ಸರ್ಜಿ ಆಸ್ಪತ್ರೆ ವೈದ್ಯರಿಂದ ಪವಾಡ: ಎರಡು ತುಂಡಾಗಿದ್ದ ಕೈ ಮರು ಜೋಡಿಸಿದ ವೈದ್ಯರು…

1

ಶಿವಮೊಗ್ಗ : ಎರಡು ತುಂಡಾಗಿದ್ದ ಕೈಗೆ ಶಸ್ತ್ರ ಚಿಕಿತ್ಸೆ ಮಾಡಿ ಮರು ಜೋಡಿಸುವ ಮೂಲಕ ಅಪರೂಪದ ಸಾಧನೆ ಮಾಡುವಲ್ಲಿ ನಗರದ ಸರ್ಜಿ ಸೂಪರ್ ಸ್ಪೆಷಾಲಿಟಿ ತಜ್ಞ ವೈದ್ಯರ ತಂಡ ಯಶಸ್ವಿಯಾಗಿದೆ.
ಸಾಮಿಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ೩೫ ವರ್ಷದ ಕಾರ್ಮಿಕರೊಬ್ಬರ ಕೈ ಆಕಸ್ಮಿಕವಾಗಿ ಮರ ಕೊಯ್ಯುವ ಯಂತ್ರಕ್ಕೆ ಸಿಲುಕಿ ಎರಡು ತುಂಡಾಗಿತ್ತು. ಸಂಪೂರ್ಣ ಕತ್ತರಿಸಿದ ಮುಂಗೈಯನ್ನು ಐಸ್ ಬಾಕ್ಸ್‌ನಲ್ಲಿ ಇಟ್ಟುಕೊಂಡು ರೋಗಿಯು ಆಸ್ಪತ್ರೆಯ ಅಪಘಾತ ವಿಭಾಗಕ್ಕೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಸತತ ೭ ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮಾಡಿ, ಮುಂಗೈನ ಮಾಂಸಖಂಡ, ಮೂಳೆ ಹಾಗೂ ನರಗಳನ್ನು ಯಶಸ್ವಿಯಾಗಿ ಮರು ಜೋಡಿಸಿ ರೋಗಿಗೆ ಹೊಸ ಬದುಕು ಕೊಟ್ಟಿದ್ದಾರೆ. ರೋಗಿಗೆ ಉತ್ತಮ ಆರೈಕೆ ಮಾಡಿ ಒಂದು ವಾರದ ಬಳಿಕ ಡಿಸ್ಚಾರ್ಜ್ ಮಾಡಲಾಗಿತ್ತು, ಆನಂತರ ಕಾಲಕಾಲಕ್ಕೆ ತಪಾಸಣೆ ನಡೆಸಿ, ಇದೀಗ ಕೈ ಚಲನವಲನ ಚೆನ್ನಾಗಿದ್ದು, ರೋಗಿಯು ಚೇತರಿಸಿ ಕೊಂಡಿದ್ದಾರೆ. ಸರ್ಜಿ ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜನ್ ಡಾ| ಚೇತನ್ ಹಾಗೂ ಮೂಳೆ ರೋಗ ತಜ್ಞರಾದ ಡಾ| ಮಂಜುನಾಥ್ , ಅರಿವಳಿಕೆ ತಜ್ಞರಾದ ಡಾ| ವಾದಿರಾಜ ಕುಲಕರ್ಣಿ ಮತ್ತು ಡಾ| ಮೂರ್ಕಣಪ್ಪ, ಡಾ|ಸಂತೋಷ್, ಡಾ| ಅರ್ಜುನ್ ಅವರ ತಂಡ ಈ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದೆ.
ಅಪಘಾತ ಅಥವಾ ದುರಂತ ದಲ್ಲಿ ಕೈ- ಕಾಲು, ಬೆರಳು ಸೇರಿದಂತೆ ಯಾವುದೇ ಅಂಗಗಳು ಕತ್ತರಿಸಿದಾಗ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೆ ಮತ್ತೆ ಹೊಸ ಬದಕನ್ನು ಕಂಡುಕೊಳ್ಳ ಬಹುದು. ಅವಘಡ ಸಂಭವಿಸಿ ಕೈ- ಕಾಲು, ಬೆರಳು ಸೇರಿದಂತೆ ಯಾವುದೇ ಅಂಗಗಳು ತುಂಡಾ ಗಿದ್ದರೆ ಭಯಪಡದೇ ಆತ್ಮಸ್ಥೈರ್ಯದೊಂದಿಗೆ ತುಂಡಾದ ಭಾಗವನ್ನು ಪ್ಲಾಸ್ಟಿಕ್ ಕವರ್ ನೊಂದಿಗೆ ಐಸ್ ಬಾಕ್ಸ್ ನಲ್ಲಿಟ್ಟು ೬ ಗಂಟೆಯೊಳಗೆ ಆಸ್ಪತ್ರೆಗೆ ತಂದರೆ ಶಸ್ತ್ರ ಚಿಕಿತ್ಸೆ ಮಾಡಿ ಮರು ಜೋಡಿಸಲು ಸಾಧ್ಯವಿದೆ.
ಆದರೆ ಇದು ಬಹಳಷ್ಟು ಜನರಿಗೆ ಸಾಧ್ಯವಾಗುವುದಿಲ್ಲ. ಘಟನೆ ನಡೆದಾಗ ಭಯ ಭೀತರಾಗಿ ಕಟ್ ಆದ ಭಾಗವನ್ನು ತರದೇ ಮರೆತು ಆಸ್ಪತ್ರೆಗೆ ಬರುವ ಸಾಧ್ಯತೆಗಳೇ ಹೆಚ್ಚು. ಇಲ್ಲವೆ ಬಹಳ ತಡವಾಗಿ ಬಂದರೆ ತುಂಡಾದ ಭಾಗದ ಮಾಂಸ ಖಂಡಗಳು ಕೊಳೆತಂತಾಗುತ್ತವೆ, ಜೀವಕೋಶ ಗಳು ಸಾಯುತ್ತವೆ, ಹಾಗಾಗಿ ಚಿಕಿತ್ಸೆ ಮಾಡಿದರೂ ಯಶಸ್ವಿ ಆಗುವುದಿಲ್ಲ. ಆದರೆ ಈ ಘಟನೆಯಲ್ಲಿ ರೋಗಿಯು ಎಚ್ಚೆತ್ತುಕೊಂಡು ಸಕಾಲಕ್ಕೆ ತುಂಡಾದ ಕೈಯೊಂದಿಗೆ ಬಂದಿದ್ದರಿಂದ ೭ ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಮರು ಜೋಡಿಸಲು ಸಾಧ್ಯವಾಗಿದೆ. ತುಂಡಾದ ಭಾಗಗಳನ್ನು ಯಾವುದೇ ಕಾರಣಕ್ಕೂ ನೇರವಾಗಿ ನೀರಿನಲ್ಲಿ ಅಥವಾ ಐಸ್ ಬಾಕ್ಸ್‌ನೊಳಗೆ ಇಟ್ಟುಕೊಂಡು ಬರಬಾರದು. ಬದಲಾಗಿ ಪ್ಲಾಸ್ಟಿಕ್ ಕವರ್‌ನಲ್ಲಿಟ್ಟು ಐಸ್‌ಬಾಕ್ಸ್‌ನಲ್ಲಿಟ್ಟು ತರಬೇಕು, ಹೀಗೆ ಮಾಡಿದಾಗ ಜೀವಕೋಶಗಳು ಸಾಯುವುದಿಲ್ಲ ಎಂದು ವೈದ್ಯರ ತಂಡ ತಿಳಿಸಿದೆ.