5೦೦ ಭಿಕ್ಷುಕರಿಗೆ ನಿತ್ಯ ಬಿಸಿಯೂಟ ನೀಡುತ್ತಿರುವ ಕೃಷ್ಣನ್‌ರಿಗೆ ದೊಡ್ಡಮ್ಮ ದೇವಿ ಅನುಗ್ರಹ ಪುರಸ್ಕಾರ…

2

ಶಿವಮೊಗ್ಗ: ಶ್ರೀ ದೊಡ್ಡಮ್ಮ ಚಾರಿಟಬಲ್ ಟ್ರಸ್ಟ್‌ವತಿಯಿಂದ ಸಾಧಕರಿಗೆ ಶ್ರೀ ದೊಡ್ಡಮ್ಮ ದೇವಿ ಅನುಗ್ರಹ ರಾಷ್ಟ್ರೀಯ ಪುರಸ್ಕಾರ ಕಾರ್ಯಕ್ರಮವನ್ನು ಅ.೧೨ರಂದು ಬೆಳಿಗ್ಗೆ ೧೦ಕ್ಕೆ ಗೆಜ್ಜೇನಹಳ್ಳಿ ಮಾರ್ಗದ ಮಧ್ಯ ಇರುವ ಕೆ.ಎಚ್.ಬಿ.ಪ್ರೆಸ್ ಕಾಲೋನಿಯ ಟ್ರಸ್ಟ್ ಅವರಣದಲ್ಲಿ ಆಯೋಜಿಸಲಾಗಿದೆ ಎಂದು ಸಂಚಾಲಕ ಎಂ.ಎನ್.ಸುಂದರಾಜ್ ಸುದ್ದಿಗೋಷ್ಟಿಯಲ್ಲಿ ಹೇಳಿದರು.


ಶ್ರೀ ದೊಡ್ಡಮ್ಮ ಚಾರಿಟಬಲ್ ಟ್ರಸ್ಟ್ ಕಳೆದ ೩ ವರ್ಷಗಳಿಂದ ಸಾಧಕರಿಗೆ ರಾಷ್ಟ್ರೀಯ ಪುರಸ್ಕಾರವನ್ನು ನೀಡುತ್ತ ಬಂದಿದ್ದು, ಈ ಬಾರಿ ಮಧುರೈನ ನಾರಾಯಣನ್ ಕೃಷ್ಣನ್ ಅವರಿಗೆ ನೀಡಲಾಗಿದೆ. ಈ ಪ್ರಶಸ್ತಿಯೂ ಒಂದು ಲಕ್ಷ ರೂ. ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ ಎಂದರು.
ಹಾಗೆಯೇ ಸಾಧಕರಾದ ಶಿವಮೊಗ್ಗದ ಮುಕ್ತಾಭಟ್ ಅವರಿಗೆ ೨೦೨೪ರ ಶ್ರೀ ಲಲಿತಾ ಪುರಸ್ಕಾರ ಪ್ರಶಸ್ತಿ ನೀಡಲಾಗಿದೆ. ಈ ಪ್ರಶಸ್ತಿ ೫ಸಾವಿರ ನಗದು ಬಹುಮಾನ ಒಳಗೊಂಡಿದೆ ಎಂದರು.
ಈ ಎರಡು ಪ್ರಶಸ್ತಿಗಳ ವಿತರಣಾ ಕಾರ್ಯಕ್ರಮವನ್ನು ಹೊಸಕೋಟೆಯ ಪೂಜ್ಯ ಮಾತಾಜಿ ಬ್ರಹ್ಮಮಯಿ ಅವರು ಉದ್ಘಾಟಿಸಲಿದ್ದಾರೆ ಅಧ್ಯಕ್ಷತೆಯನ್ನು ದೊಡ್ಡಮ್ಮ ದೇವಿಯ ಉಪಾಸಕರು ಹಾಗೂ ಟ್ರಸ್ಟ್‌ನ ಅಧ್ಯಕ್ಷರಾದ ಸಿದ್ದಪ್ಪಾಜಿ ಅವರು ವಹಿಸಲಿದ್ದಾರೆ. ಕಾರ್ಯಕ್ರಮ ದಲ್ಲಿ ಖ್ಯಾತ ವಿಜನಿ ಡಾ. ವಾಸುದೇವ್, ಬೆಂಗಳೂರಿನ ರಮಣ ಆಶ್ರಮದ ಶ್ರೀನಿವಾಸ್ ರೆಡ್ಡಿ ಪಾಲ್ಗೊಳ್ಳಲಿದ್ದಾರೆ ಎಂದರು.
ನಾರಾಯಣ್ ಕೃಷ್ಣನ್ ಅವರು ಸೇವೆಗೆ ಮತ್ತೊಂದು ಹೆಸರಾಗಿದ್ದಾರೆ. ಇವರು ಮಧುರೈನಲ್ಲಿ ಟ್ರಸ್ಟ್ ಸ್ಥಾಪಿಸಿ ಅಲ್ಲಿ ಪ್ರತಿನಿತ್ಯ ೫೦೦ ಭಿಕ್ಷುಕರಿಗೆ ೩ ಹೊತ್ತು ಬಿಸಿಯೂಟ ನೀಡುತ್ತಿದ್ದಾರೆ. ಇದುವರೆಗೂ ಸುಮಾರು ೫೫ಲಕ್ಷಕ್ಕೂ ಹೆಚ್ಚು ಹೊತ್ತು ಊಟ ಹಾಕಿದ್ದಾರೆ. ಇಲ್ಲಿರುವ ಮಾನಸಿಕ ಅಸ್ವಸ್ಥರನ್ನು ನೋಡಿಕೊಳ್ಳಲು ೫೦ ಜನರನ್ನು ನೇಮಿಸಿದ್ದಾರೆ. ಎಲ್ಲರಿಗೂ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ನೀಡುತ್ತಿದ್ದಾರೆ. ಇವರಿಗೆ ಅಂತರ ರಾಷ್ಟ್ರೀಯ ಪ್ರಶಸ್ತಿ ಕೂಡ ಸಿಕ್ಕಿವೆ ಇಂತವರನ್ನು ಗೌರವಿಸುವುದು ನಮ್ಮ ಪುಣ್ಯ ಎಂದರಲ್ಲದೇ, ಶಿವಮೊಗ್ಗದವರೇ ಆದ ಮುಕ್ತಾಭಟ್ ಅವರು ಶ್ರೀ ವಿದ್ಯಾಭಜನಾ ಮಂಡಳಿ ಸ್ಥಾಪಿಸಿ ಲಲಿತಾ ಸಹಸ್ರನಾಮ, ಸೌಂದರ್‍ಯ ಲಹರಿಯನ್ನು ನೂರಾರು ಮಾತೆಯರಿಗೆ ಕಲಿಸಿದ್ದಾರೆ. ಹಲವು ಸತ್ಸಂಗಗಳನ್ನು ನಡೆಸುತ್ತಿದ್ದಾರೆ ಎಂದರು.
ಪ್ರಮುಖರಾದ ಶಬರೀಶ್ ಕಣ್ಣನ್, ನರಸಿಂಹಣ್ಣ, ಪುರುಷೋತ್ತಮ್, ಸಚಿನ್, ದೇವಿ ಉಪಾಸಕ ಗಜೇಂದ್ರ ಎಸ್. ಕುಡಾಲ್ಕರ್, ವಿಜಯ್ ಇದ್ದರು.