ಮೇ ೨೮: ರಾಜ್ಯಮಟ್ಟದ ಜಾನಪದ ಶಿಬಿರ…
ಶಿವಮೊಗ್ಗ : ಕರ್ನಾಟಕ ಜನಪದ ಪರಿಷತ್ತಿನ ವತಿಯಿಂದ ಸಹ್ಯಾದ್ರಿ ವಿಜನ ಕಾಲೇಜು ಸಭಾಂಗಣದಲ್ಲಿ ಕನ್ನಡ ವಿಭಾಗದ ಸಹಯೋಗದಲ್ಲಿ ಮೇ ೨೮ರ ಮಂಗಳವಾರ ರಾಜ್ಯ ಮಟ್ಟದ ಜನಪದ ದಿಕ್ಕು-ದೆಸೆ ಅಧ್ಯಯನ ಶಿಬಿರವನ್ನು ಏರ್ಪಡಿಸಲಾ ಗಿದೆ ಎಂದು ಕರ್ನಾಟಕ ಜನಪದ ಪರಿಷತ್ತಿನ ಅಧ್ಯಕ್ಷ ಡಿ.ಮಂಜುನಾಥ ಸುದ್ದಿಗೋಷ್ಟಿಯಲ್ಲಿ ವಿವರಿಸಿದರು.
ಕುವೆಂಪು ವಿವಿ ಕುಲಪತಿ ಪ್ರೊ.ಶರತ್ ಅನಂತಮೂರ್ತಿ ಉದ್ಘಾಟಿಸಲಿದ್ದು, ಕಜಪ ಕಾರ್ಯಾಧ್ಯಕ್ಷ ಹಂಪಿ ಕನ್ನಡ ವಿವಿ. ವಿಶ್ರಾಂತ ಕುಲಪತಿಗಳಾದ ಡಾ.ಹಿ.ಚಿ. ಬೋರಲಿಂಗಯ್ಯ ಆಶಯ ನುಡಿಗಳನ್ನಾಡಲಿದ್ದಾರೆ. ಕರ್ನಾಟಕ ಜನಪದ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಡಿ. ಮಂಜುನಾಥ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಹ್ಯಾದ್ರಿ ವಿಜನ ಕಾಲೇಜು ಪ್ರಾಂಶುಪಾಲರಾದ ಪ್ರೊ.ಎನ್. ರಾಜೇಶ್ವರಿ, ಕನ್ನಡ ಅಧ್ಯಾಪಕರ ವೇದಿಕೆ ಅಧ್ಯಕ್ಷರಾದ ಡಾ. ಸಬಿತಾ ಬನ್ನಾಡಿ ಭಾಗವಹಿಸಲಿದ್ದಾರೆ.
ಮೊದಲ ಗೋಷ್ಠಿಯಲ್ಲಿ ಜನಪದ ಸ್ವರೂಪ ಮತ್ತು ಮಹತ್ವ ವಿಚಾರವಾಗಿ ಮಂಗಳೂರು ವಿವಿ ಉಪನ್ಯಾಸಕ ಡಾ. ವಿಶ್ವನಾಥ ಬದಿಕಾನೆ, ಜನಪದ ಹೊಸ ಆಯಾಮಗಳು ಕುರಿತು ಖ್ಯಾತ ಸಾಹಿತಿ ಡಾ.ಮೊಗಳ್ಳಿ ಗಣೇಶ್ ಮಾತನಾಡಲಿದ್ದಾರೆ. ಉಪನ್ಯಾಸಕ ಡಾ.ಜಿ.ಆರ್. ಲವ ಸಮನ್ವಯ ಕಾರರಾಗಿ ಭಾಗವಹಿಸಲಿದ್ದಾರೆ.
ಎರಡನೇ ಗೋಷ್ಠಿಯಲ್ಲಿ ಬಳ್ಳಾರಿಯ ಡಾ.ಅರುಣ್ ಜೋಳದ ಕೂಡ್ಲಿಗಿ, ಜನಪದ ಅಧ್ಯಯನದ ಹೊಸ ಸಾಧ್ಯತೆಗಳು ವಿಚಾರವಾಗಿ ಹಾಗೂ ಜನಪದ ತಜ್ಞರಾದ ಡಾ.ಎಸ್. ಎಂ. ಮುತ್ತಯ್ಯ ಜನಪದದ ಅನ್ವಯಿಕತೆಯ ಸಾಧ್ಯತೆಗಳು ವಿಚಾರವಾಗಿ ಮಾತನಾಡಲಿದ್ದಾರೆ. ಉಪನ್ಯಾಸಕರಾದ ಡಾ. ಜಿ.ಕೆ. ಪ್ರೇಮಾ ಸಮನ್ವಯಕಾರರಾಗಿರುತ್ತಾರೆ.
ಸಂಪನ್ಮೂಲ ವ್ಯಕ್ತಿಗಳೊಂದಿಗೆ ಸಂವಾದದ ಸಮಾರೋಪ ಮಾತುಗಳನ್ನಾಡಲು ಕಡೆಕೊಪ್ಪಲ ಪ್ರತಿಷ್ಠಾನದ ಕೆ. ಲಕ್ಷ್ಮೀನಾರಾಯಣ ರಾವ್ ಭಾಗವಹಿಸಲಿದ್ದಾರೆ. ಜನಪದ ಕಲಾವಿದ ಜಿ. ನಾಗರಾಜ್ ತೋಂಬ್ರಿ ಜೋಗಿಪದ ಹಾಡಲಿದ್ದಾರೆ
ಕುವೆಂಪು ವಿವಿ ವ್ಯಾಪ್ತಿಯ ಕನ್ನಡ ಅಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು, ಪದವಿ ಕಾಲೇಜುಗಳಲ್ಲಿ ಜನಪದ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು, ನಾಡಿನ ಬೇರೆ ಬೇರೆ ಪ್ರದೇಶಗಳಿಂದ ಜನಪದ ಆಸಕ್ತ ಮನಸ್ಸುಗಳು ಜನಪದ ದಿಕ್ಕು-ದೆಸೆ ರಾಜ್ಯಮಟ್ಟದ ಅಧ್ಯಯನ ಶಿಬಿರದಲ್ಲಿ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಉಪಾಧ್ಯಕ್ಷ ಟಿ. ಕೃಷ್ಣಪ್ಪ, ತಾಲ್ಲೂಕು ಕಸಾಪ ಅಧ್ಯಕ್ಷೆ ಮಹಾದೇವಿ, ಸೋಮಿನಕಟ್ಟಿ ಉಪಸ್ಥಿತರಿದ್ದರು.