ಸೇಕ್ರೆಡ್ ಹಾರ್ಟ್ ಚರ್ಚ್‌ನಲ್ಲಿಂದು ರಾತ್ರಿ 11.30ರಿಂದ ಈಸ್ಟರ್ ಹಬ್ಬದ ಪೂಜೆ..

ಶಿವಮೊಗ್ಗ: ನಗರದ ಇತಿಹಾಸ ಪ್ರಸಿದ್ಧ ಸೇಕ್ರೆಡ್ ಹಾರ್ಟ್ ಪ್ರಧಾನಾಲಯದಲ್ಲಿ ಏ.೮ರ ಇಂದು ರಾತ್ರಿ ೧೧.೩೦ರಿಂದ ಈಸ್ಟರ್ ಹಬ್ಬದ ವಿಶೇಷ ಪೂಜಾ ಕಾರ್ಯಗಳು ಆರಂಭಗೊಳ್ಳಲಿವೆ.
ಯೇಸುಕ್ರಿಸ್ತರ ಪುನರುತ್ಥಾನದ ಹಬ್ಬವಾದ ಈಸ್ಟರ್ ಹಬ್ಬವನ್ನು ಶಿವಮೊಗ್ಗ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ| ಫ್ರಾನ್ಸಿಸ್ ಸೆರಾವೋ ಅವರ ಸಾನಿಧ್ಯದಲ್ಲಿ ಶ್ರದ್ಧಾಭಕ್ತಿ ಹಾಗೂ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದ್ದು, ಈ ಸಾಂಭ್ರಮಿಕ ಪೂಜಾವಿಧಿಯಲ್ಲಿ ಭಕ್ತಾಧಿಗಳು ಸಕಾಲಕ್ಕೆ ಆಗಮಿಸಿ, ಶ್ರದ್ಧಾ ಭಕ್ತಿಯಿಂದ ಪಾಲ್ಗೊಳ್ಳುವ ಮೂಲಕ ಕ್ರಿಸ್ತ ಯೇಸುವಿನ ಕೃಪೆಗೆ ಪಾತ್ರರಾಗುವಂತೆ ಹಾಗೂ ಕೋವಿಡ್ ಸಾಂಕ್ರಮಿಕ ತಡೆಗೆ ಬೇಕಾದ ಮುನ್ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೇಕ್ರೆಡ್ ಹಾರ್ಟ್ ಚರ್ಚ್‌ನ ಪ್ರಧಾನ ಗುರುಗಳಾದ ರೆ|ಫಾ| ಸ್ಟ್ಯಾನಿ ಡಿಸೋಜ ಅವರು ಕೋರಿದ್ದಾರೆ.
ಅದೇ ರೀತಿ ಏ.೯ರ ನಾಳೆ ಭಾನುವಾರ ಬೆಳಿಗ್ಗೆ ೭ ಗಂಟೆಗೆ ಮತ್ತು ೯ ಗಂಟೆಗೆ ಹಬ್ಬದ ಪೂಜೆಗಳು ಇರುತ್ತವೆ. ಅಂದು ಸಂಜೆ ದೇವಾಲಯದಲ್ಲಿ ಯಾವುದೇ ಪೂಜಾ ಕಾರ್ಯಗಳು ಇರುವುದಿಲ್ಲ ಎಂದು ಧರ್ಮಕೇಂದ್ರದ ಪಾಲನಾ ಸಮಿತಿ ಕಾರ್‍ಯದರ್ಶಿ ರೇಮೆಂಡ್ ಡಿಮೆಲ್ಲೋ ತಿಳಿಸಿದ್ದಾರೆ.