ಪೂಜ್ಯ ಗುರುಗಳ ಅಂತಿಮ ದರ್ಶನಕ್ಕೆ ಹರಿದುಬಂದ ಭಕ್ತಸಾಗರ ; ಮುಗಿಲು ಮುಟ್ಟಿದ ಆಕ್ರಂದನ…

3

ಶಿವಮೊಗ್ಗ : ಕ್ರೈಸ್ತ ಧರ್ಮಸಭೆ ಕಂಡಂತಹ ಅತ್ಯಂತ ಪ್ರತಿಭಾವಂತ ಹಾಗೂ ಮಾನವೀಯ ಮಲ್ಯಗಳ ಸಾಕಾರಮೂರ್ತಿ ಯಂತಿದ್ದಂತಹ ನಡೆದಾಡುವ ಜ್ಞಾನಭಂಡಾರ, ಶಿವಮೊಗ್ಗ ಧರ್ಮಕ್ಷೇತ್ರದ ಮಾಣಿಕ್ಯ ಫಾದರ್ ಡಾ.ಅಂತೋಣಿ ಪೀಟರ್ ಅವರು ಕಳೆದ ಮೂರು ದಿನಗಳ ಹಿಂದೆ ಅಸ್ತಂಗತರಾಗಿದ್ದು, ಪೂಜ್ಯರ ಅಂತಿಮ ದರ್ಶನ ಹಾಗೂ ಅಂತ್ಯಕ್ರಿಯಾ ವಿಧಿ ವಿಧಾನಗಳನ್ನು ನಗರದ ಸೇಕ್ರೆಡ್ ಹಾರ್ಟ್ ಪ್ರಧಾನಾಲಯದಲ್ಲಿ ಶಿವಮೊಗ್ಗ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ. ಫ್ರಾನ್ಸಿಸ್ ಸೆರಾವೋ ಅವರ ದಿವ್ಯಸಾನಿಧ್ಯದಲ್ಲಿ ಕಾರವಾರ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ. ಡುಮಿಂಗ್ ಡಯಾಸ್, ಭದ್ರಾವತಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ. ಜೋಸೆಫ್ ಅರುಮಚ್ಚಾಡತ್ ಅವರೊಂದಿಗೆ ರಾಜ್ಯದ ವಿವಿಧ ಧರ್ಮಕ್ಷೇತ್ರಗಳ ನೂರಾರು ಧರ್ಮ ಗುರುಗಳು ನೆರವೇರಿಸಿದರು.


ಪೂಜ್ಯಗುರುಗಳ ಅಕಾಲಿಕ ಮರಣದಿಂದಾಗಿ ಶಿವಮೊಗ್ಗ ಧರ್ಮಕ್ಷೇತ್ರದ ಕಥೋಲಿಕ ಕ್ರೈಸ್ತ ಸಮುದಾಯದ ಭಕ್ತರು ದಿಗ್ಭ್ರಾಂತರಾಗಿದ್ದರು. ಇಂದು ನಡೆದ ಪೂಜ್ಯರ ಅಂತಿಮ ವಿಧಿವಿಧಾನಗಳಿಗೆ ದೇಶ ವಿದೇಶಗಳಿಂದ ಭಕ್ತರು ಸಾಗರೋಪಾದಿಯಲ್ಲಿ ಬಂದು ಸೇರಿದ್ದರು. ಪೂಜ್ಯ ಗುರುಗಳ ಪಾರ್ಥಿವ ಶರೀರ ಕಂಡ ಭಕ್ತರ ಆಕ್ರಂದನ ಮುಗಿಲು ಮುಟ್ಟಿತ್ತು.
ಪ್ರಸ್ತುತ ಶಿಕಾರಿಪುರದ ಕಿರಿಯ ಪುಷ್ಪ ಸಂತ ತೆರೇಸಾ ಚರ್ಚ್‌ನಲ್ಲಿ ಧರ್ಮಕೇಂದ್ರದ ಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದ ಫಾದರ್ ಡಾ.ಅಂತೋಣಿ ಪೀಟರ್ ಅವರು ೨೩ ಜುಲೈ ೨೦೨೪ರ ಮಂಗಳವಾರ ಮಧ್ಯಾಹ್ನ ಸುಮಾರು ೩.೩೦ ಗಂಟೆ ಸುಮಾರಿಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದರು.
ಶಿವಮೊಗ್ಗ ನಗರದ ನಿವಾಸಿಗಳಾದ ಶ್ರೀ ಕಾಂತರಾಜ್ ಹಾಗೂ ಶ್ರೀಮತಿ ಸೂಸೈಮೇರಿ ಅವರ ಜೇಷ್ಠಪುತ್ರನಾಗಿ ೭ ಜನವರಿ ೧೯೭೩ರಂದು ಜನಿಸಿದ ಫಾದರ್ ಅಂತೋಣಿ ಪೀಟರ್ ಅವರಿಗೆ ಓರ್ವ ಸಹೋದರ ಹಾಗೂ ಓರ್ವ ಸಹೋದರಿ ಇzರೆ.


ತಮ್ಮ ಆರಂಭದ ಶಿಕ್ಷಣವನ್ನು ಶಿವಮೊಗ್ಗ ನಗರದಲ್ಲಿಯೇ ಪಡೆದಿರುವ ಪೂಜ್ಯರು ೧೯೯೦ರಲ್ಲಿ ಶಿವಮೊಗ್ಗ ಧರ್ಮಕ್ಷೇತ್ರದ ಗುರುಗಳಾಗಲು ನಿರ್ಧರಿಸಿ ಗುರುಮಠ ಸೇರಿದರು. ತಮ್ಮ ಗುರುಮಠದ ಪ್ರಾಥಮಿಕ ಶಿಕ್ಷಣವನ್ನು ಮೈಸೂರಿನ ಸಂತ ಮರಿಯಮ್ಮನವರು ಕಿರು ಗುರು ವಿದ್ಯಾಮಂದಿರ ಹಾಗೂ ಜೊತೆಗೆ ಪದವಿ ಶಿಕ್ಷಣವನ್ನು ಸಂತ ಫಿಲೋಮಿನಾ ಕಾಲೇಜಿನಲ್ಲಿ ಪೂರೈಸಿದರು.
ಬೆಂಗಳೂರಿನ ಸಂತ ಪೇತ್ರ ಮಹಾಗುರು ವಿದ್ಯಾಮಂದಿರಲ್ಲಿ ತತ್ವಶಾಸ್ತ್ರದಲ್ಲಿ ಪದವಿ ಹಾಗೂ ತದನಂತರ ಮಂಗಳೂರಿನ ಸಂತ ಜೋಸೆಫರ ಮಹಾ ಗುರು ವಿದ್ಯಾಮಂದಿರದಲ್ಲಿ ದೈವಶಾಸ್ತ್ರದಲ್ಲಿ ಪದವಿ ಪಡೆದು ೪ ಮೇ ೨೦೦೪ರಂದು ಗುರುದೀಕ್ಷೆ ಪಡೆದು ತಮ್ಮನ್ನೇ ಸಂಪೂರ್ಣವಾಗಿ ಲೋಕ ಕಲ್ಯಾಣಕ್ಕಾಗಿ ಸಮರ್ಪಿಸಿಕೊಂಡರು.
ಅಪಾರವಾದ ಜ್ಞಾನಹೊಂದಿದ್ದ ಪೂಜ್ಯರು ಅತ್ಯುತ್ತಮ ವಾಗ್ಮಿಯೂ, ಪ್ರಬುದ್ಧ ಪ್ರಬೋಧಕರೂ, ಉತ್ತಮ ಪಾಲಕರೂ ಆಗಿದ್ದರು. ಫಾದರ್ ಡಾ.ಅಂತೋಣಿ ಪೀಟರ್ ಅವರು ರೋಮ್ ನಗರದ ಉರ್ಬಾನಿಯ ವಿಶ್ವವಿದ್ಯಾನಿಲಯದಿಂದ ಅರಾಧನಾವಿಧಿ ಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದರು.
ದಾವಣಗೆರೆಯ ಸಂತ ತೊಮಾಸರ ದೇವಾಲಯದ ಸಹಾಯಕ ಗುರುಗಳಾಗಿ ಸೇವೆ ಸಲ್ಲಿಸಿ ನಂತರ ಭದ್ರಾವತಿಯ ಕಾರೇಹಳ್ಳಿ ಸಂತ ಅಂತೋಣಿಯವರ ದೇವಾಲದಯದ ಧರ್ಮಗುರುಗಳು, ಹರಿಹರ ಆರೋಗ್ಯಮಾತೆ ಬಸಿಲಿಕಾದ ರೆಕ್ಟರ್ ಆಗಿಯೂ ಅಪಾರ ಸೇವೆ ಸಲ್ಲಿಸಿರುವ ಪೂಜ್ಯರು ನೂರಾರು ಭಕ್ತಜನರ ಹೃದಯಗಳಲ್ಲಿ ಪೂಜ್ಯ ಗುರುಗಳಾಗಿ ಪ್ರತಿಷ್ಠಾಪನೆಗೊಂಡಿzರೆ. ದೈವ ಸಂದೇಶವನ್ನು ಎಳೆ ಎಳೆಯಾಗಿ ಬಿಡಿಸಿ ಹೇಳುವ ಅವರ ಪ್ರಭೋಧನೆಗೆಳು ಹಾಗೂ ಸುಶ್ರಾವ್ಯ ಕಂಠದಿಂದ ಅವರು ಹಾಡುವ ದೇವರ ಭಕ್ತಿಗೀತೆಗಳ ಮೂಲಕ ಸಾವಿರಾರು ಜನರ ಹೃದಯಗಳಿಗೆ ಭಕ್ತಿಯ ಸಿಂಚನ ಮಾಡಿzರೆ. ಅತ್ಯುತ್ತಮ ಸಂಘಟಕರೂ, ಪ್ರಭುದ್ಧ ನಾಯಕತ್ವದ ಗುಣವುಳ್ಳವರಾಗಿದ್ದ ಪೂಜ್ಯರು ಯಾವುದೇ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸುದರಲ್ಲಿ ಪ್ರಸಿದ್ದಿ ಪಡೆದಿದ್ದರು.
ಪೂಜ್ಯ ಗುರು ಡಾ. ಅಂತೋಣಿ ಪೀಟರ್ ಅಕಾಲಿಕ ಮರಣ ಕೇವಲ ಶಿವಮೊಗ್ಗ ಧರ್ಮಕ್ಷೇತ್ರ ಮಾತ್ರವಲ್ಲ ಅಖಿಲ ಕರ್ನಾಟಕದ ಧರ್ಮಸಭೆಗೆ ತುಂಬಲಾರದ ನಷ್ಟವನ್ನುಂಟು ಮಾಡಿದೆ. ಅಪಾರ eನಭಂಡಾರ, ಸ್ನೇಹಪರ ವ್ಯಕ್ತಿತ್ವ, ಪ್ರಬುದ್ಧ ಯೋಚನಾ ಲಹರಿಯನ್ನು ಹೊಂದಿದ್ದ ಫಾದರ್ ಡಾ.ಅಂತೋಣಿ ಪೀಟರ್ ಅವರನ್ನು ಕಳೆದುಕೊಂಡಿರುವ ಕಥೋಲಿಕ ಕ್ರೈಸ್ತ ಸಮಾಜದ ಭಕ್ತರು ಅಕ್ಷಶಃ ಕಣ್ಣೀರಾಗಿದ್ದರು.