ಮೌಢ್ಯ – ಜಾತಿ ವ್ಯವಸ್ಥೆ ವಿರುದ್ಧ ಧ್ವನಿ ಎತ್ತಿದ್ದ ದಾರ್ಶನಿಕರನ್ನು ಜಾತಿಗೆ ಸೀಮಿತಗೊಳಿಸುತ್ತಿರುವುದು ವಿಪರ್ಯಾಸದ ಸಂಗತಿ

ಶಿಕಾರಿಪುರ: ಮೌಢ್ಯ ಹಾಗೂ ಜಾತಿ ವ್ಯವಸ್ಥೆ ವಿರುದ್ದ ಧನಿ ಎತ್ತಿದ ದಾರ್ಶನಿಕರನ್ನು ಜಾತಿಗೆ ಸೀಮಿತಗೊಳಿಸುವುದು ಉತ್ತಮ ಬೆಳವಣಿಗೆಯಲ್ಲ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಸ್ ರಘು ತಿಳಿಸಿದರು.
ಪಟ್ಟಣದ ಸರ್ಕಾರಿ ಸ್ವತಂತ್ರ ಪಪೂ ಕಾಲೇಜಿನಲ್ಲಿ ತಾಲೂಕು ಕಸಾಪ ಹಾಗೂ ಕಾಲೇಜಿನ ಆಶ್ರಯದಲ್ಲಿ ನಡೆದ ಶರಣ ಹಂಚಿನಮನೆ ಜಯಣ್ಣ ಹಾಗೂ ಗುರುಬಸಪ್ಪ ಪಾರ್ವತಮ್ಮ ದತ್ತಿ ಹಾಗೂ ಸಂಜೀವಮ್ಮ ನಾರಾಯಣಪ್ಪ ದತ್ತಿ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು, ಜಾತಿ ವ್ಯವಸ್ಥೆ ವಿರುದ್ದ ಧ್ವನಿ ಎತ್ತುವ ಮೂಲಕ ಜನಸಾಮಾನ್ಯರನ್ನು ಜಾಗೃತಗೊಳಿಸಿದ ದಾರ್ಶನಿಕರನ್ನು ಇದೀಗ ಜಾತಿಗೆ ಸೀಮಿತ ಗೊಳಿಸಲಾಗಿದೆ ಎಂದು ವಿಷಾದಿಸಿದ ಅವರು, ಭಕ್ತ ಕನಕದಾಸ, ಬಸವಣ್ಣ ಮತ್ತಿತರ ಹಲವು ದಾರ್ಶನಿಕರು ಸಮಾಜದಲ್ಲಿ ಹಾಸುಹೊಕ್ಕಾಗಿದ್ದ ಮೌಢ್ಯ ಕಂದಾಚಾರ ಜಾತಿ ಪದ್ದತಿಯನ್ನು ಬಲವಾಗಿ ವಿರೋಧಿಸಿದ್ದರು. ಈ ದಿಸೆಯಲ್ಲಿ ೧೨ನೇ ಶತಮಾನ ದಲ್ಲಿಯೇ ಸಮಾಜದಲ್ಲಿ ಜಾಗೃತಿಯನ್ನು ಮೂಡಿಸುವಲ್ಲಿ ಸಫಲರಾಗಿದ್ದರು. ಇಂತಹ ಶ್ರೇಷ್ಟ ದಾರ್ಶನಿಕರು ಕಾಯಕದ ಮೂಲಕ ಸಮಾಜದಲ್ಲಿ ಸದಾಕಾಲ ಜೀವಂತ ವಾಗಿದ್ದಾರೆ ಎಂದು ತಿಳಿಸಿದರು.


ವಿದ್ಯಾರ್ಥಿಗಳು ಸಾಹಿತ್ಯ ಒದುವ,ಬರೆಯುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ಆ ಮೂಲಕ ಶರಣರ ಚಿಂತನೆಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಸಾಹಿತ್ಯ ಒದುವ ಬರೆಯುವ ಗೀಳಿನಿಂದ ಲೇಖಕ, ಸಾಹಿತಿ, ಕವಿಯಾಗಿ ಸಾಹಿತ್ಯ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ಸಲ್ಲಿಸುವಂತೆ ತಿಳಿಸಿದ ಅವರು ಕಸಾಪ ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿದ್ದು ನಾಡು ನುಡಿ ರಕ್ಷಣೆಗಾಗಿ ಶ್ರಮಿಸುತ್ತಿದೆ ಸಾಹಿತ್ಯಾಸಕ್ತರಿಗೆ ಸೂಕ್ತ ವೇದಿಕೆ ಕಲ್ಪಿಸಿಕೊಡಲಿದೆ ಎಂದರು.
ಬಸವಣ್ಣ ಹಾಗೂ ಅಕ್ಕಮಹಾದೇವಿ ಅವರ ಜೀವನ ಚರಿತ್ರೆ ಬಗ್ಗೆ ಬನಸಿರಿ ಲಯನ್ಸ್ ಪಪೂ ಕಾಲೇಜಿನ ಉಪನ್ಯಾಸಕ ಸಂದೀಪ್ ಉಪನ್ಯಾಸ ನೀಡಿ, ಪ್ರಥಮ ಮಹಿಳಾ ವಚನಗಾರ್ತಿ ಎಂಬ ಹೆಗ್ಗಳಿಕೆಯನ್ನು ಹೊಂದಿದ ಅಕ್ಕಮಹಾದೇವಿ ತಾಲೂಕಿನಲ್ಲಿ ಜನಿಸಿ ಇಲ್ಲಿನ ಮಣ್ಣಿನ ಶ್ರೇಷ್ಟತೆಗೆ ಸಾಕ್ಷಿಯಾಗಿದ್ದಾರೆ ಎಂದರು.


ಅನುಭವ ಮಂಟಪ ಸ್ಥಾಪನೆ ಮೂಲಕ ಮಾದರಿ ಸಂಸತ್ತು ರಚಿಸಿದ ಹಿರಿಮೆ ಬಸವಣ್ಣನವರ ದ್ದಾಗಿದ್ದು ಈ ಇಬ್ಬರೂ ಶರಣರು ವಚನ ಸಾಹಿತ್ಯದ ಮೂಲಕ ಜನತೆಯನ್ನು ಜಾಗೃತಗೊಳಿಸುವ ಜತೆಗೆ ವಚನಗಳ ಮೂಲಕ ಶಿಕ್ಷಣವನ್ನು ನೀಡಿದ್ದಾರೆ. ನುಡಿದಂತೆ ನಡೆದ ಶಿವಶರಣರ ಆದರ್ಶವನ್ನು ಪ್ರತಿಯೊಬ್ಬರೂ ಪಾಲಿಸಿದಾಗ ಸಮಸಮಾಜ ನಿರ್ಮಾಣವಾಗಲಿದೆ ಎಂದು ತಿಳಿಸಿದರು.
ಮಾನವೀಯ ಮೌಲ್ಯಗಳ ಬಗ್ಗೆ ಉಪನ್ಯಾಸ ನೀಡಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಎ.ಬಿ ಸುಧೀರ್, ಪ್ರತಿಯೊಬ್ಬರ ಬದುಕಿನಲ್ಲಿ ವಿದ್ಯಾರ್ಥಿ ಜೀವನ ಅತ್ಯಂತ ವಿಶೇಷ ಕಾಲಘಟ್ಟವಾಗಿದ್ದು ಈ ಸಂದರ್ಭದಲ್ಲಿಯೇ ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳಬೇಕು ಸಹಕಾರ ಮನೋಭಾವನೆಯ ಜತೆಗೆ ಅಸಹಾಯಕರ ಕಷ್ಟಗಳಿಗೆ ಸ್ಪಂದಿಸುವ ಗುಣದಿಂದ ಭಗವಂತನ ಕೃಪೆ ಗಳಿಸಲು ಸಾಧ್ಯ. ಅಪಘಾತ ಮತ್ತಿತರ ತುರ್ತು ಸಂದರ್ಭದಲ್ಲಿ ಮೊಬೈಲ್‌ನಲ್ಲಿ ವಿಡಿಯೋ ದಾಖಲಿಸುವುದನ್ನು ಬಿಟ್ಟು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ದೊರಕಿಸುವ ಔದಾರ್ಯವನ್ನು ಬೆಳೆಸಿಕೊಳ್ಳಬೇಕು ಎಂದರು.
ಪ್ರಾಚಾರ್ಯ ಮೋಹನ್‌ರಾವ್ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯಲ್ಲಿ ದತ್ತಿ ದಾನಿ ಎಚ್.ಜಿ ಜಯಣ್ಣ, ಉಪನ್ಯಾಸಕ ಬಂಗಾರಪ್ಪ, ಅಶೋಕ್, ಸಂತೋಷ್, ಫಾಮಿದಾ, ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.