ಅತ್ಯಾಚಾರದ ಪ್ರಕರಣಗಳಿಂದಾಗಿ ದೇಶದ ಘನತೆಗೆ ಧಕ್ಕೆ : ಜ್ಯೋತಿ
ಮೈಸೂರು: ಗಂಗಾವತಿಯ ಕುಮಾರಿ ಪಲ್ಲವಿ ಶಿವಾನಂದ ಎಂಬ ೧೭ ವಯಸ್ಸಿನ ಮುಗ್ದ ವಿದ್ಯಾರ್ಥಿನಿಯನ್ನು ಸಾಮೂಹಿಕವಾಗಿ ಅತ್ಯಾಚಾರ ಮಾಡಿ ಕೊಲೆಗೈದು ನಂತರ ನಿರ್ಜನ ಪ್ರದೇಶದಲ್ಲಿ ಬಿಸಾಡಿ ಹೊರಗಿರುವ ಘಟನೆ ಮನಸ್ಸಿಗೆ ತುಂಬಾ ನೋವುಂಟು ಮಾಡಿದೆ ಎಂದು ಸಾಮಾಜಿಕ ಕಾರ್ಯಕರ್ತೆ ಜ್ಯೋತಿ ಅವರು ವಿಷಾದಿಸಿದರು.
ಈ ಹೀನ ಕೃತ್ಯ ನಡೆಸಿರುವ ಆರೋಪಿಗಳು ಇದನ್ನು ಮುಚ್ಚಿ ಹಾಕವ ಪ್ರಯತ್ನ ಮಾಡಿರುವುದು ಖಂಡನಿಯ ಎಂದ ಅವರು, ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಇಂತಹ ಪ್ರಕರಣಗಳಿಂದಾಗಿ ಇಡೀ ಸಮಾಜವೇ ತಲೆ ತಗ್ಗಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕೃತ್ಯ ನಡೆದು ಇಷ್ಟು ದಿನಗಳಾದರೂ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗದಿರುವುದು ಆಡಳಿತ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ಕಿಡಿಕಾರಿದರು.
ಇಂತಹ ಅತ್ಯಾಚಾರದ ಪ್ರಕರಣಗಳಿಂದಾಗಿ ದೇಶದ ಘನತೆಗೆ ಧಕ್ಕೆ ಉಂಟಾಗುತ್ತಿದೆ. ಅತ್ಯಾಚಾರದ ಪ್ರಕರಣಗಳನ್ನು ಘನ ನ್ಯಾಯಲಯಗಳು ಆದಷ್ಟು ಬೇಗನೆ ಇತ್ಯರ್ಥಗೊಳಿಸಿ, ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತೆ ಜಿ.ಜ್ಯೋತಿ ಅವರು ಆಗ್ರಹಿಸಿದ್ದಾರೆ.