ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿಸಿರುವ ಜಗಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಿ

ಶಿವಮೊಗ್ಗ: ಬೀದಿ ಬದಿ ವ್ಯಾಪಾರಿ ಗಳಿಗೆ ಗುರುತಿಸಿರುವ ಜಗಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಆಗ್ರಹಿಸಿ ಪಟ್ಟಣ ಮಾರಾಟ ಸಮಿತಿಯ ಸದಸ್ಯ ಚನ್ನವೀರಪ್ಪ ಗಾಮನಗಟ್ಟಿ ನೇತೃತ್ವದಲ್ಲಿ ಬೀದಿ ಬದಿ ವ್ಯಾಪಾರಿಗಳು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಹಿಂದೆ ಟಿವಿಸಿ ಸಭೆಯಲ್ಲಿ ವೆಂಡಿಂಗ್ ಝೆನ್ ಗುರುತಿಸಿ ಬೀದಿಬದಿ ವ್ಯಾಪಾರಸ್ಥರಿಗೆ ಜಗ ನೀಡಲಾಗಿತ್ತು. ಆದರೆ ಅಲ್ಲಿ ಮೂಲಭೂತ ಸೌಕರ್ಯಗಳು ಇಲ್ಲ. ಫುಟ್‌ಪಾತ್‌ಗಳಲ್ಲೂ ಅವಕಾಶ ಸಿಗುತ್ತಿಲ್ಲ. ದೊಡ್ಡ ದೊಡ್ಡ ಅಂಗಡಿ ಮಾಲೀಕರು ಫುಟ್‌ಪಾತ್ ಕೂಡ ಆಕ್ರಮಿಸಿಕೊಂಡಿದ್ದಾರೆ. ನಿಜವಾದ ಬೀದಿಬದಿ ವ್ಯಾಪಾರಿಗಳಿಗೆ ಅವಕಾಶ ಸಿಗುತ್ತಿಲ್ಲ. ಸ್ಮಾರ್ಟ್ ಸಿಟಿ ವತಿಯಿಂದ ೧೨೦ಕ್ಕೂಹೆಚ್ಚು ಕನ್ಸರ್ವೆನ್ಸಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಅಲ್ಲಿಯೂ ಕೂಡ ಬೀದಿ ಬದಿ ವ್ಯಾಪಾರಿಗಳಿಗೆ ಅವಕಾಶ ನೀಡಿಲ್ಲ ಎಂದು ದೂರಿದರು.
ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ಸಿಕ್ಕಿಲ್ಲ. ವಿನೋಬನಗರದ ಶಿವಾಲಯದ ಬಳಿ ಇರುವ ೭೦ ಸಂತೆ ಮಳಿಗೆ ವ್ಯಾಪಾರಿಗಳಿಗೆ ಅವಕಾಶ ನೀಡಲಾಗಿದೆ. ಆದರೆ ಈ ಬಗ್ಗೆ ಮಾಹಿತಿ ಇಲ್ಲ. ಟಿವಿಸಿ ಸದಸ್ಯರನ್ನು ಬಿಟ್ಟು ಮಳಿಗೆಗಳನ್ನು ಹಂಚಲಾಗಿದೆ. ಈ ಬಗ್ಗೆ ದೂರನ್ನೂ ನೀಡಲಾಗಿದೆ. ಆದರೆ ಸಂಬಂಧಪಟ್ಟವರು ಇದುವರೆಗೂ ಉತ್ತರ ನೀಡಿಲ್ಲ ಎಂದು ಆರೋಪಿಸಿದರು.
ಆಹಾರ ಸುರಕ್ಷತಾ ತರಬೇತಿ ನಿಜವಾದ ಬೀದಿಬದಿ ವ್ಯಾಪಾರಿಗಳಿಗೆ ದೊರೆತಿಲ್ಲ. ಹಾಗೂ ಸ್ವನಿಧಿ ಮಹೋತ್ಸವ ಕಾರ್ಯಕ್ರಮದ ಬಗ್ಗೆ ಸಂಪೂರ್ಣ ತನಿಖೆ ಆಗಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಪ್ರಮುಖರಾದ ನಾರಾಯಣ, ವಿನಯಕುಮಾರ್, ಅಶೋಕ್ ಕುಮರ್, ಮಹಮ್ಮದ್ ಇಸ್ಮಾಯಿಲ್, ಶೇಷಯ್ಯ, ಚಂದ್ರಕಲಾ ಇದ್ದರು.