ಕೆಂಡದಾರ್ಚನೆ – ದೂಳಾರ್ಚನೆ: ಭಕ್ತಿ ಸಾಗರದಲ್ಲಿ ಮಿಂದೆದ್ದ ಭಕ್ತರು…

ನ್ಯಾಮತಿ: ನ್ಯಾಮತಿ ತಾಲೂಕಿನ ಚೀಲೂರು ಗ್ರಾಮದ ಶ್ರೀ ವೀರಭದ್ರೇಶ್ವರಸ್ವಾಮಿ ಮತ್ತು ಶ್ರೀ ರಂಗನಾಥಸ್ವಾಮಿ ದೇವರುಗಳ ಕೆಂಡದಾರ್ಚನೆ, ದೂಳಾರ್ಚನೆ ದೇಗುಲದ ಆವರಣದಲ್ಲಿ ಸಾವಿರಾರು ಭಕ್ತ ಸಮೂಹದ ನಡುವೆ ಸಂಭ್ರಮದಿಂದ ನಡೆಯಿತು.
ಸಕಲವಾದ್ಯ ಮೇಳದೊಂದಿಗೆ ಶ್ರೀವೀರಭದ್ರೇಶ್ವರಸ್ವಾಮಿಯ ಉತ್ಸವಮೂರ್ತಿ ಪಲಕ್ಕಿಯಲ್ಲಿ ಹೊತ್ತು ಪುರುವಂತಿಕೆಯವರು ವೀರಗಾಸೆ ಒಡಪುಗಳನ್ನು ಹಾಡುತ್ತ ರಾಜಬೀದಿಯ ಪ್ರಾಂಗಣಕ್ಕೆ ದೇವತಾ ಉತ್ಸವ ಬಂದಿತು.
ಗ್ರಾಮದ ಮುಖಂಡರು ಅರ್ಚಕರು ಅಗ್ನಿಕುಂಡವನ್ನು ಸಿದ್ದಗೊಳಿಸಿ ಸಾಂಪ್ರಧಾಯಿಕ ಪೂಜವಿಗಳು ಮತ್ತು ನೈವೇದ್ಯೆ ಯನ್ನು ಸಮರ್ಪಣೆ ಮಾಡಿದರು. ಸ್ವಾಮೀಜಿ ಕೆಂಡದ ರಾಶಿಗೆ ಆಶೀರ್ವಾದ ಮಾಡಿದ ನಂತರ ಮಠದಮನೆಯ ಬೇಡಜಂಗಮ ವಟು, ಶ್ರೀವೀರಭದ್ರಸ್ವಾಮಿ ದೇವರು ಮತ್ತು ಪಲಕ್ಕಿ ಹೊತ್ತವರು ಭಗವಂತನ ನಾಮಸ್ಮರಣೆ ಮಾಡುತ್ತ ಕೆಂಡದ ರಾಶಿಯನ್ನು ಹಾಯ್ದರು.
ಶ್ರೀ ವೀರಭದ್ರೇಶ್ವರಸ್ವಾಮಿ ಮತ್ತು ಶ್ರೀ ರಂಗನಾಥಸ್ವಾಮಿ ದೇವರುಗಳ ಕೆಂಡದಾರ್ಚನೆ, ದೂಳಾರ್ಚನೆ ಅಂಗವಾಗಿ ಶುಕ್ರವಾರದಿಂದ ಆರಂಭಗೊಂಡಿದ್ದ ಧಾರ್ಮಿಕ ಕಾರ್ಯಕ್ರಮಗಳು ಮಂಗಳವಾರ ಬೆಳಗಿನಜಾವ, ಶ್ರೀವೀರಭದ್ರೇಶ್ವರಸ್ವಾಮಿಯ ಶ್ರೀ ರಂಗನಾಥಸ್ವಾಮಿ ಶಿಲಾಮೂರ್ತಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ ಮಹಾಮಂಗಳಾರತಿಯ ಕಾರ್ಯಕ್ರಮಗಳು ಸುಭಾಷಶಾಸ್ತ್ರೀ ಪುರೋಹಿತ್ಯದಲ್ಲಿ ಜರುಗಿದವು.
ಬಾಯಿಬೀಗ ಹರಕೆ ಹೊತ್ತ ಮಹಿಳೆಯರು-ಪುರುಷರು ಶ್ರz ಭಕ್ತಿಯ ಪೂಜೆಸಲ್ಲಿಸಿದರು. ಬಾಯಿಬೀಗ ಹಾಕಿಕೊಂಡವರಿಗೆ ಅವರ ಬಂದುಗಳು ವಸ್ತ್ರ ಮತ್ತು ಉಡಿಯನ್ನು ತುಂಬಿದರು. ಅರ್ಚಕರು ದೇವಾಯಲದ ಭಸ್ಮವನ್ನು ಲೇಪಿಸಿ ಬಾಯಿಬೀಗ ವಿಸರ್ಜನೆ ಮಾಡಿದರು. ಕೆಂಡದಾರ್ಚನೆ ಸಮಯದಲ್ಲಿ ಹರಿಕೆ ತೀರಿಸುವ ಭಕ್ತರು, ಸುತ್ತ-ಮುತ್ತಲ ಗ್ರಾಮಗಳಿಂದ ಬಂದಿದ್ದ ಪುರುಷರು -ಮಹಿಳೆಯರು ಮಕ್ಕಳನ್ನು ಹೊತ್ತು ಕೆಂಡವನ್ನು ಹಾಯ್ದರು. ಕೆಂಡಾರ್ಚನೆಗೆ ಮಂಗಲವಾದ್ಯ, ವೀರಗಾಸೆ, ನಂದಿಕೋಲು ಕುಣಿತದಂತ ಸಾಂಸ್ಕೃತಿಕ ವಾದ್ಯ ಮೇಳಗಳು ಮೆರಗು ನೀಡಿದವು. ದೇವಾಲಯ ಸಮಿತಿಯ ಪದಾಧಿಕಾರಿಗಳು ಸೇರಿದಂತೆ ಸಾವಿರಾರು ಭಕ್ತರು ಭಾಗವಹಿಸಿದ್ದರು.