ಧರ್ಮ, ಸಂಸ್ಕೃತಿ, ಸಂಸ್ಕಾರ, ಪರಂಪರೆ ಬಗ್ಗೆ ಪ್ರತಿಯೊಬ್ಬರೂ ಗೌರವ ಬೆಳೆಸಿಕೊಳ್ಳಬೇಕು: ಪೂಜ್ಯಶ್ರೀ ಡಾ.ವೀರಸೋಮೇಶ್ವರ ಜಗದ್ಗುರು
ಶಿಕಾರಿಪುರ: ಸನಾತನ ಶ್ರೇಷ್ಟ ಧರ್ಮ, ಸಂಸ್ಕೃತಿ, ಸಂಸ್ಕಾರ, ಪರಂಪರೆ ಬಗ್ಗೆ ಪ್ರತಿಯೊಬ್ಬರೂ ಗೌರವವನ್ನು ಬೆಳೆಸಿಕೊಳ್ಳಬೇಕು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಕಡೆನಂದಿಹಳ್ಳಿ ಕ್ಷೇತ್ರದಲ್ಲಿ ಆಯೋಜಿಸಿದ್ದ ೩೬ ಅಡಿ ಎತ್ತರದ ಶ್ರೀ ಜಗದ್ಗುರು ರೇಣುಕಾಚಾರ್ಯರ ಪುತ್ಥಳಿ ನಿರ್ಮಾಣಕ್ಕೆ ಚಾಲನೆ ನೀಡುವ ಕಾರ್ಯದ ಅಂಗವಾಗಿ ಜರುಗಿದ ಧರ್ಮ ಜಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಪೂಜ್ಯರು, ತೆಲಂಗಾಣದ ಕೊಲನುಪಾಕ ಸುಕ್ಷೇತ್ರದ ಶ್ರೀ ಸೋಮೇಶ್ವರ ಮಹಾಲಿಂಗದಲ್ಲಿ ಅವತರಿಸಿದ ಶ್ರೀ ಜಗದ್ಗುರು ರೇಣುಕಾಚಾರ್ಯರು ತಮ್ಮ ತತ್ವಾದರ್ಶಗಳು ಮತ್ತು ವಿಚಾರ ಧಾರೆಗಳ ಮೂಲಕ ಸಮಸ್ತ ಮನುಕುಲದ ಹಿತ ಬಯಸಿದ್ದಾರೆ. ಅಂತಹ ಮಹಿಮಾ ಪುರುಷರ ಭವ್ಯ ಮೂರ್ತಿ ಇಲ್ಲಿ ನಿರ್ಮಾಣ ವಾಗುತ್ತಿರುವುದು ಸಂತಸದ ಸಂಗತಿ. ಇದು ಶ್ರೀ ಮಠದ ಚಾರಿತ್ರಿಕ ಇತಿಹಾಸದಲ್ಲಿ ಸ್ಮರಣೀಯ ಕಾರ್ಯವಾಗಿದೆ. ಕಡೇನಂದಿ ಹಳ್ಳಿಯ ರೇವಣಸಿದ್ದೇಶ್ವರ ಸ್ವಾಮಿಗಳು ಮಳೆ ಮಲ್ಲೇಶ್ವರ ಕ್ಷೇತ್ರದಲ್ಲಿ ಸಂಕಲ್ಪದ ಸಾಧನೆಗಾಗಿ ಲೋಕಕಲ್ಯಾಣಕ್ಕಾಗಿ ನಿರಂತರ ಧಾರ್ಮಿಕ ಕಾರ್ಯಗಳನ್ನು ನೆರವೇರಿಸುವುದರ ಮೂಲಕ ಶೂನ್ಯವಾಗಿದ್ದ ಶ್ರೀ ಗುರು ರೇವಣಸಿದ್ದೇಶ್ವರ ಪುಣ್ಯಾಶ್ರಮವನ್ನು ತಪೋಕ್ಷೇತ್ರವನ್ನಾಗಿ ಪರಿವರ್ತಿಸಿದ್ದಾರೆ ಎಂದರು.
ಧರ್ಮ ಕಾರ್ಯಗಳು ನಿರಂತರವಾಗಿ ನಡೆಯುತ್ತಿದ್ದರೆ ಆ ಮಣ್ಣು ಪುಣ್ಯದ ಮಣ್ಣಾಗುತ್ತದೆ. ಶ್ರೀಗಳವರ ಜಪ ತಪ ಅನುಷ್ಠಾನಗಳ ಬಲದಿಂದ ಭಕತಿರ ಸಹಕಾರದಿಂದ ಶ್ರೀ ಮಠ ಪ್ರಗತಿ ಪಥದಲ್ಲಿ ಮುನ್ನಡೆದಿದೆ. ಕಡೇನಂದಿಹಳ್ಳಿ ಶ್ರೀಗಳ ಬಹು ದಿನಗಳ ಪ್ರತಿಮೆ ನಿರ್ಮಾಣದ ಕನಸಿಗೆ ಇಂದು ಚಾಲನೆ ದೊರೆತಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ದೇಶದಲ್ಲಿಯೇ ಅತಿ ಹೆಚ್ಚು ಅನುದಾನ ತಂದ ಕೀರ್ತಿಯನ್ನು ಹೊಂದಿದ ಸಂಸದ ಬಿ.ವೈ. ರಾಘವೇಂದ್ರರ ಸಾಮಾಜಿಕ ಕಳಕಳಿ ಅನುಪಮವಾಗಿದೆ.ಕ್ಷೇತ್ರದ ನೂತನ ಶಾಸಕ ಬಿ.ವೈ. ವಿಜಯೇಂದ್ರ ತಂದೆಯಂತೆಯೇ ಸಾಮಾಜಿಕ ಇಚ್ಚಾಶಕ್ತಿಯುಳ್ಳವರಾಗಿದ್ದಾರೆ. ಸ್ವಾಭಿಮಾನ ಕರ್ತವ್ಯ ನಿಷ್ಠೆ ನಿರಂತರ ಪ್ರಯತ್ನದಿಂದ ಮಾತ್ರ ಎಲ್ಲ ಕಾರ್ಯದಲ್ಲಿ ಜಯ ದೊರೆಯಲು ಸಾಧ್ಯ. ಯಡಿಯೂರಪ್ಪನವರ ಸಂಕಲ್ಪದಂತೆ ತಾಲೂಕು ಇನ್ನಷ್ಟು ಅಭಿವೃದ್ಧಿ ಕಾಣಲಿ ಎಂದು ಶುಭ ಹಾರೈಸಿದರು.
ಕಡೇನಂದಿಹಳ್ಳಿ-ದುಗ್ಲಿ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿ ಮಾತನಾಡಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಮೂರ್ತಿ ಸ್ಥಾಪನೆ ಬಹುದಿನಗಳ ಕನಸಾಗಿದ್ದು, ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದದಿಂದ ಕಾಮಗಾರಿಗೆ ಇಂದು ಚಾಲನೆ ದೊರೆತಿದೆ. ದೈವಾನುಗ್ರಹದಿಂದ ಇದಕ್ಕೆ ಪೂರಕವಾದ ಎಲ್ಲ ಕೆಲಸ ಕಾರ್ಯ ಗಳು ನಿರ್ವಿಘ್ನವಾಗಿ ನಿರಂತರವಾಗಿ ಮುನ್ನಡೆದುಕೊಂಡು ಬರುತ್ತಿವೆ ಎಂದರು.
ಶ್ರೀಕ್ಷೇತ್ರ ಸಿಗಂಧೂರಿನ ಧರ್ಮದರ್ಶಿ ಹೊಳೆಕೊಪ್ಪದ ರಾಮಪ್ಪನವರು ಸಸಿಗೆ ನೀರೆರೆ ಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಿಂಧನೂರಿನ ಸೋಮನಾಥ ಶಿವಾಚಾರ್ಯ ಸ್ವಾಮಿಗಳು, ಹಾರನಹಳ್ಳಿಯ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು, ಚನ್ನಗಿರಿಯ ಕೇದಾರ ಶಿವಶಾಂತವೀರ ಶಿವಾಚಾರ್ಯ ಸ್ವಾಮಿಗಳು ಉಪದೇಶಾಮೃತ ನೀಡಿದರು.
ವೇದಿಕೆಯಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಬಿ.ವೈ. ವಿಜಯೇಂದ್ರ, ಯು.ಬಿ. ಬಣಕಾರ್, ಎಂಎಡಿಬಿ ಮಾಜಿ ಅಧ್ಯಕ್ಷ ಗುರುಮೂರ್ತಿ, ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಎನ್.ವಿ.ಈರೇಶ್, ಶಿವಾನಂದ ಶಾಸ್ತ್ರಿಗಳು,ಪುರೋಹಿತವರ್ಗ, ಶ್ರೀ ಗುರು ರೇವಣಸಿದ್ಧೇಶ್ವರ ಜನ ಕಲ್ಯಾಣ ಟ್ರಸ್ಟ್ ಸಲಹಾ ಮತ್ತು ಸೇವಾ ಸಮಿತಿ ಹಾಗೂ ಯುವಕ ಮಂಡಳಿ ಪದಾಧಿಕಾರಿಗಳು ಮತ್ತು ವಿವಿಧೆಡೆಗಳಿಂದ ಆಗಮಿಸಿದ ಅಸಂಖ್ಯಾತ ಭಕ್ತರು ಉಪಸ್ಥಿತರಿದ್ದರು.
ರಾಜ್ಯ ವೀರಶೈವ ಪುರೋಹಿತರ ಮಹಾಸಭಾ ಅಧ್ಯಕ್ಷ ಚನ್ನೇಶ ಶಾಸ್ತ್ರಿ ಸ್ವಾಗತಿಸಿ, ಚನ್ನಗಿರಿ ಶ್ರೀಗಳು ಭಕ್ತಿ ಗೀತೆ ಹಾಡಿದರು. ಶಿಕ್ಷಕ ನಾಗರಾಜ ನಿರೂಪಿಸಿದರು. ಪ್ರಾತಃಕಾಲದಲ್ಲಿ ಶ್ರೀ ಗುರು ರೇವಣಸಿದ್ಧೇಶ್ವರ ಪುಣ್ಯಾಶ್ರಮದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ, ಬೃಹಸ್ಪತಿ ಹೋಮ ನಡೆಯಿತು.