ಪ್ರಾಚ್ಯ ವಸ್ತುಗಳು ಇತಿಹಾಸ-ಪರಂಪರೆಯ ಪ್ರತಿಬಿಂಬ: ನಾಗರಾಜ್ ಪರಿಸರ

ಶಿವಮೊಗ್ಗ: ಪ್ರಾಚ್ಯ ಸ್ಮಾರಕಗಳು, ವಸ್ತುಗಳು ದೇಶದ ಅಮೂಲ್ಯ ಆಸ್ತಿ. ಈ ವಸ್ತುಗಳು ಐತಿಹಾಸಿಕ ಮಹತ್ವ ಮತ್ತು ಗುಣಲಕ್ಷಣಗಳನ್ನು ಹೊಂದಿದ್ದು, ಇತಿಹಾಸ ಹಾಗೂ ಪರಂಪರೆಯನ್ನು ಪ್ರತಿಬಿಂಬಿಸುತ್ತವೆ. ಆದ್ದರಿಂದ ಪ್ರಾಚೀನ ಸ್ಮಾರಕ, ಶಿಲಾ ಶಾಸನ ಮತ್ತು ವಸ್ತುಗಳನ್ನು ಜತನದಿಂದ ಸಂರಕ್ಷಿಸಬೇಕೆಂದು ಕುವೆಂಪು ವಿವಿ ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ನಾಗರಾಜ್ ಪರಿಸರ ತಿಳಿಸಿದರು.
ನಗರದ ಎಟಿಎನ್‌ಸಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಹಮ್ಮಿಕೊಂಡಿರುವ ಕುವೆಂಪು ವಿವಿ ಮಟ್ಟದ ಅಂತರ ಕಾಲೇಜು ಶಿಬಿರ ದಲ್ಲಿ ಆ.೨೪ರ ಗುರುವಾರ ಬೆಳಿಗ್ಗೆ ಶಿವಪ್ಪನಾಯಕ ಅರಮನೆ ಆವರಣ ದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮದ ಸಂದರ್ಭದಲ್ಲಿ ಅವರು ಮಾತನಾಡಿದರು.


ಇಂದಿನ ಯುವ ಪೀಳಿಗೆ ಇತಿಹಾಸವನ್ನು ಅರಿತುಕೊಳ್ಳಬೇಕು. ಹಿಂದಿನ ಕಾಲದವರ ಸಾಧನೆ, ಜೀವನ ಪದ್ಧತಿ, ಕಲೆ, ಸಂಸ್ಕೃತಿ, ಸಾಹಿತ್ಯದ ಬಗ್ಗೆ ಆಸಕ್ತಿಯಿಂದ ಅಧ್ಯಯನ ಮಾಡಬೇಕು. ಇತಿಹಾಸವನ್ನು ಮುಂದಿನ ಪೀಳಿಗೆಗೂ ರವಾನಿಸಬೇಕು. ದೇಶಾದ್ಯಂತ ಸಾವಿರಾರು ವಸ್ತು ಸಂಗ್ರಹಾಲಯಗಳಲ್ಲಿ ಪ್ರಾಚ್ಯ ವಸ್ತುಗಳನ್ನು ಸಂರಕ್ಷಿಸು ಕಾರ್ಯ ನಡೆದಿದೆ. ಪುರಾತತ್ವ ಇಲಾಖೆ ಮತ್ತು ಇತಿಹಾಸಾಕ್ತರಿಂದ ನಿರಂತರವಾಗಿ ಉತ್ಖನನ ಮತ್ತು ಸಂಶೋಧನೆ ನಡೆಸುತ್ತಿದೆ ಎಂದರು.
ಕೊಹಿನೂರು ವಜ್ರ, ಮಹಾ ರಾಜ ರಣಜಿತ್ ಸಿಂಗ್ ಅವರ ಸ್ವರ್ಣ ಸಿಂಹಾಸನ, ಅಮರಾವತಿ ಕುಸುರಿ ಕೆತ್ತನೆಗಳು ಸೇರಿದಂತೆ ಮತ್ತಿತರೆ ವಸ್ತುಗಳು ವಸಾಹತು ಶಾಹಿಯ ಆಡಳಿತಗಾರರು ಹಾಗೂ ಲೂಟಿಕೋರರ ಪಾಲಾಗಿವೆ. ವಿದೇಶದಲ್ಲಿರುವ ಭಾರತೀಯ ಪುರಾತನ ವಸ್ತುಗಳನ್ನು ಮರಳಿ ತರಲು ನಿರಂತರ ಪ್ರಯತ್ನ ನಡೆದಿದೆ. ಪುರಾತನ ವಸ್ತುಗಳು ಭಾವನಾತ್ಮಕ ನಂಟನ್ನು ಬೆಳೆಸುತ್ತವೆ ಎಂದು ಹೇಳಿದರು.
ಕೋಟೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಶಿವಪ್ರಕಾಶ್‌ರಾವ್, ಸ್ವಯಂಸೇವಕರಿಗೆ ಸಮಾಜದಲ್ಲಿ ನಮ್ಮ ಜವಾಬ್ದಾರಿ ಹಾಗೂ ಶಾಂತಿ ಯಿಂದ ಇರಲು ಅನುಸರಿಸ ಬೇಕಾದ ಕ್ರಮಗಳ ಕುರಿತು ವಿವರಿಸಿದರು.
ಪ್ರಾಂಶುಪಾಲೆ ಪ್ರೊ. ಮಮತಾ ಪಿ.ಆರ್., ಕಾರ್ಯಕ್ರಮಾಧಿಕಾರಿ ಗಳಾದ ಪ್ರೊ.ಕೆ.ಎಂ. ನಾಗರಾಜು, ಪ್ರೊ. ಜಗದೀಶ್ ಎಸ್., ಪ್ರೊ. ಮಂಜುನಾಥ ಎನ್., ಮಲ್ಲಿಕಾರ್ಜುನ್, ಶ್ರೀಹರ್ಷ, ಪರಿಸರ ಸಂಸ್ಥೆಯ ನಿರ್ದೇಶಕರು ಗಳಾದ ಜಯಂತ್ ಬಾಬು, ಅರುಣ್, ಜಿ. ವಿಜಯ್ ಕುಮಾರ್ ಇನ್ನಿತರರಿದ್ದರು. ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಯ ೧೫೦ ಎನ್‌ಎಸ್‌ಎಸ್‌ನ ಸ್ವಯಂಸೇವಕರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.