ಏ.12: ಬಿಜೆಪಿ ಬಂಡಾಯ ನಾಯಕ ಈಶ್ವರಪ್ಪರಿಂದ ನಾಮಪತ್ರ ಸಲ್ಲಿಕೆ…

3

ಶಿವಮೆಗ್ಗ: ಏ.೧೨ರಂದು ಸುಮಾರು ೨೫ ಸಾವಿರ ಕಾರ್ಯಕರ್ತ ರೊಂದಿಗೆ ನಾಮಪತ್ರ ಸಲ್ಲಿಸುವುದಾಗಿ ಬಿಜೆಪಿಯಿಂದ ಸಿಡಿದೆದ್ದ ಬಂಡಾಯ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಘೋಷಿಸಿದ್ದಾರೆ.
ಅವರು ಇಂದು ಶುಭಮಂಗಳ ಸಮುದಾಯ ಭವನದಲ್ಲಿ ರಾಷ್ಟ್ರಭಕ್ತರ ಬಳಗದ ವತಿಯಿಂದ ಆಯೋಜಿಸಿದ್ದ ನಗರ ಮತ್ತು ಗ್ರಾಮಾಂತರ ಮಟ್ಟದ ಬೂತ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡುತ್ತಾ ರಾಜ್ಯ ಬಿಜೆಪಿ ಹಿಂದುತ್ವವನ್ನು ಮರೆಯುತ್ತಿದೆ. ಪಕ್ಷದ ಹಿರಿಯ ಕಾರ್ಯಕರ್ತರಿಗೆ ನೋವಾಗಿದೆ. ಇದನ್ನು ಸರಿಪಡಿಸಲು ಶಿವಮೊಗ್ಗ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ದಿಸುತ್ತಿದ್ದೇನೆ ಎಂದರು.
ಚುನಾವಣೆಗೆ ಇನ್ನೂ ದಿನವಿದೆ. ನನ್ನ ಗುರುತು ಕೂಡ ಇನ್ನೂ ತೀರ್ಮಾನವಾಗಿಲ್ಲ. ಮತದಾನದ ದಿನಾಂಕ ನಿಗಧಿಯಾಗಿದೆ. ಆದ್ದರಿಂದ ಏ. ೧೨ರಂದು ಸಾವಿರಾರು ಕಾರ್ಯಕರ್ತರೊಂದಿಗೆ ನಾಮಪತ್ರ ಸಲ್ಲಿಸುವೆ. ತಮ್ಮ ನಾಮಪತ್ರ ಸಲ್ಲಿಕೆ ವಿಚಾರ ಯಡಿಯೂರಪ್ಪನವರ ಎದೆಯಲ್ಲಿ ನಡುಕ ಆರಂಭವಾಗುತ್ತದೆ. ನನ್ನ ಜೊತೆ ಬರುವವರು ಸ್ವಾಭಿಮಾನಿಗಳು. ಶಕ್ತಿ ಪ್ರದರ್ಶನಕ್ಕೆ ಇಳಿದಾಗಿದೆ ಎಂದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕೆಂದು ೧೦೮ ಸ್ಥಾನವನ್ನು ನಾವು ಗೆದ್ದಿದ್ದೆವು. ಬೊಮ್ಮಾಯಿ ಅವರು ಸದಾನಂದಗೌಡರು, ಜಗದೀಶ್ ಶೆಟ್ಟರ್ ಸಿ.ಎಂ. ಆದರು. ಆದರೆ, ೧೦೮ರಿಂದ ೬೬ ಸ್ಥಾನಕ್ಕೆ ಕುಸಿಯಿತು. ಇದು ಕಾರ್ಯಕರ್ತರಿಂದ ಅಲ್ಲ, ಕೆಲವು ನಮ್ಮ ಪಕ್ಷದ ನಾಯಕರಿಂದ ಎಂದು ದೂರಿದರು.
ಶೇ.೪೦ರ ಕಮಿಷನ್ ಹಗರಣ ಪ್ರಕರಣದಲ್ಲಿ ನನಗೆ ಕ್ಲೀನ್ ಚಿಟ್ ಸಿಕ್ಕಿದೆ. ಆದರು ಕೂಡ ಮಾತಿನಂತೆ ನನಗೆ ಸಚಿವ ಸ್ಥಾನವನ್ನು ಕೊಡಲಿಲ್ಲ. ಈಶ್ವರಪ್ಪನವರಿಗೆ ಸಚಿವ ಸ್ಥಾನ ಕೊಡಲೇಬೇಕು ಎಂದಾದರೆ ನನ್ನ ಮಗ ವಿಜಯೇಂದ್ರನಿಗೂ ಸಚಿವ ಸ್ಥಾನ ನೀಡಬೇಕು ಎಂದಿದ್ದರು. ಬಿ.ಎಸ್. ಯಡಿಯೂರಪ್ಪನವರ ಹೆಸರು ಹೇಳದೆ ಪರೋಕ್ಷವಾಗಿ ಅವರ ಮೇಲೆ ದಾಳಿ ನಡೆಸಿದರು.
ಲೋಕಸಭಾ ಚುನಾವಣೆಗೆ ಮಗನಿಗೆ ಟಿಕೇಟ್ ಕೊಡುತ್ತೇವೆ ಎಂದರು, ಆದರೆ ಕೊಡಲಿಲ್ಲ. ಇದರ ಹಿಂದೆ ಹಿಂದುಳಿದ ನಾಯಕರನ್ನು ಬೆಳೆಸಬಾರದು ಎಂಬ ಹುನ್ನಾರವಿದೆ ಎಂದು ದೂರಿದ ಅವರು, ಪ್ರತಾಪ ಸಿಂಹ, ಅನಂತ್‌ಕುಮಾರ್ ಹೆಗಡೆ, ಸಿ.ಟಿ.ರವಿ ಮುಂತಾದವರಿಗೂ ಸೀಟು ನಿರಾಕರಿಸಲಾಗಿದೆ ಎಂದರು.
ಈಗಾಗಲೇ ಜಿಲ್ಲಾ ಪ್ರವಾಸ ಮಾಡಿರುವೆ, ಬೈಂದೂರಿಗೆ ರಾಜಧ್ಯಕ್ಷನಾದಾಗ ಹೋಗಿದ್ದೆ, ಈಗಾಗಲೇ ರಾಘವೇಂದ್ರ ಅವರ ಬಗ್ಗೆ ಅಲ್ಲಿ ಸಿಟ್ಟಿದೆ. ಹಿಂದುತ್ವಕ್ಕೆ ದ್ರೋಹ ಮಾಡಿದ್ದಾರೆ ಎಂದು ಕಾರ್ಯಕರ್ತರು ತಿಳಿಸಿದ್ದಾರೆ. ಹೋದ ಕಡೆಯೆಲ್ಲ ಅವರಿಗೆ ವಿರೋಧ ವ್ಯಕ್ತವಾಗುತ್ತಿದೆ. ನನ್ನನ್ನು ಗೆಲ್ಲಿಸುವ ಮಾತನಾಡುತ್ತಿದ್ದಾರೆ. ಗೆದ್ದು ನಿಮ್ಮ ಋಣ ತೀರಿಸುವೆ ಎಂದ ಅವರು, ಈಗ ತಾನೇ ನನ್ನ ಮಗನಿಗೆ ಮೊಬೈಲ್ ಕರೆ ಬಂದಿದೆ. ಯಾರ ಕರೆ ಬಂದರೂ, ಮನೆಗೆ ಬಂದರೂ ಪಕ್ಷೇತರವಾಗಿ ನಾನು ಲೋಕಸಭಾ ಚುನಾವಣೆಯಲ್ಲಿ ನಿಲ್ಲುವುದು ಖಚಿತ, ಗೆಲ್ಲುವುದು ಖಚಿತ. ಆದರೆ, ಈಶ್ವರಪ್ಪ ಸೋಲುತ್ತಾರೆ ಎಂದು ಹೇಳುತ್ತಿದ್ದಾರೆ. ಹಾಗಿದ್ದ ಮೇಲೆ ನಮ್ಮ ಕಾರ್ಯಕರ್ತರನ್ನು ಬೆದರಿಸುವ ಕೆಲಸ ಮಾಡುತ್ತಿದ್ದಾರೆ ಏಕೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಕೆ.ಇ.ಕಾಂತೇಶ್, ಆರತಿ ಅ.ಮಾ. ಪ್ರಕಾಶ್, ಶಂಕರ್, ಕೇಬಲ್ ಬಾಬು, ಭೂಪಾಲ್, ಮಂಜುನಾಥ್, ಇ. ವಿಶ್ವಾಸ್, ಲಕ್ಷ್ಮೀ ಶಂಕರನಾಯಕ್, ಗಂಗಾಧರ್, ಗಣೇಶ್, ಮುರುಗನ್, ಗುರುಶೇಟ್, ಅನಿತಾ, ಜಧವ್ ಮುಂತಾದವರು ಇದ್ದರು.