ಚಿಕ್ಕ ತಿರುಪತಿ ಎಂದೇ ಪ್ರಸಿದ್ಧಿ ಪಡೆದಿರುವ ವೆಂಕಟಾಪುರ…
ತಿರುಪತಿ ಎಂದರೆ ಸಾಕು ಕೂಡಲೇ ನೆನಪಾಗುವುದು ತಿಮ್ಮಪ್ಪ ದೇವರು. ತಿರುಪತಿ ಎಂಬ ಊರಿಗೆ ಒಂದೇ ನಾಣ್ಯದ ಎರಡು ಮುಖಗಳಂತೆ ತಿಮ್ಮಪ್ಪ ದೇವರ ಹೆಸರು ಅಂಟಿ ಕೊಂಡಿದೆ. ತಿರುಪತಿ ತಿಮ್ಮಪ್ಪನ ದರ್ಶನದಿಂದ ಸಂಕಷ್ಟಗಳು ದೂರವಾಗುತ್ತವೆ, ಇಷ್ಟಾರ್ಥ ಸಿದ್ಧಿಸುತ್ತದೆ. ಸುಖ- ಸಂಪತ್ತು ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಭಕ್ತರದ್ದು. ಅದೆಷ್ಟೋ ಭಕ್ತರಿಗೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಬೇಕೆಂಬ ಹಂಬಲ ಇರುತ್ತದೆ. ಆದರೆ ನಾನಾ ಕಾರಣ ಗಳಿಂದ ಇದು ಸಾಧ್ಯವಾಗುವುದಿಲ್ಲ.
ಶ್ರೀನಿವಾಸ, ವೆಂಕಟೇಶ, ಬಾಲಾಜಿ ಎಂದೆ ಕರೆಸಿಕೊಳ್ಳುವ ತಿಮ್ಮಪ್ಪ ದೇವರಿಗೆ ಮಲೆನಾಡಿನ ಭಾಗದಲ್ಲೂ ಸಾಕಷ್ಟು ಭಕ್ತರು ಹಾಗೂ ಆರಾಧಕರಿzರೆ. ಇವರೆಲ್ಲರೂ ತಿರುಪತಿಗೆ ತೆರಳಿ ತಿಮ್ಮಪ್ಪನ ದರ್ಶನ ಪಡೆಯಲು ಸಾಧ್ಯವಾಗದಿರಬಹುದು. ಆದರೆ ತಿರುಪತಿ ತಿಮ್ಮಪ್ಪನ ಛಾಯೆಯಲ್ಲಿ ಚಿಕ್ಕ ತಿರುಪತಿ ಎಂದೇ ಪ್ರಸಿದ್ಧಿ ಪಡೆಯುತ್ತಿರುವ ಪುಟ್ಟ ಊರೊಂದು ಶಿವಮೊಗ್ಗ ತಾಲೂಕಿನಲ್ಲಿದೆ. ಈ ಪುಟ್ಟ ಊರಿನ ಹೆಸರೇ ವೆಂಕಟಾಪುರ.
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಈ ಊರು ಚಿಕ್ಕದಾದರೂ ಇಲ್ಲಿರುವ ತಿರುಮಲ (ರಂಗನಾಥ) ದೇವಸ್ಥಾನದಿಂದಾಗಿ ಈ ಊರಿನ ಹೆಸರು ದಶ ದಿಕ್ಕು ಗಳಿಗೂ ಹರಡುತ್ತಿದೆ. ಸ್ಥಳ ಮಹಿಮೆ ಯಿಂದಾಗಿ ಇಷ್ಟಾರ್ಥ ಸಿದ್ಧಿಸುತ್ತದೆ ಎಂಬ ಸಂಗತಿ ಒಬ್ಬರಿಂದ ಮತ್ತೊಬ್ಬರಿಗೆ ಹರಡಿ ತಿರುಮಲ ದೇವರ ಕೀರ್ತಿ ಎಡೆ ಪಸರಿಸುತ್ತಿದೆ. ಇದರಿಂದಾಗಿ ನಾನಾ ಭಾಗಗಳಿಂದ ಇಲ್ಲಿಗೆ ಬರುವ ಭಕ್ತರ ಸಂಖ್ಯೆ ಹೆಚ್ಚುತ್ತಿದೆ.
ಶಿವಮೊಗ್ಗ- ಹೊಳೆಹೊನ್ನೂರು ಮಾರ್ಗದಲ್ಲಿ ಬಿ.ಬೀರನಹಳ್ಳಿ ಬಳಿ ಭದ್ರಾ ನದಿಯ ದಡದಲ್ಲಿರುವ ಗ್ರಾಮವೇ ವೆಂಕಟಾಪುರ. ಇಲ್ಲಿನ ಚಿಕ್ಕ ಕಲ್ಲು ಬಂಡೆಗಳ ಬೆಟ್ಟದ ಮೇಲೆ ತಿರುಮಲ ದೇವಾಲಯವಿದೆ. ಈ ದೇವಾಲಯಕ್ಕೆ ಮುನ್ನ ಇಲ್ಲಿ ಕಪ್ಪು ಸಾಲಿಗ್ರಾಮ ಶಿಲೆ ಇದ್ದು, ಲಿಂಗ ರೂಪದಲ್ಲಿದೆ.
ನಂತರ ಹೊಯ್ಸಳರ ಕಾಲದಲ್ಲಿ ಇಲ್ಲಿ ಹೊಯ್ಸಳ ವಾಸ್ತು ಶೈಲಿಯ ಅತ್ಯಂತ ಸುಂದರ ಕಲಾತ್ಮಕ ತಿರುಮಲ ದೇವರ ಶಿಲ್ಪ ಪ್ರತಿಷ್ಠಾಪನೆಗೊಂಡಿರುತ್ತದೆ. ಸುಮಾರು ನಾಲ್ಕೂವರೆ ಅಡಿ ಎತ್ತರ, ಎರಡೂ ಕಾಲು ಅಡಿ ಅಗಲವಿರುವ ಕಪ್ಪು ಕಣ ಶಿಲೆಯ ಈ ಮೂರ್ತಿ ೧೩ನೇ ಶತಮಾನಕ್ಕೆ ಸೇರಿzಗಿದೆ.
ಈ ಮೂರ್ತಿಯ ಸುತ್ತ ದಶಾವತಾರ ಕೆತ್ತನೆಯ ಪ್ರಭಾವಳಿ, ನಾಲ್ಕು ಹಸ್ತಗಳಲ್ಲಿ ಶಂಕ, ಚಕ್ರ, ಗಧೆ ಮತ್ತು ಅಭಯ ಹಸ್ತವಿದೆ. ಪರಿವಾರ ದೇವತೆಗಳೊಂದಿಗೆ ಕಿರೀಟಧಾರಿ ಮೂರ್ತಿಯು ಕುಸುರಿ ಕೆತ್ತನೆ ಯಿಂದ ಕೂಡಿದೆ. ಸ್ಥಳೀಯರು, ಒಕ್ಕಲು ಮನೆತನದವರು ಈ ತಿರುಮಲ ಮೂರ್ತಿಯನ್ನೇ ರಂಗನಾಥನ ಹೆಸರಿನಿಂದ ಪೂಜಿ ಸುತ್ತಿರುವುದು ಕಂಡು ಬಂದಿದೆ. ಈ ತಿರುಮಲ ಮೂರ್ತಿಯಿಂದಲೇ ಈ ಊರಿಗೆ ವೆಂಕಟಾಪುರ ಎಂಬ ಹೆಸರು ಬಂದಿದೆ.
ದೇವಸ್ಥಾನದ ಗರ್ಭಗುಡಿಯ ಮುಂಭಾಗ ೧೦*೮ ಅಡಿ ವಿಸ್ತಾರದ ಅಂತರಾಳವಿದೆ. ದ್ವಾರ ಬಾಗಿಲಿನಲ್ಲಿ ದ್ವಾರಪಾಲಕರ ಸುಂದರ ಉಬ್ಬು ಶಿಲ್ಪಗಳಿವೆ. ದೇವಸ್ಥಾನದ ಅಭಿಮುಖವಾಗಿ ಸುಮಾರು ೩೦೦ ಅಡಿ ಅಂತರದಲ್ಲಿ ಕಾಳಾಚಾರ್ಯರ ಜಮೀನಿನಲ್ಲಿ ಆತ್ಮ ಬಲಿದಾನದ ಹೊಯ್ಸಳರ ಕಾಲದ ಶಿಲಾ ಶಾಸನವಿದೆ.
ಹೊಯ್ಸಳರ ನಂತರ ಕೆಳದಿ ನಾಯಕರ ಕಾಲದಲ್ಲಿ ತಿರುಮಲ ದೇವರಿಗೆ ಸರಳ ದೇವಸ್ಥಾನ ನಿರ್ಮಾಣಗೊಂಡಿದೆ ಎಂದು ಉಖಿಸಲಾಗಿದೆ. ಕಾಲಾನುನಂತರ ಶಿಥಿಲಗೊಂಡ ದೇವಸ್ಥಾನವನ್ನು ಜೀರ್ಣೋ ದ್ಧಾರ ಮಾಡಲಾಗಿದೆ. ಈ ಜೀರ್ಣೋದ್ಧಾರಕ್ಕೆ ದೇಣಿಗೆ ಸಂಗ್ರಹಿಸಿದ್ದಕ್ಕಿಂತಲೂ ಹೆಚ್ಚಾಗಿ ಭಕ್ತಾಧಿಗಳು, ದಾನಿಗಳೇ ಸ್ವಯಂ ಪ್ರೇರಿತರಾಗಿ ದೇಣಿಗೆ ನೀಡಿzರೆ. ದೈವಾನುಗ್ರಹಕ್ಕೆ ಇದೇ ಸಾಕ್ಷಿಯಾಗಿದೆ.
ಭಕ್ತಾಧಿಗಳು ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಸಾಧ್ಯವಾಗುತ್ತಿಲ್ಲವಲ್ಲ ಎಂದು ಕೊರಗುವುದನ್ನು ಬಿಟ್ಟು ಚಿಕ್ಕ ತಿರುಪತಿಯಾಗಿರುವ ವೆಂಕಟಾಪುರದ ತಿರುಮಲ ದೇವರ ದರ್ಶನ ಪಡೆದು ಪುನೀತರಾಗಿ ದೈವ ಕೃಪೆಗೆ ಪಾತ್ರರಾಗಲಿ. ಸಕಲರಿಗೂ ಸನ್ಮಂಗಳ ಉಂಟಾಗಲಿ.
ಲೇಖನ: ಕೆ.ಆರ್.ಅಜೇಯ್
ಖಜಂಚಿ, ಶ್ರೀ ತಿರುಮಲ ದೇವರ ದೇವಸ್ಥಾನ ಸಮಿತಿ, ವೆಂಕಟಾಪುರ