ರಾಣಾಪ್ರತಾಪ್ ಸಿಂಗ್ ಅವರ ಅಪ್ರತಿಮ ದೇಶಭಕ್ತಿ ಸರ್ವರಿಗೂ ಮಾದರಿ: ದೀಪಕ್‌ಸಿಂಗ್
ಶಿಕಾರಿಪುರ : ದೇಶದ ಸ್ವಾತಂತ್ರ್ಯಕ್ಕಾಗಿ ಹಲವರು ಜೀವನ ವನ್ನು ತ್ಯಾಗ ಮಾಡಿದ್ದು,ಬದುಕನ್ನು ದೇಶಕ್ಕಾಗಿ ಸಮರ್ಪಿಸಿಕೊಂಡ ರಾಣಾಪ್ರತಾಪ್ ಸಿಂಹರವರ ಅಪ್ರತಿಮ ದೇಶಭಕ್ತಿ ಎಲ್ಲರಿಗೂ ಮಾದರಿಯಾಗಿದೆ ಎಂದು ಜಿಲ್ಲಾ ರಜಪೂತ ಸಮಾಜದ ಅಧ್ಯಕ್ಷ ದೀಪಕ್‌ಸಿಂಗ್ ತಿಳಿಸಿದರು.
ಪಟ್ಟಣದ ಶ್ರೀ ಹುಚ್ಚುರಾಯಸ್ವಾಮಿ ದೇವಸ್ಥಾನದ ಭ್ರಾಂತೇಶ ಪುಷ್ಕರಣಿ ಸಮೀಪ ನಡೆದ ಮಹಾರಾಜಾ ರಾಣಾ ಪ್ರತಾಪ ಸಿಂಹರವರ ೪೮೩ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೊಘಲರಿಗೆ ಸಿಂಹ ಸ್ವಪ್ನವಾಗಿದ್ದ ಮಹಾರಾಜಾ ರಾಣಾ ಪ್ರತಾಪ್ ಸಿಂಹ ತನ್ನ ಅಪ್ರತಿಮ ದೇಶ ಭಕ್ತಿಯಿಂದಾಗಿ ಪ್ರಸಿದ್ದವಾ ಗಿದ್ದು, ಸಂಪೂರ್ಣ ಬದುಕನ್ನು ದೇಶಕ್ಕಾಗಿ ಸಮರ್ಪಿಸಿಕೊಂಡಿದ್ದರು ಎಂದು ತಿಳಿಸಿದ ಅವರು ಅಕ್ಬರ್ ನನ್ನು ಭಾರತದ ದೊರೆ ಎಂದು ಒಪ್ಪಿಕೊಳ್ಳದ ಪ್ರತಾಪ್ ಜೀವನ ಪೂರ್ತಿ ಅಕ್ಬರ್ ವಿರುದ್ದ ಹೋರಾಡಿದ್ದು ಮಹಾನ್ ಶೌರ್ಯ ಸಾಹಸವಂತನಾದ ಪ್ರತಾಪ್‌ನನ್ನು ಗೆಲ್ಲಲು ಅಕ್ಬರ್ ಎಲ್ಲ ರೀತಿಯ ರಾಜತಾಂತ್ರಿಕ ಮಾರ್ಗದ ಮೂಲಕ ಪ್ರಯತ್ನಿಸಿ ವಿಫಲನಾಗಿದ್ದು ಇತಿಹಾಸದಲ್ಲಿ ದಾಖಲಾಗಿದೆ ಎಂದು ತಿಳಿಸಿದರು.
ಮಹಾನ್ ಸ್ವಾತಂತ್ರ ಹೋರಾಟಗಾರನಾಗಿದ್ದ ರಾಣಾ ಪ್ರತಾಪ್ ಸಿಂಹರನ್ನು ಮಣಿಸಲು ಅಕ್ಬರ್ ಹಲವು ಬಾರಿ ದಂಡಯಾತ್ರೆ ಯನ್ನು ಕೈಗೊಂಡು ವಿಫಲನಾಗಿ ಸತತ ೩೦ ವರ್ಷ ಪ್ರತಾಪ್‌ಸಿಂಗ್ ಮೊಘಲರನ್ನು ಹಿಮ್ಮೆಟ್ಟಿಸಿದ ಹಿರಿಮೆ ಯನ್ನು ಹೊಂದಿದ್ದಾರೆ ಎಂದು ತಿಳಿಸಿದ ಅವರು, ಭಾರತದ ಇತಿಹಾಸದಲ್ಲಿ ಮಹಾರಾಣಾ ಪ್ರತಾಪ್ ಸಿಂಗ್ ಧೈರ್ಯಶಾಲಿ ಯಾಗಿ ಹೆಸರುವಾಸಿಯಾಗಿದ್ದಾರೆ ಮೇವಾಡದ ೧೩ನೇ ರಾಜನಾಗಿ ಆಡಳಿತ ನಡೆಸಿ ಮಾತೃಭೂಮಿ ಬಗ್ಗೆ ಅವರು ಹೊಂದಿದ್ದ ಅಪಾರ ಅಭಿಮಾನ ಗೌರವ ಇಂದು ಎಲ್ಲರಿಗೂ ಅಗತ್ಯವಾಗಿದೆ ಅವರ ದೇಶಭಕ್ತಿಯನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳುವಂತೆ ಕರೆ ನೀಡಿದರು.
ತಾಲೂಕು ರಜಪೂತ ಸಮಾಜ ಜಿಲ್ಲೆಯಲ್ಲಿ ಅತ್ಯಂತ ಸದೃಢ ವಾಗಿದ್ದು, ಸದಾ ಸಕ್ರೀಯವಾಗಿ ಒಗ್ಗಟ್ಟಿನ ಮೂಲಕ ಸಂಘಟನೆ ಹೆಚ್ಚು ಶಕ್ತಿಯುತವಾಗಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದ ಅವರು, ರಜಪೂತ ಸಮಾಜ ಧೈರ್ಯ ಸಾಹಸಕ್ಕೆ ಹೆಸರು ವಾಸಿಯಾಗಿದ್ದು ಎಂತಹ ಸಂದರ್ಭದಲ್ಲಿಯೂ ಧಕ್ಕೆಯಾಗದ ರೀತಿಯಲ್ಲಿ ಸಮಾಜದ ಗೌರವ ಕಾಪಾಡುವಂತೆ ತಿಳಿಸಿದರು.
ಪುರಸಭಾಧ್ಯಕ್ಷೆ ರೇಖಾಬಾಯಿ ಮಂಜುನಾಥಸಿಂಗ್ ಮಾತನಾಡಿ, ತಾಲೂಕಿನಲ್ಲಿ ರಜಪೂತ ಸಮಾಜ ಅಲ್ಪಸಂಖ್ಯಾತವಾಗಿದ್ದು ಸಂಘಟನೆ ಹೆಚ್ಚು ಬಲಿಷ್ಠವಾಗಿದೆ ಸಮಾಜದ ಎಲ್ಲ ಅಗುಹೋಗುಗಳಿಗೆ ಸೂಕ್ತ ಸಮುದಾಯ ಭವನದ ಕೊರತೆ ಎದ್ದು ಕಾಣುತ್ತಿದೆ ಈ ದಿಸೆಯಲ್ಲಿ ನೂತನ ಶಾಸಕ ವಿಜಯೇಂದ್ರರನ್ನು ಭೇಟಿಯಾಗಿ ಮನವಿ ಸಲ್ಲಿಸಿ ಕೊರತೆಯನ್ನು ಹೋಗಲಾಡಿಸ ಬೇಕಾಗಿದೆ ಎಂದು ತಿಳಿಸಿದರು.
ಈಗಾಗಲೇ ಭ್ರಾಂತೇಶ ಪುಷ್ಕರಣಿಯ ವೃತ್ತಕ್ಕೆ ಮಹಾರಾಣಾ ಪ್ರತಾಪ್ ಸಿಂಹ ವೃತ್ತ ಎಂದು ಅಧಿಕೃತವಾಗಿ ನಿರ್ಣಯ ಅಂಗೀಕರಿ ಸುವ ಮೂಲಕ ರಾಣಾಪ್ರತಾಪ್ ಸಿಂಹರವರ ಅಪ್ರತಿಮ ದೇಶಭಕ್ತಿ ದೈರ್ಯ ಶೌರ್ಯ ಸಾಹಸಮಯ ಜೀವನವನ್ನು ಮುಂದಿನ ಪೀಳಿಗೆಗೆ ಜಾಗೃತಿ ಮೂಡಿಸುವ ಪ್ರಯತ್ನ ವಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ತಾ. ರಜಪೂತ ಸಮಾಜದ ಅಧ್ಯಕ್ಷ ರವಿಸಿಂಗ್ ಮಾತನಾಡಿ, ಮಹಾರಾಜಾ ರಾಣಾ ಪ್ರತಾಪ್ ಸಿಂಹ ದೇಶ ಮರೆಯಲು ಅಸಾದ್ಯವಾದ ವೀರಪುತ್ರನಾಗಿದ್ದು, ಹೋರಾಟ ಧೈರ್ಯ ಸಾಹಸದಿಂದ ಸ್ವಾಭಿಮಾನದ ಪ್ರತೀಕವಾಗಿ ಗುರುತಿಸಿಕೊಂಡಿದ್ದಾರೆ ಮೊಘಲರಿಗೆ ಸಿಂಹಸ್ವಪ್ನರಾಗಿದ್ದ ರಾಣಾ ಪ್ರತಾಪ್ ಸಿಂಹ ದೇಶದ ಸ್ವಾತಂತ್ರಕ್ಕಾಗಿ ಜೀವನವನ್ನು ಮುಡುಪಾಗಿಟ್ಟು ಧೈರ್ಯ ಶೌರ್ಯ ಸಾಹಸದ ಹೋರಾಟದಿಂದ ಇತಿಹಾಸದಲ್ಲಿ ಶಾಶ್ವತವಾದ ಸ್ಥಾನ ಪಡೆದಿದ್ದಾರೆ .ರಜಪೂತ ಸಮಾಜದ ಜತೆಗೆ ದೇಶದ ಸಮಸ್ತ ಜನತೆ ಈ ಬಗ್ಗೆ ಹೆಮ್ಮೆ ಪಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಭ್ರಾಂತೇಶ ಪುಷ್ಕರಣಿ ವೃತ್ತಕ್ಕೆ ಅಧಿಕೃತವಾಗಿ ಮಹಾರಾಣಾ ಪ್ರತಾಪ್ ವೃತ್ತ ಎಂದು ನಾಮಫಲಕ ಅಳವಡಿಸಿ ಉದ್ಘಾಟಿಸಲಾಯಿತು. ಗಣ್ಯರನ್ನು ಸನ್ಮಾನಿಸಲಾಯಿತು. ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಪಾಲಾಕ್ಷಪ್ಪ ಸದಸ್ಯ ರೇಣುಕಸ್ವಾಮಿ ಮುಖಂಡರಾದ ಮಮತಾ ಸಿಂಗ್, ಭವಾನಿಸಿಂಗ್, ಮಂಜುನಾಥ ಸಿಂಗ್ ಸಂಘದ ಉಪಾಧ್ಯಕ್ಷ ಭೀಮ್‌ಸಿಂಗ್, ಕಾರ್ಯದರ್ಶಿ ಅರುಣ್ ಸಿಂಗ್, ಖಜಾಂಚಿ ರಮೇಶ್‌ಸಿಂಗ್, ಗಿರಿಧರ್ ಸಿಂಗ್ ಮತ್ತಿತರರು ಉಪಸ್ಥಿತರಿದ್ದರು.