ಡಿಸಿಸಿ ಬ್ಯಾಂಕ್ ಹೊಸ ಮೂರು ಶಾಖೆಗಳಿಗೆ ಆರ್‌ಬಿಐ ಅನುಮತಿ…

0
dcc-bank-(1)

ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿಗೆ ಈಗಿರುವ ಶಾಖೆಗಳ ಜೊತೆಗೆ ಇನ್ನೂ ಮೂರು ಶಾಖೆಗಳನ್ನು ತೆರೆಯಲು ಭಾರತೀಯ ರಿಸರ್ವ್ ಬ್ಯಾಂಕ್ ಅನುಮತಿ ನೀಡಿದ್ದು, ಇದೇ ತಿಂಗಳು ಚಾಲನೆ ನೀಡಲಾಗು ವುದು ಎಂದು ಬ್ಯಾಂಕ್‌ನ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
೨೨ ಹೊಸ ಶಾಖೆಗಳನ್ನು ತೆರೆಯಲು ಅನುಮತಿ ಕೋರಿದ್ದು, ಈಗ ಮೂರು ಶಾಖೆಗಳಿಗೆ ಆರ್‌ಬಿಐ ಅನುಮತಿ ನೀಡಿದೆ ಎಂದ ಅವರು, ಡಿ.೬ರಂದು ಸೊರಬ ತಾಲ್ಲೂಕಿನ ಜಡೆ ಗ್ರಾಮದಲ್ಲಿ ೨೯ನೇ ಶಾಖೆಯನ್ನೂ ಡಿ.೧೨ರಂದು ಶಿಕಾರಿಪುರ ತಾಲ್ಲೂಕಿನ ಸುಣ್ಣದಕೊಪ್ಪ ದಲ್ಲಿ ೩೦ನೇ ಶಾಖೆಯನ್ನೂ ಹಾಗೂ ಡಿ.೧೮ರಂದು ಭದ್ರಾವತಿ ತಾಲ್ಲೂಕಿನ ಕಲ್ಲಿಹಾಳಿನಲ್ಲಿ ೩೧ನೇ ಶಾಖೆಯನ್ನೂ ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದರು. ವಿಧಾನಮಂಡಲದ ಅಧಿವೇಶನದ ಬಳಿಕ ವಿದ್ಯುಕ್ತವಾಗಿ ಈ ಶಾಖೆಗಳನ್ನು ಉದ್ಘಾಟಿಸಲಾಗುವುದು ಎಂದರು.
೨೦೨೩-೨೪ನೇ ಸಾಲಿನಲ್ಲಿ ಒಟ್ಟು ೧೭.೯೯ ಕೋಟಿ ರೂ.ಲಾಭ ಗಳಿಸಿದ ಬ್ಯಾಂಕ್ ೧೦.೫೮ ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ೧೩೮.೯೮ ಕೋಟಿ ಷೇರು ಬಂಡವಾಳ ಹೊಂದಿದ್ದಲ್ಲದೆ, ೬೭.೪೬ ಕೋಟಿ ರೂ.ನಿಧಿಗಳನ್ನು ಹೊಂದಿದೆ. ೨೩೩೨.೨೯ ಕೋಟಿ ರೂ. ದುಡಿಯುವ ಬಂಡವಾಳ ಹೊಂ ದಿದ್ದು, ೧೪೬೨.೭೮ ಕೋಟಿ ರೂ. ಠೇವಣಿ ಸಂಗ್ರಹಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ೨೦೨೩-೨೪ನೇ ಸಾಲಿನಲ್ಲಿ ೫೦೩೮೩ ರೈತರಿಂದ ೨೨.೬೦ ಕೋಟಿ ರೂ. ವಿಮಾ ಪ್ರೀಮಿಯಂ ಪಾವತಿಯಾಗಿದ್ದು, ಇದರಲ್ಲಿ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಒಂದರಿಂದಲೇ ೨೩೦೯೪ ರೈತರಿಂದ ೧೦.೧೩ ಕೋಟಿ ರೂ. ಜಮಾ ಪಡಿಸಲಾಗಿದೆ ಎಂದರು.
ನಬಾರ್ಡ್ ಪುನರ್ಧನ ಸೌಲಭ್ಯ ಕಡಿತಗೊಂಡಿದ್ದಾಗಿಯೂ ೨೦೨೪- ೨೫ನೇ ಸಾಲಿನಲ್ಲಿ ಶೂನ್ಯ ಬಡ್ಡಿ ದರದಲ್ಲಿ ೧,೨೦,೦೦೦ ರೈತರಿಗೆ ೧೨೦೦ ಕೋಟಿ ರೂ. ಅಲ್ಪಾವಧಿ ಕೃಷಿ ಬೆಳೆ ಸಾಲದ ಗುರಿಯನ್ನು ಹೊಂದಿದ್ದು, ಪ್ರಸ್ತುತ ೧,೦೫,೬೪೦ ರೈತರಿಗೆ ೧೧೮೦.೧೨ಕೋಟಿ ಸಾಲ ನೀಡಲಾಗಿದೆ. ಸಾಲ ವಸೂಲಾತಿ ಪ್ರಮಾಣ ಶೇ.೯೯.೦೭ರಷ್ಟಿರುತ್ತದೆ ಎಂದರು.
ಬೆಳೆ ವಿಮೆ ಪದ್ಧತಿ ಇನ್ನೂ ಹಳೆಯ ಸಂಪ್ರದಾಯವನ್ನೇ ಹೊಂದಿದ್ದು, ಇದು ಸಂಪೂರ್ಣ ಪರಿಷ್ಕರಣೆಯಾಗಬೇಕು ಎಂದ ಅವರು, ಬೆಳೆ ವಿಮೆ ಸಮೀಕ್ಷೆಗೆ ಈಗಿರುವ ಗ್ರಾಮಪಂಚಾಯಿತಿ ಘಟಕದ ಬದಲಾಗಿ ಗ್ರಾಮವನ್ನು ಘಟಕವನ್ನಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ೧೯೩೫೮ ರೈತರಿಗೆ ೪೫ ಕೋಟಿ ರೂ. ಬೆಳೆ ವಿಮಾ ಪರಿಹಾರ ಬಿಡುಗಡೆಯಾಗಿದ್ದು, ಈ ಪೈಕಿ ಬ್ಯಾಂಕಿ ನಿಂದ ೮೮೭೩ ರೈತರಿಗೆ ೧೯.೧೭ ಕೋಟಿ ರೂ. ವಿಮೆ ಪರಿಹಾರವನ್ನು ನೇರವಾಗಿ ಖಾತೆದಾರರ ಉಳಿತಾಯ ಖಾತೆಗೆ ಬಿಡುಗಡೆ ಮಾಡಲಾಗಿದೆ ಎಂದರು.
ಹಾಲು ಉತ್ಪಾದಕರಿಗೆ ತಮ್ಮ ಬ್ಯಾಂಕ್ ವಿಶೇಷ ಯೋಜನೆಯೊಂದನ್ನು ಆರಂಭಿಸಿದ್ದು, ಜೀರೋ ಬ್ಯಾಲೆನ್ಸ್‌ನಲ್ಲಿ ಖಾತೆ ತೆರೆಯಲು ಅವಕಾಶ ನೀಡಿದೆ. ಆ ಮೂಲಕ ಹಾಲು ಉತ್ಪಾದಕ ಸದಸ್ಯರಿಗೆ ಬ್ಯಾಂಕಿನಿಂದ ಎಟಿಎಂ, ರೂಪೇ ಕಾರ್ಡ್‌ಗಳನ್ನು ನೀಡಿ ಹಣಕಾಸಿನ ನೆರವು ಪಡೆಯುವ ಅವಕಾಶ ಕಲ್ಪಿಸಲಾಗುವುದು ಎಂದರು.
೨೦೨೪-೨೫ನೇ ಸಾಲಿನಲ್ಲಿ ೧೬೦೦ ಕೋಟಿ ರೂ. ಠೇವಣಿ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಈ ಹಣಕಾಸಿನ ವರ್ಷಾಂತ್ಯಕ್ಕೆ ೨೫ ಕೋಟಿ ರೂ. ನಿವ್ವಳ ಲಾಭಗಳಿಸುವ ಯೋಜನೆ ಹೊಂದಲಾಗಿದೆ ಎಂದು ತಿಳಿಸಿದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ಎಸ್.ಕೆ.ಮರಿಯಪ್ಪ, ನಿರ್ದೇಶಕರಾದ ಮಹಾಲಿಂಗಯ್ಯಶಾಸ್ತ್ರಿ, ಸುಧೀರ್, ದುಗ್ಗಪ್ಪಗೌಡ, ಹನುಮಂತ್ ಮೊದಲಾದವರು ಇದ್ದರು.

Leave a Reply

Your email address will not be published. Required fields are marked *