ಪ್ರೀತಿ – ಕ್ಷಮೆ- ತ್ಯಾಗ -ಶಾಂತಿ ಸೌಹಾರ್ದತೆ ಪ್ರತೀಕ ಗುಡ್ ಫ್ರೈಡೇ..

ಇಂದು ವಿಶ್ವದೆಡೆ ಕ್ರೈಸ್ತ ಧರ್ಮದ ಪ್ರತಿಯೊಬ್ಬರು ಗುಡ್ ಫ್ರೈಡೇ (ಪವಿತ್ರ ಶುಕ್ರವಾರ)ಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಿzರೆ. ಗುಡ್ ಫ್ರೈಡೆಯಂದು ಏಸುಕ್ರಿಸ್ತರು ಶಿಲುಬೆಗೇರಿದ ದಿನ. ತ್ಯಾಗ ಮತ್ತು ನೋವನ್ನು ಸಂಕೇತಿಸುವ ಈ ದಿನ ಕ್ರಿಶ್ಚಿಯನ್ನರಿಗೆ ಪವಿತ್ರ ದಿನವಾಗಿದೆ. ಗುಡ್ ಫ್ರೈಡೆಯನ್ನು ವಿಶ್ವದ ಒಂದೊಂದು ಭಾಗದಲ್ಲಿ ವಿವಿಧ ರೀತಿಯಿಂದ ಆಚರಿಸಲಾಗುತ್ತದೆ.
ಏಸುಕ್ರಿಸ್ತರು ಮರಣ ಶಿಲುಬೆಯಲ್ಲಿ ಯಾಥನಾಭರಿತ ಮರಣಹೊಂದಿದ ದಿನವನ್ನು ಗುಡ್ ಎಂದು ಹೇಳಲು ಕಾರಣವೇನು ಮತ್ತು ಇದರ ಮಹತ್ವವೇನು ಎಂದು ತಿಳಿಯೋಣ.
ಗುಡ್ ಫ್ರೈಡೆಯಂದು ದೇವಪುತ್ರ ಏಸುಕ್ರಿಸ್ತನನ್ನು ಶಿಲುಬೆಗೇರಿಸಿದ ದಿನವಾಗಿದೆ. ಈ ವರ್ಷ ೨೦೨೩ರಲ್ಲಿ ಏ.೭ರ ಇಂದು ತ್ಯಾಗ ಬಲಿದಾನದ ಗುಡ್ ಫ್ರೈಡೇ ಆಚರಿಸಲಾಗುತ್ತಿದೆ. ಕ್ರೈಸ್ತರು ಯಾವುದೇ ಆಡಂಬರಗಳಿಲ್ಲದೆ, ಯಾರಿಗೂ ತೋರ್ಪಡಿಸದೇ ಕಳೆದ ೪೦ ದಿನಗಳಿಂದ ದಾನ, ಉಪವಾಸ, ಪ್ರಾರ್ಥನೆಯೊಂದಿಗೆ ತಮ್ಮನ್ನು ಶುದ್ಧಗೊಳಿಸಿಕೊಂಡು ಈ ಪವಿತ್ರ ಆಚರಣೆಗೆ ತಮ್ಮನ್ನು ಸನ್ನದ್ಧರನ್ನಾಗಿಸಿಕೊಂಡಿರುತ್ತಾರೆ.


ಮಾನವ ಕುಲದ ಏಳಿಗೆಗಾಗಿ ಕಿಸ್ತನು ನೀಡಿರುವ ಬಲಿದಾನ ನೆನೆಯಲು ಗುಡ್ ಫ್ರೈಡೇ ಆಚರಿಸಲಾಗುತ್ತದೆ. ಇಂದಿನ ದಿನ ವಿಶೇಷವಾಗಿ ಕ್ರೈಸ್ತ ಧರ್ಮೀಯರು ದಿನವಿಡೀ ಉಪವಾಸವಿದ್ದು, ಕ್ರಿಸ್ತನ ತ್ಯಾಗ ಬಲಿದಾನವನ್ನು ಧ್ಯಾನಿಸಿ ಪ್ರಾರ್ಥಿಸುವರು.
ಶಿಲುಬೇಗೆರಿಸಿದ ಬಳಿಕ ಕ್ರಿಸ್ತನ ಉದಯವನ್ನು ಆಚರಿಸುವುದಕ್ಕೆ ಈ ದಿನವು ಆರಂಭವಾಗಿದೆ. ಕ್ರೈಸ್ತರು ಗುಡ್ ಫ್ರೈಡೆಯನ್ನು ಅತ್ಯಂತ ವಿಶೇಷ ದಿನವೆಂದು ಪರಿಗಣಿಸುವರು.
ಈ ದಿನ ಕ್ರಿಸ್ತನನ್ನು ಶಿಲುಬೆಗೇರಿಸಲಾಯಿತು ಮತ್ತು ನಮ್ಮ ಪಾಪಗಳಿಗೆ ಆತ ಬಲಿದಾನ ನೀಡಿದ ಎಂದು ನಂಬಲಾಗಿದೆ. ದೇವರು ತಮ್ಮ ಏಕೈಕ ಪುತ್ರ ಕ್ರಿಸ್ತನ ಮೂಲಕ ನಮಗೆ ಒಳಿತನ್ನು ಮಾಡಿರುವ ಪ್ರತಿಫಲನವಾಗಿದೆ.
ಗುಡ್ ಫ್ರೈಡೇಯನ್ನು ಗುಡ್(ಒಳ್ಳೆಯದು) ಎಂದು ಏಕೆ ಕರೆಯಲಾಗುವುದು? ಈ ದಿನವನ್ನು ಒಳ್ಳೆಯ ದಿನವೆಂದು ಕರೆಯಲು ಹಲವಾರು ರೀತಿಯ ವಿವರಣೆಗಳು ಇವೆ. ಇದರಲ್ಲಿ ತುಂಬಾ ಜನಪ್ರಿಯವಾಗಿರುವುದೆಂದರೆ ಹಿಂದಿನ ಇಂಗ್ಲಿಷ್ ಶಬ್ದಕೋಶದಲ್ಲಿ ಗುಡ್ ಎಂದರೆ ಪವಿತ್ರವೆಂದು ಬಣ್ಣಿಸಲಾಗಿತ್ತು. ಇದರಿಂದ ಇದನ್ನು ಗುಡ್ ಎಂದು ಕರೆಯಲಾಗುತ್ತದೆ. ಆದರೆ ಈ ದಿನ ವಿಶ್ವವೆ ಕ್ರಿಸ್ತನ ಸಾವಿಗೆ ದುಃಖ ಪಡುತ್ತದೆ.
ಈ ದಿನ ಜನರು ಹೇಗೆ ಕಳೆಯುವರು: ವಿಶ್ವದ ಮಾನವ ಕುಲಕ್ಕಾಗಿ ಏಸುಕ್ರಿಸ್ತನು ನೀಡಿರುವಂತಹ ಬಲಿದಾನವು ಇದಾಗಿದೆ ಎಂದು ಪರಿಗಣಿಸಲಾಗಿದೆ. ಜನರು ಈ ದಿನ ಶೋಕದಲ್ಲಿರುವರು ಮತ್ತು ಯಾವುದೇ ಸಮೂಹ ಪ್ರಾರ್ಥನೆಗಳು ಈ ದಿನ ನಡೆಯುವುದಿಲ್ಲ.


ಗುಡ್ ಫ್ರೈಡೇಯನ್ನು ಮತ್ತೊಂದು ರೀತಿಯಲ್ಲಿ ಪವಿತ್ರ ಶುಕ್ರವಾರ, ಶ್ರೇಷ್ಠ ಶುಕ್ರವಾರ ಅಥವಾ ಕಪ್ಪು ಶುಕ್ರವಾರವೆಂದು ಕರೆಯುತ್ತಾರೆ. ಎ ಹೆಸರುಗಳು ಆ ದಿನದ ಗಂಭೀರ ಸ್ವರೂಪಕ್ಕೆ ಸಂಬಂಧಿಸಿzಗಿದೆ.
ಆಕ್ಸ್ ಫರ್ಡ್ ಇಂಗ್ಲಿಷ್ ಶಬ್ದಕೋಶದಲ್ಲಿ ಇರುವ ವಿವರಣೆ ಪ್ರಕಾರ ಈ ದಿನ ಅಥವಾ ಋತುವನ್ನು ಚರ್ಚ್ ತುಂಬಾ ಪವಿತ್ರವೆಂದು ಪರಿಗಣಿಸುವುದು.
ಗುಡ್ ಫ್ರೈಡೇಯ ದಿನ ಚರ್ಚ್‌ಗಳಲ್ಲಿ ಯಾವುದೇ ರೀತಿಯ ಆಚರಣೆ ನಡೆಯುವುದಿಲ್ಲ. ಈ ಸಮಯದಲ್ಲಿ ಆಚರಿಸಲ್ಪಡುವ ಪವಿತ್ರ ವಿಧಿಗಳೆಂದರೆ ಪ್ರಾಯಶ್ಚಿತ್ತ ಮತ್ತು ರೋಗಿಗಳಿಗೆ ಅಭಿಷೇಕ. ಈ ವೇಳೆ ಶಿಲುಬೆಗಳು, ಕ್ಯಾಂಡಲ್‌ಗಳು ಮತ್ತು ಬಟ್ಟೆಯನ್ನು ಬಲಿಪೀಠದಿಂದ ತೆಗೆಯಲಾಗುತ್ತದೆ.


ಸಂಪ್ರದಾಯದಲ್ಲಿ ಭಿನ್ನತೆ : ಕ್ರೈಸ್ತ ಧರ್ಮದ ವಿವಿಧ ಪಂಗಡದವರು ಇದನ್ನು ಹಲವಾರು ರೀತಿಯಿಂದ ಆಚರಿಸುವರು. ಚರ್ಚ್‌ಗಳು ತಮ್ಮ ಸಂಪ್ರದಾಯದ ಆಚರಣೆಗಾಗಿ ನಿರ್ಧರಿಸುವ ಸಮಯ ಕೂಡ ಭಿನ್ನವಾಗಿರುವುದು. ಪಂಗಡಗಳು ಎಷ್ಟೇ ಇದ್ದರೂ ಕ್ರೈಸ್ತರು ಬೈಬಲ್‌ನ್ನು ಧರ್ಮಗ್ರಂಥವೆಂದು ಪರಿಗಣಿಸುವರು. ದಿನಾಂಕ ನಿರ್ಧರಿಸುವುದು ಪಾಶ್ವಾತ್ಯ ಭಾಗದಲ್ಲಿ ಜರ್ಜಿಯನ್ ಕ್ಯಾಲೆಂಡರ್ ಮೂಲಕ ಈ ದಿನವನ್ನು ನಿರ್ಧರಿಸಲಾಗುತ್ತದೆ. ಪೂರ್ವದಲ್ಲಿ ಇದನ್ನು ಜೂಲಿಯನ್ ಕ್ಯಾಲೆಂಡರ್ ಮೂಲಕ ನಿರ್ಧರಿಸಲಾಗುತ್ತದೆ. ಹುಣ್ಣಿಮೆಯ ದಿನದ ಲೆಕ್ಕಾಚಾರ ಕೂಡ ಸಂಪೂರ್ಣ ಭಿನ್ನವಾಗಿರುವುದು. ವಿಶ್ವದ ವಿವಿಧ ಭಾಗಗಳಲ್ಲಿ ಆಚರಣೆ ಕೂಡ ಭಿನ್ನವಾಗಿರುವುದು. ಆದರೆ ಕೊನೆಯದಾಗಿ ನೀಡಲಾಗುವಂತಹ ಸಂದೇಶ ಮಾತ್ರ ಒಂದೇ. ಏಸು ಕ್ರೈಸ್ತನು ಮಾನವ ಕುಲಕ್ಕಾಗಿ ತನ್ನ ಬಲಿದಾನ ನೀಡಿರುವುದನ್ನು ನೆನಪಿಸಿಕೊಂಡು, ಕ್ರಿಸ್ತ ಹೇಳಿದ ಪ್ರೀತಿಯನ್ನು ಹರಡುವುದು.


ಗುಡ್ ಫ್ರೈಡೆ ಇತಿಹಾಸ:
ಹೊಸ ಒಡಂಬಡಿಕೆಯ ಪ್ರಕಾರ, ರೋಮನ್ನರು ಯೇಸುವನ್ನು ಶಿಲುಬೆಗೇರಿಸಿದ ದಿನವನ್ನು ಗುಡ್ ಫ್ರೈಡೇ ಎನ್ನಲಾಗುತ್ತದೆ. ಯಹೂದಿ ಧಾರ್ಮಿಕ ಮುಖಂಡರು ದೇವರ ಮಗನೆಂದು ಹೇಳಿಕೊಳ್ಳುವುದಕ್ಕಾಗಿ ಯೇಸುವಿಗೆ ದೇವದೂಷಣೆಯನ್ನು ಮಾಡಿದರು. ಜೊತೆಗೆ ಅವರನ್ನು ರೋಮನ್ನರ ಬಳಿಗೆ ಕರೆತಂದರು. ರೋಮನ್ ನಾಯಕನಾದ ಪೊಂನ್ಸಿಯಸ್ ಪಿಲಾತನು ಯೇಸುವನ್ನು ಶಿಲುಬೆಗೇರಿಸಲು ಶಿಕ್ಷೆ ವಿಧಿಸಿದನು.
ಏಸುವಿಗೆ ಶಿಲುಬೆಗೇರಿಸಿ ಮರಣದಂಡನೆ ವಿಧಿಸಲಾಯಿತು ಮತ್ತು ಮುಳ್ಳಿನ ಕಿರೀಟವನ್ನು ಧರಿಸಿ ಬೆಟ್ಟದ ಮೇಲೆ ಶಿಲುಬೆಯನ್ನು ಸಾಗಿಸಲು ಬಲವಂತಪಡಿಸಲಾ ಯಿತು. ಶಿಲುಬೆಗೇರಿಸುವಿಕೆಯು ಆ ಸಮಯದಲ್ಲಿ ಮರಣದಂಡನೆಯ ಅತ್ಯಂತ ಕ್ರೂರ ರೂಪವಾಗಿತ್ತು. ಸೈನಿಕರು ಯೇಸುವನ್ನು ಶಿಲುಬೆಗೆ ಹೊಡೆದ ನಂತರ ಸಾಯಲು ಬಿಟ್ಟರು ಎಂದು ಪವಿತ್ರ ಗ್ರಂಥದಲ್ಲಿ ತಿಳಿಸಲಾಗಿದೆ.


ತ್ಯಾಗ ಬಲಿದಾನದ ಸಂಕೇತವಾದ ಈ ದಿನವನ್ನು ಪವಿತ್ರದಿನವೆಂದು ನಂಬಿರುವ ಕ್ರೈಸ್ತರು ವಿಶೇಷವಾಗಿ ಬೂದಿಬುಧವಾರ ದಿಂದ ಗುಡ್‌ಫ್ರೈಡೇ ವರೆಗೆ ಯಾರಿಗೂ ತೋರ್ಪಡಿಸದ ರೀತಿಯಲ್ಲಿ ಉಪವಾಸ ವ್ರತ ಕೈಗೊಂಡು ಆಧ್ಯಾತ್ಮಿಕವಾಗಿ ತಮ್ಮನ್ನು ತಾವು ಪರಿಶುದ್ಧಗೊಳಿಸಿಕೊಳ್ಳುವುದು ವಾಡಿಕೆಯಾಗಿದೆ. ಮನುಕುಲದ ಒಳಿತಿಗಾಗಿ ಶಿಲುಬೆಯ ಮೇಲೆ ಪ್ರಾಣ ಬಿಟ್ಟ ದೇವಪುತ್ರ ಏಸುಕ್ರಿಸ್ತ ಪುನಃ ಮೂರನೇ ದಿನ ಪುನರ್‌ಜನ್ಮ ತಾಳುವರೆಂದು ನಂಬಿರುವ ಕ್ರೈಸ್ತರು ಅಂದು ಏಸುವಿನ ಪುನರುತ್ಥಾನದ ಹಬ್ಬವಾದ ಈಸ್ಟರ್ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸುವರು.


ಶಿವಮೊಗ್ಗ ಧರ್ಮಕ್ಷತ್ರದ ಸೇಕ್ರೆಡ್ ಹಾರ್ಟ್ ಪ್ರಧಾನಾಲಯದಲ್ಲಿ ಗುಡ್‌ಫ್ರೈಡೆ ಆಚರಣೆ:
ಏ.೭ರ ಶುಕ್ರವಾರ ಮಧ್ಯಾಹ್ನ ೩ ಗಂಟೆಗೆ ಪವಿತ್ರ ಪ್ರಧಾನಾಲಯದ ಹೊರ ಭಾಗದಲ್ಲಿರುವ ಶಿಲುಬೆ ಹಾದಿಯ ೧೪ ಸ್ಥಳಗಳಲ್ಲಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ| ಫ್ರಾನ್ಸಿನ್ಸ್ ಸೆರಾವೋ ಅವರ ಸಾನಿಧ್ಯದಲ್ಲಿ ಜರುಗಿದ ಪವಿತ್ರ ಶಿಲುಬೆಹಾದಿ ಪ್ರಾರ್ಥನೆಯಲ್ಲಿ ಮಧ್ಯಾಹ್ನದ ಬಿರುಬಿಸಿಲನ್ನೂ ಲೆಕಿಸದೆ ಮಕ್ಕಳು, ಯುವಕ-ಯುವತಿಯರು, ಹಿರಿಯ ನಾಗರಿಕರು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿ ಪ್ರಾರ್ಥನೆ ಸಲ್ಲಿಸಿದರು.
ಶಿಲುಬೆ ಹಾದಿಯ ಪ್ರಾರ್ಥನೆ ನಂತರ ದೇವಾಲಯದ ಒಗಭಾಗದಲ್ಲಿ ಪವಿತ್ರ ಶಿಲುಬೆಗೆ ಸನ್ಮಾನ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಚರ್ಚ್ ಆವರಣದಲ್ಲಿ ಭಕ್ತಾಧಿಗಳು ಕಿಕ್ಕಿರಿದು ತುಂಬಿದ್ದರು.
ಪೂಜಾ ವಿಧಿವಿಧಾನಗಳ ಸಾನಿಧ್ಯವನ್ನು ಧರ್ಮಾಧ್ಯಕ್ಷ ಪರಮಪಪೂಜ್ಯ ಡಾ| ಫ್ರಾನ್ಸಿಸ್ ಸೆರಾವೋ ವಹಿಸಿದ್ದು, ಸೇಕ್ರೆಡ್ ಹಾರ್ಟ್ ಪ್ರಧಾನಾಲಯದ ಪ್ರಧಾನ ಗುರುಗಳಾದ ರೆ| ಫಾ| ಸ್ಟ್ಯಾನಿ ಡಿಸೋಜ, ರೆ|ಫಾ| ಡಾ| ಫ್ರಾನ್ಸಿನ್ಸ್ ಡಿಸೋಜ, ರೆ|ಫಾ| ಶಾಂತರಾಜ್, ರೆ|ಫಾ| ಜೆರೋಮ್ ಡಿಸೋಜ, ರೆ|ಫಾ| ಯುನಿಝ್ ಉಪಸ್ಥಿತರಿದ್ದರು.