ಏಡ್ಸ್ ರೋಗಗಳಂತಹ ಕಾಯಿಲೆಗಳ ಬಗ್ಗೆ ಹೆಚ್ಚು ಅರಿವು ಅಗತ್ಯ…
ಶಿವಮೊಗ್ಗ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಪಂ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಐಎಂಎ ಇನ್ನಿತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಇಂದು ವಿಶ್ವ ಏಡ್ಸ್ ದಿನದ ಅಂಗವಾಗಿ ಜಿಲ್ಲಾ ಕೋರ್ಟ್ ಆವರಣದಿಂದ ಭಾರತೀಯ ವೈದ್ಯಕೀಯ ಸಂಘದವರೆಗೆ ಜಥಾ ಕಾರ್ಯಕ್ರಮವನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಮಂಜುನಾಥ್ ನಾಯಕ್ ಚಾಲನೆ ನೀಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾದ ಸಂತೋಷ ಎಂ.ಎಸ್ ಅವರು ಮಾತನಾಡಿ, ಸಮಾಜದಲ್ಲಿ ಹೆಚ್‌ಐವಿ ಕಾಯಿಲೆ ಬಗ್ಗೆ ತಪ್ಪು ಕಲ್ಪನೆಗಳಿವೆ, ಅದ್ದರಿಂದ ಹೆಚ್‌ಐವಿ ಸೋಂಕಿತರನ್ನು ಸಾಮಾಜಿಕ ಬಹಿಷ್ಕಾರ ಮಾಡುವ ಅಥವಾ ಅಸಹ್ಯ ರೀತಿಯಲ್ಲಿ ನೋಡುವುದನ್ನು ನಿಲ್ಲಿಸಬೇಕು ಎಂದರಲ್ಲದೇ, ಏಡ್ಸ್ ಕಾಯಿಲೆಯು ಆಹಾರ ಹಂಚಿಕೆ ಮಾಡಿಕೊಳ್ಳುವು ದಾಗಲೀ ಅಥವಾ ಮುಟ್ಟುವಿಕೆ ಯಿಂದಾಗಲೀ ಬರುವುದಿಲ್ಲ. ಅಸುರಕ್ಷಿತ ಲೈಂಗಿಕ ಚಟುವಟಿಯಿಂದ ಬರುವುದು ಎಂದು ತಿಳಿಸಿ, ಜನರು ತಮ್ಮ ಕಾಯಿಲೆಯ ಬಗ್ಗೆ ಮುಕ್ತವಾಗಿ ಹೇಳಿ ಕೊಳ್ಳುವ ವಾತಾವರಣ ಸೃಷ್ಠಿಯಾಗ ಬೇಕು ಎಂದರು.
ಹೆಚ್‌ಐವಿ ಬಗ್ಗೆ ಒಂದು ಕಾಯ್ದೆಯೇ ಇದೆ. ಈ ಕಾಯ್ದೆ ರೋಗಿಯ ಬಗ್ಗೆ ಅಪಪ್ರಚಾರ ಮಾಡುವುದು, ರೋಗಿಯ ಅನುಮತಿ ಇಲ್ಲದೆ ಮತ್ತೊಬ್ಬರಿಗೆ ಹೇಳುವುದು ಕಾನೂನಾತ್ಮಕವಾಗಿ ಶಿಕ್ಷಾರ್ಹ ಅಪರಾಧ. ಕಾನೂನಿನ ಉಲ್ಲಂಘನೆಯಾದಲ್ಲಿ ೨ ವಷಗಳವರೆಗೆ ಜೈಲು ಶಿಕ್ಷೆ ಹಾಗೂ ೧ ಲಕ್ಷಕ್ಕೂ ಮೀರಿದ ದಂಡ ವಿಧಿಸಲಾಗುವುದು ಎಂದರು.
ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಶ್ರೀಧರ್ ಮಾತನಾಡಿ, ಭಾರತ ಸಧೃಡ ಮತ್ತು ಅಭಿವೃದ್ಧಿ ಹೊಂದಲು ಎಲ್ಲರೂ ಆರೋಗ್ಯವಾಗಿರಬೇಕು. ಸರ್ಕಾರಗಳು ಏಡ್ಸ್ ರೋಗಗಳಂತಹ ಕಾಯಿಲೆಗಳ ಬಗ್ಗೆ ಹೆಚ್ಚು ಅರಿವು ಮತ್ತು ಪ್ರಚಾರ ಮಾಡುತ್ತವೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿ ಗಳು ಸಂಶೋಧನೆ ಮತ್ತು ಕೌಶಲ್ಯಗಳ ಬಗ್ಗೆ ಗಮನ ಹರಿಸಬೇಕು. ವಿದ್ಯಾರ್ಥಿಗಳು ಎಲ್ಲಾ ಸಮುದಾಯ ಗಳಿಗೂ ತಲುಪುವ ರೀತಿಯಲ್ಲಿ ಸಾಮಾಜಿಕ ಜಲತಾಣಗಳ ಮೂಲಕ ಅರಿವು ಮತ್ತು ಮಾಹಿತಿ ನೀಡಬೇಕೆಂದು ತಿಳಿಸಿದರು.
ಜಿಲ್ಲೆಯಲ್ಲಿ ಏಡ್ಸ್ ಕುರಿತು ಜಗೃತಿ ನೀಡುತ್ತಿರುವ ಅಧಿಕಾರಿಗಳು, ಸಾಮಾಜಿಕ ಕಾರ್ಯಕರ್ತರುಗಳು, ಹೆಚ್.ಐ.ವಿ. ಪರೀಕ್ಷಕರು ಹಾಗೂ ಈ ಕ್ಷೇತ್ರದಲ್ಲಿ ಹೆಚ್ಚಿನ ಕೆಲಸ ನಿರ್ವಹಿಸಿ ಪ್ರಶಸ್ತಿ ಪಡೆದವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜಿ.ಆರ್ ರಾಘವೇಂದ್ರ, ಜಿಲ್ಲಾ ಕ್ಷಯ ಮತ್ತು ಏಡ್ಸ್ ರೋಗ ನಿಯಂತ್ರಣಾಧಿಕಾರಿಗಳಾದ ಡಾ. ನಾಗೇಶ್ ಬಿ.ಪಿ., ಎಫ್.ಬಿ.ಐ ಶಿವಮೊಗ್ಗದ ಡಾ. ಸಾದ್ವಿಕ್, ಎ.ಕೆ.ಆರ್ ಆಡಳಿತಾಧಿಕಾರಿ ರವಿಕುಮಾರ್, ಸರ್ಕಾರಿ ಅಧಿಕಾರಿಗಳು, ಶಿವಮೊಗ್ಗದ ಸುಬ್ಬಯ್ಯ ನರ್ಸಿಂಗ್ ಕಾಲೇಜು ಮತ್ತು ನ್ಯಾಷನಲ್ ಲಾ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.