ಗ್ಯಾರೆಂಟಿ ಇಲ್ಲದೇ ಬೀದಿ ಬದಿ ವ್ಯಾಪಾರಸ್ಥರಿಗೆ ಬ್ಯಾಂಕ್ ಸಾಲ ಸೌಲಭ್ಯ…

ಶಿವಮೊಗ್ಗ: ಪಿಎಂ ಸ್ವನಿಧಿ ಯೋಜನೆ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಬೀದಿ ಬದಿ ವ್ಯಾಪಾರಸ್ಥರಿಗೆ ಯಾವುದೇ ಗ್ಯಾರಂಟಿ ಇಲ್ಲದೆ ಕೇವಲ ಆಧಾರ್ ಕಾರ್ಡ್ ಮತ್ತು ಸ್ಥಳೀಯ ಆಡಳಿತದ ಬೀದಿ ಬದಿ ವ್ಯಾಪಾರಿಯ ಐಡಿ ಕಾರ್ಡ್ ಇದ್ದರೆ ಮೊದಲ ಬಾರಿಗೆ ೧೦ ಸಾವಿರ ರೂ ಸಾಲ ನೀಡಲಾ ಗುವುದು ಎಂದು ಕೌಶಲ್ಯಾಭಿವೃದ್ಧಿ ಅಧಿಕಾರಿ ಸುರೇಶ್ ಹೇಳಿದರು.
ಅವರು ಇಂದು ಕುವೆಂಪು ರಸ್ತೆಯ ಲೀಡ್ ಬ್ಯಾಂಕ್ ಆವರಣದಲ್ಲಿ ಡೇ ನಲ್ಮ್ ಯೋಜನೆ, ಶಿವಮೊಗ್ಗ ಮಹಾನಗರ ಪಾಲಿಕೆ, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಮತ್ತು ವಿವಿಧ ಬ್ಯಾಂಕ್ ಗಳು ಕಾರ್ಮಿಕ ಇಲಾಖೆ ಸಹಯೋಗದಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಸಾಲ ಮೇಳ ಮೇ, ಬಿ ಡಿಜಿಟಲ್ ಮತ್ತು ಸ್ವನಿಧಿ ಸಮೃದ್ದಿ ಕಾರ್ಯಕ್ರಮದಡಿ ಮಾಹಿತಿ ಹಾಗೂ ವಿಮೆ ವಿತರಣೆ, ಸಾಲ ಪತ್ರ ವಿತರಣೆ, ಫಲಾನುಭವಿಗಳಿಗೆ ಸಾಲ ವಿತರಣೆ, ಕ್ಯೂ ಆರ್ ಕೋಡ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರ್ಕಾರ ಬೀದಿ ಬದಿ ವ್ಯಾಪಾರಸ್ಥರಿಗೆ ಸಾಲ ಮಾತ್ರ ಕೊಡುತ್ತಿಲ್ಲ. ಅವರ ಕುಟುಂಬಕ್ಕೆ ಜೀವನ ನಿರ್ವಹಣೆಯನ್ನೂ ಕಲಿಸಿದೆ. ಕಾಯಿದೆ ಮಾಡಿ ಅಸ್ತಿತ್ವ ಕೊಟ್ಟಿದೆ. ೧೨ ತಿಂಗಳು ಕಂತನ್ನು ತಪ್ಪದೆ ಕಟ್ಟಿದಲ್ಲಿ ಮತ್ತೆ ಅವರಿಗೆ ೨ನೇ ಬಾರಿಗೆ ೨೦ ಸಾವಿರ, ೩ನೇ ಬಾರಿಗೆ ೫೦ ಸಾವಿರ ಮತ್ತು ಅದಕ್ಕಿಂತ ಹೆಚ್ಚಿನ ಆರ್ಥಿಕ ನೆರವನ್ನು ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ನೀಡಲಿದೆ. ಮತ್ತು ಕ್ಯೂ ಆರ್ ಕೋಡ್ ಬಳಕೆ ಮಾಡಿದಲ್ಲಿ ಒಂದು ತಿಂಗಳಲ್ಲಿ ಕನಿಷ್ಠ ನೂರು ಚಲಾವಣೆ ಆದಲ್ಲಿ ಅವರಿಗೆ ಕ್ಯಾಶ್ ಬ್ಯಾಕ್ ಸೌಲಭ್ಯ ಕೂಡ ಸಿಗುತ್ತದೆ. ಡಿಫಾಲ್ಟರ್ ಆಗಬಾರದು. ಸಾಲ ಒಂದೇ ಅಲ್ಲ. ಸ್ವನಿಧಿ ಸೆ ಸಮೃದ್ಧಿ ಯೋಜನೆಯಡಿ ಇಡೀ ಕುಟುಂಬದ ಪ್ರೊಫೈಲಿಂಗ್ ಮಾಡಿ ಸರ್ಕಾರದ ಹಲವು ಯೋಜನೆಗಳಿಗೆ ಅರ್ಹತೆ ಸಿಗು ವಂತೆ ಮಾಡಲಾಗುತ್ತದೆ. ಅದನ್ನು ವಿವಿಧ ಇಲಾಖೆಗಳು ಪಾಲಿಕೆ ಯೊಂದಿಗೆ ಸೇರಿ ಅರ್ಹ ಅಭ್ಯರ್ಥಿ ಗಳಿಗೆ ಒದಗಿಸುತ್ತಾರೆ ಎಂದರು.
ಡಿಜಿಟಲ್ ಪೇಮೆಂಟ್ ಮಾಡುವುದರಿಂದ ಅನೇಕ ಲಾಭವಿದೆ. ಸಾಲ ಕಟ್ಟಲು ಸುಲಭ ವಾಗುತ್ತದೆ. ವ್ಯಾಪಾರ ವೃದ್ಧಿಯಾಗುತ್ತದೆ. ಚಿಲ್ಲರೆ ಅಭಾವ ಹೋಗಲಾಡಿಸಬಹುದು. ಕ್ಯಾಶ್‌ಲೆಸ್ ಆಗುವುದರಿಂದ ಅನೇಕ ಸೌಲಭ್ಯಗಳು ದೊರೆಯುತ್ತವೆ ಎಂದರು.
ಆರೋಗ್ಯ ವಿಮೆ ಸಿಗುತ್ತದೆ. ಶುಚಿತ್ವ ಎಂಬುದು ಬಹಳ ಮುಖ್ಯ.ಗುಣಮಟ್ಟದ ಆಹಾರ ನೀಡಿದಲ್ಲಿ ಗ್ರಾಹಕ ನಿಮ್ಮಲ್ಲಿ ಹೆಚ್ಚಿನ ವ್ಯವಹಾರ ಮಾಡುತ್ತಾರೆ. ಬರೀ ಸಾಲ ನೀಡುವುದಷ್ಟೇ ಸರ್ಕಾರದ ಉದ್ದೇಶವಲ್ಲ. ಬೀದಿ ಬದಿ ವ್ಯಾಪಾರಿಗಳ ಇಡೀ ಕುಟುಂಬದ ಹಿತಾಸಕ್ತಿ ಕಾಪಾಡುವುದು ಮತ್ತು ಜೀವನ ನಿರ್ವಹಣೆ ಉತ್ತಮ ಗೊಳಿಸುವುದು ಉದ್ದೇಶವಾಗಿದೆ ಎಂದರು.
ಕಾರ್ಮಿಕ ಇಲಾಖೆಯ ರಘುನಾಥ್ ಅವರು ಕಾರ್ಮಿಕ ಇಲಾಖೆಯ ಸೌಲಭ್ಯಗಳು ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ಇರುವ ನಿಯಮಗಳ ಬಗ್ಗೆ ತಿಳಿಸಿದರು.
ಕಾರ್ಯಕ್ರಮವನ್ನು ಮಹಾನಗರ ಪಾಲಿಕೆ ಮೇಯರ್ ಶಿವಕುಮಾರ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾರ್ಗದರ್ಶಿ ಬ್ಯಾಂಕ್ ಆದ ಕೆನರಾ ಬ್ಯಾಂಕ್ ವ್ಯವಸ್ಥಾಪಕ ಅಮರನಾಥ್, ಸಹಾಯಕ ಪ್ರಬಂಧಕ ವೆಂಕಟ ರಾಮುಲು, ಡೇನಲ್ಮ್ ಯೋಜನೆಯ ಸ್ಟೇಟ್ ಮಿಷನ್ ಮ್ಯಾನೇಜರ್ ಜಿತೇಂದ್ರ, ರೇಖಾ ರಂಗನಾಥ್, ಎಸ್‌ಬಿಐ ವ್ಯವಸ್ಥಾಪಕ ಪ್ರಸೀದ್, ಸಮನ್ವಯ ಕಾಶಿ, ಯಶೋಧ, ಲೋಕೇಶ್ವರಪ್ಪ, ಟಿವಿಸಿ ಸಮಿತಿಯ ಸದಸ್ಯರು, ಸಮುದಾಯ ಸಂಘಟಕ ರತ್ನಾಕರ್, ಸಂಪನ್ಮೂಲ ವ್ಯಕ್ತಿ ಉಷಾ, ಅನುಪಮಾ,ಆರೀಫ್ ಮತ್ತಿತರರಿದ್ದರು.