ಯಡಿಯೂರಪ್ಪ ಹೆಜ್ಜೆಗುರುತುಗಳು ಯಾರಿಗೂ ಗೊತ್ತಾಗೋಲ್ಲ…
ಶಿವಮೊಗ್ಗ : ರಾಜ್ಯದಲ್ಲಿ ಬಿಜೆಪಿ ಪಕ್ಷದ ಹಿರಿ ಮಗ ಇಂದು ದಾರಿ ತಪ್ಪಿದ್ದು, ಆತನನ್ನು ಸರಿದಾರಿಗೆ ತರಲು ಕಿರಿ ಮಗನಾದ ನಾನು ಪಕ್ಷದ ವಿರುದ್ದವೇ ಚುನಾವಣೆಗೆ ನಿಲ್ಲಬೇಕಾದ ಪರಿಸ್ಥಿತಿ ಬಂದಿದ್ದು, ಅದನ್ನು ಸವಾಲಾಗಿ ಸ್ವೀಕರಿಸಿದ್ದೇನೆ. ಪಕ್ಷದ ಹೈಕಮಾಂಡ್‌ಗೆ ಹಾದಿ ತಪ್ಪಿದ ಹಿರಿ ಮಗನ ತಪ್ಪುಗಳನ್ನು ಈಗಾಗಲೇ ತಿಳಿಸಿಕೊಟ್ಟಿದ್ದೇನೆ ಎಂದು ಪಕ್ಷೇತರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಅವರು ವ್ಯಂಗ್ಯವಾಗಿ ನುಡಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ನಾವೆಲ್ಲಾ ಸೇರಿ ಪಕ್ಷ ಕಟ್ಟಿದ್ದರೂ ಬಿಜೆಪಿಗೆ ಯಡಿಯೂರಪ್ಪನೇ ದೊಡ್ಡ ಮಗ, ನಾನು ಚಿಕ್ಕಮಗ ಅಷ್ಟೇ. ಹೈಕಮಾಂಡ್‌ಗೆ ದೊಡ್ಡ ಮಗನ ಮೇಲೆ ಹೆಚ್ಚು ಪ್ರೀತಿ ಇರುವುದರಿಂದ ಇತ್ತೀಚೆಗೆ ಅವರು ಏನು ಹೇಳಿದರೂ ಕೇಳುತ್ತಿದ್ದಾರೆ. ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಾಘವೇಂದ್ರರನ್ನು ಸೋಲಿಸುತ್ತೇನೆ. ಆಗ ನನ್ನ ಮಾತು ಕೇಳುವ ಸಂದರ್ಭ ಬಂದೇ ಬರುತ್ತದೆ ಎಂದು ಹೇಳಿದರು.
ಯಡಿಯೂರಪ್ಪನವರು ಎಂಥಹ ವ್ಯಕ್ತಿ ಎಂದರೆ, ಅವರ ಹೆಜ್ಜೆ ಗುರುತುಗಳು ಯಾರಿಗೂ ಗೊತ್ತಾಗುವುದಿಲ್ಲ. ಅವರ ಬಗ್ಗೆ ಹೇಳುತ್ತಾ ಹೋದರೆ ಈ ಪತ್ರಿಕಾಗೋಷ್ಠಿ ಸಾಕಾಗುವುದಿಲ್ಲ. ನಾನು ಎಲ್ಲವನ್ನೂ ಹೇಳಿದರೆ ಅವರ ಅಸಲಿ ಚಿತ್ರಗಳು ಹೊರ ಬರುತ್ತವೆ. ಅವರಿಗೆ ಶೋಭಾ ಅವರ ಮೇಲೆ ಯಾಕಿಷ್ಟು ಮೋಹವೋ ಗೊತ್ತಿಲ್ಲ. ಮಹಿಳೆಯರೆಂದರೆ ಕೇವಲ ಶೋಭಾ ಮತ್ತು ಭಾರತಿ ಶೆಟ್ಟಿಯವರು ಮಾತ್ರವೇ ಎಂದು ಕುಟುಕಿದರು.
ಯಡಿಯೂರಪ್ಪನವರು ಯಾವ ಮುಖ ಇಟ್ಟುಕೊಂಡು ಪ್ರಚಾರಕ್ಕೆ ಬರುತ್ತಾರೋ ಗೊತ್ತಿಲ್ಲ. ನಿನ್ನೆ ಅವರು ಪತ್ರಕರ್ತರೊಡನೆ ಮಾತನಾಡಲಿಲ್ಲ. ಮಹಿಳೆಯರ ಶಾಪ ಅವರಿಗೆ ತಟ್ಟೇ ತಟ್ಟುತ್ತದೆ. ಅವರ ಮಕ್ಕಳು ದಾರಿ ತಪ್ಪಿದ್ದಾರೆ. ತಮಗೆ ಬೇಕಾದ ಹೆಣ್ಣು ಮಕ್ಕಳಿಗೆ ಮಾತ್ರ ಅಧಿಕಾರ ನೀಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನೂ ಮಾಜಿ ಗೃಹ ಸಚಿವ ಆರಗಜನೇಂದ್ರರ ವಿರುದ್ಧವು ಹರಿಹಾಯ್ದ ಈಶ್ವರಪ್ಪ ಅವರು, ಜ್ಞಾನೇಂದ್ರ ಅವರಿಗೆ ಜನವೇ ಇಲ್ಲ. ಹುಚ್ಚು ಹುಚ್ಚಾಗಿ ಮಾತನಾಡುತ್ತಾರೆ. ತೀರ್ಥಹಳ್ಳಿ ಯಲ್ಲಿ ಭಜರಂಗ ದಳದ ಕಾರ್ಯಕರ್ತರು ಸೇರಿದಂತೆ ಅವರಿಗೆ ಬೆಂಬಲ ನೀಡಿದ ಬಿಜೆಪಿಗರು ಈಗ ನನಗೆ ಬೆಂಬಲ ನೀಡುವುದನ್ನು ನೋಡಿ ಅವರಿಗೆ ಸಹಿಸಲಾಗುತ್ತಿಲ್ಲ. ನನಗೆ ಬೆಂಬಲ ನೀಡಿದವರ ಮನೆಗಳಿಗೆ ಹೋಗಿ ನೀವು ಈಶ್ವರಪ್ಪನವರ ಜೊತೆ ಹೋಗಕೂಡದು ಎಂದು ಹೇಳುತ್ತಾರೆ. ನನ್ನ ಸೋಲನ್ನು ಕಣ್ಣಿನಿಂದ ನೋಡಲು ಆಗುವುದಿಲ್ಲ ಎಂದು ಹೇಳುತ್ತಾರೆ. ನೋಡುವುದು ಬೇಡ ನಾನು ಗೆದ್ದೆ ಗೆಲ್ಲುತ್ತೇನೆ, ಅವರು ಕೂಪಮಂಡೂಕ ರೀತಿಯಲ್ಲಿ ಹೇಳಿಕೆ ಕೊಟ್ಟಿದ್ದಾರೆ. ತೀರ್ಥಹಳ್ಳಿ ಯಲ್ಲಿ ನನಗೆ ಬೆಂಬಲ ಕೊಡುವ ವರೇ ಹೆಚ್ಚಿದ್ದಾರೆ ಎಂದರು.
ಅರಗಜನೇಂದ್ರ ಗೃಹಮಂತ್ರಿ ಯಾಗಿದ್ದಾಗ ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲಿದ್ದ ಕೇಸ್‌ಗಳನ್ನು ಹಾಗೂ ಗೋ ರಕ್ಷಕರ ಮೇಲಿದ್ದ ಕೇಸ್ ಗಳನ್ನು ಏಕೆ ವಾಪಾಸ್ಸು ಪಡೆಯ ಲಿಲ್ಲ. ಇವರು ಹಿಂದೂ ಪರವೇ ಎಂದು ಪ್ರಶ್ನೆ ಮಾಡಿದರು. ತೀರ್ಥಹಳ್ಳಿಯಲ್ಲಿ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಆರಗ ಜನೇಂದ್ರ ನಿಂತರೆ ಅವರನ್ನು ಗೆಲ್ಲಿಸಲು ನಾನೇ ಪ್ರಚಾರ ಮಾಡಬೇಕಾಗುತ್ತದೆ. ಮಾಡುತ್ತೇನೆ ಕೂಡ. ನಾನು ಇನ್ನೂ ಬಿಜೆಪಿಯನ್ನು ಬಿಟ್ಟಿಲ್ಲ ನಾನು ಗೆದ್ದು ಮತ್ತೆ ಬಿಜೆಪಿಯನ್ನೇ ಸೇರುತ್ತೇನೆ ಎಂದು ಪುನರುಚ್ಛರಿಸಿದರು.
ಏ.೨೨ರಿಂದ ಚುನಾವಣೆಯ ಕುಸ್ತಿ ಅಖಾಡ ರೆಡಿಯಾಗುತ್ತದೆ. ನಮ್ಮ ಪೈಲ್ವಾನರು ಕೂಡ ಕುಸ್ತಿ ಆಡಲು ರೆಡಿಯಾಗಿದ್ದಾರೆ. ಅದರಲ್ಲಿ ಧರ್ಮ ಗೆಲ್ಲುತ್ತೋ, ಅಧರ್ಮ ಗೆಲ್ಲುತ್ತೋ, ಹಣ ಗೆಲ್ಲುತ್ತೋ, ಸಿದ್ಧಾಂತ ಗೆಲ್ಲುತ್ತೋ, ವೈಚಾರಿಕ ನಿಲುವುಗಳು ಗೆಲ್ಲುತ್ತದೆಯೋ, ಕುಟುಂಬ ರಾಜಕಾರಣ ಗೆಲ್ಲುತ್ತದೆಯೋ ನೋಡಿ ಬಿಡೋಣ, ನಾನು ಅಖಾಡಕ್ಕೆ ರೆಡಿಯಾಗಿ ಸೆಡ್ದು ಹೊಡೆದು ನಿಂತಿದ್ದೇನೆ. ಚಿಹ್ನೆ ಬಂದ ಮೇಲೆ ಮತ್ತಷ್ಟು ಪ್ರಚಾರ ಹೆಚ್ಚಾಗಲಿದೆ ಇಡೀ ಹಿಂದೂ ಭಕ್ತರೇ ನನ್ನೊಂದಿಗಿದ್ದಾರೆ. ನನ್ನ ಗೆಲುವು ಶತಸಿದ್ಧ ಎಂದರು.
ಕಾಂಗ್ರೆಸ್, ಜೆಡಿಎಸ್ ಪಕ್ಷದ ಅನೇಕರು ಈಗಾಗಲೇ ನನಗೆ ಬೆಂಬಲ ನೀಡಿದ್ದಾರೆ. ಬಿಜೆಪಿಯ ಶೇ. ೬೦ರಷ್ಟು ಕಾರ್ಯಕರ್ತರು ನನ್ನೊಂದಿಗಿದ್ದಾರೆ. ಶಿಕಾರಿಪುರದಲ್ಲಿಯೇ ನನಗೆ ಅತಿ ಹೆಚ್ಚು ಬೆಂಬಲ ಸಿಗಲಿದೆ. ಅಲ್ಲಿ ಹಲವು ಸಭೆಗಳನ್ನು ನಾನು ಮಾಡಿದ್ದೇನೆ. ತೀರ್ಥಹಳ್ಳಿ, ಭದ್ರಾವತಿ ಸೇರಿದಂತೆ ಎಲ್ಲಾ ಕಡೆ ನನಗೆ ಭಾರಿ ಬೆಂಬಲವಿದೆ. ಅರಗಜನೇಂದ್ರ ಅವರ ಭ್ರಮೆ ಕೊನೆಯಾಗಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಇ.ವಿಶ್ವಾಸ್, ಸುವರ್ಣ ಶಂಕರ್, ಹೇಮಾ, ಶಿವಾಜಿ, ಮಹೇಶ್ ಮೂರ್ತಿ, ಬಾಲು, ದೇವರಾಜ್, ಮಹಾ ಲಿಂಗಶಾಸ್ತ್ರಿ ಇನ್ನಿತರರಿದ್ದರು.