ವಿಚಾರಗಳನ್ನು ಹಿಂಬಾಲಿಸಿ ; ವ್ಯಕ್ತಿಯನ್ನ…

article

ಸಾಧನೆ?! ವಿಚಿತ್ರವಾದ ಒಂದು ಪದ. ಇದರ ಸರಿಯಾದ ಅರ್ಥ ತಿಳಿದವರು ಬಹುಶಃ ಯಾರೂ ಇಲ್ಲ ಅಥವಾ ಅವರವರ ಗ್ರಹಿಕೆಗೆ ತಕ್ಕಂತೆ ಅರ್ಥ ಬದಲಾಗುತ್ತಿರುತ್ತದೆ.
ನಮ್ಮಲ್ಲಿ ಬಹುತೇಕರು ಜನ ಜನಪ್ರಿಯತೆಯನ್ನೇ ಸಾಧನೆಯೆಂದು ನಂಬುತ್ತಿರುತ್ತೇವೆ. ಈ ಮನಸ್ಥಿತಿಯ ದೋಷವೇ ಹಲವಾರು ವಿಚಾರಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳುವಂತೆ ಮಾಡುತ್ತದೆ.


ನಮ್ಮಲ್ಲಿ ಹಲವಾರು ಸಾಧಕರನ್ನು ಕಾಣಬಹುದು. ಅವರನ್ನು ಪೂಜಿಸುವ, ಅವರ ಕುರಿತು ಭಾಷಣ ಮಾಡುವ, ಅವರ ಹೆಸರಿನ ಗುಂಪು ಮಾಡುವ ಕೆಲಸಗಳೆ ನಡೆಯುತ್ತಲೇ ಇರುತ್ತೆ; ಆದರೆ ಅವರ ವಿಚಾರಗಳ ಬಗ್ಗೆ ಅರಿವುಮೂಡಿಸುವ ಅದನ್ನು ನಮ್ಮ ಜೀವನಕ್ಕೆ ಅಳವಡಿಸಿಕೊಳ್ಳುವ ಕೆಲಸಗಳಷ್ಟೇ ಬಾಕಿ, ಇದಕ್ಕೆ ಕಾರಣ ನಮ್ಮ ಮನಸ್ಥಿತಿಯೆಂದು ಹೇಳಬಹುದು.
ಇಂಗ್ಲಿಷ್‌ನಲ್ಲಿ ಒಂದು ಮಾತಿದೆ, “we obsessed with the people ; not with their analysis” ಅಂದ್ರೆ ಈ ಮಾತೇ ಹೇಳುವ ಹಾಗೆ; ನಮಗೆ ವ್ಯಕ್ತಿಗಳ ಮೇಲಿನ ಒಲವು ಜಸ್ತಿ, ಅವರ ವಿಚಾರಗಳ ಚಿಂತೆ ಇರಲಿ ಅದನ್ನು ಪೂರ್ತಿ ತಿಳಿದುಕೊಳ್ಳುವ ಪ್ರಯತ್ನಕ್ಕೂ ನಾವು ಹೋಗುವುದಿಲ್ಲ. ಈ ರೀತಿಯ ಅತೀ ಹೆಚ್ಚಿನ ವ್ಯಕ್ತಿಪ್ರಿಯತೆಯು ನಮ್ಮನ್ನು ಮೂರ್ಖರನ್ನಾಗಿಸುವುದಂತೂ ಖಂಡಿತ. ನಮ್ಮಂತೆಯೇ ಇರುವ ಒಬ್ಬ ಮನುಷ್ಯ ಹೇಗೆ ಇಷ್ಟು ಉನ್ನತ ಮಟ್ಟಕ್ಕೇರಲು ಸಾಧ್ಯವಾಯಿತು ಎನ್ನುವ ಆಶ್ಚರ್ಯವೋ? ಅಥವಾ ಅವರ ಹೆಸರು ಜನಪ್ರಿಯತೆಗೊಂಡಾಗ ನಮಗಾಗುವ ಅಪಾರವಾದ ಭಾವೋದ್ವೇಕವಿರಬಹುದು. ನಾವೆಷ್ಟೇ ಕಾರಣಗಳನ್ನು ಹೇಳಿದರೂ, ಇದು ದಡ್ಡರನ್ನು ಸೃಷ್ಟಿಸುವುದು ನಿಶ್ಚಿತ.
ನಮ್ಮ ಬಸವಣ್ಣ, ಏಸುರಂತಹ ಗಣ್ಯರೂ ಸೋಲನ್ನಪ್ಪಿದ್ದು ಈ ಮನಸ್ಥಿತಿಯಿಂದಲೇ. ನಿಮ್ಮಲ್ಲಿ ಬಹುತೇಕ ಜನ ಆಶ್ಚರ್ಯ ಪಡಬಹುದು, ನನ್ನ ಮಾತಿಗೆ ವಿರೋಧವನ್ನೂ ವ್ಯಕ್ತಪಡಿಸಬಹುದು. ಆದರೆ ಇದು ನೀವು ಒಪ್ಪಲೇ ಬೇಕಾದ ಕಟು ಸತ್ಯ.
ಬಸವಣ್ಣನವರ ಇತಿಹಾಸವನ್ನು ಮೆಲುಕು ಹಾಕಿದರೆ ನಮಗೆ ಉತ್ತರ ದೊರಕುತ್ತದೆ. ಹುಟ್ಟು ಬ್ರಾಹ್ಮಣರಾದ ಅವರು ಜತಿ ವ್ಯವಸ್ಥೆಯನ್ನು ವಿರೋಧಿಸಿ ತಮ್ಮ ಕಾಯಕವನ್ನು ಮಾಡುತ್ತಾರೆ. ಜತಿ ಪದ್ಧತಿಯೇ ಅನಿಷ್ಟವೆಂದು, ಜನಸಾಮಾನ್ಯರೆ ಒಂದಾಗಿ ಬದುಕಲು ಅಡಿಪಾಯ ಹಾಕಿಕೊಟ್ಟ ಸಾಧಕನ ಹೆಸರಿನಲ್ಲಿ ಒಂದು ಜತಿ ಪದ್ಧತಿ ಶುರುವಾಗಿರೋದು ನಿಜವಾಗಿಯೂ ಬೇಸರದ ಸಂಗತಿ. ಇದರಿಂದಲೇ ನಾವು ತಿಳಿಯಬಹುದು ನಮಗೆ ಆ ವ್ಯಕ್ತಿ ಹಾಕಿಕೊಟ್ಟ ದಾರಿಗಿಂತ, ಅವರಿಗೆ ಸಮಾಜದ ಮೇಲಿದ್ದ ಕಳಕಳಿ, ನಮಗೆ ಅರಿವು ಮೂಡಿಸಲಿದ್ದ ಅವರ ಚಿಂತನೆಗಳು, ಅವರಿಗಿದ್ದ ಅಪೂರ್ವ ದೃಷ್ಟಿಕೋನ ಇವೆಲ್ಲವನ್ನೂ ನಾವು ಹುಸಿಮಾಡಿದ್ದೇವೆ. ಎಷ್ಟೋ ಶಾಲಾ ಮಕ್ಕಳಿಗೆ ಬಸವಣ್ಣನವರು ಜತ್ಯಾತೀತತೆಯ ಪ್ರತಿಪಾದಕ ಎನ್ನುವುದೇ ತಿಳಿಯದೇ; ಯಾವುದೋ ನಿರ್ದಿಷ್ಟಿತ ಜತಿಯ ವ್ಯವಸ್ಥೆಯಲ್ಲಿ ಅವರನ್ನು ಗುರುತಿಸುವುದು, ನಾವು ಮಾಡಿರುವ ಅತಿದೊಡ್ಡ ತಪ್ಪಿನ ಪರಿಣಾಮ.
ಇನ್ನು ಏಸೂ ಕ್ರೈಸ್ತರೂ ಹೀಗೆ, ದೈವೀಗುಣಹೊಂದಿದ್ದ , ಜನ ಸೇವೆ ಮಾಡುತ್ತಾ, ಶಾಂತಿಯನ್ನು ಪ್ರತಿಪಾದಿಸಿದ ವ್ಯಕ್ತಿ; ಸಮಯ ಕಳೆದಂತೆ ಅವರ ಹೆಸರಿನಲ್ಲಿ ಪ್ರಾರಂಭವಾದ ಧರ್ಮದ ಹೆಸರನ್ನು ತೋಡಿ ಎಷ್ಟೋ ಬುಡಕಟ್ಟು ಜನಾಂಗಗಳ ಮತಾಂತರ ಕಾರ್ಯಕ್ರಮ ನಡೆದಿರುವ ಉಖವಿದೆ. ಈಗಲೂ ನಡೆಯುತ್ತಿದೆಯೆಂದು ಹೇಳಬಹುದು.
ಹೀಗೇ ಹಲವಾರು ಸಾಧಕರು ಹಲವಾರು ಕಷ್ಟಗಳನ್ನು ನಿಭಾಯಿಸಿ, ತಮ್ಮ ವಿಚಾರಗಳಿಂದ ಸಮಾಜ ಬದಲಾಗಬಹುದು ಎಂಬ ಆಕಾಂಕ್ಷೆಗಾಗಿ, ತಮ್ಮ ಧ್ಯೇಯವೇ ಬದುಕೆಂದು ಬದುಕಿ ಮಡಿದ ಹುತಾತ್ಮರ ವಿಚಾರಗಳು ಸತ್ತಿರುವುದು ಶೋಚನೀಯ.
ಸಮಾಜ ಸುಧಾರಣೆಗೆ ತಮ್ಮ ಜೀವನವನ್ನು ಮೀಸಲಿಟ್ಟ ಯಾರಿಗೂ ಜನಪ್ರಿಯತೆಯ ಅವಶ್ಯವಿರಲಿಲ್ಲ, ಬದಲಿಗೆ ಅವರ ವಿಚಾರಗಳು ಸುಧಾರಣೆಯ ನಕ್ಷೆಯಾಗಿರಲಿ ಎಂದು ಬಯಸಿದರು. ಹಾಗೆ ಅವರ ವಿಚಾರಗಳನ್ನು ಹಿಂಬಾಲಿಸಿದರೆ ಅವರು ಕನಸುಕಂಡ ಸಮಾಜವನ್ನು ನನಸಾಗಿಸಲು ಅವಕಾಶಸಿಗಬಹುದು.
ಲೇಖನ: ಸಿ.ಆರ್. ಶಿಲ್ಪ