ಆ.೧೯: ರೈತ ನಾಯಕ ಹೆಚ್.ಎಸ್.ಆರ್. ಕುರಿತ ಪುಸ್ತಕ ಬಿಡುಗಡೆ

3

ಶಿವಮೊಗ್ಗ: ರೈತ ನಾಯಕ ಹೆಚ್.ಎಸ್.ರುದ್ರಪ್ಪ ಅವರ ಪುಸ್ತಕ ಪರಿಚಯ ಕಾರ್ಯಕ್ರಮವನ್ನು ಆ.೧೯ರಂದು ಹೊನ್ನಾಳಿಯಲ್ಲಿ ಆಯೋಜಿಸಿದೆ ಎಂದು ಲೇಖಕ ಹಾಗೂ ವಿಶ್ರಾಂತ ಜಿಲ್ಲಾ ಆರೋಗ್ಯಾ ಧಿಕಾರಿ ಡಾ.ಹೆಚ್.ಎಸ್. ರುದ್ರೇಶ್ ಸುದ್ದಿಗೋಷ್ಟಿಯಲ್ಲಿ ಹೇಳಿದರು.
ಹೆಚ್.ಎಸ್.ರುದ್ರಪ್ಪ ಅವರು ರೈತ ಯಜಮಾನರೆಂದೇ ಪ್ರಖ್ಯಾತಿ ಪಡೆದಿದ್ದವರು, ಗಾಂಧೀಜಿಯ ಕರೆಗೆ ವೃತ್ತಿಬಿಟ್ಟು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿ ಜೈಲು ಸೇರಿದವರು. ಬ್ರಿಟಿಷ್ ಸರ್ಕಾರ ಇವರ ಮೇಲೆ ಕಂಡಲ್ಲಿ ಗುಂಡು ಹಾಕಲು ಆದೇಶ ಕೂಡ ಮಾಡಿತ್ತು ಎಂದರು.
೧೯೪೬ರಲ್ಲಿ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಸಂಸ್ಥಾಪಕ ಅಧ್ಯಕ್ಷರಾಗಿದ್ದರು. ಸಂವಿಧಾನ ರಚನೆಯ ಕರಡು ಸಮಿತಿಯ ಸದಸ್ಯರಾಗಿದ್ದರು. ೧೯೫೨ ಮತ್ತು ೫೭ರಲ್ಲಿ ಹೊನ್ನಾಳಿ ಕ್ಷೇತ್ರದ ವಿಧಾನಸಭಾ ಸದಸ್ಯರಾಗಿದ್ದರು. ವಿಧಾನಸಭೆಯ ಸ್ಪೀಕರ್ ಕೂಡಾ ಆಗಿದ್ದರು. ಕಡಿದಾಳ್ ಮಂಜಪ್ಪ ಹಾಗೂ ನಿಜಲಿಂಗಪ್ಪ ಅವರ ಸಂಪುಟ ದಲ್ಲಿ ಮಂತ್ರಿ ಕೂಡ ಆಗಿದ್ದರು ಎಂದರು.
೧೯೭೨ರಲ್ಲಿ ಇವರು ರೈತ ಚಳುವಳಿಗೆ ಧುಮುಕಿ ಕಬ್ಬು ಬೆಳೆಗಾರರ ಸಂಘವನ್ನು ಕಟ್ಟಿದವರು. ನಂತರ ರೈತ ಸಂಘದಲ್ಲೂ ರೈತರ ಪರ ಹೋರಾಟ ಮಾಡಿದವರು. ೧೯೮೦ರಿಂದ ಅವರ ಮರಣದವರೆಗೂ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷರಾಗಿದ್ದರು ಎಂದರು.
ಅವರ ನೆನಪಿಗಾಗಿ ತಾವು ರೈತ ಯಜಮಾನ ಹೆಚ್.ಎಸ್.ರುದ್ರಪ್ಪ (ಜೀವನ-ಹೋರಾಟ-ಸಾಧನೆ) ಎಂಬ ಪುಸ್ತಕವನ್ನು ರಚಿಸಿದ್ದು, ಈ ಪುಸ್ತಕದಲ್ಲಿ ಹೆಚ್.ಎಸ್. ರುದ್ರಪ್ಪನವರ ಸಾಧನೆಯ ಪರಿಚಯವನ್ನು ಮಾಡಲಾಗುತ್ತದೆ. ರೈತರೆಲ್ಲರಿಗೂ ಉಚಿತವಾಗಿ ಈ ಪುಸ್ತಕವನ್ನು ನೀಡಲಾಗುತ್ತದೆ. ಈ ಪುಸ್ತಕವು ಸುಮಾರು ೨೪೪ ಪುಟಗಳನ್ನು ಹೊಂದಿದ್ದು, ೪೦ಕ್ಕೂ ಹೆಚ್ಚು ಜನರು ಲೇಖನಗಳನ್ನು ಬರೆದಿದ್ದಾರೆ. ಇದುವರೆಗೂ ಹೆಚ್.ಎಸ್.ರುದ್ರಪ್ಪ ಅವರ ಬಗ್ಗೆ ರೈತ ಸಂಘಗಳೇ ಆಗಲಿ ಅಥವಾ ಇತರರೇ ಆಗಲಿ ಪುಸ್ತಕವನ್ನು ತಂದಿರಲಿಲ್ಲ. ಈಗ ಇದನ್ನು ತರುತ್ತಿದ್ದು, ರುದ್ರಪ್ಪ ಅವರ ಪರಿಚಯವನ್ನು ನಾಡಿಗೆ ಪರಿಚಯಿಸುವ ಕೆಲಸ ಮಾಡಲು ಬಯಸಿದ್ದೇನೆ ಎಂದರು.
ಸಹ ಸಂಪಾದಕ ಜೋಗದ ವೀರಪ್ಪ, ಚನ್ನಪ್ಪ ಇನ್ನಿತರರಿದ್ದರು.