ಫಾರ್ಮಸಿ ಕಾಲೇಜಿನಲ್ಲಿ ಅನಾವರಣಗೊಂಡ ‘ಕಲಾ ಸಂಭ್ರಮ’

ಶಿವಮೊಗ್ಗ : ನಮ್ಮ ಜೀವನ ಇತರರಿಗೆ ಪ್ರೇರಣೆ ನೀಡುವಂತಹ ಬರೆದಿಟ್ಟ ಪುಸ್ತಕವಾಗಬೇಕು ಮತ್ತು ಆ ಪುಸ್ತಕವನ್ನು ಎಲ್ಲರೂ ಓದುವಂತಿರಬೇಕು ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣರಾವ್ ಹೇಳಿದರು.
ನಗರದ ರಾಷ್ಟ್ರೀಯ ಔಷಧ ಮಹಾವಿದ್ಯಾಲಯ ವತಿಯಿಂದ ಇಂದು ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ‘ಕಲಾ ಸಂಭ್ರಮ – ೨೦೨೩’ ಸಾಂಸ್ಕೃತಿಕ ದಿನ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿದರು.
ಮನುಷ್ಯನಲ್ಲಿ ಸಾಂಸ್ಕೃತಿಕ ಜೀವಂತಿಕೆ ಅತಿ ಮುಖ್ಯ. ಅಂತಹ ಜೀವಂತಿಕೆ ಬದುಕಿನಲ್ಲಿ ಎದುರಾಗುವ ಪ್ರತಿಯೊಂದು ಸವಾಲುಗಳನ್ನು ಎದುರಿಸಲು ಸಾಧ್ಯ ಮಾಡಿಕೊಡಲಿದೆ. ಸಾಂಸ್ಕೃತಿಕ ಕಲೆ ಬೆಳೆಸುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳ ಮೇಲಿದೆ. ಹಾಗಾಗಿಯೇ ಪ್ರಾಥಮಿಕದಿಂದ ಪದವಿಯವರೆಗೆ ಸಾಂಸ್ಕೃತಿಕ ಲವಲವಿಕೆಯನ್ನ ಜೀವಂತಿಕೆಯಿಂದ ಇಡಬೇಕು. ಸ್ಪರ್ಧೆಯಿಂದ ಗೆಲ್ಲಬೇಕೊ ಶ್ರದ್ಧೆಯಿಂದ ಗೆಲ್ಲಬೇಕೊ ಎನ್ನುವ ನಿರ್ಧಾರ ನಮ್ಮದಾಗಬೇಕಿದೆ ಎಂದ ಅವರು, ಬದಲಾದ ಕಾಲಮಾನದಲ್ಲಿ ನಮಗೆ ಸಿಗುವ ಅಧಿಕಾರ ಅಂತಸ್ತಿನ ಅಹಂಕಾರಕ್ಕಿಂತ ಸರಳತೆ ಸಜ್ಜನಿಕೆಗೆ ಹೆಚ್ಚು ಒಲವು ನೀಡಬೇಕು. ಅದೃಷ್ಟದಿಂದ ಅಹಂಕಾರವನ್ನು ಪಡೆದರೆ, ಕಷ್ಟಪಟ್ಟು ಪಡೆದ ಸಂಪಾದನೆ ವ್ಯಕ್ತಿತ್ವವನ್ನು ಕೊಡುತ್ತದೆ. ಬದುಕಿನಲ್ಲಿ ಎದುರಾಗುವ ಎಡುವು ನಿಜವಾದ ಸೋಲಲ್ಲ , ಜೀವನದಲ್ಲಿ ಎಡವಿ ಬಿzಗ ಎಲ್ಲರೂ ನೋಡು ವಂತೆ ಎದ್ದು ನಿಲ್ಲಬೇಕು ಎಂದು ಸಲಹೆ ನೀಡಿದರು.
ಯಾವುದನ್ನು ಹಣ ಖರೀದಿ ಮಾಡಲು ಸಾಧ್ಯವಿಲ್ಲವೊ ಅದನ್ನು ಹೃದಯ ಶ್ರೀಮಂತಿಕೆಯಿಂದ ಗಳಿಸಲು ಸಾಧ್ಯ. ಅಂತಹ ಹೃದಯ ವೈಶಾಲ್ಯತೆ ನಿಮ್ಮದಾಗಬೇಕು. ತುಟಿ ದಾಟದ ಮಾತುಗಳಿಗೆ ನಾವು ಸಾಹುಕಾರರು, ತುಟಿ ದಾಟಿದ ಮಾತುಗಳಿಗೆ ನಾವೂ ಗುಲಾಮರು. ಸೌಜನ್ಯಯುತ ಮಾತುಗಳು ಯುವ ಸಮೂಹದಾಗಬೇಕಿದೆ ಎಂದು ಹೇಳಿದರು.
ಔಷಧೀಯ ಗುಣಮಟ್ಟ ಪರಿಶೋಧಕ ವಿನಯ್.ಎಸ್.ವೈ ಮಾತನಾಡಿ, ಸಮಾಜದೊಂದಿಗೆ ಬೆರೆಯುವಿಕೆಯಿಂದ ಬದುಕು ಸುಂದರವಾಗುತ್ತದೆ. ದೇಶದಲ್ಲಿ ಆರೋಗ್ಯ ಕ್ಷೇತ್ರದಲ್ಲಿನ ಸಂಶೋಧನೆ ಅದ್ಭುತತೆಯನ್ನು ರೂಪಿಸುತ್ತಿದೆ. ಅಂತಹ ಕ್ಷೇತ್ರದಲ್ಲಿ ಕೆಲಸ ಮಾಡಲಿರುವ ವಿದ್ಯಾರ್ಥಿಗಳಲ್ಲಿ ಸೌಜನ್ಯತೆ, ಸಮಾಜಮುಖಿ ಜವಾಬ್ದಾರಿಗಳು ಮೂಡಬೇಕಿದೆ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಔಷಧ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಜಿ. ನಾರಾಯಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಶಿಕ್ಷಣ ಸಮಿತಿ ನಿರ್ದೇಶಕರಾದ ಟಿ.ಆರ್. ಅಶ್ವಥನಾರಾಯಣ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಲಾ ಪ್ರಕಾರಗಳನ್ನು ಪ್ರದರ್ಶಿಸಿದರು.