ಶಿಮುಲ್‌ಗೆ ರೂ. ೭.೨೨ ಕೋಟಿಗಳ ನಿವ್ವಳ ಲಾಭ :ಶ್ರೀಪಾದರಾವ್

ಶಿವಮೊಗ್ಗ: ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿ ಸಹಕಾರ ಹಾಲು ಒಕ್ಕೂಟದ (ಶಿಮುಲ್) ೨೦೨೨-೨೩ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಸಾಗರ ರಸ್ತೆಯ ಪೆಸಿಟ್ ಕಾಲೇಜಿನ ಪ್ರೇರಣಾ ಸಭಾಂಗಣದಲ್ಲಿ ನಡೆಯಿತು.
೨೦೨೨-೨೩ನೇ ಸಾಲಿನಲ್ಲಿ ಒಕ್ಕೂಟವು ರೂ. ೭.೨೨ ಕೋಟಿಗಳ ನಿವ್ವಳ ಲಾಭ ಗಳಿಸಿರುವುದಾಗಿ ನಿಯಮಾನುಸಾರ ಲಾಭವನ್ನು ಸದಸ್ಯ ಸಂಘಗಳಿಗೆ ಬೋನಸ್ ಮತ್ತು ಡಿವಿಡೆಂಡ್ ರೂಪದಲ್ಲಿ ವಿಲೇವಾರಿ ಮಾಡಲಾಗುವುದೆಂದು ಒಕ್ಕೂಟದ ಅಧ್ಯಕ್ಷ ಎನ್.ಹೆಚ್. ಶ್ರೀಪಾದರಾವ್ ಇವರು ತಿಳಿಸಿದರು.
ಒಕ್ಕೂಟವು ಹಮ್ಮಿಕೊಂಡಿ ರುವ ಕಾರ್ಯಚಟುವಟಿಕೆ/ಯೋಜನೆಯ ವಿವರಗಳನ್ನು ವ್ಯವಸ್ಥಾಪಕ ನಿರ್ದೇಶಕ ಎಸ್.ಜಿ. ಶೇಖರ್ ಸಭೆಗೆ ಮಂಡಿಸಿದರು. ೨೦೨೩-೨೪ನೇ ಸಾಲಿನಲ್ಲಿ ಒಕ್ಕೂಟ ದಿಂದ ಸದಸ್ಯ ಸಂಘಗಳಿಗೆ/ಉತ್ಪಾದಕರಿಗೆ ಹೈನುಗಾರಿಕೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ತಾಂತ್ರಿಕ ಪರಿಕರಗಳಿಗೆ, ತರಬೇತಿ ಗಳಿಗೆ ರೂ. ೩೨೯೭.೬೬ ಲಕ್ಷ ಅನುದಾನವನ್ನು ನೀಡಲು ಯೋಜಿಸಲಾಗಿದ್ದು, ಪ್ರತಿ ಕೆ.ಜಿ ಶೇಖರಿಸುವ ಹಾಲಿಗೆ ರೂ. ೧.೧೪ ಅನುದಾನ ನೀಡಲಾಗುತ್ತಿದೆ ಎಂದರು.
ಒಕ್ಕೂಟದಲ್ಲಿ ಸೆ. ೨೩ರಂದು ೭,೦೦,೮೦೨ ಕೆ.ಜಿ ಹಾಲಿನ ಶೇಖರಣೆಯಾಗಿದ್ದು, ಇಲ್ಲಿಯ ವರೆಗೆ ಒಕ್ಕೂಟವು ಶೇಖರಣೆ ಮಾಡಿರುವ ಅತೀ ಹೆಚ್ಚಿನ ದಾಖಲೆಯ ಪ್ರಮಾಣದ ಹಾಲು ಶೇಖರಣೆಯಾಗಿದ್ದು, ಶಿಮುಲ್‌ನ ಇತಿಹಾಸದಲ್ಲಿ ಇದೊಂದು ಮೈಲುಗಗಿರುತ್ತದೆ. ಅತೀ ಹೆಚ್ಚಿನ ಪ್ರಮಾಣದ ಹಾಲಿನ ಶೇಖರಣೆ ಮಾಡಲು ಕಾರಣಕರ್ತರಾದ ಸಮಸ್ತ ಹಾಲು ಉತ್ಪಾದಕ ರೈತ ಬಾಂಧವರಿಗೆ, ಸಂಘಗಳ ಕಾರ್ಯಕಾರಿ ಮಂಡಳಿ ಸದಸ್ಯರಿಗೆ, ಸಿಬ್ಬಂದಿಗಳಿಗೆ, ಒಕ್ಕೂಟದ ಅಧ್ಯಕ್ಷರು, ಉಪಾಧ್ಯಕ್ಷರು, ಆಡಳಿತ ಮಂಡಳಿ ನಿರ್ದೇಶಕರುಗಳು ಹಾಗೂ ಅಧಿಕಾರಿ/ಸಿಬ್ಬಂದಿ ವರ್ಗದವರಿಗೆ ಎಸ್.ಜಿ.ಶೇಖರ್, ವ್ಯವಸ್ಥಾಪಕ ನಿರ್ದೇಶಕರು ಇವರು ಅಭಿನಂದನೆಗಳನ್ನು ಸಲ್ಲಿಸಿದರು.
ಪ್ರಹ್ಲಾದ್ ದೀಕ್ಷಿತ್ ಮತ್ತು ತಂಡದವರು ಪ್ರಾರ್ಥನೆ, ಗೋವಿನ ಹಾಡು, ರೈತಗೀತೆ ಮತ್ತು ನಾಡಗೀತೆಯೊಂದಿಗೆ ನುಡಿ ಸೇವೆ ಸಲ್ಲಿಸಿದರು. ಒಕ್ಕೂಟದ ಧ್ಯೇಯ ವ್ಯಾಖ್ಯಾನವನ್ನು ನಿರ್ದೇಶಕ ಹೆಚ್.ಬಿ.ದಿನೇಶ್ ಇವರು ಪಠಣ ಮಾಡಿದರು. ಮಾಜಿ ಅಧ್ಯಕ್ಷರು ಹಾಗೂ ಹಾಲಿ ನಿರ್ದೇಶಕರಾದ ಟಿ.ಶಿವಶಂಕರಪ್ಪ ಇವರು ಸಭೆಗೆ ಹಾಜರಿದ್ದ ಸರ್ವರಿಗೂ ಸ್ವಾಗತವನ್ನು ಕೋರಿದರು. ಸಹಕಾರ ಧುರೀಣರು ಒಕ್ಕೂಟದ ಹಿರಿಯ ನಿರ್ದೇಶಕ ಬಿ.ಜಿ.ಬಸವರಾಜಪ್ಪ ವಂದಿಸಿದರು. ವ್ಯವಸ್ಥಾಪಕ (ಆಡಳಿತ) ಸುರೇಶ್ ಹುಳ್ಳಿ ನಿರೂಪಿಸಿದರು.