ಏರ್‌ಪೋರ್ಟ್ ಕಾಮಗಾರಿ: ಡಿಕೆಶಿ ಅಭಿಮಾನಿಗಳಿಂದ ನ್ಯಾಯಾಂಗ ತನಿಖೆಗೆ ಆಗ್ರಹ…

ಶಿವಮೊಗ್ಗ: ಶಿವಮೊಗ್ಗ ಏರ್‌ಪೋರ್ಟ್ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದ್ದು, ಅದನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಅ.ಕ. ಡಿ.ಕೆ. ಶಿವಕುಮಾರ್ ಅಭಿಮಾನಿಗಳ ಸಂಘ ಇಂದು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಡಿಸಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಸಂಘದ ಜಿಲ್ಲಾಧ್ಯಕ್ಷ ಆರ್. ಮೋಹನ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರ ಅಭಿಮಾನಿಗಳು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಏರ್‌ಪೋರ್ಟ್ ಕಾಮಗಾರಿಯಲ್ಲಿ ಅಕ್ರಮವಾಗಿದ್ದು, ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಬಿಲ್ಲನ್ನು ತಡಹಿಡಿಯಲು ಒತ್ತಾಯಿಸಿದರು.
ವಿಮಾನ ನಿಲ್ದಾಣದ ಆರಂಭಿಕ ವೆಚ್ಚ ೨೨೦ ಕೋಟಿ ಇತ್ತು ಆದರೆ ಅದು ೪೪೯.೨೨ ಕೋಟಿಗೆ ಏರಿಕೆಯಾಯಿತು. ಯೋಜನಾ ಗಾತ್ರದಲ್ಲಿ ಏರಿಕೆ ಯಾಗಿದ್ದು ಇಲ್ಲಿ ಅಕ್ರಮಗಳ ಸಾಧ್ಯತೆ ಕಂಡುಬರುತ್ತಿದೆ. ಹಳೆ ಮತ್ತು ಹೊಸ ರನ್‌ವೇ ಸೇರಿದಂತೆ ಮೂರು ಕಿ.ಮೀ. ಉದ್ದ, ೪೫ ಮೀಟರ್ ಅಗಲದ ರನ್‌ವೇ ನಿರ್ಮಾಣಕ್ಕೆ ೭೭೦ ಕೋಟಿ ಖರ್ಚು ತೋರಿಸಲಾಗಿದೆ. ನಿಲ್ದಾಣದ ಕಟ್ಟಡಕ್ಕೆ ೧೪೦ ಕೋಟಿ ಖರ್ಚು ಮಾಡಲಾಗಿದೆ. ವಿಮಾನ ನಿಲ್ದಾಣದ ಸುತ್ತ ಸಸಿ ನೆಡಲು ೨ಕೋಟಿ ಖರ್ಚಾಗಿದೆ. ಹೀಗೆ ಅನಗತ್ಯವಾಗಿ ಖರ್ಚು ಮಾಡಲಾಗಿದೆ ಎಂದರು.
ಒಂದು ಮನೆ ಕಟ್ಟಲು ಎಷ್ಟು ಹಣ ಖರ್ಚಾಗುತ್ತದೆಯೋ ಅಷ್ಟು ದುಡ್ಡನ್ನು ಗೃಹಪ್ರವೇಶಕ್ಕೆ ಖರ್ಚು ಮಾಡಿದಂತೆ ವಿಮಾನ ನಿಲ್ದಾಣದ ಉದ್ಘಾಟನೆಯಲ್ಲಿ ಕೂಡ ಮಿತಿ ಮೀರಿ ಖರ್ಚು ಮಾಡಲಾಗಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯಾಂಗ ತನಿಖೆಗೆ ಒಳಪಡಿಸುವಂತೆ ಸರ್ಕಾರವನ್ನು ಆಗ್ರಹಿಸಿದರು.
ಪ್ರತಿ ಕಿಲೋ ಮೀಟರ್ ರನ್‌ವೇಗೆ ೮೮.೪೬ ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ. ಬಹುಶಃ ಬೆಳ್ಳಿಯಲ್ಲಿಯೇ ರನ್‌ವೇ ನಿರ್ಮಾಣ ಮಾಡಬಹುದಿತ್ತೇನೊ. ಈ ಬಗ್ಗೆ ಈಗಾಗಲೇ ವಿಧಾನ ಪರಿಷತ್‌ನಲ್ಲಿ ಮಂಜುನಾಥ ಭಂಡಾರಿಯವರು ತನಿಖೆಗೆ ಆಗ್ರಹಿಸಿರುವುದು ಸ್ವಾಗತಾರ್ಹ. ಆದ್ದರಿಂದ ವಿಮಾನ ನಿಲ್ದಾಣದ ಸಂಪೂರ್ಣ ಕಾಮಗಾರಿಯ ವಿವರ, ರನ್‌ವೇಗೆ ತಗುಲಿದ ಖರ್ಚು, ಇವೆಲ್ಲವನ್ನು ತನಿಖೆಗೆ ಒಳಪಡಿಸಬೇಕು ಮತ್ತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.
ಜಿಲ್ಲಾ ಕಾಂಗ್ರೆಸ್ ವಕ್ತಾರ ರಮೇಶ್ ಶೆಟ್ಟಿ ಶಂಕರಘಟ್ಟ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಿ.ಒ. ಶಿವಕುಮಾರ್, ಪ್ರಮುಖರಾದ ಟಾಕ್ರಾ ನಾಯ್ಕ, ಸಿದ್ದಪ್ಪ, ಗಣೇಶ್, ಶ್ರೀಕಾಂತ್, ಮಂಜುನಾಥ್, ಸುರೇಶ್ ಕಲ್ಮನೆ, ಅಮರ್ ಸೇರಿದಂತೆ ಇನ್ನಿತರ ಗಣ್ಯರು ಪಾಲ್ಗೊಂಡಿದ್ದರು.