ವಿಜೃಂಭಣೆ ಜೊತೆ ಜನರ ಕಾಳಜಿಯೂ ಮುಖ್ಯ: ಎಸ್‌ಪಿ
ಭದ್ರಾವತಿ: ಎಲ್ಲ ಹಬ್ಬಗಳಿಗೂ ಪಾವಿತ್ರ್ಯತೆ ಮತ್ತು ಹಿನ್ನೆಲೆ ಇರುತ್ತದೆ. ನಮಗೆ ವಿಜೃಂಭಣೆ ಜತೆಗೆ ಕಾಳಜಿಯೂ ಮುಖ್ಯವಾಗ ಬೇಕು ಎಂದು ಜಿ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಸಲಹೆ ನೀಡಿದರು.
ನಗರದ ರೋಟರಿ ಕ್ಲಬ್ ಸಭಾಂಗಣದಲ್ಲಿ ಭದ್ರಾವತಿ ಉಪ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ನಾಗರಿಕ ಶಾಂತಿಸಭೆಯಲ್ಲಿ ಮಾತನಾಡಿದರು.
ಹಬ್ಬದ ಹೊರತಾಗಿ ಅನ್ಯ ವಿಚಾರಗಳಿಗೆ ಗಮನಕೊಡ ಬಾರದು. ಶೇ.೧ರಷ್ಟು ಜನರ ತಪ್ಪಿನಿಂದ ಶೇ.೯೯ರಷ್ಟು ಜನರು ಪರಿಣಾಮ ಎದುರಿಸಬೇಕಾಗುತ್ತದೆ. ಗಲಭೆಗಳು ಕೂಲಿ ಕಾರ್ಮಿಕರ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ ಎಂದರು.
ತಹಶೀಲ್ದಾರ್ ಪ್ರದೀಪ್ ಕುಮಾರ್, ನಗರಸಭೆ ಆಯುಕ್ತ ಮನುಕುಮಾರ್, ನಗರಸಭೆ ಅಧ್ಯಕ್ಷೆ ಶೃತಿ ವಸಂತಕುಮಾರ್, ಮುಖಂಡರಾದ ವಿ.ಕದಿರೇಶ್, ಮಂಗೋಟೆ ರುದ್ರೇಶ್, ಮಂಜುನಾಥ್, ಬಿ.ಎನ್.ರಾಜು, ಶಶಿಕುಮಾರ್ ಗೌಡ, ಬಾಬಾ ಜಾನ್, ಮುರ್ತುಜಾಖಾನ್, ಅಮೀರ್ ಜನ್ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದು ಸಲಹೆ ಸೂಚನೆ ನೀಡಿದರು.
ವೇದಿಕೆಯಲ್ಲಿ ಡಿ.ವೈ.ಎಸ್.ಪಿ. ನಾಗರಾಜ್, ವೃತ್ತ ನಿರೀಕ್ಷಕರಾದ ಶೈಲೇಂದ್ರ ಕುಮಾರ್, ಲಕ್ಷ್ಮೀಪತಿ, ಗುರುರಾಜ್ ಸೇರಿದಂತೆ ಹಲವರು ಹಾಜರಿದ್ದರು.