ವಿದೇಶಿ ವಸ್ತುಗಳ ಮೇಲಿನ ವ್ಯಾಮೋಹ ಬಿಡಿ: ಸ್ವಾಮೀಜಿ ಕರೆ

swadeshi

ಶಿವಮೊಗ್ಗ, : ಭಾರತೀಯರು ತಯಾರಿಸಿದ ಉತ್ಪನ್ನಗಳನ್ನು ಮಾತ್ರವೇ ಖರೀದಿ ಮಾಡಿ ದೇಶವನ್ನು ಆರ್ಥಿಕ ಸ್ವಾವಲಂಬನೆಯತ್ತ ಕೊಂಡೊಯ್ಯುವ ಮೂಲಕ ಪರಕೀಯ ವಸ್ತುಗಳ ಮೇಲಿನ ವ್ಯಾಮೋಹ ದೂರಗೊಳಿಸ ಬೇಕಿದೆ ಎಂದು ಸಿರಿಗೆರೆ ಬೃಹನ್ಮಠದ ತರಳಬಾಳು ಜಗದ್ಗುರು ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳವರು ಹೇಳಿದರು.
ನಗರದ ಫ್ರೀಡಂ ಪಾರ್ಕ್‌ನಲ್ಲಿ ಸ್ವದೇಶಿ ಜಗರಣ ಮಂಚ್‌ನಿಂದ ನಿನ್ನೆ ಸಂಜೆ ಐದು ದಿನಗಳ ಕಾಲ ನಡೆಯುವ ಬೃಹತ್ ಸ್ವದೇಶಿ ಮೇಳ ಉದ್ಘಾಟಿಸಿ ಮಾತನಾಡಿದ ಪೂಜ್ಯರು, ಸ್ವದೇಶಿ ಎಂಬುದು ಕೇವಲ ವಸ್ತುವಲ್ಲ. ಅದು ನಮ್ಮ ಧರ್ಮವಾಗಿದೆ. ಸ್ವದೇಶಿ ಸಂಸ್ಕೃತಿಯನ್ನು ನಿರಂತರವಾಗಿ ಕಾಪಾಡಿ ಕೊಂಡು ಹೋಗುವುದು ಭಾರತೀಯರ ಕರ್ತವ್ಯ ಎಂದರು.
ಎಷ್ಟೋ ಜನರಿಗೆ ಭಾರತದ ಇತಿಹಾಸ ತಿಳಿದಿಲ್ಲ. ಚಾರಿತ್ರಿಕ ಪುರುಷರ ಬಗ್ಗೆ ಗೊತ್ತಿಲ್ಲ. ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ಸ್ವದೇಶಿ ವಸ್ತುಗಳ ಬಳಕೆ ಮಾಡುತ್ತಿದ್ದರು. ಬ್ರಿಟಿಷರ ದಾಸ್ಯದಿಂದ ದೂರ ಇಡಬೇಕೆಂಬುದು ಗಾಂಧೀಜಿ ಅವರ ಉದ್ದೇಶವಾಗಿತ್ತು. ಆದರೆ ಇಂದು ಅದಕ್ಕೆ ಮರು ವ್ಯಾಖ್ಯಾನ ಮಾಡ ಬೇಕಿದೆ. ಸ್ವದೇಶಿ ಸಂಸ್ಕೃತಿಯನ್ನು ನಿರಂತರವಾಗಿ ಕಾಪಾಡಿಕೊಂಡು ಹೋಗಬೇಕಿರುವುದು ಪ್ರತಿಯೊಬ್ಬ ಭಾರತೀಯರ ಜವಾಬ್ದಾರಿ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ, ಸಣ್ಣ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಮೂಲಕ ಸ್ವದೇಶಿ ಮೇಳಕ್ಕೆ ಉತ್ತೇಜನ ಸಿಕ್ಕಂತಾಗಿದೆ. ಸ್ವದೇಶಿ ಮೇಳವು ಸ್ವಾವಲಂಬನೆಗೆ ಒತ್ತು ನೀಡಿದೆ. ಸ್ವಾವಲಂಬನೆಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ಸ್ವದೇಶಿ ಮೇಳದ ಸಂಚಾಲಕ ಬಿ.ಎಂ.ಕುಮಾರಸ್ವಾಮಿ ಮಾತನಾಡಿ, ಬ್ರಿಟಿಷರು ಬಂಗಾಳದ ವಿಭಜನೆಗೆ ಕೈಹಾಕಿದಾಗ ಸ್ವಾತಂತ್ರ್ಯ ಹೋರಾಟ ಗಾರರು ಇಂಗ್ಲೆಂಡ್‌ನ ಉತ್ಪನ್ನಗಳನ್ನು ಬಹಿಷ್ಕರಿಸಿ ವಂಗ ಭಂಗ ಚಳುವಳಿಯ ಮೂಲಕ ತಕ್ಕ ತಿರುಗೇಟು ನೀಡಿ ಸ್ವದೇಶಿ ಉತ್ಪನ್ನಗಳ ಬಗ್ಗೆ ಜಗೃತಿ ಮೂಡಿಸಿದರು ಎಂದರು.
ಸಂಸದ ಬಿ.ವೈ. ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್, ಸ್ವದೇಶಿ ಮೇಳದ ಆಯೋಜಕರಾದ ಡಾ.ಧನಂಜಯ ಸರ್ಜಿ, ಪ್ರಮುಖ ರಾದ ಎಸ್. ದತ್ತಾತ್ರಿ ಇನ್ನಿತರರಿದ್ದರು.