tulsi-puja

ನಮಸ್ತುಳಸೀ ಕಲ್ಯಾಣಿ ನಮೋ ವಿಷ್ಣುಪ್ರಿಯೇ ಶುಭೇ | ನಮೋ ಮೋಕ್ಷಪ್ರದೇ ದೇವಿ ನಮಃ ಸಂಪತ್ಪ್ರದಾಯಿನೀ ||
ಯನ್ಮೂಲೆ ಸರ್ವತೀರ್ಥಾನೀ ಯನ್ಮದ್ಧ್ಯೇ ಸರ್ವದೇವತಾ | ಯದಗ್ರೇ ಸರ್ವವೇದಾಶ್ಚ ತುಳಸೀ ತ್ವಾಂ ನಮಾಮ್ಯಹಮ್ ||
ಸಕಲ ಕಾರ್ಯದ ಕಲ್ಯಾಣಕ್ಕೆ ಕಾರಣವಾದ, ವಿಷ್ಣುಪ್ರಿಯೆಯಾದ, ಶುಭ ಸೂಚಕಳಾದ, ಮೋಕ್ಷವೀವಳಾದ, ಸರ್ವ ಸಂಪತ್ಪ್ರದಾಯಿನಿಯಾದ ಜಗನ್ಮಾತೆ ತುಳಸಿ ದೇವಿಯನ್ನು ನಮಸ್ಕರಿಸುತ್ತೇನೆ.
ತುಳಸೀದೇವಿಯೇ ನಿನ್ನ ಮೂಲದಲ್ಲಿಯೇ ಗಂಗಾದಿ ಸರ್ವ ತೀರ್ಥಗಳು ವಾಸಿಸುತ್ತಿರುವುದು, ನಿನ್ನ ಮಧ್ಯಭಾಗದಲ್ಲಿ ಇಂದ್ರಾದಿ ಸಕಲ ದೇವತೆಗಳು ವಾಸಿಸುತ್ತಿzರೆ. ನಿನ್ನ ಅಗ್ರಭಾಗದಲ್ಲಿ ಸಕಲ ವೇದಗಳೂ ಇರುವುದರಿಂದ ಅಂತಹ ತುಳಸೀ ದೇವಿಗೆ ನಿತ್ಯವೂ ನಮಸ್ಕಾರ ಮಾಡಬೇಕು.
ಸರ್ವದೇವತೆಗಳ ಪ್ರತ್ಯಕ್ಷ ರೂಪವನ್ನು ಹೊಂದಿರುವ ತುಳಸೀ ದೇವಿಯು ಅತ್ಯಂತ ಪವಿತ್ರಳು, ಶುಭಪ್ರದಳೂ, ಪೂಜ್ಯಳಾಗಿ ಕಾಮಧೇನು, ಕಲ್ಪವಕ್ಷದಂತೆ ಕಲಿಯುಗದಲ್ಲಿ ಮಹಿಮಾನ್ವಿತ ಸ್ಥಾನವನ್ನು ಹೊಂದಿರುವವಳು.
ಇಂತಹ ಅಮೃತ ಸಮಾನವಾದ ತುಳಸೀ ಗಿಡದ ಪೂಜೆಯನ್ನು ಮಾಡುವುದು ಎ ಸ್ತ್ರೀಯರ ಪ್ರಮುಖ ಕರ್ತವ್ಯವಾಗಿದೆ. ಪುರುಷರೂ ಮಾಡಬಹುದು.
ಕೆಲವು ಮುಖ್ಯ ಸೂಚನೆಗಳು
೧. ತುಳಸೀ ಪೂಜೆಯನ್ನು ನಿತ್ಯವೂ ಮಾಡುವುದರಿಂದ ಸರ್ವಸೌಭಾಗ್ಯವೂ ದೊರೆಯುತ್ತದೆ. ಇಲ್ಲದಿದ್ದಲ್ಲಿ ಪ್ರತಿ ತಿಂಗಳ ಶುದ್ಧ ದ್ವಾದಶಿಯಂದು ಮಾಡುವುದು ತುಂಬಾ ಮುಖ್ಯವಾಗಿರುತ್ತದೆ.
೨. ವಿಶೇಷವಾಗಿ ಪ್ರತೀ ವರ್ಷದ ಕಾರ್ತಿಕ ಮಾಸದ ಶುದ್ಧ ದ್ವಾದಶಿಯಂದು ಮಾಡಬೇಕು.
೩. ತುಳಸೀ ಗಿಡವನ್ನು ನೆಲಕ್ಕಿಂತ ಸ್ವಲ್ಪ ಎತ್ತರದ ಪ್ರದೇಶದಲ್ಲಿ ಬೆಳೆಸಬೇಕು.
೪. ಕಾರ್ತಿಕ ಮಾಸದಲ್ಲಿ ಪೂರ್ತಿಯಾಗಿ ತುಳಸೀ ಗಿಡದ ಸುತ್ತಲೂ ನೆಲ್ಲಿ ಕಾಯಿ ದೀಪವನ್ನು ಬೆಳಗಿ ಪೂಜಿಸಿದರೆ ಉತ್ತಮ ಫಲ ದೊರೆಯುವುದು. ಹಣದ ಸಮಸ್ಯೆ ನಿವಾರಣೆಯಾಗಿ, ಸಂಸಾರದಲ್ಲಿ ನೆಮ್ಮದಿ ಕಾಣುವಿರಿ.
೫. ಶ್ರೀ ತುಳಸೀ ಮತ್ತು ಕೃಷ್ಣ ತುಳಸಿಗೆ ಭೇದವಿಲ್ಲ.
೬. ತುಳಸೀ ಪೂಜೆಯಲ್ಲಿ ಸಿಹಿ ನೈವೇದ್ಯ ಮಾಡಬೇಕು.
೭. ಸ್ನಾನಕ್ಕೆ ಮುಂಚೆ ಮತ್ತು ಊಟದ ನಂತರ ತುಳಸಿಯನ್ನು ಬಿಡಿಸಬಾರದು.
೮. ತುಳಸಿ ದಳವನ್ನು ಆದಷ್ಟೂ ಅಷ್ಟಮಿ, ಅಮಾವಾಸ್ಯೆ, ಹುಣ್ಣಿಮೆ, ಚತುರ್ದಶಿ, ಸಂಕ್ರಮಣ, ಭಾನುವಾರ, ಶುಕ್ರವಾರ ಮಂಗಳವಾರಗಳಂದು ಕೀಳಬಾರದು.
(ಅನಿವಾರ್ಯ ಪರಿಸ್ಥಿತಿಯಲ್ಲಿ ಪರವಾಗಿಲ್ಲ).
೯. ಪೂಜೆಗಾಗಿ ಇರಿಸಿರುವ ತುಳಸಿ ಗಿಡದಿಂದ ತುಳಸಿಯನ್ನು ಕೀಳಬಾರದು.
೧೦. ತುಳಸಿ ಗಿಡದ ಮತ್ತಿಕೆಯು ಕುಂಕುಮದಂತೆಯೇ ಶ್ರೇಷ್ಠ ಸ್ಥಾನ ಹೊಂದಿದೆ. ಇದನ್ನು ಧರಿಸಿರುವುದರಿಂದ ಯಾವ ದುಷ್ಟ ಭಯವೂ ಇರುವುದಿಲ್ಲ ಮತ್ತು ಮಾಟ ಮಂತ್ರ ತಟ್ಟುವುದಿಲ್ಲ.
೧೧. ಲಕ್ಷ್ಮೀ ಪೂಜೆಯನ್ನು ಮಾಡುವವರು ಮೊದಲು ತುಳಸಿ ಪೂಜೆಯನ್ನು ಮಾಡಿ, ನಂತರ ಲಕ್ಷ್ಮೀ ಪೂಜೆ ಮಾಡಿದರೆ ಅತ್ಯಂತ ಶುಭಫಲಗಳು ಶೀಘ್ರವಾಗಿ ಬರುವುದು.
ಇಂತಹ ತುಳಸಿ ಪೂಜೆಯನ್ನು ಪ್ರತಿದಿನ ಮಾಡುವುದು ಅತ್ಯಂತ ಶ್ರೇಯಸ್ಕರವಾದುದು.
ಸರ್ವರಿಗೂ ಶುಭವಾಗಲಿ..

  • ಮುರುಳೀಧರ್ ಹೆಚ್ ಸಿ, ಕ್ಷೇತ್ರ ದರ್ಶನ ಅಂಕಣಕಾರರು ಹಾಗೂ ಪತ್ರಕರ್ತರು, ಶಿವಮೊಗ್ಗ.
    ದೂ. ೭೮೯೨೧೫೧೧೨೨೮.