ಮಾ. 30 : ಹಿಂದೂಗಳ ಪ್ರಮುಖ ಹಬ್ಬ ಶ್ರೀ ರಾಮನವಮಿ…

ಹಿಂದೂಗಳ ಹೃದಯ ಸಾಮ್ರಾಟ, ಮರ್ಯಾದಾ ಪುರುಷೋತ್ತಮ, ದಶರಥ ನಂದನ ಶ್ರೀರಾಮ ಹುಟ್ಟಿದ ದಿನವನ್ನು ಶ್ರೀರಾಮನವಮಿ ಹಬ್ಬವೆಂದು ಆಚರಣೆ ಮಾಡಲಾಗುತ್ತಿದ್ದು, ರಾಮನವಮಿ ಸಕಲ ಹಿಂದೂ ಧರ್ಮ ಸಂಜಾತರಿಗೂ ಭಾರತದಲ್ಲಿ ಒಂದು ಜನಪ್ರಿಯ ಧಾರ್ಮಿಕ ಹಬ್ಬವಾಗಿದೆ.
ಶ್ರೀರಾಮ ರಾಮಾಯಣದ ಕಥಾ ನಾಯಕನಾಗಿದ್ದು, ಆದಿಕಾಲದ ಭಾರತದ ಅಯೋಧ್ಯೆಯ ರಾಜನೆಂದು ಕರೆಯಲಾಗುತ್ತದೆ. ದಶರಥ ಮಹಾರಾಜ ಶ್ರೀರಾಮನ ತಂದೆಯಾಗಿದ್ದು, ಹಿಂದೂ ಸಂಪ್ರದಾಯದಲ್ಲಿ ರಾಮನನ್ನು ವಿಷ್ಣುವಿನ ಅವತಾರವಾಗಿ ಪೂಜಿಸಲಾಗುತ್ತದೆ. ರಾಮನವಮಿ ಹಬ್ಬವನ್ನು ಚೈತ್ರ ಮಾಸದ ೯ನೇ ದಿನದಂದು ಆಚರಣೆ ಮಾಡಲಾಗುತ್ತದೆ.
ಚೈತ್ರ ಮಾಸದ ಶುಕ್ಲ ಪಕ್ಷದ ಪಾಡ್ಯದಿಂದ ನವಮಿಯವರೆಗೆ ರಾಮಾಯಣವನ್ನು ಭಕ್ತಿ, ಶ್ರದ್ಧೆಗಳಿಂದ ಪಾರಾಯಣ ಮಾಡಿ, ನವಮಿ ದಿನ ಶ್ರೀರಾಮ ಪಟ್ಟಾಭಿಷೇಕ, ಪಾರಾಯಣ ಮಾಡಿ ಹಬ್ಬವನ್ನು ಪೂರ್ಣಗೊಳಿಸುತ್ತಾರೆ.
ರಾಮನವಮಿ ಹಬ್ಬ ಅತ್ಯಂತ ಸರಳ ಹಾಗೂ ಸುಲಭವಾಗಿದ್ದು, ಈ ಹಬ್ಬವನ್ನು ದೇಶದಾದ್ಯಂತ ಬಹಳಷ್ಟು ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಗುತ್ತದೆ. ಪ್ರಮುಖವಾಗಿ ಉತ್ತರ ಭಾರತದಲ್ಲಂತೂ ಬಹಳ ವಿಜಂಭಣೆಯಿಂದ ಆಚರಿಸುತ್ತಾರೆ.
ಶ್ರೀರಾಮ ಜನಿಸಿದ ಸ್ಥಳ ಅಯೋಧ್ಯೆಯಲ್ಲಿ ವಿಜಂಭಣೆಯಿಂದ ಆಚರಣೆ ಮಾಡಲಾಗುತ್ತದೆ. ಹಬ್ಬದ ದಿನದಂದು ರಾಮನ ಭಜನೆ, ಕೀರ್ತನೆ ಹಾಗೂ ಮೆರವಣಿಗಳನ್ನು ನಡೆಸಲಾಗುತ್ತದೆ. ಶ್ರೀರಾಮನವಮಿಯಂದು ಸೂರ್ಯ ದೇವನ ಪ್ರಾರ್ಥನೆಯೊಂದಿಗೆ ಹಬ್ಬ ಆರಂಭವಾಗುತ್ತದೆ. ಏಕೆಂದರೆ, ಶ್ರೀರಾಮನು ಸೂರ್ಯವಂಶಸ್ಥನಾಗಿದ್ದು, ಶಕ್ತಿಯ ಪ್ರತೀಕವಾಗಿರುವ ಸೂರ್ಯ ದೇವರ ಆರಾಧನೆ ಮೂಲಕ ಶ್ರೀ ರಾಮನವಮಿ ಆರಂಭವಾಗುತ್ತದೆ. ಹಬ್ಬದ ದಿನದಂದು ಶ್ರೀರಾಮನ ಸ್ತೋತ್ರ ಹಾಗೂ ಭಜನೆಗಳನ್ನು ಹಾಡುವ ಮೂಲಕ ದೇವರನ್ನು ಸಂಪ್ರೀತಿಗೊಳಿಸಲಾಗುತ್ತದೆ.
ಈ ದಿನ ದೇಶದ ಹಲವು ಶ್ರೀರಾಮ ಮಂದಿರಗಳಲ್ಲಿ ವಿಶೇಷ ಪೂಜೆಗಳನ್ನು ಸಲ್ಲಿಸಲಾಗುತ್ತದೆ. ಈಗಿನ ಅಯೋಧ್ಯೆಯಲ್ಲಿ, ತಮಿಳುನಾಡಿನ ರಾಮೇಶ್ವರಂನಲ್ಲಿ ಶ್ರೀರಾಮನ ಪೂಜೆಗಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಕರ್ನಾಟಕದಲ್ಲೂ ಕರ್ನಾಟಕ ಸಂಗೀತ ಮತ್ತು ಹಿಂದೂಸ್ತಾನಿ ಸಂಗೀತ ಕಛೇರಿಗಳನ್ನು ಆಯೋಜಿಸಲಾಗುತ್ತದೆ. ಕಾರ್ಯಕ್ರಮಗಳಲ್ಲಿ ಕರ್ನಾಟಕ ಹಾಗೂ ಇತರೆ ರಾಜ್ಯಗಳಿಂದ ಸಂಗೀತ ವಿದ್ವಾಂಸರು ಪಾಲ್ಗೊಳ್ಳುತ್ತಾರೆ.
ಹಬ್ಬದ ದಿನದಂದು ಪ್ರತಿಯೊಬ್ಬರೂ ಜತಿ, ಧರ್ಮವೆಂಬ ಕಟ್ಟಳೆಗಳನ್ನ ಬದಿಗೊತ್ತಿ ಕೋಸಂಬರಿ, ಮಜ್ಜಿಗೆ ಹಾಗೂ ಪಾನಕಗಳನ್ನು ಹಂಚುವ ಮೂಲಕ ಸೌಹಾರ್ದತೆಯನ್ನು ಮೆರೆಯುತ್ತಾರೆ. ವಸುದೈವ ಕುಟುಂಬಕಂ ಅಂದರೆ ಇಡೀ ವಿಶ್ವವೇ ಒಂದು ಕುಟುಂಬ ಎಂಬುದನ್ನು ಜಗತ್ತಿಗೆ ಸಾರಿ ಹೇಳಲು ಇಂತಹ ಹಬ್ಬಗಳು ಮಹತ್ವಪೂರ್ಣವಾಗಿವೆ.
ಹಬ್ಬದ ಆಚರಣೆ ಹೇಗೆ?
ಶ್ರೀರಾಮ ಮನೆದೇವರು ಇರುವವರು ಹಬ್ಬವನ್ನು ೯ ದಿನಗಳ ಕಾಲ ಆಚರಣೆ ಮಾಡುತ್ತಾರೆ. ಚೈತ್ರ ಮಾಸದ ಶುಕ್ಲಪಕ್ಷದ ಪಾಡ್ಯದಿಂದ ನವಮಿಯವರೆಗೆ ಶ್ರೀ ರಾಮಾಯಣ ಪಾರಾಯಣ ಮಾಡಿ, ನವಮಿ ದಿನ ಶ್ರೀ ರಾಮ ಪಟ್ಟಾಭಿಷೇಕ, ಪಾರಾಯಣ ಮಾಡಿ ಹಬ್ಬವನ್ನು ಪೂರ್ಣಗೊಳಿಸುತ್ತಾರೆ. ಹೀಗೆ ೯ ದಿನದ ರಾಮನ ಉತ್ಸವ ಆಚರಿಸಲಾಗುತ್ತದೆ.
ಶ್ರೀ ರಾಮನವಮಿ ಆಚರಣೆ ಅತ್ಯಂತ ಸರಳವಾಗಿದೆ. ಸಾಮಾನ್ಯವಾಗಿ ಶ್ರೀರಾಮ ಪಟ್ಟಾಭಿಷೇಕ, ಶ್ರೀರಾಮ ಪಂಚಾಯತನದ ಪಟವನ್ನು ಇಟ್ಟು ಪೂಜೆ ಮಾಡುತ್ತಾರೆ. ಇದರಲ್ಲಿ ಶ್ರೀರಾಮನ ಜೊತೆಗೆ ಎ ಸಹೋದರರು ಇರುತ್ತಾರೆ. ಶ್ರೀರಾಮಚಂದ್ರನಿಗೆ ಷೋಡಶೋಪಚಾರದಿಂದ ಪೂಜೆ ಮಾಡಬೇಕು. ಪಾನಕ, ಕೋಸಂಬರಿಗಳನ್ನು ನೈವೇದ್ಯ ಮಾಡಿ, ಇತರರಿಗೆ ಹಂಚಲಾಗುತ್ತದೆ. ಶ್ರೀರಾಮನ ಭಜನೆ, ಹಾಡುಗಳಿಂದ ಶ್ರೀರಾಮನ ಧ್ಯಾನ ಮಾಡುತ್ತಾರೆ. ಮತ್ತೊಂದು ವಿಶೇಷವೆಂದರೆ, ಶ್ರೀರಾಮನಾಮ ಬರೆಯುವುದು. ಶ್ರೀರಾಮ ನಾಮ ಜಪಿಸಿದರೆ ಶ್ರೀರಾಮ ನಮ್ಮನ್ನು ಸಂರಕ್ಷಿಸುತ್ತಾನೆಂಬ ನಂಬಿಕೆ ಇದೆ.
ಮಾರ್ಚ್ ೩೦ ರ ಗುರುವಾರ ನಾಡಿನಾದ್ಯಂತ ಶ್ರೀ ರಾಮನವಮಿಯನ್ನು ವಿಜಂಭಣೆಯಿಂದ ಆಚರಿಸಲಾಗುತ್ತದೆ. ಸರ್ವರಿಗೂ ಶ್ರೀರಾಮನವಮಿಯ ಹಾರ್ದಿಕ ಶುಭಾಶಯಗಳು.,

ಮುರುಳೀಧರ್ ಹೆಚ್ ಸಿ
ವರದಿಗಾರರು ಹಾಗೂ
ಕ್ಷೇತ್ರ ದರ್ಶನ ಅಂಕಣಕಾರರು,
ಹೊಸ ನಾವಿಕ ಕನ್ನಡ ದಿನಪತ್ರಿಕೆ, ಶಿವಮೊಗ್ಗ.