ನಗರದ ನೆಮ್ಮದಿ ಜೊತೆಗೆ ಉದ್ಯೋಗ- ಕೈಗಾರಿಕೆ ಸ್ಥಾಪನೆಗೆ ಆದ್ಯತೆ: ಜೆಡಿಎಸ್ ಅಭ್ಯರ್ಥಿ ಆಯ್ನೂರ್ ಮಂಜುನಾಥ್

ಶಿವಮೊಗ್ಗ: ನಗರದಲ್ಲಿ ರೈಲು, ವಿಮಾನ ಸಹಿತ ಎಲ್ಲಾ ಮೂಲಸೌಕರ್‍ಯ ಗಳಿದ್ದರೂ ಕೈಗಾರಿಕೆಗಳು ಬರುತ್ತಿಲ್ಲ, ನಮ್ಮ ಮಕ್ಕಳಿಗೆ ಉದ್ಯೋಗವಿಲ್ಲ. ನಿರುದ್ಯೋಗ ಸಮಸ್ಯೆ, ಶಿವಮೊಗ್ಗ ನಗರವನ್ನು ಸುರಕ್ಷಿತ ನಗರವನ್ನಾಗಿ ಪರಿವರ್ತಿಸಲು ಪ್ರಥಮ ಆದ್ಯತೆ ನೀಡುವುದಾಗಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ ಹೇಳಿದರು.
ಪತ್ರಿಕಾ ಭವನದಲ್ಲಿ ಆಯೋಜಿ ಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ನನಗೆ ಶಾಸಕ ಸ್ಥಾನ ಹೊಸದಲ್ಲ, ಲೋಕಸಭೆ, ರಾಜ್ಯಸಭೆ, ವಿಧಾನಸಭೆ, ವಿಧಾನಪರಿಷತ್ ಸದನದಲ್ಲಿ ಕೆಲಸ ಮಾಡಿದ್ದೇನೆ. ಅಗತ್ಯ ಬಿದ್ದಾಗ ಆಡಳಿತ ಪಕ್ಷದಲ್ಲಿದ್ದರೂ ಸಹ ಕಾರ್ಮಿಕರ ಸಮಸ್ಯೆ ಮತ್ತು ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಸದನದಲ್ಲಿ ಮಂಡಿಸಿದ್ದೇನೆ. ಸರ್ಕಾರ ವನ್ನು ಎಚ್ಚರಿಸುವ ಪ್ರಯತ್ನ ಮಾಡಿ ಗಮನ ಸೆಳೆದಿದ್ದೇನೆ ಎಂದರು.
ಶಿವಮೊಗ್ಗದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಸರಿಯಾಗಿಲ್ಲ. ಕಳಪೆ ಯಾಗಿದೆ. ಅಗೆಯುವುದೇ ಒಂದು ದೊಡ್ಡ ಕಾಮಗಾರಿಯಾಗಿದೆ. ಭ್ರಷ್ಟಾಚಾರ ತಾಂಡವವಾಡಿದೆ. ಈ ಯೋಜನೆಯಲ್ಲಿ ಜತಾ ಪ್ರಾತಿನಿಧ್ಯ ವಿಲ್ಲ. ಹಾಗಾಗಿಯೇ ಅದರ ಹೆಸರು ಕೆಡುತ್ತಿದೆ. ಪ್ರತಿವಾರ್ಡ್‌ನಲ್ಲಿ ಕಾರ್ಪೊರೇಟರ್ ಮುಖ್ಯಸ್ಥನಲ್ಲ. ಆ ವಾರ್ಡಿನ ನಾಗರಿಕ ಸಮಿತಿಯವರು ಮುಖ್ಯರಾಗುತ್ತಾರೆ. ಅವರ ಅಭಿಪ್ರಾಯ ಪಡೆದು ಅಭಿವೃದ್ಧಿ ಕಾರ್ಯ ಮಾಡಬೇಕಿತ್ತು ಎಂದರು.
ಶಿವಮೊಗ್ಗದಲ್ಲಿ ವಾತಾವರಣ ಬದಲಾಗದಿದ್ದರೆ ಬರಡು ಜಿಲ್ಲೆಯಾಗುತ್ತದೆ. ನಗರದಲ್ಲಿ ಶಾಂತಿ ತರಬೇಕು, ಹೊಸ ವಿನ್ಯಾಸ ರೂಪ ತರಬೇಕು. ಅಶಾಂತಿ ಉಂಟು ಮಾಡಿದವರ ಮೇಲೆ ವಾಗ್ದಾಳಿ ನಡೆಸಿ ಹೋರಾಟ ಮಾಡಿ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಶಿವಮೊಗ್ಗದಲ್ಲಿ ಉತ್ತಮವಾದ ಮತ್ತೊಂದು ಸರ್ಕಾರಿ ಶಾಲೆಗಳು ತೆರೆಯುವುದಕ್ಕೆ ಆಗಿಲ್ಲ. ಆದರೆ ಖಾಸಗಿ ಶಾಲೆಗಳು, ಪ್ರತಿವರ್ಷ ಅತ್ಯುತ್ತಮವಾದ ದುಬಾರಿ ಕಾಲೇಜು ಗಳು ಪ್ರಾರಂಭವಾಗಿವೆ ಎಂದರು.
ವಿಧಾನಸಭಾ ಚುನಾವಣೆ ಕಣದಲ್ಲಿರುವ ಎದುರು ಸ್ಪರ್ಧಿಗಳು ತಾವು ಕಾರ್ಪೊರೇಟರ್ ಆದಾಗ ಮಾಡಿದ ಕಾರ್ಯ ನೋಡಿದಾಗ ಪ್ರಬುದ್ಧತೆ ಕಂಡುಬಂದಿಲ್ಲ. ಬ್ಯಾರಿ ಮಾಲ್‌ನ್ನು ೯೯ ವರ್ಷಕ್ಕೆ ಬರೆದು ಕೊಡುವ ಕೆಲಸವಾಯಿತು. ಕೆಲವು ನಾಯಕರ ಹಪಾಹಪಿತನದಿಂದ ಶಿವಮೊಗ್ಗ ಹಾಳಾಗಿದೆ. ಸುರಕ್ಷಿತ ವಾತಾವರಣ ಇಲ್ಲ ಎಂದರು.
ಇತ್ತೀಚೆಗೆ ರಾಜ್ಯದಲ್ಲಿ ಗ್ಲೋಬಲ್ ಇನ್ವೆಸ್ಟರ್‍ಸ್ ಮೀಟ್ ಆಯಿತು, ಆದರೆ ಉದ್ಯಮಿಗಳು ಇದ್ದರೂ ಯಾರೂ ಶಿವಮೊಗ್ಗದಲ್ಲಿ ಇನ್ವೆಸ್ಟ್ ಮಾಡಲು ಬರಲಿಲ್ಲ. ಉದ್ಯೋಗವಿಲ್ಲದೆ ಯುವಕರು ಪರವೂರಿಗೆ ತೆರಳುತ್ತಿ ದ್ದಾರೆ. ಕೋಮುಗಲಭೆಯಿಂದ ಸಾವಿರಾರು ಜನ ಬೀದಿಗೆ ಬಿದ್ದರು. ದಿನನಿತ್ಯ ದುಡಿಯುವವರ ತುತ್ತಿಗೂ ಕಷ್ಟವಾಯಿತು. ಈ ವಾತಾವರಣ ಬದಲಾಯಿಸಬೇಕೆಂದರೆ ಈ ಚುನಾವಣೆಯಲ್ಲಿ ಬದಲಾವಣೆ ಮುಖ್ಯ ಎಂದರು. ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ, ಕಾರ್ಯದರ್ಶಿ ನಾಗರಾಜ ನೇರಿಗೆ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್‍ಯದರ್ಶಿ ಸಂತೋಷ್ ಕಾಚಿನಕಟ್ಟೆ ಉಪಸ್ಥಿತರಿದ್ದರು.