ಯೋಗದಿಂದ ಆರೋಗ್ಯ -ಚೆಸ್‌ನಿಂದ ಏಕಾಗ್ರತೆ ವೃದ್ಧಿ

ಶಿವಮೊಗ್ಗ: ಯೋಗ ಮತ್ತು ಚೆಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಯೋಗದಿಂದ ಆರೋಗ್ಯ ವೃದ್ಧಿಯಾದರೆ, ಚದುರಂಗದಿಂದ ಬುದ್ಧಿ ಮತ್ತು ಏಕಾಗ್ರತೆ ಹೆಚ್ಚಾಗುತ್ತದೆ ಎಂದು ಅನುದಾನ ರಹಿತ ಶಾಲಾ ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷ ರಾ. ಹ. ತಿಮ್ಮೇನಹಳ್ಳಿ ಅಭಿಪ್ರಾಯಪಟ್ಟರು.
ಅವರು ಶಾಲಾ ಶಿಕ್ಷಣ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಶಿವಮೊಗ್ಗ ಹಾಗೂ ಅನುದಾನ ರಹಿತ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಶಿವಮೊಗ್ಗ ಇವರ ಆಶ್ರಯ ದಲ್ಲಿ ಗಾಡಿಕೊಪ್ಪದ ಸಾನ್ ತೋಮ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಲಾಗಿದ್ದ ಅನುದಾನ ರಹಿತ ಹಿರಿಯ ಪ್ರಾಥಮಿಕ ಶಾಲೆಗಳ ಎ, ಬಿ ಮತ್ತು ಸಿ ವಲಯಗಳ ವಲಯ ಮಟ್ಟದ ಯೋಗ ಮತ್ತು ಚೆಸ್ ಪಂದಾವಳಿಗೆ ಚಾಲನೆ ನೀಡಿ ಮಾತನಾಡಿದರು.
ಕ್ರೀಡೆಯಿಂದ ಶಿಸ್ತು ಸಂಯಮ ಬೆಳೆಯುವುದು, ಸೋಲು ಗೆಲುವು ಮುಖ್ಯವಲ್ಲ ಕ್ರೀಡಾ ಮನೋಭಾವ ದಿಂದ ಭಾಗವಹಿಸುವುದು ಮುಖ್ಯ. ಇಲ್ಲಿ ಭಾಗವಹಿಸಿದ ಮಕ್ಕಳು ಜಿ, ರಾಜ್ಯ,ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿ ದೇಶಕ್ಕೆ ಕೀರ್ತಿ ತರಲೆಂದು ಕ್ರೀಡಾ ಪಟುಗಳಿಗೆ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಚೆಸ್ ತೀರ್ಪುಗಾರರಾಗಿ ಆಗಮಿಸಿದ್ದ , ರಾಷ್ಟ್ರೀಯ ತಿರುಪುಗಾರರಾದ ವಿಲ್ಸನ್ ಮಾತನಾಡಿ, ಚದುರಂಗ ದಲ್ಲಿ ಶಿವಮೊಗ್ಗ ರಾಷ್ಟ್ರ ಮತ್ತು ಅಂತರ ರಾಷ್ಟ್ರಮಟ್ಟದಲ್ಲಿ ಅನೇಕ ಕ್ರೀಡಾಪಟುಗಳನ್ನು ಕ್ಷೇತ್ರಕ್ಕೆ ನೀಡಿದೆ ಎಂದು ಸ್ಮರಿಸಿಕೊಂಡರು. ಯೋಗಾಸನ ತೀರ್ಪುಗಾರರಾದ ಶ್ರೀಮತಿ ಸುನಿತಾ ಯೋಗಾಸನದ ನಿಯಮಗಳು ಮತ್ತು ಅದರಿಂದ ಆಗುವ ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು.