ಫಲಾನುಭವಿಗಳಿಗೆ ಮನೆಗಳು ಹಂಚಿಕೆ ಆಗುವ ತನಕ ಹೋರಾಟ ನಿಲ್ಲದು…
ಶಿವಮೊಗ್ಗ: ಆಶ್ರಯ ಯೋಜನೆಯ ಫಲಾನುಭವಿಗಳಿಗೆ ಮನೆಗಳು ಹಂಚಿಕೆಯಾಗುವ ತನಕ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ರಾಷ್ಟ್ರಭಕ್ತಿ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ ಇಂದು ಶಪಥ ಮಾಡಿದರು.
ಅವರು ಅಪೂರ್ಣಗೊಂಡ ಆಶ್ರಯ ವಸತಿಯೋಜನೆಯ ಮನೆ ಗಳನ್ನು ಫಲಾನುಭವಿಗಳಿಗೆ ಶೀಘ್ರವೇ ಹಂಚಿಕೆಯಾಗುವಂತೆ ಸರ್ಕಾರವನ್ನು ಒತ್ತಾಯಿಸಿ ಹೋರಾಟದ ಜಥಾಕ್ಕೆ ಚಾಲನೆ ನೀಡಿದರು.
ರಾಮಣ್ಣಶ್ರೇಷ್ಟಿ ಪಾರ್ಕ್‌ನಿಂದ ಜಥಾ ಆರಂಭವಾಗಿ ನೆಹರು ರಸ್ತೆಯ ಮೂಲಕ ಜಥವು ಸೀನಪ್ಪಶೆಟ್ಟಿ ವೃತ್ತವನ್ನು ತಲುಪಿತು. ಅಲ್ಲಿ ನಡೆದ ಸಭೆಯಲ್ಲಿ ಈಶ್ವರಪ್ಪ ಮಾತನಾಡಿದರು.
ಗೋಪಿಶೆಟ್ಟಿಕೊಪ್ಪ ಮತ್ತು ಗೋವಿಂದಾ ಪುರದಲ್ಲಿ ಸುಮಾರು ೯ ವರ್ಷಗಳ ಹಿಂದೆಯೇ ಈ ಆಶ್ರಯ ಯೋಜನೆ ರೂಪುಗೊಳಿಸಲಾಗಿತ್ತು. ಮೂರು ವರ್ಷಗಳಲ್ಲಿ ಮನೆಯನ್ನು ಹಂಚಿಕೆ ಮಾಡುವುದಾಗಿ ಹೇಳಿದ್ದರೂ ಕೂಡ ಇದುವರೆಗೂ ಫಲಾನುಭವಿಗಳಿಗೆ ಹಂಚಿಕೆಯಾಗಿಲ್ಲ ಎಂದರು.
ಮನೆಗಾಗಿ ಮುಂಗಡ ಹಣ ಕೊಟ್ಟು ಜತಕ ಪಕ್ಷಿಯಂತೆ ಫಲಾನುಭವಿಗಳು ಕಾಯುತ್ತಿದ್ದಾರೆ. ಮುಂಗಡ ಹಣ ಕಟ್ಟಲು ಕೆಲವು ಮಹಿಳೆಯರು ತಾಳಿಯನ್ನೇ ಮಾರಿದ್ದಾರೆ, ಸಾಲ ಸೋಲ ಮಾಡಿದ್ದಾರೆ, ಇತ್ತ ಬಡ್ಡಿಯನ್ನು ಕಟ್ಟಲಾಗದೆ, ಮನೆಯೂ ಸಿಗದೇ ಸಂಕಷ್ಟದಲ್ಲಿದ್ದಾರೆ. ಎಷ್ಟೋ ಜನರು ನಿಮ್ಮ ಮನೆಯ ಸಹವಾಸವೇ ಬೇಡ. ನಮ್ಮ ಕಟ್ಟಿದ ಹಣವನ್ನಾದರೂ ವಾಪಾಸ್ಸು ಕೊಡಿ ಎಂದು ಬೇಡುವ ಸ್ಥಿತಿಗೆ ಬಂದಿದ್ದಾರೆ. ಸರ್ಕಾರದ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ದೂರಿದ ಅವರು, ಕೂಡಲೇ ಮನೆಗಳನ್ನು ಪೂರ್ಣಗೊಳಿಸಿ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಬೇಕು. ಈಗಾಗಲೇ ಮುಂಗಡ ಹಣ ಕೊಟ್ಟಿರುವವರಿಗೆ ಉಳಿದ ಹಣ ಪಾವತಿಸಲು ಬ್ಯಾಂಕ್ ಸೌಲಭ್ಯ ಒದಗಿಸಬೇಕು. ಅಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಬೇಕು ಮತ್ತು ಮಹಾನಗರ ಪಾಲಿಕೆಗೆ ಶೀಘ್ರವೇ ಚುನಾವಣೆಯಾಗಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕೆಲವರು ಹಣ ವಾಪಾಸ್ಸು ಕೇಳುತ್ತಿದ್ದಾರೆ. ದಯವಿಟ್ಟು ಹಣ ವಾಪಾಸ್ಸು ಕೇಳಬೇಡಿ, ನಿಮ್ಮ ಪರವಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ನಿಮಗೆ ಮನೆ ಸಿಗುವವರೆಗೂ ನಮ್ಮ ಹೋರಾಟ ನಿಲ್ಲಿಸುವುದಿಲ್ಲ ಎಂದು ಈಶ್ವರಪ್ಪನವರು ಫಲಾನುಭವಿಗಳಿಗೆ ಅಭಯ ನೀಡಿದರು.
ಪ್ರತಿಭಟನೆಯಲ್ಲಿ ಪ್ರಮುಖರಾದ ಇ.ವಿಶ್ವಾಸ್, ಎಂ. ಶಂಕರ್, ಸುವರ್ಣ ಶಂಕರ್, ಶಂಕರ್, ಬಾಲು, ಗನ್ನಿ ಶಂಕರ್, ಕಾಚಿನಕಟ್ಟೆ ಸತ್ಯನಾರಾಯಣ, ಮಹಾಲಿಂಗಯ್ಯಶಾಸ್ತ್ರಿ, ಮೋಹನ್, ನಾಗರಾಜ್, ವಾಗೀಶ್, ಶ್ರೀಕಾಂತ್, ಜಧವ್ ಸೇರಿದಂತೆ ಫಲಾನುಭವಿಗಳು ಪಾಲ್ಗೊಂಡಿದ್ದರು.