ನಾಳೆಯಿಂದ ಹಾಲಿನ ದರ ಏರಿಕೆ; ಹೆಚ್ಚಳ ಮೊತ್ತ ರೈತರಿಗೆ: ಶಿಮುಲ್ ಅಧ್ಯಕ್ಷ ಶ್ರೀಪಾದರಾವ್
ಶಿವಮೊಗ್ಗ: ಆ.೧ರ ನಾಳೆಯಿಂದಲೇ ಅನ್ವಯವಾಗುವಂತೆ ನಂದಿನಿ ಹಾಲು ಮತ್ತು ಮೊಸರಿನ ಮಾರಾಟದ ದರ ಪ್ರತಿ ಲೀಟರ್‌ಗೆ ರೂ. ೩ರಂತೆ ಹೆಚ್ಚಿಸಿದ್ದು, ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಖರೀದಿಸುವ ಹಾಲಿನ ದರವನ್ನು ಕೂಡ ಪರಿಷ್ಕರಿಸಿದೆ ಎಂದು ಶಿಮುಲ್ ಒಕ್ಕೂಟದ ಅಧ್ಯಕ್ಷ ಎನ್.ಎಚ್. ಶ್ರೀಪಾದರಾವ್ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ.
ಸರ್ಕಾರದ ಆದೇಶದಂತೆ ರಾಜ್ಯದ ೧೪ ಒಕ್ಕೂಟಗಳಲ್ಲೂ ದರ ಪರಿಷ್ಕೃತವಾಗಿದ್ದು, ಹೆಚ್ಚಿಸಿದ ೩ ರೂ.ಗಳು ರೈತರಿಗೆ ಸಿಗುತ್ತದೆ ಎಂದರು.
ಶಿಮುಲ್ ವ್ಯಾಪ್ತಿಯಲ್ಲಿ ಪ್ರತಿನಿತ್ಯ ರೈತರಿಂದ ೬ಲಕ್ಷ ೭೦ಸಾವಿರ ಲೀಟರ್ ಹಾಲು ಬರುತ್ತಿದ್ದು, ಅಷ್ಟೂ ಹಾಲು ಉತ್ಪಾದಕರಿಗೆ ಈ ಮೊತ್ತ ಪಾವತಿಯಾಗುತ್ತದೆ ಎಂದರು. ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಮೂರೂ ಜಿಲ್ಲೆಗಳ ಸಹಕಾರ ಒಕ್ಕೂಟ ಶಿಮುಲ್ ೧೨೫೩ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಮತ್ತು ೧೪೪ ಬಿಎಂಸಿಗಳಿಂದ ದಿನವಹಿ ಸರಾಸರಿ ೬.೩೦ ಲಕ್ಷ ಲೀಟರ್ ಹಾಲು ಶೇಖರಿಸು ತ್ತಿದ್ದು,ಇದರಿಂದ ೧.೫೦ ಲಕ್ಷ ರೈತ ಕುಟುಂಬ ಗಳು ಹೈನು ಗಾರಿಕೆ ಯಿಂದ ಜೀವ ನೋಪಾಯ ಕಲ್ಪಿಸಿಕೊಂಡಿವೆ ಎಂದರು.
ಪ್ರತಿದಿನ ಸರಾಸರಿ ೩.೩೦ ಲಕ್ಷ ಲೀಟರ್‌ನಷ್ಟು ಉತ್ಕೃಷ್ಟ ಗುಣಮಟ್ಟದ ಹಾಲು, ಮೊಸರು, ಹಾಲಿನ ಉತ್ಪನ್ನಗಳನ್ನು ಸ್ಪರ್ಧಾತ್ಮಕ ದರಗಳಲ್ಲಿ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿದೆ. ದಿನವಹಿ ೧.೩೦ ಲಕ್ಷ ಕೆಜಿ.ಹಾಲನ್ನು ಮಾರಾಟ ಮಾಡಿ ಉಳಿದ ೧.೭೦ ಲಕ್ಷ ಕೆ.ಜಿ ಹಾಲನ್ನು ಪರಿವರ್ತನೆಗೆ ರವಾನಿಸಲಾಗುತ್ತಿದೆ. ಕ್ಷೀರಭಾಗ್ಯ ಯೋಜನೆಯಡಿ ಅಂಗನವಾಡಿ ಶಾಲಾ ಮಕ್ಕಳಿಗೆ ಕೆನೆಭರಿತ ಹಾಲಿನ ಪುಡಿಯನ್ನು ಸರ್ಕಾರ ನಿಗದಿಪಡಿಸಿದ ದರದಲ್ಲಿ ಪೂರೈಕೆ ಮಾಡಲಾಗುತ್ತಿದೆ ಎಂದರು.
ಪ್ರತಿ ಲೀಟರ್‌ಗೆ ೩ ರೂನಂತೆ ಮಾರಾಟ ದರ ಹೆಚ್ಚಿಸಿದ್ದು, ೫೦೦ ಮಿಲಿ ಲೀಟರ್‌ನ ೧ ಪ್ಯಾಕೆಟ್‌ಗೆ ೧.೫೦ ರೂ. ಹೆಚ್ಚಿಸಬೇಕಿದೆ. ಚಿಲ್ಲರೆ ಅಭಾವದ ಕಾರಣ ಗ್ರಾಹಕರು ಮಾರಾಟದಾರರಿಂದ ದೂರುಗಳು ಬರುವ ಸಂಭವದ ಹಿನ್ನೆಲೆಯಲ್ಲಿ ೫೦೦ ಮಿಲೀ. ಪ್ರತಿ ಪ್ಯಾಕೆಟ್‌ಗೆ ೧೦ಮಿಲೀ ಹೆಚ್ಚಾಗಿ ನೀಡಿ ಹೆಚ್ಚುವರಿ ನೀಡುತ್ತಿರುವ ಹಾಲಿನ ಪ್ಯಾಕೆಟ್ ಮೇಲೆ ಹೆಚ್ಚುವರಿ ೧೦ಎಂಎಲ್ ಎಂದು ಮುದ್ರಿಸಿ ಪ್ರತಿ ೫೦೦ ಮಿಲೀ. ಪ್ಯಾಕೆಟ್‌ಗೆ ೨ರೂನಂತೆ ಹೆಚ್ಚಿಸಲಾಗಿದೆ ಎಂದರು.
ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹಾಲಿನ ದರ ಕಡಿಮೆ ಇದೆ. ದರ ಹೆಚ್ಚಳದ ನಂತರ ಒಕ್ಕೂಟ ದಿಂದ ಸಂಘಗಳಿಗೆ ಹಾಲಿ ನೀಡುತ್ತಿರುವ ದರ ೩೩.೭೧ ರೂನಿಂದ ೩೬.೮೩ರೂಗೆ ಹೆಚ್ಚಳವಾಗಲಿದೆ. ಸಂಘದಿಂದ ಉತ್ಪಾದಕರಿಗೆ ಹಾಲಿ ನೀಡುತ್ತಿರುವ ದರ ೩೧.೮೫ರೂನಿಂದ ೩೪.೯೭ರೂ.ಗೆ ಹೆಚ್ಚಳವಾಗಲಿದೆ ಎಂದರು.
ಹೊಸದರ: ದರ ಪರಿಷ್ಕರಣೆಯ ನಂತರ ಟೋನ್ಡ್ ಮಿಲ್ಕ್ ಲೀಟರ್‌ಗೆ ೩೯-೪೨ರೂ., ಅರ್ಧ ಲೀಟರ್‌ಗೆ ೨೦-೨೨ರೂ, ಶುಭಂ ಸ್ಟ್ಯಾಂಡರ್ಡ್ ೪೫-೪೮ರೂ., ಅರ್ಧ ಲೀಟರ್‌ಗೆ ೨೩-೨೫ ರೂ. ಹೋಮೋಜೀನೈಜ್ಡ್ ೧ಲೀ. ೪೬-೪೯, ಅರ್ಧ ಲೀಟರ್ ೨೩-೨೫, ೨೦೦ ಮಿಲೀ. ೧೧-೧೨ರೂ. ಮೊಸರು ಅರ್ಧ ಲೀ. ೨೪-೨೬ರೂ., ೨೦೦ಮಿಲೀ ೧೧-೧೨, ಮಜ್ಜಿಗೆ ೨೦೦ಮಿಲೀ. ೮-೯ರೂ. ಸ್ವೀಟ್ ಲಸ್ಸೀ ೨೦೦ಮಿಲೀ ೧೨ರಿಂದ ೧೩ರೂ. ಮಾರಾಟಗಾರರಿಗೂ ಕೂಡ ಕಮಿಷನ್ ಹೆಚ್ಚಳ ಆಗಲಿದೆ. ಹಾಲು ಉತ್ಪಾದಕರಿಗೆ ಮೂರು ತಿಂಗಳ ಪ್ರೋತ್ಸಾಹ ಧನ ಬಾಕಿ ಇದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಹೆಚ್.ಕೆ. ಬಸಪ್ಪ, ನಿರ್ದೇಶಕರಾದ ವೀರಭದ್ರ ಬಾಬು, ಡಿ. ಆನಂದ, ವಿದ್ಯಾಧರ, ಟಿ. ಶಿವಶಂಕರಪ್ಪ, ಹೆಚ್.ಬಿ. ದಿನೇಶ್, ತಾರಾನಾಥ್, ಬಿ.ಬಿ. ಬಸವರಾಜಪ್ಪ. ಕೆ.ಎನ್. ಸೋಮಶೇಖರಪ್ಪ, ಜಿ.ಪಿ. ಯಶವಂತರಾಜು, ಎನ್.ಹೆಚ್. ಭಾಗ್ಯ, ಎನ್.ಡಿ. ಹರೀಶ್, ಕೆ.ಪಿ ರುದ್ರಗೌಡ, ವ್ಯವಸ್ಥಾಪಕ ನಿರ್ದೇಶಕ ಎಸ್.ಜಿ ಶೇಖರ್ ಇದ್ದರು.