ನೆಡುತೋಪುಗಳ ಕಡಿತಲೆ ಮತ್ತು ಸಾಗಾಣಿಕೆ ಕಾರ್ಯಾಚರಣೆಗೆ ನಿಗಮದ ತಡೆ: ಆಕ್ರೋಶ
ಶಿವಮೊಗ್ಗ : ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕರ್ನಾಟಕ ಅರಣ್ಯ ಅಭಿವೃದ್ದಿ ನಿಗಮ ಬೆಳೆಸಿದ ನೆಡುತೋಪುಗಳ ಕಡಿತಲೆ ಹಾಗೂ ಸಾಗಾಣಿಕೆ ಕಾರ್ಯಾಚರಣೆಗೆ ಈಗ ನಿಗಮವೇ ವಿನಾಕಾರಣ ತಡೆಹಾಕಿರುವುದರ ಪರಿಣಾಮ, ಟೆಂಡರ್ ಮೂಲಕ ಗುತ್ತಿಗೆ ಪಡೆದ ಗುತ್ತಿಗೆದಾರರು ತೀವ್ರ ಸಂಕಷ್ಟ ಎದುರಿಸುವಂತಾಗಿದ್ದು, ತಕ್ಷಣವೇ ನೆಡುತೋಪುಗಳ ಕಡಿತಲೆ ಮತ್ತು ಸಾಗಾಣಿಕೆ ಕೆಲಸಕ್ಕೆ ಆದೇಶಿಸಬೇಕೆಂದು ರಾಜ್ಯ ಎಂಪಿಎಂ ಮತ್ತು ಕೆಎಫ್ಡಿಸಿ ಅರಣ್ಯ ನೆಡುತೋಪು ಗುತ್ತಿಗೆದಾರರ ಕ್ಷೇಮಾಭಿವೃದ್ದಿ ಸಂಘ ಒತ್ತಾಯಿಸಿದೆ.
ಸಂಘದ ಅಧ್ಯಕ್ಷ ಧರ್ಮೇಂದ್ರ ಬಿ. ಶಿರವಾಳ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ೨೫-೩೦ ವರ್ಷ ಗಳಿಂದ ಕೆಎಫ್ಡಿಸಿ ನೆಡುತೋಪುಗಳ ಟೆಂಡರ್ನಲ್ಲಿ ಗುತ್ತಿಗೆದಾರರಾಗಿ ಭಾಗವಹಿಸಿ, ಕಾನೂನು ಪ್ರಕಾರ ನೆಡುತೋಪುಗಳನ್ನು ಪ್ರಾಮಾಣಿಕವಾಗಿ ಕಡಿತಲೆ ಮಾಡಿ, ಸರ್ಕಾರ ಮತ್ತು ಕರ್ನಾಟಕ ಅರಣ್ಯ ಅಭಿವೃದ್ದಿ ನಿಗಮದ ಪರವಾಗಿ ಉತ್ತಮ ಸೇವೆ ನೀಡುತ್ತಾ ಬಂದಿದ್ದೇವೆ. ಅದೇ ಪ್ರಕಾರ ಈಗಲೂ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕರ್ನಾಟಕ ಅರಣ್ಯ ಅಭಿವೃದ್ದಿ ನಿಗಮ ಬೆಳೆಸಿದ ನೆಡುತೋಪುಗಳ ಕಡಿತಲೆ ಮತ್ತು ಸಾಗಾಣಿಕೆಗೆ ಈ ಟೆಂಡರ್ ಮೂಲಕ ಗುತ್ತಿಗೆ ಪಡೆದು, ಒಂದಷ್ಟು ಕೆಲಸ ಕೂಡ ಆಗಿದೆ. ಆದರೆ ಈಗ ನೆಡುತೋಪುಗಳ ಕಡಿತಲೆ ಮತ್ತು ಸಾಗಾಣಿಕೆ ಕಾರ್ಯಾ ಚರಣೆಯನ್ನು ಅರಣ್ಯ ಅಭಿವೃದ್ದಿ ನಿಗಮ ಸ್ಥಗಿತ ಗೊಳಿಸಲು ಆದೇಶಿಸಿದೆ. ಇದು ಗುತ್ತಿಗೆದಾರರನ್ನು ಸಂಕಷ್ಟಕ್ಕೆ ಸಿಲುಕಿದೆ ಎಂದು ದೂರಿದರು.
ಟೆಂಡರ್ ಕೊಟ್ಟ ಪ್ರಕಾರ ನೆಡುತೋಪುಗಳ ಕಡಿತಲೆ ಮತ್ತು ಸಾಗಾಣಿಕೆ ಕಾರ್ಯಾಚರಣೆಗೆ ನಿಗಮವು ತಕ್ಷಣವೇ ಆದೇಶಿಸಬೇಕು. ಇಲ್ಲದಿದ್ದರೆ ಗುತ್ತಿಗೆದಾರರು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಸಂಘದ ಗೌರವಾಧ್ಯಕ್ಷ ಟಿ. ಪೆರುಮಾಳ್, ಪ್ರಧಾನ ಕಾರ್ಯದರ್ಶಿ ಜವೀದ್ , ಪ್ರಮುಖರಾದ ಕಾಂತರಾಜು , ರಾಜು ಕೆ ನಾಯರ್, ಟೀಕಪ್ಪ, ಕೆ.ವಿ. ಅನಂತ ಪದ್ಮನಾಭ ಕಿಣಿ ಸೇರಿದಂತೆ ಮತ್ತಿತರರು ಇದ್ದರು.