ಕೇವಲ ಮುಸ್ಲೀಮರ ಓಲೈಸಿದ ಬಜೆಟ್: ಡಿಸೋಜ

ಬೆಂಗಳೂರು : ರಾಜ್ಯ ಹಣಕಾಸು ಸಚಿವರೂ ಆಗಿರುವ ಸಿಎಂ ಸಿದ್ದರಾಮಯ್ಯನವರು ಮಾ.೭ ರಂದು ಮಂಡಿಸಿದ ದಾಖಲೆಯ ಬಜೆಟ್‌ನಲ್ಲಿ ಅಲ್ಪಸಂಖ್ಯಾತ ಸಮುದಾಯಗಳನ್ನು ಸಬಲೀಕರಣ ಗೊಳಿಸುವ ಗುರಿ ಹೊಂದಲಾಗಿದೆ ಎಂದು ಹೇಳಿರುವುದು ಸಂತಸದ ವಿಷಯವಾಗಿದ್ದು, ಜೈನ ಪುರೋಹಿತರು, ಸಿಖ್ ಗ್ರಂಥಿಗಳು ಮತ್ತು ಮಸೀದಿ ಪೇಶ್-ಇಮಾಮ್‌ಗಳಿಗೆ ಮಾಸಿಕ ೬,೦೦೦ ರೂ.ಗಳಿಗೆ ಗೌರವಧನ ಹೆಚ್ಚಳ, ಬೆಂಗಳೂರಿನಲ್ಲಿ ಬೌದ್ಧ ಅಧ್ಯಯನ ಅಕಾಡೆಮಿ ಸ್ಥಾಪನೆ, ಮಹಾಬೋಧಿ ಅಧ್ಯಯನ ಕೇಂದ್ರದಲ್ಲಿರುವ ೧೦೦ ವರ್ಷ ಹಳೆಯ ಗ್ರಂಥಾಲಯ ೧ ಕೋಟಿ ರೂ. ವೆಚ್ಚದಲ್ಲಿ ಡಿಜಿಟಲೀಕರಣ, ಸಿಖ್ ಸಮುದಾಯಗಳಿಗೆ, ಗುರುದ್ವಾರಗಳಲ್ಲಿ ಮೂಲಸೌಕರ್ಯ ಅಭಿವದ್ಧಿಗಾಗಿ ೨ ಕೋಟಿ ರೂ. ನಿಗದಿಪಡಿಸಿರುವುದು. ಕಲಬುರ್ಗಿಯ ಸನ್ನತಿಯ ಪ್ರಾಚೀನ ಬೌದ್ಧ ಕೇಂದ್ರವು ಅದರ ಪರಂಪರೆಯನ್ನು ಉತ್ತೇಜಿಸಲು ಸನ್ನತಿ ಅಭಿವದ್ಧಿ ಪ್ರಾಧಿಕಾರ ಸ್ಥಾಪನೆ ಸ್ವಾಗತಾರ್ಹ ಎಂದು ಜೆಡಿಎಸ್ ರಾಜ್ಯ ಕಾರ್ಯದರ್ಶಿ ರಾಕೇಶ್ ಡಿಸೋಜ ಅವರು ಪ್ರತಿಕ್ರಿಯಿಸಿದ್ದಾರೆ.
ಶಿಕ್ಷಣ, ಮೂಲಸೌಕರ್ಯ ಮತ್ತು ಸಾಮಾಜಿಕ- ಆರ್ಥಿಕ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸಿ ಮಂಡಿಸಲಾದ ಬಜೆಟ್‌ನಲ್ಲಿ ಅಲ್ಪಸಂಖ್ಯಾತ ಸಮುದಾಯಗಳಾದ ಮುಸ್ಲಿಮರು, ಕ್ರಿಶ್ಚಿಯನ್ನರು, ಸಿಖ್ಖರು, ಜೈನರು ಮತ್ತು ಬೌದ್ಧರ ಉನ್ನತಿಗೆ ಗಣನೀಯ ಹಣವನ್ನು ಮೀಸಲಿಟ್ಟಿದೆ ಎಂದು ಸಿಎಂ ಹೇಳಿದ್ದು, ಮೇಲ್ನೋಟಕ್ಕೆ ಇದೊಂದು ಸರ್ವಸ್ಪರ್ಶಿ ಬಜೆಟ್ ಎನಿಸಿದರೂ, ಒಳಹೊಕ್ಕು ನೋಡಿದರೆ ಚಿಕ್ಕಪುಟ್ಟ ಅಲ್ಪಸಂಖ್ಯಾತ ಸಮುದಾಗಳನ್ನು ಕಡೆಗಣಿಸಿ ಕೇವಲ ಓಟ್‌ಬ್ಯಾಂಕ್‌ಗಾಗಿ ಬಹುಸಂಖ್ಯೆಯಲ್ಲಿರುವ ಮುಸ್ಲಿಂ ಸಮುದಾಯವನ್ನು ಓಲೈಸುವ ಮೂಲಕ ಒಂದೆಡೆ ತುಷ್ಟೀಕರಣ ಮತ್ತೊಂದೆಡೆ ತುಚ್ಚೀಕರಣ ಮಾಡಿರುವುದು ಸ್ಪಷ್ಟವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕನ್ನಡ ನಾಡಿನಲ್ಲಿ ಕನ್ನಡವೇ ಸರ್ವಭೌಮ ಎನ್ನುವ ಮುಖ್ಯಮಂತ್ರಿಗಳು, ರಾಜ್ಯದಲ್ಲಿ ಕನ್ನಡ ಶಾಲೆಗಳನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವ ಮೂಲಕ ಸರ್ವ ಧರ್ಮಿಯರೂ ಕನ್ನಡ ಭಾಷೆಯನ್ನು ಕಲಿಯಲು ಪ್ರೋತ್ಸಾಹಿಸುವುದನ್ನು ಬಿಟ್ಟು ಮತೀಯ ಆಧಾರದಲ್ಲಿ ವಿಶೇಷವಾಗಿ ಮುಸ್ಲೀಮರ ಓಲೈಕೆಗಾಗಿ ಉರ್ದು ಭಾಷೆಗೆ ಪ್ರಾಮುಖ್ಯತೆ ನೀಡಿರುವುದು ಖಂಡನೀಯ. ಅಲ್ಲದೇ ೧೦೦ ಉರ್ದು ಮಾಧ್ಯಮ ಶಾಲೆಗಳನ್ನು ಮೇಲ್ದರ್ಜೆಗೇರಿಸಿ ಮೂಲಸೌಕರ್ಯ ಸುಧಾರಣೆಗಾಗಿ (ರೂ.೫೦೦ ಕೋಟಿ ಮೀಸಲಿಟ್ಟು) ರೂ. ೧೦೦ ಕೋಟಿ ಹಂಚಿಕೆ, ಮದರಸಾಗಳ ಅಭಿವೃದ್ಧಿ, ಅಲ್ಪಸಂಖ್ಯಾತ ವಿದ್ಯಾರ್ಥಿನಿಯರಿಗಾಗಿ ಪ್ರತ್ಯೇಕ ಹಾಸ್ಟೆಲ್ ಸೌಲಭ್ಯದೊಂದಿಗೆ ಪಿಯು ಕಾಲೇಜನ್ನು ಸ್ಥಾಪನೆ ಸೇರಿದಂತೆ ಇನ್ನಿತರ ವಿಷಯಗಳಿಗೆ ಪ್ರಾಮುಖ್ಯತೆ ನೀಡುವ ಮೂಲಕ ಅಲ್ಪಸಂಖ್ಯಾತರಲ್ಲೇ ದ್ವಿಮುಖನೀತಿ ನೋಡಿದರೆ ಕನ್ನಡನಾಡು ಸರ್ವಜನಾಂಗದ ಶಾಂತಿಯ ತೋಟವಾಗಲು ಸಾಧ್ಯವೇ? ಮುಸ್ಲಿಂಮರು ಉರ್ದು ಭಾಷೆಯ ಏಕೆ ಶಿಕ್ಷಣ ಪಡೆಯಬೇಕು? ಮುಸ್ಲಿಂಮರು ಬಾಲ್ಯದಿಂದಲೇ ಶೈಕ್ಷಣಿಕವಾಗಿಯೂ ಬೇರೆಯಾಗಿಯೇ ಗುರುತಿಸಿಕೊಂಡರೆ ಸರ್ವಧರ್ಮ ಸಮನ್ವಯತೆ ಕಾಣಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಡಿಸೋಜ ಅವರು, ಮುಸ್ಲಿಂಮರು ಕೂಡ ಸರ್ವಧರ್ಮೀಯರಂದಾಗಿ ಕನ್ನಡ ಭಾಷೆಯಲ್ಲಿ ಶಿಕ್ಷಣ ಪಡೆದರೆ ಉತ್ತಮ ಸಮಾಜ ನಿರ್ಮಾಣವಾ ಗುವುದಿಲ್ಲವೇ? ಇಷ್ಟೇ ಅಲ್ಲದೇ ವಿವಿಧ ಯೋಜನೆ ಗಳಲ್ಲಿ ಮುಸ್ಲಿಂಮರಿಗೆ ಮೀಸಲಾತಿ ಘೋಷಿಸುವ ಮೂಲಕ ಅಲ್ಪಸಂಖ್ಯಾತ ಸಮುದಾಯವನ್ನೇ ಒಡೆದಿರುವುದು ಎಷ್ಟು ಸರಿ, ಅಲ್ಪಸಂಖ್ಯಾತರೆಂದರೆ ಕೇವಲ ಮುಸ್ಲಿಂಮರು ಮಾತ್ರವೇ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಕ್ಫ್ ಆಸ್ತಿಗಳ ದುರಸ್ತಿ, ನವೀಕರಣ ಮತ್ತು ಮುಸ್ಲಿಂ ಸ್ಮಶಾನಗಳ ರಕ್ಷಣೆಗಾಗಿ ೧೫೦ ಕೋಟಿ ರೂ. ಹಂಚಿಕೆ ಮಾಡಿ, ಇಡೀ ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗೆ ಕೇವಲ ೨೫೦ ಕೋಟಿ ರೂ. ಮೀಸಲಿಟ್ಟಿರುವುದು ಹಾಗೂ ಜೈನ, ಬೌದ್ಧ ಮತ್ತು ಸಿಖ್ ಅಲ್ಪಸಂಖ್ಯಾತ ಸಮುದಾಯಗಳ ಅಭಿವದ್ಧಿಗಾಗಿ ಕೇವಲ ೧೦೦ ಕೋಟಿ ರೂ. ಹಂಚಿಕೆ ಮಾಡಲಾಗುವುದು ತಾರತಮ್ಯವಲ್ಲವೇ? ಜೆಡಿಎಸ್ ರಾಜ್ಯ ಕಾರ್ಯದರ್ಶಿ ರಾಕೇಶ್ ಡಿಸೋಜ ಅವರು ಎಂದು ಪ್ರಶ್ನಿಸಿದ್ದಾರೆ.