ಕಳಂಕಿತರಿಗೆ ಸ್ಪರ್ಧೆಗೆ ಅವಕಾಶ ನೀಡಿದ ರಾಷ್ಟ್ರೀಯ ಪಕ್ಷಗಳು: ಆರೋಪ…

ಶಿಕಾರಿಪುರ : ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷ ತಾಲೂಕಿನಲ್ಲಿ ಕಳಂಕಿತರಿಗೆ ಸ್ಪರ್ಧಿಸಲು ಅವಕಾಶ ನೀಡಿದ್ದು, ಇದರಿಂದಾಗಿ ಮತದಾರರಿಗೆ ಪರ್ಯಾಯ ಅಭ್ಯರ್ಥಿಯ ಆಯ್ಕೆಯು ಅನಿವಾರ್ಯವಾಗಿದೆ ಎಂದು ಕೃಷಿ ಭೂಮಿ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಡಿ.ಎಸ್ ಈಶ್ವರಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದ ಭೂಪಟದಲ್ಲಿ ಶಿಕಾರಿಪುರ ತಾಲೂಕಿಗೆ ವಿಶಿಷ್ಟವಾದ ಸ್ಥಾನಮಾನವಿದ್ದು ಶಿವಶರಣರ ನಾಡು ಅಕ್ಕಮಹಾದೇವಿ ಅಲ್ಲಮಪ್ರಭು ಮತ್ತಿತರ ಹಲವು ಶಿವಶರಣರಿಗೆ ಜನ್ಮ ನೀಡಿದ ಹೆಗ್ಗಳಿಕೆ ತಾಲೂಕು ಹೊಂದಿದೆ ಎಂದರು.
ಪ್ರಮುಖ ರಾಷ್ಟ್ರೀಯ ಪಕ್ಷವಾದ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷ ಕಳಂಕಿತರಿಗೆ ಸ್ಪರ್ಧಿಸಲು ಅವಕಾಶ ನೀಡಿದ್ದು ಇದರಿಂದಾಗಿ ಮತದಾರರು ಗೊಂದಲಕ್ಕೆ ಒಳಗಾಗಿದ್ದಾರೆ ಎಂದು ಅವರು, ಬಿಜೆಪಿ ಅಭ್ಯರ್ಥಿ ವಿಜಯೇಂದ್ರ ಕೇವಲ ಮಾಜಿ ಸಿಎಂ ಯಡಿಯೂರಪ್ಪನವರ ಪುತ್ರ ಎಂಬ ಹಿರಿಮೆ ಮಾತ್ರ ಹೊಂದಿದ್ದಾರೆ. ಈ ಹಿಂದೆ ಬಿಎಸ್‌ವೈ ಮುಖ್ಯಮಂತ್ರಿಯಾದ ಅವಧಿಯಲ್ಲಿ ನಡೆದ ಹಗರಣದಲ್ಲಿ ಭಾಗಿಯಾಗಿ ಕಾನೂನು ಸಮರ ಎದುರಿಸುತ್ತಿದ್ದಾರೆ. ಅಂತೆಯೇ ಕಾಂಗ್ರೆಸ್ ಅಭ್ಯರ್ಥಿ ಮಾಲತೇಶ್ ಗೋಣಿ ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿದ್ದು, ವಿವಿಧ ಪ್ರಕರಣ, ಕೃತ್ಯಗಳಲ್ಲಿ ದೂರು ದಾಖಲಾಗಿದೆ ಎಂದು ಆರೋಪಿಸಿದ ಅವರು, ಕುಟ್ರಹಳ್ಳಿ ಕರೆ ಸಮೀಪದಲ್ಲಿನ ಜಮೀನು ಆಸುಪಾಸಿನಲ್ಲಿನ ೧೫-೨೦ ಎಕರೆ ಜಮೀನು ಮಾಲಿಕರಿಗೆ ದಾರಿ ನೀಡದೆ ಕಳೆದ ಹಲವು ವರ್ಷ ಗಳಿಂದ ಬಂಜರು ಭೂಮಿಯಾಗಿಸಿದ ಹೆಗ್ಗಳಿಕೆಯನ್ನು ಹೊಂದಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಸತತ ೪-೫ ವರ್ಷ ಪ್ರಾಮಾಣಿಕವಾಗಿ ಶ್ರಮಿಸಿ ಇದೀಗ ಟಿಕೆಟ್ ವಂಚಿತರಾಗಿ ಮತದಾರರ ಒತ್ತಡಕ್ಕೆ ಮಣಿದು ಕಾಂಗ್ರೆಸ್‌ಗೆ ಸೆಡ್ಡು ಹೊಡೆದು ಪಕ್ಷೇತರ ಅಭ್ಯರ್ಥಿ ಯಾಗಿ ಸ್ಪರ್ಧಿಸಿರುವ ಯುವಕ ನಾಗರಾಜಗೌಡ ಭರವಸೆಯ ಬೆಳಕಾಗಿದ್ದು, ಪ್ರಜಾಪ್ರಭುತ್ವವನ್ನು ಬಲಿಷ್ಠವಾಗಿಸಲು, ಜನಸಾಮಾನ್ಯರು ನೆಮ್ಮದಿಯಾಗಿ ಬದುಕಲು ಮತದಾರರು ಅವಲೋಕಿಸಿ ಮತದಾನ ಮಾಡುವಂತೆ ಮನವಿ ಮಾಡಿದರು.