ವಾಹನ ಸವಾರರೇ ಎಚ್ಚರ; ನಗರದೆಲ್ಲೆಡೆ ಪೊಲೀಸ್ ಕ್ಯಾಮೆರಾ ಕಣ್ಣು…

ಶಿವಮೊಗ್ಗ: ಇನ್ನುಮುಂದೆ ಸರ್ಕಲ್‌ನಲ್ಲಿ ಯಾರೂ ಪೋಲೀಸ್ ಸಿಬ್ಬಂದಿ ಇಲ್ಲ, ನಮಗೆ ಯಾರೂ ಕೇಳೋರಿಲ್ಲ, ನಮ್ಮನ್ನು ಯೂರೂ ನೋಡೋದಿಲ್ಲ, ನಾವು ಯಾರ ಕೈಗೂ ಸಿಗುವುದಿಲ್ಲ ಎಂದು ವಾಹನ ಚಾಲಕರು ಸಂಚಾರಿ ನಿಯಮ ಉಲ್ಘಂಘನೆ ಮಾಡುವ ಮೊಂಡುತನ ಮಾಡಬೇಡಿ. ಏಕೆಂದರೇ ಇನ್ನು ಮುಂದೆ ಶಿವಮೊಗ್ಗ ನಗರದಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿ ವಾಹನ ಚಲಾಯಿಸಿದರೆ ತಕ್ಷಣ ನಿಮ್ಮ ಮೊಬೈಲ್‌ಗೆ ನೋಟೀಸ್ ಮೆಸೇಜ್ ಬರುತ್ತದೆ !
ಹೆಲ್ಮೆಟ್ ಇಲ್ಲದೆ ವಾಹನ ಚಾಲನೆ, ಸೀಟ್ ಬೆಲ್ಟ್ ಇಲ್ಲದೆ ಕಾರು ಚಾಲನೆ, ಸಿಗ್ನಲ್ ಉಲ್ಲಂಘಿಸಿ ವಾಹನ ಚಾಲನೆ, ಅತಿ ವೇಗದಲ್ಲಿ ವಾಹನ ಚಾಲನೆ ಹೀಗೆ ಯಾವುದೇ ಸಂಚಾರಿ ನಿಯಮ ಉಲ್ಲಂಘಿಸಿದರೂ ಕ್ಷಣಾರ್ಧದಲ್ಲಿ ನಿಮ್ಮ ಮೊಬೈಲ್‌ಗೆ ನೋಟೀಸ್ ಬರುತ್ತದೆ, ಇಂತಿಷ್ಟು ದಂಡ ಕಟ್ಟಬೇಕೆಂದು ಸೂಚನೆ ನೀಡುತ್ತದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಈ ವಿನೂತನ ಯೋಜನೆಯು ಸ್ಮಾರ್ಟ್ ಸಿಟಿ ಯೋಜನೆಯ ಅಡಿಯಲ್ಲಿ ಅನುಷ್ಠಾನ ಮಾಡಲಾದ ಸುಧಾರಿತ ಐಟಿಎಂಎಸ್ ತಂತ್ರಾಂಶದ ಮೂಲಕ ಸಂಚಾರ ನಿಯಮ ಉಲ್ಲಂಘನೆ ಮಾಡುವ ವಾಹನ ಸವಾರರಿಗೆ ನೋಟಿಸ್ ಕಳಿಸುವ ವ್ಯವಸ್ಥೆಯಾಗಿದೆ. ಶಿವಮೊಗ್ಗ ನಗರದಲ್ಲಿ ಸುಗಮ ಮತ್ತು ಅಪಘಾತ ಮುಕ್ತ ಸಂಚಾರ ವ್ಯವಸ್ಥೆಯನ್ನು ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಇಂಟಿಗ್ರೇಟೆಡ್ ಟ್ರಾಫಿಕ್ ಮ್ಯಾನೇಜ್ ಮೆಂಟ್ ಸಿಸ್ಟಮ್ (ಐಟಿಎಂಎಸ್) ಅಡಿಯಲ್ಲಿ ನಗರದ ೧೩ ವೃತ್ತಗಳಲ್ಲಿ ಅಡಾಪ್ಟಿವ್ ಟ್ರಾಫಿಕ್ ಕಂಟ್ರೋಲ್ ಸಿಸ್ಟಮ್‌ಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು.
ಇದರಲ್ಲಿ ೭೨ ಕೆಂಪುದೀಪ ಉಲ್ಲಂಘನೆ ಕಂಡು ಹಿಡಿಯುವ ಕ್ಯಾಮರಾಗಳು, ೩೦ ವೇಗ ನಿಯಮ ಉಲ್ಲಂಘನೆ ಕಂಡು ಹಿಡಿಯುವ ಕ್ಯಾಮರಾಗಳು, ೩೮ ಝೂಮಿಂಗ್ ಕ್ಯಾಮರಾಗಳು, ೮ ನಿಗದಿತ ವೇಗ ನಿಯಮ ಪಾಲನೆ ಪರಿಶೀಲಿಸುವ ಕ್ಯಾಮರಾಗಳು. ೧೦ ಸ್ಮಾರ್ಟ್ ಪೋಲ್ ಹಾಕಿ ೩೬೦ ಡಿಗ್ರಿ ವೃತ್ತದಲ್ಲಿನ ಟ್ರಾಫಿಕ್ ವ್ಯವಸ್ಥೆಯನ್ನು ಚಿತ್ರಿಕರಿಸುವ ಕ್ಯಾಮರಾಗಳನ್ನು ಅಳವಡಿಸಲಾಗಿದೆ.
ಈ ಕ್ಯಾಮರಾಗಳಿಂದ ಬಂದ ವೀಡಿಯೋ ಹಾಗೂ ಫೋಟೋ ಗಳನ್ನು ಆಧರಿಸಿ ಸಿಗ್ನಲ್ ಜಂಪ್ ಸೇರಿದಂತೆ ವಿವಿಧ ಸಂಚಾರಿ ನಿಯಮ ಉಲ್ಲಂಘನೆ ಕುರಿತಂತೆ ನೋಟೀಸ್ ರವಾನೆ ಮಾಡಲಾಗುತ್ತದೆ.
ಈ ಕ್ಯಾಮೆರಾಗಳಿಂದ ಸೆರೆ ಹಿಡಿಯಲಾದ ನೋಟೀಸ್ ವಿವರವನ್ನು ಇ- ಚಲನ್ ತಂತ್ರಾಂಶಕ್ಕೆ ಸಂಯೋಜಿಸಿದೆ. ಸಂಚಾರ ಪೋಲೀಸ್ ಠಾಣೆಗಳ ಅಧಿಕಾರಿಗಳ ಬಳಿ ಇರುವ ಸ್ಮಾರ್ಟ್ ಫೈನ್ ಡಿವೈಸ್‌ನಲ್ಲಿ ವಾಹನ ನೋಂದಣಿ ಸಂಖ್ಯೆಯನ್ನು ನಮೂದಿಸಿ ಪರಿಶೀಲಿಸಿದಾಗ ಸದರಿ ವಾಹನಕ್ಕೆ ಸಂಬಂಧಿಸಿದಂತ ದಾಖಲಾದ ಪ್ರಕರಣದ ವಿವರ ದೊರೆಯುತ್ತದೆ.
ವಾಹನಗಳ ಮಾಲೀಕರು ತಮ್ಮ ವಿಳಾಸಕ್ಕೆ ಅಂಚೆ ಮೂಲಕ ಬರುವ ನೋಟೀಸ್ ಅಥವಾ ಮೊಬೈಲ್ ಮೆಸೇಜ್‌ನಲ್ಲಿ ನಮೂದಿಸಿದ ದಂಡದ ಮೊತ್ತವನ್ನು ಹತ್ತಿರದ ಸಂಚಾರಿ ಪೋಲಿಸ್ ಠಾಣೆಗೆ ಹೋಗಿ ಸ್ಪಾಟ್ ಫೈನ್ ಡಿವೈಸ್‌ನಲ್ಲಿ ಪರಿಶೀಲಿಸಿ ದಂಡದ ಮೊತ್ತ ಪಾವತಿಸಿ ನೋಟಿಸ್‌ನ್ನು ಕ್ಲೋಸ್ ಮಾಡಬಹುದಾಗಿದೆ.
ಈಗಾಗಲೇ ಈ ತಂತ್ರಾಂಶದ ವ್ಯವಸ್ಥೆಯಡಿ ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ ನೋಟೀಸ್ ನೀಡಲಾಗುತ್ತಿದೆ. ಆದರೆ ಆಗಸ್ಟ್ ೨೮ ರಿಂದ ಕಳುಹಿಸುವ ನೋಟೀಸ್‌ಗಳಿಗೆ ದಂಡ ಕಟ್ಟುವ ವ್ಯವಸ್ಥೆ ಜಾರಿ ಯಾಗುವುದು ಎಂದು ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ಎಲ್ಲರೂ ಸಂಚಾರ ನಿಯಮ ಪಾಲಿಸುವ ಮೂಲಕ ಸುರಕ್ಷಿತವಾಗಿರಿ ಹಾಗೂ ದಂಡ ಕಟ್ಟುವುದನ್ನು ತಪ್ಪಿಸಿ ಕೊಳ್ಳಿ ಎಂದು ಅವರು ಸಲಹೆ ನೀಡಿದರಲ್ಲದೇ, ನಗರದಲ್ಲಿ ಆಟೋ ಮೀಟರ್ ಕಡ್ಡಾಯವಾಗಿದ್ದು, ಇದರ ಉಲ್ಲಂಘನೆ ವಿರುದ್ದವೂ ಕ್ರಮ ಕೈಗೊಳ್ಳಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್‌ಕುಮಾರ್ ಭೂಮರೆಡ್ಡಿ, ಡಿವೈಎಸ್‌ಪಿ ಸುರೇಶ್ ಟ್ರಾಫಿಕ್ ಪೊಲೀಸ್ ಇನ್ಸ್‌ಪೆಕ್ಟರ್ ಸಂತೋಷ್ ಕುಮಾರ್, ಸ್ಮಾರ್ಟ್ ಸಿಟಿ ಅಧಿಕಾರಿ ಕೃಷ್ಣಪ್ಪ ಇದ್ದರು.