ಜು.೧: ಹರಿಹರದ ಶ್ರೀ ಸದ್ಗುರು ಸಮರ್ಥ ನಾರಾಯಣ ಮಹಾರಾಜರ ೩೩ನೇ ವರ್ಷದ ಆರಾಧನಾ ಮಹೋತ್ಸವ ….

ಜೈ ಮಹಾರುದ್ರ ದಾಸ ಜನೋದ್ಧಾರ ಬ್ರಹ್ಮಾಂಡ ಮಠ | ಉದಾಸಪಂಥ ಅಲಕ್ಷಮುದ್ರ ಸಿದ್ಧಾಸನ ಷಡ್ದರ್ಶನ | ನಿಮಿತ್ತ ನಿಗುಮಾನಿ ಪಂಥ ಚಾಲಿಲೇ | ಆತ್ಮನಿವೇದನ ವಿಮಲ ಬ್ರಹ್ಮ ಶ್ರೀ ಸದ್ಗುರು ಸಮರ್ಥ ನಾರಾಯಣ ಮಹಾರಾಜ್ ಕೀ ಜೈ ||
ದಿನಾಂಕ : ೨೭-೦೬-೨೦೨೩ ರ ಮಂಗಳವಾರದಿಂದ ೦೩-೦೭-೨೦೨೩ ರ ಸೋಮವಾರದವರೆಗೆ ಹರಿಹರದ ಶ್ರೀ ಸದ್ಗುರು ಸಮರ್ಥ ನಾರಾಯಣ ಮಹಾರಾಜರ ೩೩ ನೇ ವರ್ಷದ ಆರಾಧನಾ ಮಹೋತ್ಸವ ನಡೆಯಲಿದೆ. ಆರಾಧನಾ ಮಹೋತ್ಸವದ ಅಂಗವಾಗಿ ಪ್ರತಿದಿನ ವಿಶೇಷ ಹೋಮ -ಹವನ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಆಶ್ರಮದ ಹಿನ್ನೆಲೆ :
ದಾವಣಗೆರೆ ಜಿ, ಹರಿಹರದ ಶ್ರೀ ಸಮರ್ಥ ನಾರಾಯಣಾಶ್ರಮದ ರುವಾರಿಗಳಾದ, ಶ್ರೀ ಸಮರ್ಥ ಸಂಪ್ರದಾಯದ ೧೧ ನೇ ಪೀಠಾಧಿಪತಿಗಳಾದ ಶ್ರೀ ಸದ್ಗುರು ಸಮರ್ಥ ನಾರಾಯಣ ಮಹಾರಾಜರು ಹರಿಹರದಲ್ಲಿ ಹಾಗೂ ಹೈದ್ರಾಬಾದ್‌ನಲ್ಲಿ ಶ್ರೀ ನಾರಾಯಣಾಶ್ರಮವನ್ನು ಹಿಂದೂ ಧರ್ಮದ ಪ್ರಚಾರಕ್ಕಾಗಿ ಸ್ಥಾಪಿಸಿದರು.
ಮೂಲತಃ ಬೆಂಗಳೂರು ಸಮೀಪದ ದೇವಗ್ರಾಮದ ದೇವನಹಳ್ಳಿಯಲ್ಲಿ ಶಾನುಭೋಗರ ಕುಟುಂಬದ ಸುಬ್ಬಾಶಾಸ್ತ್ರಿ ಮತ್ತು ಲಕ್ಷಮ್ಮನವರ ಐದು ಜನ ಮಕ್ಕಳ ಪೈಕಿ ನಾಲ್ಕನೆಯ ಪುತ್ರರಾದ ಅಹೋಬಲ ಶಾಸ್ತ್ರಿ (ಶ್ರೀ ಸದ್ಗುರು ಸಮರ್ಥ ನಾರಾಯಣ ಮಹಾರಾಜ್) ಗಳು ಶ್ರೀ ಗುರುವಿನ ಅನುಗ್ರಹಕ್ಕಾಗಿ ಅನೇಕ ವರ್ಷಗಳ ಕಾಲ ತಪಸ್ಸನ್ನು ಆಚರಿಸಿದರು. ಕೊನೆಗೆ ಮಹಾರಾಷ್ಟ್ರ ರಾಜ್ಯದ ಗೋಂದಾವಲಿಯ ಶ್ರೀ ಬ್ರಹ್ಮಚೈತನ್ಯ ಮಹಾರಾಜರ ಹಾಗೂ ಶ್ರೀ ಬ್ರಹ್ಮಾನಂದ ಮಹಾರಾಜರ ಕೃಪೆಗೆ ಪಾತ್ರರಾದ ಶ್ರೀ ಸದ್ಗುರು ಸಮರ್ಥ ನಾರಾಯಣ ಮಹಾರಾಜರು ಶ್ರೀರಾಮನ ಪರಮಭಕ್ತರಾಗಿದ್ದರು.
ಶ್ರೀ ನಾರಾಯಣಾಶ್ರಮದ ಹಿನ್ನೆಲೆ : ಧರ್ಮಪ್ರಚಾರದ ಅಂಗವಾಗಿ ಊರೂರು ತಿರುಗುತ್ತಿದ್ದ ಶ್ರೀ ಮಹಾರಾಜರು ಒಂದು ದಿನ ಹರಿಹರದ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಸುಮಾರು ಒಂದು ತಿಂಗಳು ಕಾಲ ವಾಸ್ತವ್ಯ ಮಾಡಿ, ನಿತ್ಯ ಉಪನ್ಯಾಸ ನೀಡುತ್ತಿದ್ದರು. ಶ್ರೀ ಮಹಾರಾಜರು ನೀಡುತ್ತಿದ್ದ ಉಪನ್ಯಾಸಕ್ಕೆ ಸುತ್ತಮುತ್ತಲಿನ ಭಕ್ತಾದಿಗಳು ಬಂದು ಆಗಮಿಸಿ, ಶ್ರೀ ಗುರುಗಳ ಕೃಪಗೆ ಪಾತ್ರರಾಗುತ್ತಿದ್ದರು ಹಾಗೂ ಹಲವಾರು ಮಂದಿ ಗುರುಗಳ ಶಿಷ್ಯರಾದರು. ಉಪನ್ಯಾಸದ ಕೊನೆಯ ದಿನ ಶ್ರೀ ಮಹಾರಾಜರು ಉಪನ್ಯಾಸ ಮಾಡುತ್ತಿದ್ದ ಸಂದರ್ಭದಲ್ಲಿ ಹಲವು ಮಂದಿ ಶಿಷ್ಯಂದಿರು ತಾವು ಹರಿಹರದ ನೆಲೆಸಬೇಕು. ಇದಕ್ಕಾಗಿ ನಗರದ ಕಿಲೋಸ್ಕರ್ ಫ್ಯಾಕ್ಟರಿ ಹಿಂಭಾಗದಲ್ಲಿರುವ ತುಂಗಭಧ್ರಾ ನದಿಯ ದಂಡೆ ಮೇಲೆ ಸುಮಾರು ಐದು ಎಕರೆ ಜಗವನ್ನು ನೀಡುತ್ತೇವೆ. ಅಲ್ಲಿ ತಾವುಗಳು ಆಶ್ರಮವನ್ನು ನಿರ್ಮಿಸಿ, ಅಲ್ಲಿಯೇ ಇರಬೇಕೆಂದು ಪ್ರಾರ್ಥಿಸಿದರು. ಇನ್ನೂ ಕುತೂಹಲದ ಸಂಗತಿಯೆಂದರೆ, ಆಶ್ರಮಕ್ಕೆ ಜಗ ನೀಡಿದವರಲ್ಲಿ ಹೆಚ್ಚಿನವರು ಮುಸ್ಲಿಂ ಭಾಂಧವರಿದ್ದರು.
ಶಿಷ್ಯರ ಒತ್ತಾಸೆಯ ಮೇರೆಗೆ ಶ್ರೀ ನಾರಾಯಣ ಮಹಾರಾಜರು ಕಿಲೋಸ್ಕರ್ ಫ್ಯಾಕ್ಟರಿ ಹಿಂಭಾಗದಲ್ಲಿ ಶ್ರೀ ನಾರಾಯಣಾ ಶ್ರಮವನ್ನು ಸ್ಥಾಪಿಸಿದರು. ಇದರೊಂದಿಗೆ, ಶ್ರೀ ಆಶ್ರಮದಲ್ಲಿ ಶ್ರೀ ಕಾಮಧೇನು, ಸ್ಫಟಿಕಲಿಂಗ, ರಾಮಾಲಯ, ಹರಿಹರೇಶ್ವರ ಮತ್ತು ಶ್ರೀ ದಾಸ ಮಾರುತಿ ವಿಗ್ರಹಗಳನ್ನು ಪ್ರತಿಷ್ಟಾಪನೆ ಮಾಡಿದರು. ನಂತರದ ದಿನಗಳಲ್ಲಿ ಹೈದ್ರಾಬಾದ್ ನಲ್ಲಿಯೂ ಸಹ ಶ್ರೀ ನಾರಾಯಣಾಶ್ರಮವನ್ನು ಸ್ಥಾಪನೆ ಮಾಡಿದರು.
ಸಾಮಾನ್ಯವಾಗಿ ನಾವು ಶ್ರೀರಾಮ, ಲಕ್ಷ್ಮಣ, ಸೀತೆ ಹಾಗೂ ಆಂಜನೇಯ ಸ್ವಾಮಿ ವಿಗ್ರಹಗಳನ್ನು ಕಾಣುತ್ತೇವೆ. ಇಲ್ಲಿಯ ವಿಶೇಷವೆಂದರೆ, ಶ್ರೀ ಆಶ್ರಮದಲ್ಲಿ ಶ್ರೀರಾಮ, ಲಕ್ಷ್ಮಣ, ಸೀತೆ ಹಾಗೂ ಆಂಜನೇಯ ಸ್ವಾಮಿಯ ಬದಲಾಗಿ ಸಮರ್ಥ ರಾಮದಾಸರ ವಿಗ್ರಹವನ್ನು ಪ್ರತಿಷ್ಟಾಪನೆಯನ್ನು ಮಹಾರಾಜರು ಮಾಡಿzರೆ. ಆಶ್ರಮದ ಪ್ರಕಾರದಲ್ಲಿ ಶ್ರೀ ದಾಸ ಮಾರುತಿ, ಪ್ರತಾಪ ಮಾರುತಿ, ಕಾಮಧೇನುವಿನ ವಿಗ್ರಹಗಳನ್ನು ಪ್ರತಿಷ್ಟಾಪಿಸಲಾಗಿದೆ.
ಶ್ರೀ ನಾರಾಯಣಾಶ್ರಮದಲ್ಲಿ ಗುರುಗಳು ಅವರು ನಡೆಸಿದಷ್ಟು ಸಪ್ತಾಹಗಳನ್ನು ಬೇರೆ ಯಾರೂ ನಡೆಸಿಲ್ಲವೆಂದು ಆಶ್ರಮದ ಭಕ್ತಾದಿಗಳು ಹೇಳುತ್ತಾರೆ. ಕೇವಲ ಸಪ್ತಾಹಗಳಲ್ಲದೇ ಬಗೆಬಗೆಯ ಯಜ್ಞ-ಯಾಗಾದಿಗಳು, ಹರಿಹರ, ಹೈದ್ರಾಬಾದ್ ಇವುಗಳಲ್ಲಿಯ ದೇವರುಗಳ ಪ್ರತಿಷ್ಟಾಪನೆಯ ಕಾಲದಲ್ಲಿಯೂ ಸಹ ಇಪ್ಪತ್ತೊಂದು ದಿನ, ನಲವತ್ತೆಂಟು ದಿನಗಳ ಅಖಂಡ ಕಾರ್ಯಕ್ರಮಗಳನ್ನು ಶ್ರೀ ಮಹಾರಾಜರು ನಡೆಸಿzರೆ. ಇಲ್ಲಿಯವರೆಗೆ ಒಂದು ಮೂಲದ ಪ್ರಕಾರ, ಸುಮಾರು ಒಂದು ನೂರ ಎಂಟು ಸಪ್ತಾಹಗಳನ್ನು ಶ್ರೀ ನಾರಾಯಣ ಮಹಾರಾಜರು ನಡೆಸಿzರೆ. ಕ್ರಿ.ಶ. ೧೯೨೨ ರಿಂದ ಕರ್ನಾಟಕ, ಹೈದ್ರಾಬಾದ್ ಸೇರಿದಂತೆ ಹಲವೆಡೆ ಸಪ್ತಾಹಗಳನ್ನು ನಡೆಸಿzರೆ.
ಶ್ರೀ ನಾರಾಯಣ ಮಹಾರಾಜರು ತಮ್ಮ ಶಿಷ್ಯರಿಗೆ ಒದಗಿ ಬಂದ ಗಂಡಾಂತರವನ್ನು ದೂರ ಮಾಡಿ, ಅವರ ಜೀವನಕ್ಕೊಂದು ದಾರಿ ತೋರಿಸಿದ ಮಹಾನುಭಾವರು.
ಇದಕ್ಕೊಂದು ಉದಾಹರಣೆಯೆಂದರೆ, ಶ್ರೀ ಮಹಾರಾಜರ ಶಿಷ್ಯ ಮೂಲತಃ ಶಿವಮೊಗ್ಗ ಜಿ ನವುಲೆಯವರಾದ ಹಾಗೂ ಶಾಲಾ ಶಿಕ್ಷಕರಾದ ಹೆಚ್. ಚೈತನ್ಯರವರು ತಮ್ಮ ಕುಟುಂಬ ಸಮೇತರಾಗಿ ಬದರಿ ಯಾತ್ರೆಯನ್ನು ಮಾಡಬೇಕೆಂಬ ಅಭಿಲಾಷೆಯಿಂದ ಒಂದು ಬಸ್ಸನ್ನು ಗೊತ್ತುಮಾಡಿಕೊಂಡು ಆಸಕ್ತ ಭಕ್ತರೊಂದಿಗೆ ಹೊರಟರು. ಆಗ ಶ್ರೀ ಸದ್ಗುರು ಸಮರ್ಥ ನಾರಾಯಣ ಮಹಾರಾಜರು ಹೈದ್ರಾಬಾದ್‌ನ ಆಶ್ರಮದಲ್ಲಿ ಇದ್ದುದರಿಂದ ಹೈದ್ರಾಬಾದ್‌ಗೆ ಮೊದಲ ಭೇಟಿಯಾಯಿತು. ಹೈದ್ರಾಬಾದ್ ತಲುಪುವ ವೇಳೆಗೆ ಚೈತನ್ಯರವರ ಪತ್ನಿಗೆ ವಿಪರೀತ ಚಳಿ, ಜ್ವರ ಪ್ರಾರಂಭವಾಗಿ ಆರೋಗ್ಯವು ಸಂಪೂರ್ಣ ಹದಗೆಟ್ಟು, ಮುಂದೆ ಪ್ರಯಾಣ ಬೆಳೆಸುವುದು ಕಷ್ಟವೆಂದು ತೋರಿಬಂತು.
ತಮ್ಮ ಬದರಿ, ಕೇದಾರ ಯಾತ್ರೆಯ ವಿವಗಳನ್ನು ತಿಳಿಸಿದ ಚೈತನ್ಯರವರು ತಮ್ಮ ಪತ್ನಿಯ ಅನಾರೋಗ್ಯದ ಬಗ್ಗೆ ವಿವರಿಸಿದಾಗ, ಶ್ರೀ ಸದ್ಗುರು ಸಮರ್ಥ ನಾರಾಯಣ ಮಹಾರಾಜರು ಕೇದಾರೇಶ್ವರ ಈ ಆಶ್ರಮದ ಇzನೆ. ನೀನು ಮತ್ತು ನಿನ್ನ ಕುಟುಂಬದವರು ಯಾತ್ರೆಗೆ ಹೋಗುವುದು ಬೇಡ. ಉಳಿದವರು ಹೋಗಿ ಬರಲಿ. ನೀನು ನಿನ್ನ ಪತ್ನಿ ಇಬ್ಬರೂ ನಲವತ್ತೆಂಟು ದಿನಗಳ ಕಾಲ ಆಶ್ರಮದಲ್ಲಿರುವ ಸ್ಫಟಿಕ ಲಿಂಗಕ್ಕೆ ನಿತ್ಯ ತಣ್ಣೀರಿನಲ್ಲಿ ಸ್ನಾನವನ್ನು ಮಾಡಿ ಭಸ್ಮದಿಂದ ಹಾಗೂ ಮಂಜುಗೆಡ್ಡೆಯ ನೀರಿನಿಂದ ಈಶ್ವರನಿಗೆ ಅಭಿಷೇಕವನ್ನು ಮಾಡಿ ಎಂದು ಆeಪಿಸಿದರು.
ಶ್ರೀ ಸದ್ಗುರು ಸಮರ್ಥ ನಾರಾಯಣ ಮಹಾರಾಜರ ಆeಯಂತೆ ಅನುಸಾರ ಉಳಿದವರು ಯಾತ್ರೆಗೆ ಹೊರಟರು. ಚೈತನ್ಯ ಮತ್ತು ಅವರ ಕುಟುಂಬದವರು ಆಶ್ರಮದ ಉಳಿದರು. ನಲವತ್ತೆಂಟು ದಿನಗಳ ಕಾಲ ಅವರು ಸದ್ಗುರುವಿನ ಹಾಗೂ ಈಶ್ವರನ ಸೇವೆಯನ್ನು ಅನಾರೋಗ್ಯದಿಂದ ಬಳಲುತ್ತಿರುವಾಗಲೇ ಮಾಡುತ್ತಾ ನಿತ್ಯವೂ ಕೇವಲ ಮಂಜುಗೆಡ್ಡೆ ಭಸ್ಮಮಿಶ್ರಿತ ತೀರ್ಥವನ್ನು ಸೇವಿಸುತ್ತಿದ್ದರು. ಕೊನೆಯ ದಿನ ಶ್ರೀ ಸದ್ಗುರು ಸಮರ್ಥ ನಾರಾಯಣ ಮಹಾರಾಜರು ಅತ್ಯಂತ ವಿಜೃಂಭಣೆಯಿಂದ ಈಶ್ವರನಿಗೆ ಅಭಿಷೇಕವನ್ನು ಏರ್ಪಡಿಸಿ, ಈ ದಂಪತಿಗಳು ತಮಗೆ ಪಾದಪೂಜೆಯನ್ನು ಮಾಡಬೇಕೆಂದು ತಿಳಿಸಿ, ಅದಕ್ಕೆ ಬೇಕಾದ ಸಾಮಗ್ರಿಗಳನ್ನು ತಾವೇ ಅಣಿಗೊಳಿಸಿ, ಪಾದಪೂಜೆಯ ನಂತರ ಆ ದಂಪತಿಗಳನ್ನು ಆಶೀರ್ವದಿಸಿ, ಅವರನ್ನು ಆನಂದದಲ್ಲಿ ತಲ್ಲೀನರನ್ನಾಗಿ ಮಾಡಿ ಮಂಜಿನಿಂದ ಮುಚ್ಚಿಹೋಗಿದ್ದ ಕೇದಾರೇಶ್ವರನ ನಿಜವಾದ ದರ್ಶನವನ್ನು ಅವರಿಗೆ ಅಲ್ಲಿಂದಲೇ ಕೊಡಿಸಿದರು.
ನಂತರ, ಚೈತನ್ಯರವರನ್ನು ಕರೆದು ನಿನ್ನ ಪತ್ನಿಯು ಅಕಾಲ ಮರಣಕ್ಕೆ ಈಡಾಗುವ ಕಾಲವು ಇತ್ತು. ಆದ್ದರಿಂದ ಅವರನ್ನು ಯಾತ್ರೆಗೆ ಕಳಿಸದೇ ಶ್ರೀ ಆಶ್ರಮದಲ್ಲಿ ಇರಿಸಿಕೊಂಡು ತಾವು ಆ ಮರಣದ ಗಂಡಾಂತರದಿಂದ ಅವರನ್ನು ಪಾರು ಮಾಡಿರುವುದಾಗಿಯೂ, ಇನ್ನು ಮುಂದೆ ಯಾವ ರೀತಿಯ ಭಯವಿಲ್ಲವೆಂದು ತಿಳಿಸಿದರು. ಸದ್ಗುರುವಿನ ಆಪ್ಯಾಯತೆ, ಕರುಣೆ ಮತ್ತು ಪ್ರೀತಿಯನ್ನು ಕಂಡು, ಚೈತನ್ಯರವರ ಕಣ್ಣುಗಳು ಕಂಬನಿದುಂಬಿ ಗುರುವಿನ ಋಣವನ್ನು ಈ ಜನ್ಮದಲ್ಲಿ ತೀರಿಸುವುದು ಸಾಧ್ಯವಿಲ್ಲ. ಏನಿದ್ದರೂ ಅವರ ಕರುಣೆ ಸದಾ ತಮಗೆ ದೊರೆತಿರುವುದೇ ನಮ್ಮ ಜನ್ಮಜನ್ಮಾಂತರದ ಪುಣ್ಯವೆಂದು ಭಾವಿಸಿ, ಸದ್ಗುರುವಿಗೆ ನಮಸ್ಕರಿಸಿ, ನಂತರ ಅವರಿಂದ ಬೀಳ್ಕೊಟ್ಟು ತಮ್ಮ ಊರಿಗೆ ಮರಳಿದರು. ಇಲ್ಲಿ ಕಾಣಿಸಿರುವುದು ಕೇವಲ ಒಂದು ಪ್ರಕರಣ ಮಾತ್ರ. ಇಂತಹ ನೂರಾರು, ಸಾವಿರಾರು ಪ್ರಕರಣಗಳನ್ನು ಶ್ರೀ ಮಹಾರಾಜರು ಬಗೆಹರಿಸಿzರೆ.
ಅಶ್ವಮೇಧ ಯಾಗ : ತ್ರೇತಾಯುಗದಲ್ಲಿ ಶ್ರೀರಾಮಚಂದ್ರನು ಅಶ್ವಮೇಧ ಯಾಗವನ್ನು ಮಾಡಿದ ನಂತರ, ಕಲಿಯುಗದಲ್ಲಿ ಯಾರೂ ಸಹ ಈ ಯಾಗವನ್ನು ಮಾಡಿರಲಿಲ್ಲ. ಈ ಕಲಿಯುಗದಲ್ಲಿ ಲೋಕಕಲ್ಯಾಣಕ್ಕಾಗಿ ೧೯೮೬ ರಲ್ಲಿ ಅಶ್ವಮೇಧ ಯಾಗವನ್ನು ಹರಿಹರದ ಶ್ರೀ ನಾರಾಯಣಾಶ್ರಮದಲ್ಲಿ ನಲವತ್ತೆಂಟು ದಿನಗಳ ಕಾಲ ನಿರಂತರವಾಗಿ ನಡೆಸಿzರೆ. ಇದಕ್ಕೆ ಒಂದು ಮುಖ್ಯ ಹೋಮಕುಂಡ ಹಾಗೂ ಸುಮಾರು ಒಂದುನೂರ ಎಂಟು ಹೋಮಕುಂಡಗಳಲ್ಲಿ ನಾಲ್ಕುನೂರ ಐವತ್ತು ಜನ ಋತ್ವಿಜರು ಹೋಮಗಳಲ್ಲಿ ಭಾಗವಹಿಸಿzರೆ. ನಿತ್ಯ ಸುಮಾರು ಇಪ್ಪತೈದು ಸಾವಿರ ಭಕ್ತರು ಶ್ರೀರಾಮನ ಮಹಾಪ್ರಸಾದವನ್ನು ಸ್ವೀಕರಿಸಿ ರಾಮನ ಕೃಪೆಗೆ ಪಾತ್ರರಾಗಿzರೆ.
ಇದಕ್ಕೂ ಮೊದಲು ಶ್ರೀ ಮಹಾರಾಜರು ನಿಕುಂಬರಾ ಯಾಗ, ತೇರಾಕೋಟಿ ಶ್ರೀ ರಾಮನಾಮದ ಮಹಾಜಪ ಯಜ್ಞ, ಶ್ರೀ ರಾಜಸೂಯ ಯಾಗ, ಶ್ರೀ ಗಜಲಕ್ಷ್ಮೀ ಮಹಾಯಜ್ಞ, ಶ್ರೀರಾಮ ಸತ್ರ ಮಹಾಯಾಗ, ಹನುಮಾನ್ ಚಾಲಿಸಾ ಮಹಾಯಜ್ಞ, ಶತಕೋಟಿ ರಾಮನಾಮ ಜಪಯಜ್ಞಗಳನ್ನು ಯಶಸ್ವಿಯಾಗಿ ನಡೆಸಿzರೆ.
ಸರಳರಲ್ಲಿ ಸರಳ ಶ್ರೀ ನಾರಾಯಣ ಮಹಾರಾಜರು : ಒಮ್ಮೆ ಹರಿಹರದ ಶ್ರೀ ನಾರಾಯಣಾಶ್ರಮದಲ್ಲಿ ಒಂದು ಧಾರ್ಮಿಕ ಕಾರ್ಯಕ್ರಮದ ನಂತರ, ಭೋಜನದ ಸಮಯದಲ್ಲಿ ಅಡುಗೆಯವರು ಮಹಾರಾಜರಿಗೆ ಮಾತ್ರ ಕೆನೆ ಮೊಸರು ನೀಡಿ, ಉಳಿದ ಶಿಷ್ಯರಿಗೆ ನೀರು ಮಜ್ಜಿಗೆಯನ್ನು ಹಾಕಿದರು. ಇದನ್ನು ನೋಡಿ ಕೆಂಡಾಮಂಡಲರಾದ ಮಹಾರಾಜರು, ಅಡುಗೆಯವನಿಗೆ ಬೆವರಿಳಿಸಿ, ಶ್ರೀರಾಮನ ಸನ್ನಿಧಿಯಲ್ಲಿ ಪಂಕ್ತಿಬೇಧ ಮಾಡುತ್ತೀಯಾ? ಎಂದು ತಮ್ಮ ಎಲೆಯ ಕೆನೆಮೊಸರಿಗೆ ಉಳಿದ ಶಿಷ್ಯರಿಗೆ ನೀಡಿದ ನೀರು ಮಜ್ಜಿಗೆಗಿಂತ ಹೆಚ್ಚಾಗಿ ನೀರನ್ನು ಹಾಕಿಕೊಂಡು ಭೋಜನ ಮಾಡಿದರು. ನಂತರ, ಆ ಅಡುಗೆಯವನು ಮಹಾರಾಜರಿಗೆ ಶಿರಸಾಷ್ಟಾಂಗ ನಮಸ್ಕಾರ ಮಾಡಿ, ತಪ್ಪಾಯಿತೆಂದು ಹೇಳಿದನು. ಇದು ಶ್ರೀ ಮಹಾರಾಜರು ತಮ್ಮ ಶಿಷ್ಯರೊಂದಿಗೆ ಇದ್ದ ಸರಳತೆಯನ್ನು ತೋರಿಸುತ್ತದೆ.
ಪಾವಗಡದ ಶ್ರೀ ಶನೈಶ್ಚರ ಸ್ವಾಮಿ ದೇವಸ್ಥಾನದ ಪ್ರತಿಷ್ಟಾಪನೆ : ತುಮಕೂರು ಜಿಯ ಪಾವಗಡದ ಶ್ರೀ ಶನೈಶ್ಚರ ಸ್ವಾಮಿ ದೇವಸ್ಥಾನದ ವಿಗ್ರಹ ಪ್ರತಿಷ್ಟಾಪನೆಯನ್ನು ಶ್ರೀ ಮಹಾರಾಜರ ಮಾರ್ಗದರ್ಶನದಲ್ಲಿ ಮಾಡಲಾಗಿದೆ.
ಶಿವಮೊಗ್ಗದ ನವುಲೆಯಲ್ಲಿ ಶ್ರೀ ಶನೈಶ್ಚರ ಸ್ವಾಮಿ ದೇವಸ್ಥಾನದ ಪ್ರತಿಷ್ಟಾಪನೆ : ಶಿವಮೊಗ್ಗ ನಗರದ ನವುಲೆಯಲ್ಲಿ ಶ್ರೀ ಚೈತನ್ಯ ಮತ್ತು ಅವರ ತಂಡದವರು ಕಳೆದ ನಲವತ್ತೈದು ವರ್ಷಗಳಿಂದ ಶ್ರೀ ಶನೈಶ್ಚರ ಸ್ವಾಮಿ ಮಹಿಮೆಯನ್ನು ಕಥಾರೂದಲ್ಲಿ ಆಸಕ್ತ ಭಕ್ತರ ಮನೆಗಳಲ್ಲಿ ಪ್ರಸ್ತುತಪಡಿಸುತ್ತಿದ್ದರು. ಶ್ರೀ ಮಹಾರಾಜರು ಶ್ರೀ ಸ್ವಾಮಿ ಕಥಾ ಪ್ರವಚವನ್ನು ಹರಿಹರದ ಶ್ರೀ ರಾಮನ ಸನ್ನಿಧಿಯಲ್ಲಿ ಮಾಡಬೇಕೆಂದು ಆeಪಿಸಿದರು. ಅದರಂತೆ, ಒಂದು ದಿನ ಚೈತನ್ಯ ಮತ್ತು ತಂಡದವರು ಶ್ರೀ ಶನೈಶ್ಚರ ಸ್ವಾಮಿಯ ಕಥಾ ಪ್ರವಚನವನ್ನು ಪ್ರಸ್ತುತ ಪಡಿಸಿದರು. ರಾತ್ರಿ ಹತ್ತು ಗಂಟೆಯಿಂದ ಪ್ರಾರಂಭವಾದ ಕಥಾ ಪ್ರವಚನ ಬೆಳಗಿನ ಆರು ಗಂಟೆಯವರೆಗೂ ನಡೆದಿತ್ತು. ರಾತ್ರಿಯಿಡೀ ಶ್ರೀ ಮಹಾರಾಜರು ಪದ್ಮಸನಾರೂಢ ರಾಗಿ ಶ್ರೀ ಶನೈಶ್ಚರ ಸ್ವಾಮಿಯ ಕಥಾಪ್ರವಚನವನ್ನು ಆಲಿಸಿದರು. ನಂತರ, ಈ ತಂಡಕ್ಕೆ ಶಾಲು ಹೊದಿಸಿ, ಆಶೀರ್ವದಿಸಿ ಮಾತನಾಡಿ, ನೀವುಗಳು ಇಷ್ಟು ವರ್ಷದಿಂದ ಈ ಮಹಾತ್ಮನ ಪ್ರವಚನವನ್ನು ನೀಡುತ್ತಾ ಬಂದಿದ್ದೀರಿ. ಈಗ ಶಿವಮೊಗ್ಗದ ನವುಲೆಯಲ್ಲಿ ಶ್ರೀ ಶನೈಶ್ಚರನ ವಿಗ್ರಹ ಪ್ರತಿಷ್ಟೆ ಮಾಡಿ, ದೇವಸ್ಥಾನವನ್ನು ನಿರ್ಮಾಣ ಮಾಡಿ ನಿತ್ಯ ಪೂಜೆ ಮಾಡಬೇಕೆಂದು ಆe ಮಾಡಿದರು. ಕಲಿಯುಗದಲ್ಲಿ ಅತ್ಯಂತ ಶಕ್ತಿಶಾಲಿಯಾದ ಶ್ರೀ ಶನೈಶ್ಚರನಿಗೆ ಇಂದು ಸಂಕಟ ವಿಮೋಚನ ಶ್ರೀ ಶನೈಶ್ಚರ ಸ್ವಾಮಿ ಎಂದು ನಾಮಕರಣ ಮಾಡುತ್ತಿದ್ದೇನೆ ಎಂದು ನುಡಿದರು. (ಇದರ ಸಂಪೂರ್ಣ ವಿವರಣೆಯನ್ನು ಸಂಕಟ ವಿಮೋಚನ ಶ್ರೀ ಶನೈಶ್ಚರ ಸ್ವಾಮಿ ದೇವಸ್ಥಾನದ ರಜತ ಮಹೋತ್ಸವದ ಅಂಗವಾಗಿ ಹೊರತಂದಿರುವ ವಿಶ್ವಚೇತನ ಸ್ಮರಣಸಂಚಿಕೆಯಲ್ಲಿ ಉಖಿಸಲಾಗಿದೆ.)
ಶ್ರೀ ಮಹಾರಾಜರ ಸಂಸಾರ : ಶ್ರೀ ಮಹಾರಾಜರು ಸಂಸಾರಸ್ಥರಾಗಿದ್ದು, ಅವರಿಗೆ ಮಾತಾಜಿ ಶ್ರೀಮತಿ ಪದ್ಮಾವತಮ್ಮನವರು, ಮೀರಾಬಾಯಿ, ಲಕ್ಷ್ಮೀಬಾಯಿ ಹೆಣ್ಣುಮಕ್ಕಳಿದ್ದು, ಆ ಪೈಕಿ ಮೀರಾಬಾಯಿಯವರನ್ನು ಬೀದರ್ ಜಿಯ ಮಾಣಿಕ್ಯನಗರದ ಶ್ರೀ ಸಿದ್ಧರಾಜ್ ಮಾಣಿಕ್ಯ ಪ್ರಭು ಮಹಾರಾಜ್‌ರವರಿಗೆ ಹಾಗೂ ಮೀರಾಬಾಯಿಯವರನ್ನು ಹೈದ್ರಾಬಾದ್‌ನ ಶ್ರೀ ಅರವಿಂದರಾಯರಿಗೆ ವಿವಾಹ ಮಾಡಿzರೆ. ಶ್ರೀ ಮಹಾರಾಜರ ನಂತರ, ಮಾತಾಜಿ ಪದ್ಮಾವತಮ್ಮನವರು, ಅನಂತರ ಶ್ರೀ ಅರವಿಂದರಾಯರು ಹರಿಹರ ಹಾಗೂ ಹೈದ್ರಾಬಾದ್‌ನ ಆಶ್ರಮವನ್ನು ನೋಡಿಕೊಳ್ಳುತ್ತಿದ್ದರು. ಪ್ರಸ್ತುತ ಅರವಿಂದರಾಯರ ಪುತ್ರ ಶ್ರೀ ಪ್ರಭುದತ್ತ ಮಹಾರಾಜರು ನೋಡಿಕೊಳ್ಳುತ್ತಿzರೆ. ಪ್ರಭುದತ್ತರಿಗೆ ಪತ್ನಿ ಉಮಾ ಹಾಗೂ ರಘು, ನಾರಾಯಣಿ ಎಂಬ ಮಕ್ಕಳಿzರೆ.
ಶ್ರೀ ಸದ್ಗುರು ಸಮರ್ಥ ನಾರಾಯಣ ಮಹಾರಾಜರು ಶ್ರೀ ಪ್ರಮೋದೂತ ನಾಮ ಸಂವತ್ಸರದ ದಕ್ಷಿಣಾಯನ, ಆಷಾಢ ಶುದ್ಧ ತ್ರಯೋದಶಿ ದಿನಾಂಕ : ೦೫-೦೭-೧೯೯೦ರ ಗುರುವಾರ ಬೆಳಿಗ್ಗೆ ೬-೫೦ ಗಂಟೆಗೆ ತಮ್ಮ ದೇಹವನ್ನು ರಾಮಾರ್ಪಣೆ ಮಾಡಿದರು.
ಶ್ರೀ ಮಹಾರಾಜರ ಮಹಾಸಮಾಧಿ : ಶ್ರೀ ಸದ್ಗುರು ಸಮರ್ಥ ನಾರಾಯಣ ಮಹಾರಾಜರ ಮಹಾಸಮಾಧಿಯು ಶ್ರೀ ಆಶ್ರಮದ ಪ್ರಾಂಗಣದಲ್ಲಿದ್ದು, ಬಿಲ್ವ ವೃಕ್ಷದ ಕೆಳಭಾಗದಲ್ಲಿದೆ. ಸಮಾಧಿಯ ಮೇಲ್ಭಾಗದಲ್ಲಿ ನಿತ್ಯ ಪೂಜೆ ನಡೆಯುತ್ತಿದ್ದು, ಸಮಾಧಿಯ ಕೆಳಕೋಣೆಯಲ್ಲಿ ಧ್ಯಾನಮಂದಿರವಿದೆ. ಈ ಧ್ಯಾನಮಂದಿರದಲ್ಲಿ ಶ್ರೀ ನಾರಾಯಣ ಮಹಾರಾಜರ ದೊಡ್ಡ ಭಾವಚಿತ್ರವಿದೆ. ವಿಶೇಷವೆಂದರೆ, ಭಕ್ತರಿಗೆ ತಮ್ಮ ಏನೇ ಸಮಸ್ಯೆಗಳಿದ್ದರೂ ಈ ಭಾವಚಿತ್ರದ ಮೂಲಕ ನಾರಾಯಣ ಮಹಾರಾಜರು ಸೂಕ್ತ ಪರಿಹಾರ ನೀಡುತ್ತಾರೆ. ಕ್ಷೇತ್ರ ದರ್ಶನ ಅಂಕಣಕಾರ ಮುರುಳೀಧರ್ ಹೆಚ್.ಸಿ. ರವರಿಗೆ ಈ ತರಹದ ಹಲವು ರೀತಿಯಲ್ಲಿ ಅನುಭವಗಳಾಗಿವೆ. ಸಮಾಧಿಗೆ ನಿತ್ಯ ರುದ್ರಾಭಿಷೇಕ, ಅಲಂಕಾರಗಳು ನಡೆಯುತ್ತಿದೆ.
ಜುಲೈ ೧ರ ಶನಿವಾರ, ಆಷಾಢ ಶುದ್ಧ ತ್ರಯೋದಶಿ, ಬೆಳಿಗ್ಗೆ ೭-೦೦ ಗಂಟೆಗೆ ಶ್ರೀ ಸದ್ಗುರು ಸಮರ್ಥ ನಾರಾಯಣ ಮಹಾರಾಜರ ೩೩ ನೇ ಆರಾಧನಾ ಮಹೋತ್ಸವದ ಅಂಗವಾಗಿ ವಿಶೇಷ ಗುಲಾಲ್ ಸೇವೆ ಜರುಗಲಿದ್ದು, ಇದಕ್ಕೆ ಸುಮಾರು ಐದುನೂರು ಮಂದಿ ಸಾಕ್ಷೀಭೂತರಾಗುತ್ತಾರೆ. ನಂತರ, ಶ್ರೀ ಗುರುಗಳ ಮಹಾಸಮಾಧಿಗೆ ಮಹಾಪೂಜೆ, ಶ್ರೀ ರಾಮನಾಮ ಹೋಮ, ಮಹಾಮಂಗಳಾರತಿ, ತೀರ್ಥ-ಪ್ರಸಾದ ಹಾಗೂ ಮಹಾಪ್ರಸಾದ ವಿನಿಯೋಗ ನಡೆಯಲಿದೆ ಎಂದರು.
ಜುಲೈ ೨ರ ಭಾನುವಾರ, ಆಷಾಢ ಶುದ್ಧ ಚತುರ್ದಶಿ, ಯಂದು ಮಾತಾಜಿ ಶ್ರೀ ಪದ್ಮಾವತಮ್ಮನವರ ಮಹಾಸಮಾಧಿಗೆ ಮಹಾಪೂಜೆ, ಲಲಿತಾ ಸಹಸ್ರನಾಮ ಪಾರಾ ಯಣ, ಸಾಮೂಹಿಕ ಕುಂಕು ಮಾರ್ಚನೆ, ಶ್ರೀ ನವ ಚಂಡಿಕಾ ಹೋಮ, ಪೂರ್ಣಾಹುತಿ, ಕೌಮಾರಿಕಾ ಪೂಜೆ, ಶ್ರೀ ಸೀತಾರಾಮ ರಥೋತ್ಸವ, ಪಲ್ಲಕ್ಕಿ ಸೇವೆ, ಶ್ರೀ ಹರಿಹರೇಶ್ವರ ಮತ್ತು ಶ್ರೀ ಮಹಾಲಕ್ಷ್ಮಿ ಮೂಲ ದೇವಸ್ಥಾನಗಳಲ್ಲಿ ವಿಶೇಷ ಅರ್ಚನೆ, ಪ್ರಸಾದ ವಿನಿಯೋಗ ನಡೆಯಲಿದೆ ಎಂದು ಅವರು ಹೇಳಿದರು.
ಜು.೩ರ ಸೋಮವಾರ, ಆಷಾಢ ಶುದ್ಧ ಪೌರ್ಣಿಮೆ ಯಂದು, ಶ್ರೀ ಗುರುಪೌರ್ಣಿಮೆ ಅಂಗವಾಗಿ ಭಕ್ತವೃಂದದವರಿಂದ ಸಾಮೂಹಿಕ ಗುರುಪಾದುಕಾ ಪೂಜೆ, ಶ್ರೀ ರಾಮತಾರಕ ಹೋಮ ಮತ್ತು ಪೂರ್ಣಾಹುತಿ, ಶ್ರೀ ನಾರಾಯಣ ಮಹಾರಾಜರ ಮಹಾಸಮಾಧಿಗೆ ವಿಶೇಷ ಪುಷ್ಪಾರ್ಚನೆ ನಡೆಯಲಿದ್ದು, ಪ್ರತಿದಿನ ಸಂಜೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಭಕ್ತಾದಿಗಳು ಈ ಎ ಧಾರ್ಮಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಶ್ರೀ ಗುರುಗಳ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಶ್ರೀ ಪ್ರಭುದತ್ತ ಮಹಾರಾಜರು ಕೋರಿzರೆ.
ಶ್ರೀ ನಾರಾಯಣಾಶ್ರಮದ ವಿಳಾಸ : ಶ್ರೀ ಸದ್ಗುರು ಸಮರ್ಥ ನಾರಾಯಣ ಆಶ್ರಮ, ಗುತ್ತೂರು ಅಂಚೆ, ಕೆ.ಎಸ್.ಆರ್.ಟಿ.ಸಿ. ಡಿಪೋ ಬಳಿ, ಹರಿಹರ – ೫೭೭ ೬೦೧ ದೂರವಾಣಿ : ೬೩೬೩೩೦೭೮೩೧ (ಕೆ. ಹರಿಕೃಷ್ಣ), ೭೨೫೯೧೦೯೧೧೧ (ರಾಮ), ೭೭೬೦೪೫೩೪೯೧ (ಲಕ್ಷ್ಮಣ)
ದರ್ಶನದ ಸಮಯ : ಬೆಳಿಗ್ಗೆ: ೬-೦೦ ರಿಂದ ೦೧-೦೦ ಗಂಟೆಯವರೆಗೆ ಹಾಗೂ ಸಂಜೆ : ೦೪-೦೦ ರಿಂದ ೦೮-೦೦ ಗಂಟೆಯವರೆಗೆ ಆಶ್ರಮ ಭಕ್ತರಿಗೆ ತೆರೆದಿರುತ್ತದೆ.
– ಹಿಮವಂತ