ. ಈ ಬಾರಿ ಕರ್ನಾಟಕ ಸುಗಮ ಸಂಗೀತ ಪರಿಷತ್ ಚಾಮರಾಜನಗರದಲ್ಲಿ ಆಯೋಜಿಸಿರುವ ೧೨ನೇ ಸುಗಮ ಸಂಗೀತ ಪರಿಷತ್ತಿನ ಸಮ್ಮೇಳನದಲ್ಲಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿರುವ ಕಸ್ತೂರಿ ಶಂಕರ್, ತಮ್ಮ ದನಿಯಲ್ಲಿ ಮತ್ತಷ್ಟು ಧ್ವನಿಮುದ್ರಿಕೆಯನ್ನು ಹೊರತರುವ ಯೋಜನೆಯಲ್ಲಿzರೆ.
೭೫ರ ಹರೆಯದರಲ್ಲಿಯೂ ತಮ್ಮ ಕಾರ್ಯ ಚಟುವಟಿಕೆಗಳನ್ನು ಸದ್ದಿಲ್ಲದೇ ಮಾಡುತ್ತಿರುವ ಕಸ್ತೂರಿ ಶಂಕರ್ ಅನೇಕ ಕಡೆಗಳಲ್ಲಿ ಸುಗಮ ಸಂಗೀತ ತರಬೇತಿ ಶಿಬಿರಗಳನ್ನು ನಡೆಸಿ, ಯುವ ಪೀಳಿಗೆಯವರು ನಸು ನಾಚುವಂತೆ ಆದರ್ಶ ವ್ಯಕ್ತಿತ್ವದ ಮಹಿಳೆ ಎನಿಸಿzರೆ.
ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಭಾರತೀಯ ಸಂಸ್ಕೃತಿಯ ಪ್ರತೀಕದಂತೆ ಒಂದೇ ರೀತಿಯ ಉಡುಗೆಯಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿರುವ ಕಸ್ತೂರಿ ಶಂಕರ್, ಮೋಜು-ಮಸ್ತಿಯತ್ತ ಹೋದವರಲ್ಲ. ಸಂಪ್ರದಾಯದ ಚೌಕಟ್ಟು ಬಿಟ್ಟು ಬದುಕಿದವರಲ್ಲ. ಹಣೆಯಲ್ಲಿ ಶೋಭಿಸುವ ಕುಂಕುಮ ಅವರನ್ನು ಗುರುತಿಸಲು ಬಲು ಸುಲಭ ಸಾಧ್ಯವಾಗುತ್ತದೆ. ಇದು ನಮ್ಮ ಪದ್ಧತಿಯ ದ್ಯೋತಕ.
ತಾಯಿಯಂತೆ ಮಗಳು ನೂಲಿನಂತೆ ಸೀರೆ ಎಂಬ ನಾಣ್ಣುಡಿಗೆ ಅನುಗುಣವಾಗಿ ತಮ್ಮ ಮಗಳಾದ ಉಷಾ ಉಮೇಶ್ ರವರೊಂದಿಗೆ ಬೆಂಗಳೂರಿನಲ್ಲಿ ಮಯೂರ ಸ್ಕಾಲ್ ಆಫ್ ಮ್ಯೂಸಿಕ್ ಶಾಲೆಯನ್ನು ತೆರೆದಿದ್ದು, ಅನೇಕ ವಿದ್ಯಾರ್ಥಿ ಸಮೂಹಕ್ಕೆ ಸಂಗೀತ ಶಿಕ್ಷಣವನ್ನು ಉಣಬಡಿಸುತ್ತಿದ್ದು ಸಂಸ್ಥೆಯ ವಾರ್ಷಿಕೋತ್ಸವವನ್ನು ಪ್ರತೀ ವರ್ಷ ಅದ್ಧೂರಿಯಿಂದ ನೆರೆವೇರಿಸಿ ಕ್ಷೇತ್ರದ ಮಹನೀಯರನ್ನು ಸನ್ಮಾನಿಸುವ ಪರಿಪಾಟಿಕೆಯನ್ನು ಹೊಂದಿzರೆ.
ಸಂಸ್ಥೆಯನ್ನು ಬೆಳೆಸುತ್ತಾ ಅದರಡಿಯಲ್ಲಿ ಇನ್ನೂ ಅನೇಕ ಕೆಲಸಗಳನ್ನು ಮಾಡುವ ಯೋಜನೆಯನ್ನು ಇಟ್ಟುಕೊಂಡಿರುವ ಶ್ರೀಮತಿ ಕಸ್ತೂರಿ ಶಂಕರ್, ನಾಡು ಕಂಡ ಅಪರೂಪದ ನಿರ್ಮಲ ಮನಸ್ಸಿನ, ಅನನ್ಯ ಪ್ರತಿಭೆ ಎಂದಲ್ಲಿ ಅತಿಶಯೋಕ್ತಿಯಲ್ಲ.

ಲೇಖನ : ಸಂಧ್ಯಾ ಅಜಯ್ ಕುಮಾರ್, ಖ್ಯಾತ ನಿರೂಪಕಿ, ಬೆಂಗಳೂರು.