ಹಳ್ಳ ಗುಂಡಿಗಳಿಂದ ಹದಗೆಟ್ಟ ರಸ್ತೆ ಸರಿಪಡಿಸಿ:ಮನವಿ

2-(4)

ಶಿವಮೊಗ್ಗ: ನಗರದ ಶೇಷಾದ್ರಿಪುರಂ ರೈಲ್ವೆ ಮೇಲು ಸೇತುವೆ ಮತ್ತು ರಾಗಿಗುಡ್ಡಕ್ಕೆ ಹೋಗುವ ರಸ್ತೆ ಅವ್ಯವಸ್ಥೆಯಾಗಿದ್ದು, ಕೂಡಲೇ ಸರಿಪಡಿಸಬೇಕು ಎಂದು ಆಗ್ರಹಿಸಿ ಕನ್ನಡ ಹೋರಾಟಗಾರರು ಇಂದು ಬೆಳಿಗ್ಗೆ ಪಿಡಬ್ಲ್ಯೂಡಿ ವಿಭಾಗದ ಕಾರ್ಯನಿರ್ವಹಕ ಇಂಜಿನಿಯರ್ ಅವರಿಗೆ ಮನವಿ ಸಲ್ಲಿಸಿದರು.
ರೈಲ್ವೆ ಮೇಲು ಸೇತುವೆ ರಸ್ತೆ ಮತ್ತು ರಾಗಿಗುಡ್ಡಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಹಳ್ಳಗುಂಡಿ ಗಳಿಂದ ಕೂಡಿದೆ. ವಾಹನ ಸವಾರರು ಸ್ಥಳೀಯ ನಿವಾಸಿಗಳು ಓಡಾಡುವುದೇ ಕಷ್ಟವಾಗಿದೆ. ಅದರಲ್ಲೂ ಬಸ್,ಲಾರಿ, ಕಾರುಗಳು ಸಂಚರಿಸುವಾಗ ವಿಪರೀತ ಧೂಳು ತುಂಬಿಕೊಳ್ಳುತ್ತದೆ. ಇದರಿಂದ ಅಲ್ಲಿ ಸಂಚರಿಸುವ ವಾಹನ ಚಾಲಕರಿಗೆ ಮತ್ತು ಪಾದಚಾರಿಗಳಿಗೆ ಕಷ್ಟವಾಗಿ ಆರೋಗ್ಯದ ಮೇಲೂ ಕೂಡ ಪರಿಣಾಮ ಬೀರುತ್ತದೆ . ಅಲ್ಲದೇ ಸೇತುವೆಯ ಮೇಲಿನಿಂದ ಕೋಳಿ ಮತ್ತಿತರರ ತ್ಯಾಜ್ಯಗಳನ್ನು ಕೆಳಗೆ ಸುರಿಯುತ್ತಾರೆ. ಇದರಿಂದ ವಾಸನೆಯ ಜೊತೆಗೆ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತಿದೆ. ಅಲ್ಲದೆ ಜೆಲ್ಲಿಪುಡಿ ಹಾಕಿರುವುದರಿಂದ ಧೂಳುಕೂಡ ಹೆಚ್ಚಾಗಿದೆ ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯರು ದೂರಿದರು.
ಅನೇಕ ತಿಂಗಳುಗಳಿಂದ ಈ ಯಾತನೆಯ ಪರಿಸ್ಥಿತಿಯನ್ನು ಅಲ್ಲಿನ ಜನರು ಮತ್ತು ಪ್ರಯಾಣಿಕರು ಅನುಭವಿಸುತ್ತಿzರೆ. ಗುಂಡಿ ಮುಚ್ಚುವ ಕೆಲಸವು ನಡೆಯುತ್ತಿಲ್ಲ. ಎ ಕೆಲವು ಕಡೆ ಡಾಂಬರೀಕರಣ ನಡೆಯುತ್ತಿದ್ದರೂ ತ್ಯಾಪೆ ಹಾಕಲಾಗು ತ್ತಿದೆ. ಇದು ಶಾಶ್ವತ ಪರಿಹಾರವಲ್ಲ, ಆದ್ದರಿಂದ ಸೇತುವೆ ತುದಿಯಿಂದ ಸುಮಾರು ಅರ್ಧ ಕಿ.ಮೀ. ದೂರದವರೆಗಾದರೂ ಕಾಂಕ್ರೀಟ್ ರಸ್ತೆ ನಿರ್ಮಿಸಬೇಕು ಮತ್ತು ಅವ್ಯವಸ್ಥೆ ರಸ್ತೆಯನ್ನು ಸರಿಪಡಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಸ್ಥಳಕ್ಕೆ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಆಗಮಿಸಿ ಸಮಸ್ಯೆಯನ್ನು ಬೇಗನೆ ಬಗೆಹರಿಸುವಂತೆ ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಧುಸೂದನ್ ಎಸ್.ಎಂ., ಎಂ. ರವಿಪ್ರಸಾದ್, ನಯಾಜ್, ಕಿಶೋರ್ ಇನ್ನಿತರರಿದ್ದರು.