ಸಂವಿಧಾನ ನಮ್ಮ ದೇಶದ ಶಕ್ತಿ….
ಶಿವಮೊಗ್ಗ: ಸಮಾನತೆ, ಸೌಹಾ ರ್ದತೆ, ಭ್ರಾತೃತ್ವ, ಐಕ್ಯತೆ, ಭಾವೈಕ್ಯತೆ, ಸಮಗ್ರತೆಯಿಂದ ಭಾರತೀಯರೆಲ್ಲರೂ ಇರಬೇಕೆಂಬ ಆಶಯ ಹೊತ್ತ ನಮ್ಮ ಸಂವಿಧಾನದ ಪೀಠಿಕೆಯನ್ನು ನಾವೆಲ್ಲ ಪಾಲಿಸಿದರೆ ಸಂತೋಷ ಮತ್ತು ನೆಮ್ಮದಿಯಿಂದ ಇರಲು ಸಾಧ್ಯ ಎಂದು ವಿಧಾನ ಪರಿಷತ್ ಶಾಸಕಿ ಬಲ್ಕೀಶ್ ಬಾನು ನುಡಿದರು.
ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರ ಪಾಲಿಕೆ ಆಶ್ರಯದಲ್ಲಿ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದ್ದ ಸಂವಿಧಾನ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯನಂತರ ನಮ್ಮ ನೆಲದ ಸಂವಿಧಾನ ರಚನೆಗಾಗಿ ಡಾ. ರಾಜೇಂದ್ರ ಪ್ರಸಾದ್ ಅವರ ಅಧ್ಯಕ್ಷತೆ ಯಲ್ಲಿ ಸಮಿತಿ ರಚಿಸಿ, ಅತ್ಯಂತ ಮುಂದಾಲೋಚನೆ ಹೊಂದಿದ್ದ ಮಾನವತಾವಾದಿ ಡಾ. ಅಂಬೇಡ್ಕರ್ ರವರಿಗೆ ಸಂವಿಧಾನ ರಚಿಸುವಂತಹ ಗುರುತರವಾದ ಜವಾಬ್ದಾರಿ ನೀಡಲಾಯಿತು. ಎಲ್ಲರೂ ಒಂದಾಗಿರ ಬೇಕು, ವಿದ್ಯಾವಂತರಾಗ ಬೇಕು ಹಾಗೂ ಸಂಘಟಿತರಾಗಿರಬೇಕು ಎಂಬುದು ಅಂಬೇಡ್ಕರ್‌ರವರ ಮೂಲ ಸಂದೇಶವಾಗಿತ್ತು ಎಂದ ಅವರು, ಸಮಾನತೆ, ಶಿಕ್ಷಣ ಮತ್ತು ಸಂಘಟನೆ ಈ ಮೂರು ಅಂಶಗಳು ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಮೂಲ ಧ್ಯೇಯಗಳಾಗಿದ್ದವು. ಅವರು ಮಹಿಳೆಯರ ಶಿಕ್ಷಣದ ಮಹತ್ವವನ್ನು ಎತ್ತಿ ಹಿಡಿದಿದ್ದರು. ಸಮಾನತೆ ಮತ್ತು ಶಿಕ್ಷಣದಿಂದ ಮಾತ್ರ ಉನ್ನತವಾಗಿ ಬದಕಲು ಸಾಧ್ಯವೆಂದು ಹೇಳುತ್ತಿದ್ದರು. ಸಂಘಟನೆಯ ಶಕ್ತಿಯನ್ನು ಒತ್ತಿ ಹೇಳಿದ್ದರು ಎಂದ ಅವರು ಐಕ್ಯತೆ, ಶಿಕ್ಷಣ ಮತ್ತು ಸಂಘಟನೆ ಮೂಲಕ ನಮ್ಮ ಹಕ್ಕುಗಳಿಗಾಗಿ ಹೋರಾಡೋಣ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ ಅತ್ಯಂತ ಅರ್ಥಪೂರ್ಣವಾದ ಪೀಠಿಕೆ ಅಂಬೇಡ್ಕರ್‌ರವರು ನಮಗೆ ನೀಡಿದ ದೊಡ್ಡ ಕೊಡುಗೆ. ಇದು ದೇಶಕ್ಕೆ ದಾರಿದೀಪ. ನಮ್ಮ ಸಂವಿಧಾನ ಜಗತ್ತು ನಮ್ಮೆಡೆ ನೋಡುವಂತೆ ಮಾಡಿದ್ದು, ದೇಶ ವಿಶ್ವಗುರು ಆಗಿ ಹೊರಹೊಮ್ಮುತ್ತಿದೆ. ಸಂವಿಧಾನ ನಮ್ಮ ದೇಶದ ಶಕ್ತಿ. ನಮ್ಮದು ಅತ್ಯಂತ ಬಲಿಷ್ಠ ಪ್ರಜಪ್ರಭುತ್ವ ರಾಷ್ಟ್ರವಾಗಿದ್ದು ಸಂವಿಧಾನ ಅಭಿವೃದ್ಧಿಗೆ ಪೂರಕವಾಗಿದೆ. ಇದನ್ನು ಓದಿ, ತಿಳಿದು ಅದರಂತೆ ನಡೆಯಬೇಕು. ದೇಶದ ಏಳ್ಗೆಗೆ ಅವಿರತ ಶ್ರಮಿಸಿದ ಅಂಬೇಡ್ಕರ್‌ರವರನ್ನು ಸ್ಮರಿಸಿ ಪಂಚತೀರ್ಥ ಯೋಜನೆ ಜರಿಗೊಳಿಸಿ ಗೌರವಿಸಲಾಗುತ್ತಿದೆ ಎಂದರು.
ಪರಿಶಿಷ್ಟ ಜತಿ, ವರ್ಗ ಅಲೆಮಾರಿಗಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ, ರಾಜ್ಯ ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್ ಮಾತನಾಡಿದರು.
ಕಸ್ತೂರಬಾ ಪಿಯು ಕಾಲೇಜಿನ ಉಪನ್ಯಾಸಕ ಹೆಚ್ .ಎಸ್. ರವಿಕುಮಾರ್ ಸಂವಿಧಾನದ ಅರಿವು ಮತ್ತು ಜಗೃತಿ ವಿಷಯ ಕುರಿತು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಗ್ರೇಡ್-೧ ಸುರೇಶ್ ಕೆ ಎನ್ ಇವರು ಸಂವಿಧಾನದ ಆಶಯಗಳು ಮತ್ತು ಮೂಲಭೂತ ಹಕ್ಕುಗಳ ಮಹತ್ವ ಕುರಿತು ಉಪನ್ಯಾಸ ನೀಡಿದರು.
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್. ಚಂದ್ರಭೂಪಾಲ್, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿ.ಪಂ.ಸಿಇಓ ಎನ್.ಹೇಮಂತ್, ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್, ಪಾಲಿಕೆ ಆಯುಕ್ತರಾದ ಡಾ.ಕವಿತಾ ಯೋಗಪ್ಪನವರ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಡಿ.ಮಲ್ಲೇಶಪ್ಪಇನ್ನಿತರರಿದ್ದರು.